ಎಲ್ಲಿಂದಲೋ ಬಂದವರ ಸುಖ ದುಃಖ;ನೀವು ಎಲ್ಲಿಯವರು?
ಸಾಧಾರಣವಾಗಿ ಒಮ್ಮೆ ವಲಸೆ -ಭಾಗಶಃ ಅಂತಾರಾಷ್ಟ್ರೀಯ, ಅಂತಾರಾಜ್ಯಗಳಿಗೆ ಗುಳೇ ಹೋದವರೆಲ್ಲಾ ತಮ್ಮ ಸುತ್ತಲೂ ಒಂದು ಗುಳ್ಳೆ ಕಟ್ಟಿಕೊಂಡು, ಅಲ್ಲೇ ತಮ್ಮ ಪುಟ್ಟಪ್ರಪಂಚ ಸೃಷ್ಟಿಸಿಕೊಂಡಿರುತ್ತಾರೆ. ಮೂಲ ನಿವಾಸದ ನೆನಪಿನ ಒಂದು ತುಣುಕನ್ನು ಹೃದಯದಲ್ಲಿ ಜೋಪಾನವಾಗಿ ಹತ್ತಿಟ್ಟುಕೊಂಡಿರುತ್ತಾರೆ. ಪ್ರತಿ ಬಾರಿಯೂ ಮೂಲನಿವಾಸಕ್ಕೆ ಹಿಂದಿರುಗುವ ಆಶಯ ಬತ್ತುವುದೇ ಇಲ್ಲ. ಆದರೆ, ವಾಸ್ತವಿಕವಾಗಿ ಹಿಂದಿರುಗದಷ್ಟುದೂರ ಮೂಲವನ್ನು ದಾಟಿ ಹೋಗಿರುತ್ತೇವೆ.
- ಇನಿ
ಕಾಲೇಜು ಉಪನ್ಯಾಸಕ, ಪ್ರಾಂಶುಪಾಲರಾಗಿ ಹಲವು ದಿಕ್ಕುಗಳನ್ನು ಸುತ್ತಿ ರಾಜ್ಯವನ್ನು ಅಳೆದ ನನ್ನ ತಂದೆಯ ವೃತ್ತಿ ಜೀವನದ ಕಾಲದಿಂದಲೂ, ಅವರ ನೇರ ನಿಷ್ಠುರ ನಡೆಗಳಿಗೆ ಹಿತೈಷಿಗಳಿಂದ, ಸಹೋದ್ಯೋಗಿಗಳಿಂದ ಕೇಳಿ ಬರ್ತಿದ್ದ ಮೊದಲನೇ ಸಲಹೆ ‘ನಿಂಗ್ಯಾಕ್ ಬಿಡಪಾ ಅವ್ರು ಲೋಕಲ್ಲು...’ ಈ ಓಲೈಕೆ ಕೆಲಸ ಮಾಡದಿದ್ದಾಗ, ‘ನಾನ್ ಲೋಕಲ್ಲು ಕಣ್ರಿ’ ಎಂಬ ಬೆದರಿಕೆ ರೂಪದ ಅಸ್ತ್ರಗಳ ಬಳಕೆ ಸಾಮಾನ್ಯವಾಗಿತ್ತು. ಆ ಅಂಶದ ತೀವ್ರತೆ, ಪ್ರಭಾವಗಳ ಮೇಲೆ ಆ ಊರಿನ ನೀರಿನ ಗುಣ- ಋುಣ ನಿರ್ಧಾರಿತವಾಗಿರುತ್ತಿದ್ದವು. ಊರ ಹೆಸರುಗಳು ಬದಲಾದರೂ, ಸಂದರ್ಭಗಳು ಬೇರೆನಿಸಿದರೂ, ಅದರ ಹಿಂದಿನ ಸ್ಥಾಯಿ ಭಾವ ಒಂದೇ ಆಗಿರುತ್ತಿತ್ತು. ‘ನೀವ್ ನಮ್ಮೋರಲ್ಲ’ ಎಂಬ ಭತ್ರ್ಸನೆ. ಈ ಮಾತು ಹಲವು ನಾಮ, ರೂಪಗಳಲ್ಲಿ ಜೀವನದುದ್ದಕ್ಕೂ ವಿನೋದವಾಗಿ, ವಿಡಂಬನೆಯಾಗಿ, ವ್ಯಂಗ್ಯವಾಗಿ, ವಿಷಾದವಾಗಿ, ವಿವಾದವಾಗಿ, ವಿಚಾರ ಪ್ರಚೋದಕವಾಗಿ ಗೋಚರಿಸಿದೆ.
ಬಾಂಗ್ಲಾ ವಲಸಿಗರೆಂದು ಒಕ್ಕಲೆಬ್ಬಿಸಿದವರಿಗೆ ಪುನರ್ವಸತಿ
ಈ ಅಂಶ ಸ್ಪಷ್ಟವಾಗಿ ನನ್ನ ಅರಿವಿಗೆ ಬಂದಿದ್ದು ಭಾಗಶಃ ಎರಡನೇ ಅಥವಾ ಮೂರನೇ ಕ್ಲಾಸಿನಲ್ಲಿದ್ದಾಗ. ಉತ್ತರ ಕರ್ನಾಟಕ ತುಟ್ಟತುದಿಯಲ್ಲಿರುವ ಆ ರಣ ರಣ ಬಿಸಿಲಿನ ಆ ಊರಿನಲ್ಲಿ ಆಗಿನ್ನೂ ಕಾಲೇಜಿಗೆ ಹೋಗುತ್ತಿದ್ದ ನನ್ನ ಸೋದರತ್ತೆಯನ್ನು ಹಾಗೂ ಆಕೆಯ ಗೆಳತಿಯನ್ನು ಊರಿನ ಪ್ರಮುಖ ಪುಢಾರಿಯ ಬಲಗೈ ಬಂಟನ ಎಂಟನೇ ತಮ್ಮ ಲಘುವಾಗಿ ಚುಡಾಯಿಸಿದ್ದ. ಇದನ್ನು ಕೇಳಿ ಕಿಡಿ ಕಿಡಿಯಾದ ನನ್ನ ಅಪ್ಪಾಜಿ, ಅವನಿಗೆ ಪಾಠ ಕಲಿಸಲು ಸಜ್ಜಾದರು. ಗೆಳೆಯರು, ಸಹೋದ್ಯೋಗಿಗಳು, ಸಿಬ್ಬಂದಿ ಎಲ್ಲರೂ ಹೇಳಿದ್ದೆಂದರೆ,‘ಅವ್ನು ಲೋಕಲ್ ಪುಂಡ... ಜಾಸ್ತಿ ಬೆಳಸದ್ ಬ್ಯಾಡ ಬಿಡ್ರೀ ಅಣ್ಣಾವ್ರ’. ಫä್ಯಡಲ್ ಪರಂಪರೆಯ ಕಪಿಮುಷ್ಟಿಯಲ್ಲಿದ್ದ ಆ ಊರಿನಲ್ಲಿ ಇಂಥ ಪ್ರತಿಕ್ರಿಯೆ ನಿರೀಕ್ಷಿತವೇ ಆಗಿತ್ತು. ಆದಾವುದನ್ನೂ ಗಮನಿಸದ ತಂದೆ, ತನ್ನ ತಮ್ಮಂದಿರನ್ನು ಕಟ್ಟಿಕೊಂಡು, ಆತನ ಮನೆಯ ಮುಂದೆಯೇ ನಿಂತು ‘ಏ.. ಬಾರೋ. ಅದೇನೋ ಚುಡಾಯ್ಸಿದೆಯಂತಲ್ಲಾ.. ಈಗ ನೋಡಾಣ ಬರಲೇ ..’ ಎಂದು ದೊಡ್ಡ ದನಿಯಲ್ಲಿ ಸವಾಲು ಹಾಕಿದರು. ಇವರು ಬರುವ ಮುನ್ಸೂಚನೆಯನ್ನು ಅರಿತ ಆತ, ಹೊರಗೆ ಹೋಗಿದ್ದನೋ ಅಥವಾ ಮನೆಯೊಳಗೆ ಅಡಗಿ ಕುಳಿತಿದ್ದನೋ ಅಂತೂ ಎದುರಿಗೆ ಹೊರಗೇ ಬರಲಿಲ್ಲ. ಮನೆಯವರು ‘ಅವ್ನಿಲ್ಲ ಅಣ್ಣಾರಾ’ ಅಂತ ಹೇಳಿದರು. ‘ಇಲ್ಲಿಗೇ ಬಿಡಲ್ಲ. ಆತ ಮನೆಯಲ್ಲಿದ್ದಾಗಲೇ ಮತ್ತೊಮ್ಮೆ ಬರ್ತೀನಿ. ಅದೇನು ಮಾಡ್ತಾನೋ ನೋಡ್ತೀನಿ’ ಎಂದು ಅಬ್ಬರಿಸಿದರು. ಈ ಸುದ್ದಿ ತಿಳಿಯುತ್ತಿದ್ದಂತೆ, ಹಿತೈಷಿಗಳು, ಗೆಳೆಯರು, ಸಹೋದ್ಯೋಗಿಗಳು ಘಟಾನುಘಟಿ ಪುರುಷ ಪುಂಗವರೆಲ್ಲ ಅಂತರ್ಧಾನರಾಗಿ ಅಡಗಿ ಹೋಗಿದ್ದರೆ, ಬಾಜೂ ಮನೆಯಲ್ಲಿದ್ದ ಲೀಲಕ್ಕೋರು ಮಾತ್ರ ಜೊತೆಗೆ ಬಂದು, ಬೆನ್ನಿಗೆ ನಿಂತು, ‘ಬ್ಯಾರೆ ಊರಿನ ಪೋರಿ ಅಂತ ಹೀಂಗ್ ಮಾಡ್ತನೇನ್ ಅಂವಾ’ ಎಂದು ಸಾರ್ವಜನಿಕವಾಗಿಯೇ ಹೀಗಳೆದಿದ್ದರು. ಇಡೀ ಊರು ಬೆರಗಾಗಿ ನೋಡಿತ್ತು. ಕಡ್ಡಿ ಹಂಗಿರೋ ಮನ್ಷಾನ ಅವಾಜೀಗಿ ಅಂಜಿ ಓಡಿಹೋದ, ತಪ್ ಮಾಡಿದ್ರ ಯಾರಾನಾ ಆಗ್ಲಿ ಅಂಜಲೇಬೇಕಲ್ಲ ಯವ್ವ ಅಂತ ಊರ ಹೆಂಗಸರು ಮಾತಾಡಿಕೊಂಡರು. ದಿನ ಬೆಳಗಾಗೋದರಳಗ ದೊಣ್ಣೆ ವರಸೆಯಲ್ಲಿ ಖ್ಯಾತಿ ಹೊಂದಿದ್ದ ಪೈಲ್ವಾನ್ ಪುಂಡಲೀಕ ಬರೀ ಉಢಾಳನಾಗಿ ಹೋಗಿದ್ದ. ಈ ಬೆಳವಣಿಗೆಯನ್ನು ಸೀರಿಯಸ್ಸಾಗಿ ತೆಗೆದುಕೊಂಡ, ಊರ ಮುಖಂಡರು ಆತನ ಪರವಾಗಿ ನಿಯೋಗವನ್ನೇ ಕರೆದುಕೊಂಡು ಬಂದರು. ‘ಸಾಹೇಬ್ರ ಬಿಟ್ ಬಿಡ್ರಿ.. ಪೋಲೀಸ್ನೋರು ಬಂದರೆ ಪಾಟೀಲರ ಮರ್ಯಾದಿ ಹೋಗ್ತದ. ಇನ್ನೊಂದು ಸರ್ತಿ ಹಿಂಗಾಗದ ಹಾಗೆ ನಾವ್ ಲೋಕಲ್ಲವರು ಜವಾಬ್ದಾರಿ ತಗೋತೀವಿ. ಆ ಉಢಾಳನ್ ಕಿವಿ ಹಿಂಡತೇವಿ. ಕ್ಷಮಾಮಾಡ್ರಿ’ ಎಂಬಲ್ಲಿಗೆ ಆ ಪ್ರಕರಣವು ಸುಖಾಂತ್ಯವನ್ನು ಕಂಡಿತು. ಆದರೆ ವಲಸಿಗರ ಮೇಲೆ ದರ್ಪ ದೌರ್ಜನ್ಯ ನಡೆಸುವ ಊರ ದೊಣೆನಾಯ್ಕರ ಮನೋಭಾವ ಮೂರ್ನಾಲ್ಕು ದಶಕಗಳು ಕಳೆದರೂ ಕಡಿಮೆಯಾಗಿಲ್ಲ ಎಂಬುದು ಮಾತ್ರ ಸತ್ಯ.
‘ಅವ್ರು ನಮ್ಮೋರಲ್ಲ’ ಎಂಬ ತಾರತಮ್ಯ, ‘ನಾನು ಲೋಕಲ್ಲು’ ಎಂಬ ಅಹಂಭಾವಗಳ ಆಳದಲ್ಲಿ ಹೂತಿರುವ ಅರ್ಥ ವಲಸಿಗ ಎಂದು ಸೂಚಿಸುವುದಷ್ಟೇ. ಸಮಾಜದ ಸಕಲ ಕಷ್ಟ-ಅನಿಷ್ಟಗಳಿಗೂ ಈ ವಲಸಿಗರೇ ಕಾರಣ ಎಂಬ ವಾತಾವರಣ ಸೃಷ್ಟಿಯಾಗಲು ಬಹುಕಾಲ ಬೇಕಿಲ್ಲ. ಒಂದೆರಡು ಚಿಕ್ಕ ಘಟನೆಗಳು ಸಾಕು. ವಲಸೆ ಕಾರ್ಮಿಕರಿಗೆ ‘ಅತಿಥಿ ಕೆಲಸಗಾರರು’ ಎಂಬ ಸೊಗಸಾದ ಹಣೆಪಟ್ಟಿಯೂ, ಕ್ರಿಯಾಶುದ್ಧಿಯ ಕೊರತೆಯಿಂದಾಗಿ, ಹಂಗಿಸುವಿಕೆ ಅನಿಸತೊಡಗಿತು. ಆಹಾರ ಹಾಗೂ ನಿದ್ರೆಗಳ ಆಚೆಗೂ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವ ವ್ಯವಸ್ಥೆಯಿಲ್ಲದ್ದರಿಂದಾಗಿ ಈ ವಲಸಿಗರ ಶಿಬಿರಗಳು ವಿಫಲವಾಗುವುದಷ್ಟೇ ಅಲ್ಲ ವಿಘಟನೆಗೆ, ವಿಪರೀತ ನಿರ್ಧಾರಗಳಿಗೆ ಕಾರಣವೂ ಆಗುತ್ತವೆ ಎಂದು ಎಂದೋ ಓದಿದ್ದ ನೆನಪಾಯಿತು. ಹೊರ ರಾಜ್ಯದಿಂದ ಕಾರ್ಮಿಕರು ಹೊರವೊಂಟ ಮೇಲೆ ನಮ್ಮ ಸರ್ಕಾರಗಳಿಗೆ ಜ್ಞಾನೋದಯವಾಯಿತು. ಅಯ್ಯೋ ಅಗ್ಗಕ್ಕೆ ಕೆಲಸ ಮಾಡುವವರು ಇಲ್ಲವಾದರೆ, ಆರ್ಥಿಕತೆಗೆ ಹೊಡೆತ ಎಂದು. ಅವರನ್ನು ಕರೆ ತರುವ ಕೆಲಸ ಜಾರಿಯಲ್ಲಿದೆ. ಹೀಗೆ ಹೊರ ಹೊಂಟಿದ್ದ ಹಲವು ಸಮುದಾಯಗಳೊಂದಿಗೆ ಒಡನಾಡುವ ಅವಕಾಶ ದೊರಕಿತ್ತು. ನಮ್ಮೂರಲ್ಲಿ ರೊಟ್ಟಿಚಟ್ಣಿಯಾದರೂ ತಿಂದು ಬದುಕಿರ್ತಿವಿ. ಇಂಥ ಜೀವನ ಯಾರಿಗೆ ಬೇಕು ಎಂಬುದು ಬಹುತೇಕರ ಅನಿಸಿಕೆಯಾಗಿತ್ತು. ಆದರೆ, ನಿಜವೂ ಆಗಿರಲಾರದು. ಪರಿಸ್ಥಿತಿ ಸುಧಾರಿಸುತ್ತಿದ್ದಂತೆ, ಆರ್ಥಿಕ ಅವಕಾಶಗಳು ಕಾಣುತ್ತಿದ್ದಂತೆ ಮನಸ್ಥಿತಿ ಬದಲಾಗುತ್ತದೆ. ಈಗಾಗಲೇ ಅಭಿವೃದ್ಧಿಯ ಅವಕಾಶಗಳು, ಸವಲತ್ತುಗಳಿಗೆ ಒಗ್ಗಿ ಹೋಗಿರುವ ಮನಸ್ಸುಗಳಿಗೆ ಒದಗಿ ಬಂದ ಹತಾಶೆ ಆ ಕ್ಷಣದ ವೈರಾಗ್ಯವಷ್ಟೇ ಇರಬೇಕು.
ಯಬ್ಬೇ! ಜಗತ್ತಿನ ಭಯಾನಕ ಆಹಾರಗಳಿವು
ಈಚಿನ ಸಮೀಕ್ಷೆಯ ಪ್ರಕಾರ ಬಹುತೇಕರು ವಾಪಸ್ಸು ಕೆಲಸಗಳಿಗೆ ಬರುವ ಆಸಕ್ತಿ ತೋರುತ್ತಿಲ್ಲವಂತೆ. ದಕ್ಷಿಣದಲ್ಲಿ ನಿರುದ್ಯೋಗದ ಪ್ರಮಾಣ ಏಪ್ರಿಲ್ ಮೇ ತಿಂಗಳಲ್ಲಿ ಗಣನೀಯವಾಗಿ ಏರಿದ್ದರೆ, ಉತ್ತರ ಭಾರತದ ಸುಮಾರು ರಾಜ್ಯಗಳಲ್ಲಿ ಕೃಷಿ ವಲಯದಲ್ಲಿ ಉದ್ಯೋಗ ಸೃಷ್ಟಿಯ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಅಂದರೆ, ಇಲ್ಲಿಯ ಕಾರ್ಮಿಕರು ತಮ್ಮೂರಲ್ಲಿ ಮರಳಿ ಮಣ್ಣಿನ ಕಾಯಕಕ್ಕೆ ಹೋಗುತ್ತಿದ್ದಾರೆ. ಆದರೆ, ಅದು ಎಷ್ಟುಕಾಲ ಎಂಬುದನ್ನು ಕಾಲವಷ್ಟೇ ಹೇಳಬೇಕು. ಮರಳಿ ಮನೆಗೆ ತಡೆಯುವ ಉತ್ಸಾಹದಲ್ಲಿದ್ದವರಿಗೆ ಹಿರಿಯ ಅಧಿಕಾರಿಯೊಬ್ಬರು, ಅವರ ಮೂಲ ರಾಜ್ಯದಲ್ಲಿರುವ ಹಳ್ಳಿಗಳ ದುಃಸ್ಥಿತಿಯನ್ನು ವಿವರಿಸಿ, ಇಲ್ಲಿರುವ ಆರ್ಥಿಕ ಅನುಕೂಲಗಳನ್ನು ಮನದಟ್ಟು ಮಾಡಲು ಯತ್ನವೂ ವಿಫಲವಾಯಿತು. ಈ ಸಂದರ್ಭದಲ್ಲಿ ‘ದಿ ಟರ್ಮಿನಲ್’ ಚಿತ್ರದ ಸನ್ನಿವೇಶ ಕಣ್ಮುಂದೆ ಹಾದು ಹೋಯಿತು.
ವಲಸಿಗ, ಮೂಲನಿವಾಸಿ ಎಂಬ ತರತಮದ ಹಿಂದೆ ಕೆಲಸ ಮಾಡುವುದು ಶ್ರೇಷ್ಠತೆಯ ವ್ಯಸನವೇ ಅಥವಾ ಆರ್ಥಿಕ ಅವಕಾಶಗಳೇ ಅಥವಾ ಅವೆರಡೂ ಇದ್ದೀತಾ ಇಲ್ಲವೇ ಇವೆಲ್ಲವನ್ನೂ ಮೀರಿದ ಮತ್ತೊಂದು ಕಾರಣ ಉಂಟಾ ಎಂದು ಹೇಳುವುದು ಕಷ್ಟ. ನಾನು ಹಿಂದೆ ಕೆಲಸ ಮಾಡುತ್ತಿದ್ದ ಸಂಸ್ಥೆಯೊಂದರಲ್ಲಿ ಮಧ್ಯಮ ಹಂತದ ಮೇಲುಸ್ತುವಾರಿಗಾಗಿ ಹಿರಿಯ ಉದ್ಯೋಗಿಯೊಬ್ಬರು ಬೇರೆ ಸಂಸ್ಥೆಯಿಂದ ಬಂದರು. ಅದೇ ತಾನೇ ಕೆಲಸಕ್ಕೆ ಸೇರಿದ ಕೆಲವರನ್ನು ಹೊರತು ಪಡಿಸಿದರೆ, ಇತರರಿಂದಲೂ ಅವರಿಗೆ ಸಹಕಾರ ದೊರಕಲೇ ಇಲ್ಲ. ವಲಸಿಗ-ಮೂಲನಿವಾಸಿ ಸಂಘರ್ಷ ಸ್ವರೂಪ ಎದ್ದು ಕಾಣುತ್ತಿತ್ತು. ಎಲ್ಲಿಯವರೆಗೆ, ವಲಸಿಗ ‘ಆನು ದೇವಾ ಹೊರಗಣವನು...’ ಎಂಬ ಮನಸ್ಥಿತಿಯನ್ನು ದಾಟುತ್ತಿದ್ದಾನೆ ಅನಿಸಿದ ಮರುಗಳಿಗೆಯಲ್ಲೇ ಮೂಲನಿವಾಸಿಗಳಲ್ಲಿ ಅಭದ್ರತೆ ಶುರುವಾಗಿ, ಅವರಿಬ್ಬರ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆ. ಅಂದಹಾಗೆ ಬದಲಾದ ಸಂದರ್ಭದಲ್ಲಿ ಯಾರು ವಲಸಿಗ ಯಾರು ಮೂಲನಿವಾಸಿ ಎಂದು ನಿರ್ಧರಿಸುವುದು ಹೇಗೆ? ಯಾರು? ಮತ್ತು ಯಾಕೆ?
ಸಾಧಾರಣವಾಗಿ ಒಮ್ಮೆ ವಲಸೆ -ಭಾಗಶಃ ಅಂತಾರಾಷ್ಟ್ರೀಯ, ಅಂತಾರಾಜ್ಯಗಳಿಗೆ ಗುಳೇ ಹೋದವರೆಲ್ಲಾ ತಮ್ಮ ಸುತ್ತಲೂ ಒಂದು ಗುಳ್ಳೆ ಕಟ್ಟಿಕೊಂಡು, ಅಲ್ಲೇ ತಮ್ಮ ಪುಟ್ಟಪ್ರಪಂಚ ಸೃಷ್ಟಿಸಿಕೊಂಡಿರುತ್ತಾರೆ. ಮೂಲ ನಿವಾಸದ ನೆನಪಿನ ಒಂದು ತುಣುಕನ್ನು ಹೃದಯದಲ್ಲಿ ಜೋಪಾನವಾಗಿ ಹತ್ತಿಟ್ಟುಕೊಂಡಿರುತ್ತಾರೆ. ಪ್ರತಿ ಬಾರಿಯೂ ಮೂಲನಿವಾಸಕ್ಕೆ ಹಿಂದಿರುಗುವ ಆಶಯ ಬತ್ತುವುದೇ ಇಲ್ಲ. ಆದರೆ, ವಾಸ್ತವಿಕವಾಗಿ ಹಿಂದಿರುಗದಷ್ಟುದೂರ ಮೂಲವನ್ನು ದಾಟಿ ಹೋಗಿರುತ್ತೇವೆ. ಅಲ್ಲದೇ, ವಲಸಿಗರ ಆಲೋಚನಾ ಕ್ರಮ ಬದಲಾದರೂ ಅವರ ಹೃದಯದಲ್ಲಿ ಆ ನೆನಪಿನ ತುಣುಕು ಫ್ರೀಜ್ ಆಗಿ ಬಿಟ್ಟಿರುತ್ತದೆ. ಅವರಿಲ್ಲದ ಅವರೂರು ಅಲ್ಲಿನ ವಾತಾವರಣಗಳೂ, ಮತ್ತೊಂದು ಆಯಾಮದಲ್ಲಿ ಸಾಗುತ್ತಿರುತ್ತವೆ. ಹಾಗಾಗಿ, ಅನೇಕ ಸಂದರ್ಭದಲ್ಲಿ ಎರಡೂ ವೇಗಗಳ ಅನುಪಾತ ಸರಿ ಹೊಂದುವುದೇ ಇಲ್ಲ. ಹಾಗಾಗಿ, ದೂರದೂರಿನಿಂದ ಹಳ್ಳಿಗಳಿಗೆ ಹಿಂದಿರುಗಿ ಭ್ರಮನಿರಸನಗೊಳ್ಳುವುದು. ಕೆಲವೇ ಕೆಲವರು ಮಾತ್ರ ‘ಚಿಛಿsಠಿ ಟ್ಛ ಚಿಟಠಿh ಡಿಟ್ಟ್ಝds’ ಅನುಭವಿಸುವ ಅದೃಷ್ಟವಂತರು. ನಮ್ಮನ್ನು ಆವರಿಸಿರುವ ಗುಳ್ಳೆ ಯಾವಾಗ ಹಾಗೂ ಎಲ್ಲಿ ಬೇಕಾದರೂ ಒಡೆಯಬಹುದು ಅಂಥದೊಂದು ಗುಳ್ಳೆ ಒಡೆದು ವ್ರಣವಾಗಬಹುದು ಎಂದು ಕಾಣಿಸಿಕೊಟ್ಟಿದ್ದು ಕರೋನಾ. ವಲಸಿಗರ ಪ್ರಪಂಚ ಎಷ್ಟುಪುಟ್ಟದು ಎಂದರೆ, ನಾನು ನನ್ನವರನ್ನು ಹೊರತು ಪಡಿಸಿದರೆ, ಯಾರಿಗೆ ಯಾರುಂಟು ಎಂಬ ಅನಾಥ ಪ್ರಜ್ಞೆ ಆವರಿಸಿಬಿಡುತ್ತದೆ. ಅಂದಹಾಗೆ, ನಾನು ಲೋಕಲ್ -ನಾನ್ ಲೋಕಲ್ಲುಗಳ ತಿಕ್ಕಾಟ, ವರ್ಗ ಸಂಘರ್ಷವೋ ಅಥವಾ ವರ್ಣ ಸಂಘರ್ಷವೋ ಅಥವಾ ಬರೀ ಹಿತಾಸಕ್ತಿಗಳ ಕಾದಾಟವೋ?
ಲೋಕ ಅನ್ನೋದು ನಾನು ಲೋಕಲ್ಲಾ ಅಥವಾ ನಾನ್-ಲೋಕಲ್ಲಾ!
ನೀವು ಎಲ್ಲಿಯವರು?
ವಲಸಿಗರು ಒಂದು ಲೆಕ್ಕದಲ್ಲಿ ಎಲ್ಲಿಯೂ ಸಲ್ಲುವವರು. ಹಾಗೆಯೇ ಎಲ್ಲಿಯೂ ಸಲ್ಲದವರು ಕೂಡಾ. ಅದು ಆಯಾ ಸಂದರ್ಭಗಳನ್ನು ಅವಲಂಬಿಸಿರುತ್ತದೆ. ಸುಖ ಸಮೃದ್ಧಿ, ಸಂತುಷ್ಟಿಯ ದಿನಗಳಲ್ಲಾದರೆ ಎಲ್ಲೂ ಸಲ್ಲುವರು. ಒಂಚೂರು ವ್ಯತ್ಯಾಸವಾಯಿತೆಂದರೆ, ಎಲ್ಲೂ ಸಲ್ಲದವರು. ಕರ್ನಾಟಕದಲ್ಲಿ ತೀವ್ರ ಮಳೆ ಅಭಾವವಾದರೆ, ಮೊದಲ ಸಂಕಷ್ಟಎದುರಾಗುವುದು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಹುಭಾಷಾ ನಟ ಪ್ರಕಾಶ್ ರೈ ಅವರಿಗೇ. ಕಲೆ ಸೀಮಾತೀತ, ಗಡಿ ರೇಖೆಗಳಿಲ್ಲ ಎಂದರೂ ಕಾವೇರಿದ ಕಾವೇರಿ ಪ್ರತಿಭಟನೆಗಳಲ್ಲಿ ಅವರು ಪಾಲ್ಗೊಳ್ಳಬೇಕು, ಪ್ರತಿ ಬಾರಿಯೂ ತಮಿಳುನಾಡಿಗೆ ತಮ್ಮ ಬದ್ಧತೆ ವ್ಯಕ್ತಪಡಿಸಲೇಬೇಕು. ಇಲ್ಲಿ ಬದ್ಧತೆ ಎಂದರೆ, ಕನ್ನಡ ವಿರೋಧಿ ನಿಲುವು ಎಂದೇ ಓದಿಕೊಳ್ಳತಕ್ಕದ್ದು. ಅದೇ ತೆರನಾಗಿ ಅಲ್ಲಿರುವವರಿಗೂ ಈ ಬಗೆಯ ಅನುಭವ ಸಾಮಾನ್ಯ. ಸಹೋದ್ಯೋಗಿ ಸೆಂದಮಿಳಿಗನೊಬ್ಬ ತಮಿಳುನಾಡಿನ ಕುರಿತು ವ್ಯಥೆ ಪಡುತ್ತಿದ್ದ. ‘ನಮ್ಮ ರಾಜ್ಯದ ದುರಾದೃಷ್ಟನೋಡಿ. ಈ ರಾಜ್ಯದ ಪ್ರಮುಖ ನೇತಾರಾರೂ ಈ ನೆಲದ ಮೂಲದವರಲ್ಲ, ಎಲ್ಲರೂ ವಲಸೆ ಬಂದವರೆ ’ ಎಂಬುದು ಆತನ ವ್ಯಥೆಗೆ ಕಾರಣವಾಗಿತ್ತು. ಕಳೆದ ಹದಿನೈದು ವರ್ಷದಿಂದ ತಮಿಳುನಾಡಿನಲ್ಲಿರುವ ನನ್ನನ್ನು ಬಿಡಿ, ಇಲ್ಲಿನ ಮುಖ್ಯಮಂತ್ರಿಗಳಾಗಿದ್ದ ಎಂಜಿಆರ್ ಹಾಗೂ ಜಯಲಲಿತಾ ಅವರನ್ನು ವಲಸಿಗರೆಂದೇ
ಗುರುತಿಸಲಾಗುತ್ತದೆ. ಹಾಗೆಯೇ, ದ್ರಾವಿಡ ಮುನ್ನೇತ್ರ ಕಳಗಂ ನೇತಾರ, ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರೂ ತಮಿಳುನಾಡಿನ ಮೂಲದವರಲ್ಲ ಎಂದು ಪಿಸುಮಾತಿನಲ್ಲಿ ನೆನಪಿಸುತ್ತಾರೆ.