ಯಾರಾದ್ರೂ ನಿಮ್ಗೆ ಒಂದೇಟು ನೀಡಿದ್ರೆ ಆ ಕ್ಷಣಕ್ಕಷ್ಟೇ ನೋವಿನ ಅನುಭವವಾಗುತ್ತೆ. ಅದೇ ಯಾರಾದ್ರೂ ಚುಚ್ಚು ಮಾತುಗಳಿಂದ ಮನಸ್ಸಿಗೆ ಘಾಸಿ ಮಾಡಿದ್ರೆ, ಆ ನೋವು ಸುಲಭದಲ್ಲಿ ಮಾಸೋದಿಲ್ಲ. ಇದಕ್ಕೇ ಹೇಳೋದು ದೈಹಿಕ ಹಲ್ಲೆಗಿಂತ ಮಾನಸಿಕ ಕಿರುಕುಳ ಹೆಚ್ಚು ನೋವುಕಾರಕ ಎಂದು. ಅಲ್ಲದೆ, ನಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಯೇ ಇಲ್ಲವೆ ಎಂಬುದನ್ನು ಅರ್ಥೈಸಿಕೊಳ್ಳೋದು ಕೂಡ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಮಾನಸಿಕ ಕಿರುಕುಳಕ್ಕೊಳಗಾಗುತ್ತಿದ್ದೇವೆ ಎಂಬುದು ಅರಿವಿಗೆ ಬರಲು ಕೆಲವು ದಿನಗಳೇ ಬೇಕಾಗಬಹುದು. ಅದ್ರಲ್ಲೂ ಸಂಗಾತಿಯಿಂದಲೇ ಮಾನಸಿಕ ಕಿರುಕೊಳಗಾದಾಗ ಬದುಕು ನರಕವಾಗೋದು ಗ್ಯಾರಂಟಿ. ಬೈಗುಳ, ಚುಚ್ಚು ಮತುಗಳು, ಅವಮಾನ ವ್ಯಕ್ತಿಯನ್ನು ಖಿನ್ನತೆ, ಉದ್ವೇಗ, ಆತ್ಮವಿಶ್ವಾಸದ ಕೊರತೆಯಂತಹ ದೀರ್ಘಕಾಲಿಕ ಸಮಸ್ಯೆಗಳಿಗೆ ಕಾರಣವಾಗಬಲ್ಲವು. ನೀವು ಸಂಗಾತಿಯಿಂದ ಮಾನಸಿಕ ಹಿಂಸೆಗೊಳಗಾಗುತ್ತಿದ್ದೀರೋ ಇಲ್ಲವೋ ಎಂಬುದನ್ನು ಸೂಚಿಸೋ ಕೆಲವು ಚಿಹ್ನೆಗಳು ಇಲ್ಲಿವೆ. 

ಸೋಷಿಯಲ್‌ ಮೀಡಿಯಾದಲ್ಲಿ ರೊಮ್ಯಾಂಟಿಕ್‌ ಫೋಟೋ ಪೋಸ್ಟ್‌ ಮಾಡದ ಜೋಡಿಗಳೇ ಆದರ್ಶ ದಂಪತಿ!

ಜೋರು ದನಿಯಲ್ಲಿ ಗದರಿಸೋದು
ಗಟ್ಟಿ ಧ್ವನಿಯಲ್ಲಿ ಮಾತನಾಡೋದು ಅಥವಾ ಒಮ್ಮೆಲೇ ಧ್ವನಿಯೇರಿಸಿ ಕಿರುಚೋದು ನಿಮ್ಮನ್ನು ಬೈಯುತ್ತಿದ್ದಾರೆ ಎಂಬುದರ ಸೂಚನೆ. ನಿಮ್ಮದೇಹ, ರೂಪ, ವ್ಯಕ್ತಿತ್ವದ ಕುರಿತಾಗಿ ಮಾಡೋ ಟೀಕೆಗಳು ನಿಮ್ಮನ್ನು ಕುಗ್ಗಿಸೋ ಜೊತೆ ನಿಮ್ಮ ಬಗ್ಗೆ ನಿಮಗೇ ಅನುಮಾನ ಮೂಡುವಂತೆ, ಆತ್ಮವಿಶ್ವಾಸ ಕುಗ್ಗುವಂತೆ ಮಾಡುತ್ತವೆ. ಒಂದು ವೇಳೆ ನಿಮ್ಮ ಸಂಗಾತಿ ಯಾವಾಗಲೂ ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದ್ರೆ ಹಾಗೂ ನಿಮ್ಮ ಭಾವನೆಗಳಿಗೆ ನೋವಾಗುವಂತೆ ವರ್ತಿಸಿದ್ರೆ ನೀವು ಮಾನಸಿಕ ಕಿರುಕುಳಕ್ಕೊಳಗಾಗುತ್ತಿದ್ದೀರಿ ಎಂದರ್ಥ.

ಅಸಭ್ಯ ಪದಗಳ ಬಳಕೆ
ಯಾವುದೋ ವಿಷಯಕ್ಕೆ ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದಾಗ ನಿಮ್ಮ ಸಂಗಾತಿ ಅಸಭ್ಯ ಪದಗಳನ್ನು ಬಳಸಿ ನಿಮ್ಮನ್ನು ನಿಂದಿಸೋ ಅಭ್ಯಾಸ ಹೊಂದಿರಬಹುದು. ಅವರು ಬಳಸಿದ ಪದ ನಿಮ್ಮ ಮನಸ್ಸಿಗೆ ನೋವು ನೀಡಿ, ಪದೇಪದೆ ಆ ಪದ ನಿಮ್ಮ ಮನಸ್ಸಿನಲ್ಲಿ ಮೂಡಿ ಸಂಕಟವಾಗುತ್ತಿದ್ರೆ ಅವರು ನಿಮ್ಗೆ ನೋವಾಗಲಿ ಎಂದೇ ಇಂಥ ಮಾತು ಆಡಿರೋದು ಪಕ್ಕಾ. ಅಸಭ್ಯ ಪದಗಳನ್ನು ಬಳಸಿ ನಿಂದಿಸೋದು ಕೂಡ ಮಾನಸಿಕ ದೌರ್ಜನ್ಯವೇ ಆಗಿದೆ. 

ತಪ್ಪು ಹೊರೆಸೋದು
ಏನೇ ತಪ್ಪು ನಡೆದ್ರೂ ಅದಕ್ಕೆ ನಿಮ್ಮನ್ನು ಹೊಣೆಯಾಗಿಸೋ ಅಭ್ಯಾಸವನ್ನು ನಿಮ್ಮ ಸಂಗಾತಿ ಹೊಂದಿದ್ರೆ ಅದು ಖಂಡಿತವಾಗಿಯೂ ಮಾನಸಿಕ ಕಿರುಕುಳವೇ. ಅವರ ಈ ನಡೆಯಿಂದ ನಿಮ್ಮ ಬಗ್ಗೆ ನಿಮಗೇ ಬೇಸರ ಮೂಡಬಹುದು. ನೀವೇ ಸರಿಯಿಲ್ಲ ಎಂಬ ಭಾವನೆ ನಿಮ್ಮದೇ ಮನಸ್ಸಿನ ಮೂಲೆಯಲ್ಲಿ ಮೂಡಬಹುದು. 

ಸೆಕ್ಸ್ ಲೈಫ್ ಸೂಪರ್ ಆಗಿರಬೇಕೆಂದರೆ ಈ ವಿಷಯಗಳನ್ನು ನೆನಪಲ್ಲಿಟ್ಟುಕೊಂಡರೆ ಒಳಿತು!

ಕಂಫರ್ಟ್‌ ಆಗಿರಲು ಬಿಡಲ್ಲ
ಎಲ್ಲಿ ಹೋದ್ರೂ ಎಲ್ಲಿ ಬಂದ್ರೂ ಅವರು ನಿಮ್ಮ ಜೊತೆಗಿರುವಷ್ಟು ಹೊತ್ತು ಕಂಫರ್ಟ್‌ ಆಗಿರಲು ಬಿಡಲ್ಲ. ನಿಮಗೆ ಕಸಿವಿಸಿಯುಂಟು ಮಾಡೋ ಏನಾದ್ರೂ ಒಂದು ಕೆಲ್ಸ ಮಾಡುತ್ತಲೇ ಇರುತ್ತಾರೆ. ಒಟ್ಟಾರೆ ನೀವು ನೆಮ್ಮದಿಯಿಂದ ಇರಲು ಬಿಡಲ್ಲ.

ಇನ್ನೊಬ್ಬರ ಮುಂದೆ ಮರ್ಯಾದೆ ಕಳೆಯೋದು
ಪಾರ್ಟಿ, ಮದುವೆ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿರಲಿ ಅಥವಾ ಮನೆಗೆ ಅತಿಥಿಗಳು ಬಂದಿರಲಿ, ಅವರ ಮುಂದೆ ನಿಮಗೆ ಅವಮಾನ ಮಾಡೋದು ಅಥವಾ ಹೀಯಾಳಿಸೋ ಅಭ್ಯಾಸವನ್ನು ನಿಮ್ಮ ಸಂಗಾತಿ ಹೊಂದಿದ್ರೆ ನಿತ್ಯವೂ ಮನಸ್ಸು ಕೆಡೋದು ಪಕ್ಕಾ. ಇಂಥ ಛಾಳಿ ಕೂಡ ಮಾನಸಿಕ ಹಿಂಸೆಯೇ. 

ಎಂದೋ ಮಾಡಿದ ತಪ್ಪುಗಳನ್ನು ಎತ್ತಿ ಆಡೋದು
ಹಿಂದೆ ಎಂದೋ ನೀವು ಮಾಡಿದ ತಪ್ಪನ್ನು ಸಮಯ ಸಿಕ್ಕಾಗಲ್ಲೆಲ್ಲ ಎತ್ತಿ ಆಡಿದ್ರೆ ಮನಸ್ಸಿಗೆ ಬೇಸರವಾಗದಿರದು. ನಿಮ್ಮ ಸಂಗಾತಿ ಇಂಥ ಅಭ್ಯಾಸ ಹೊಂದಿದ್ರೆ ಇದನ್ನು ಕೂಡ ಮಾನಸಿಕ ಹಿಂಸೆ ಎಂದೇ ಹೇಳ್ಬಹುದು.

ಆತ್ಮೀಯರ ಸಲಹೆ ಪಡೆಯಿರಿ
ಸಂಗಾತಿಯಿಂದ ನಿರಂತರ ಮಾನಸಿಕ ಕಿರುಕುಳಕ್ಕೊಳಗಾಗುತ್ತಿರೋ ವಿಷಯವನ್ನು ಮುಚ್ಚಿಡಬೇಡಿ. ಆತ್ಮೀಯರ ಬಳಿ ಈ ವಿಷಯವನ್ನು ಹೇಳಿಕೊಳ್ಳಿ. ಅವರಿಂದ ಸೂಕ್ತ ಸಲಹೆಗಳನ್ನು ಪಡೆಯಿರಿ. ಇದ್ರಿಂದ ಮನಸ್ಸು ಹಗುರವಾಗೋ ಜೊತೆ ಕೆಟ್ಟ ನಿರ್ಧಾರಗಳನ್ನು ಕೈಗೊಳ್ಳದಂತೆ ತಡೆಯುತ್ತೆ.

ವಿಶ್ವಾಸ ಕಳೆದುಕೊಳ್ಳಬೇಡಿ
ಒಂದು ವೇಳೆ ನೀವು ಆತ್ಮವಿಶ್ವಾಸದ ಕೊರತೆಯಿಂದ ಬಳಲುತ್ತಿದ್ರೆ ಅದ್ರಿಂದ ಹೊರಬನ್ನಿ. ಯಾವುದೇ ಕಾರಣಕ್ಕೂ ನಾಳೆ ಬಗ್ಗೆ ವಿಶ್ವಾಸ ಕಳೆದುಕೊಳ್ಳಬೇಡಿ. ನಿಮ್ಮ ಸಂಗಾತಿಗೆ ಅವರು ಮಾಡುತ್ತಿರೋದು ತಪ್ಪು ಎಂಬುದನ್ನು ಮನವರಿಕೆ ಮಾಡಿಸಲು ಪ್ರಯತ್ನಿಸಿ. 

ನಾನ್ಯಾಕೆ ಹಿಂಗೆ, ನನ್‌ ಮಗ ಯಾಕೆ ಹಂಗೆ!

ಬೀ ಬೋಲ್ಡ್
ಹೆದರಿದಷ್ಟು ಹೆದರಿಸೋರು ಹೆಚ್ಚಿರುತ್ತಾರೆ. ಹಾಗಾಗಿ ನಿಮ್ಮ ಸಂಗಾತಿ ನಿಮಗೆ ಮಾನಸಿಕ ಹಿಂಸೆ ನೀಡುತ್ತಿದ್ರೆ ಸಹಿಸಿಕೊಂಡು ಸುಮ್ಮನಿರೋದು ಒಳ್ಳೆಯದ್ದಲ್ಲ. ನಿಮ್ಮ ಅಭಿಪ್ರಾಯಗಳನ್ನು ಧೈರ್ಯವಾಗಿ ತಿಳಿಸಿ. ಅವರ ಮಾತು, ವರ್ತನೆಗಳಿಂದ ನಿಮ್ಮ ಆತ್ಮವಿಶ್ವಾಸ ಕುಗ್ಗೋದಿಲ್ಲ ಎಂಬುದನ್ನು ಮನವರಿಕೆ ಮಾಡಿಸಿ. ಧೈರ್ಯ ತಾಳಿದಾಗ ಎಲ್ಲ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯ.

ಪರಿಸ್ಥಿತಿ ಸುಧಾರಿಸದಿದ್ರೆ ಸಂಬಂಧ ಕಡಿದುಕೊಳ್ಳಿ
ಭಾರತೀಯ ಸಮಾಜದಲ್ಲಿ ವಿವಾಹಕ್ಕೆ ವಿಶೇಷವಾದ ಸ್ಥಾನಮಾನವಿದೆ. ಇಂದಿಗೂ ಸಮಾಜ ವಿಚ್ಛೇದನೆಯನ್ನು ವಿಚಿತ್ರವಾಗಿಯೇ ನೋಡುತ್ತಿರೋದಂತೂ ಸುಳ್ಳಲ್ಲ. ಹಾಗಂತ ಹಿಂಸೆ ಅನುಭವಿಸುತ್ತ ಮದುವೆ ಎಂಬ ಸಂಬಂಧದ ಕಟ್ಟುಪಾಡಿನೊಳಗೆ ನಿತ್ಯ ನರಳೋದಕ್ಕಿಂತ ಅದ್ರಿಂದ ಹೊರಬಂದು ನೆಮ್ಮದಿಯ ಬದುಕು ಕಟ್ಟಿಕೊಳ್ಳೋದು ಉತ್ತಮ ಆಯ್ಕೆ. ಹಾಗಾಗಿ ಅನೇಕ ಪ್ರಯತ್ನಗಳ ಹೊರತಾಗಿಯೂ ಮಾನಸಿಕ ಹಿಂಸೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ರೆ ಆ ಸಂಬಂಧಕ್ಕೆ ಫುಲ್‌ ಸ್ಟಾಪ್‌ ಇಡಲು ಹಿಂಜರಿಯಬೇಡಿ.