ಮೂಡಿ ಗೆಳತಿಯ ಜೋಡಿ ಬಾಳೋದ್ಹೇಗೆ?
ಹಾರ್ಮೋನುಗಳ ಏರುಪೇರಿಗೋ, ಹೆಚ್ಚು ಭಾವಜೀವಿಗಳಾದುದಕ್ಕೋ ಒಟ್ಟಿನಲ್ಲಿ ಹೆಣ್ಣು ಮೂಡಿ. ಈಗಿದ್ದಂತೆ ಇನ್ನೊಂದು ಕ್ಷಣ ಅವರ ಮನವಿರುವುದಿಲ್ಲ. ಕ್ಷಣ ಚಿತ್ತ, ಕ್ಷಣ ಪಿತ್ತ ಸ್ವಭಾವದವರು. ಇಂಥ ಗೆಳತಿ ಅಥವಾ ಪತ್ನಿಯೊಂದಿಗೆ ಏಗುವುದು ಹೇಗಪ್ಪಾ ಎಂದು ಒದ್ದಾಡುತ್ತಿದ್ರೆ ಇಲ್ಲಿದೆ ನೋಡಿ ಉತ್ತರ.
ಈಗಿನ್ನೂ ನಗುನಗುತ್ತಾ ಮಾತನಾಡುತ್ತಿದ್ದ ಪತ್ನಿಯ ಮುಖ ಸಡನ್ ಆಗಿ ಊದಿಕೊಂಡಿದೆ. ಏನಾಯಿತು, ನೀವೇನು ಹೇಳಿದಿರಿ ಎಂದೆಲ್ಲ ಪ್ಲೇಬ್ಯಾಕ್ ಮಾಡಿ ನೋಡುತ್ತಿದ್ದೀರಿ. ಆದರೂ ಉತ್ರ ಸಿಗುತ್ತಿಲ್ಲ. ಕೇಳಿದ್ದಕ್ಕೆಲ್ಲ ಹರಿ ಹಾಯುತ್ತಿದ್ದಾಳೆ. ಮೂಡ್ ಬದಲಾಗಿದ್ದು ನೋಡಿ ಪೀರಿಯಡ್ಸ್ ಟೈಮಾ ಎಂದರೆ ಅದಕ್ಕೆ ಇನ್ನಷ್ಟು ಎಗರಿ ಬೀಳುತ್ತಿದ್ದಾಳೆ. ಹೋಗಲಿ ಬಿಡು, ಎಂದರೆ ವಾರ ವಾರ ಇದೇ ಗೋಳು. ನಿಮಗೂ ಸಾಕಾಗಿ ಹೋಗಿದೆ. ಹೇಗಪ್ಪಾ ಇದನ್ನು ನಿಭಾಯಿಸುವುದು? ಆಕೆಯ ಮೂಡ್ ಸ್ವಿಂಗ್ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು? ಏನು ಕೇಳಬೇಕು? ಏನು ಕೇಳಬಾರದು ಎಂದೆಲ್ಲ ತಲೆ ಕೆರೆದುಕೊಳ್ಳುತ್ತಿದ್ದೀರಿ. ಮಹಿಳೆಯರಿಗೇಕೆ ಅಷ್ಟೊಂದು ಮೂಡ್ ಸ್ವಿಂಗ್ಸ್ ಎಂದು ಯೋಚಿಸುವುದು ಬಿಟ್ಟು ಆ ಸಂದರ್ಭದಲ್ಲಿ ಆಕೆಯನ್ನು ಸಮಾಧಾನದಲ್ಲಿಡುವುದು ಹೇಗೆ ಎಂಬುದು ತಿಳಿದುಕೊಳ್ಳಿ.
1. ಆಕೆಯನ್ನು ಅವಳ ಪಾಡಿಗೆ ಬಿಡಿ
ನಿಮ್ಮ ಪತ್ನಿ ಅಥವಾ ಗೆಳತಿ ಬಳಿ ಏನು ಬೇಜಾರಾಯಿತು ಎಂದು ಒಮ್ಮೆ ಕೇಳಿ. ತನ್ನ ಮೂಡ್ ಸ್ವಿಂಗ್ ಬಗ್ಗೆ ಮಾತನಾಡಲು ಆಕೆಗೆ ಇಷ್ಟವಿಲ್ಲವೆಂದರೆ ಅವಳನ್ನು ಸ್ವಲ್ಪ ಹೊತ್ತು ಅವಳ ಪಾಡಿಗೆ ಬಿಟ್ಟು ಬಿಡಿ. ತನ್ನದೇ ಆದ ಸಮಯ ಪಡೆದು ಒಳ್ಳೆಯ ಮೂಡ್‌ಗೆ ಬರಲು ಸಮಯ ನೀಡಿ. ಪದೇ ಪದೆ ಏನಾಯಿತು ಎಂದು ಕೇಳುತ್ತಿರುವುದು ಹೀಗೆ ಮನಸ್ಸು ಕೆಟ್ಟ ಸಂದರ್ಭದಲ್ಲಿ ಆಕೆಗೆ ಇಷ್ಟವಾಗುವುದಿಲ್ಲ. ಬದಲಿಗೆ, 'ಇಷ್ಟ ಇದ್ರೆ ಹೇಳು, ಇಲ್ಲಾಂದ್ರೆ ಟೈಂ ತಗೋ, ನಾನೇನೂ ಕೇಳೋದಿಲ್ಲ, ಒಳ್ಳೆ ಮೂಡ್‌ಗೆ ಬಂದ ನಂತರ ಮಾತನಾಡಿಸು' ಎಂದು ಹೇಳಿ. ನೀವು ಅರ್ಥ ಮಾಡಿಕೊಂಡಿರೆಂಬ ಸಂತೋಷಕ್ಕೇ ಆಕೆ ಬೇಗ ಒಳ್ಳೆಯ ಮೂಡ್ಗೆ ಬರುತ್ತಾಳೆ.
ಕೆಸರು ಗದ್ದೆಗಿಳಿದ ನವ ಜೋಡಿ, ಇಂದೆಂಥಾ ಕ್ಯಾಂಡಿಡ್ ಮೋಡಿ?
2. ಆಕೆಯ ಅಗತ್ಯಗಳಿಗೆ ಕಿವಿಕೊಡಿ
ಯಾವುದೋ ನಿರ್ದಿಷ್ಟ ವಿಷಯಕ್ಕೆ ಆಕೆಯ ಮನಸ್ಸಿಗೆ ಘಾಸಿಯಾಗಿರಬಹುದು. ಅಥವಾ ಕೋಪ ಬಂದಿರಬಹುದು. ಇದೇ ಕಾರಣಕ್ಕೆ ಮೂಡ್ ಹಾಳಾಗುತ್ತಿರಬಹುದು. ನೀವು ಮಾಡಿದ ಯಾವುದೋ ಕೆಲಸ ಅಥವಾ ನಿಮ್ಮ ಮಾತಿನ ದಾಟಿ ಇರಬಹುದು ಅಥವಾ ಯಾವುದೋ ಸಿಲ್ಲಿ ವಿಷಯವಿರಬಹುದು. ಇದರಿಂದ ಆಕೆಯ ಮೂಡ್ ಹಾಳಾಗಿದ್ದಾಗ, ಆಕೆ ನಿಮ್ಮಿಂದ ಏನನ್ನು ನಿರೀಕ್ಷಿಸುತ್ತಿದ್ದಾಳೆಂದು ಕೇಳಿ. ನನ್ನ ವರ್ತನೆಯಲ್ಲೇನಾದರೂ ಬದಲಾಗಬೇಕಾ ಅಥವಾ ನಿನಗೆ ಬೇರೇನಾದರೂ ಅಗತ್ಯವಿದೆಯೇ? ಇಲ್ಲವೇ ನನ್ನ ಸಮಯ, ಗಮನ ಕಡಿಮೆಯಾಗುತ್ತಿದೆಯೇ ಎಂದು ನಯವಾಗಿ ವಿಚಾರಿಸಿ. ಸಾಮಾನ್ಯವಾಗಿ ತಾನು ಅತಿಯಾಗಿ ಪ್ರೀತಿಸುವವನ ಸಣ್ಣ ಕಡೆಗಣನೆಯನ್ನೂ ಆಕೆ ಸಹಿಸಲಾರಳು.
3. ಆಕೆಗೆ ಸಿಟ್ಟು ತರಿಸುವಂಥ ಕೆಲಸ ಮಾಡಬೇಡಿ
ಪತ್ನಿಗೆ ಇಷ್ಟವಾಗದ, ಸರಿಯಲ್ಲದ ಕೆಲಸವನ್ನು ಖಂಡಿತಾ ಮಾಡಬೇಡಿ. ಉದಾಹರಣೆಗೆ ಬಾತ್ರೂಂ ಗಬ್ಬೆಬ್ಬಿಸುವುದು, ಬೇರೆ ಹುಡುಗಿಯನ್ನು ನೋಡುವುದು, ಆಕೆಗೆ ಇಷ್ಟವೇ ಇರದ ಮ್ಯೂಸಿಕ್ ದೊಡ್ಡದಾಗಿ ಹಾಕುವುದು, ದೊಡ್ಡದಾಗಿ ತೇಗುವುದು ಇತ್ಯಾದಿ. ಆಕೆ ಇವೆಲ್ಲದರ ಕುರಿತು ಸಾವಿರಾರು ಬಾರಿ ಹೇಳಿದ ಮೇಲೂ ನೀವದನ್ನೇ ಮಾಡುತ್ತಿದ್ದರೆ ಮೂಡ್ ಔಟ್ ಆಗುವುದರಲ್ಲಿ ವಿಶೇಷವೇನಿಲ್ಲ. ಮೂಡ್ ಸ್ವಿಂಗ್ಸ್ ಇದ್ದಾಗ ಖಂಡಿತಾ ವಾದ ಮಾಡಬೇಡಿ.
4. ತಪ್ಪನ್ನು ಎತ್ತಿ ಆಡಬೇಡಿ
ಪೀರಿಯಡ್ಸ್ ಸಂದರ್ಭದ ಮೂಡ್ ಸ್ವಿಂಗ್ ಆಗಿದ್ದರೆ ಆ ಸಂದರ್ಭದಲ್ಲಿ ಆಕೆಯ ತಪ್ಪನ್ನು ಬೆರಳು ಮಾಡಿ ತೋರಿಸಬೇಡಿ. ಹಾಗಂಥ ಆಕೆಯ ತಪ್ಪನ್ನು ಹೇಳಲೇಬಾರದೆಂದಲ್ಲ. ಆಕೆ ಒಳ್ಳೆಯ ಮೂಡ್‌ನಲ್ಲಿರುವಾಗ ಪ್ರೀತಿಯಿಂದ ನಯವಾಗಿ ವಿಷಯ ಹೇಳುವುದರಿಂದ ತಾನು ಮಾಡಿದ್ದು ತಪ್ಪು ಎಂಬುದು ಆಕೆಗೂ ಅರಿವಾಗುತ್ತದೆ. ಆರೋಪಗಳನ್ನು ಹೊರಿಸುವುದು, ವ್ಯಂಗ್ಯವಾಡುವುದು, ಜಗಳವಾಡುವುದು ಎಲ್ಲದಕ್ಕಿಂತ ಮೆಚ್ಯುರಿಟಿ ಹೊಂದಿರುವ ವ್ಯಕ್ತಿಯಾಗಿದ್ದರೆ ಹೆಚ್ಚು ಸಮಮಾಧಾನದಿಂದಿರಬಹುದು. ನಿಮ್ಮ ಶಾಂತ ಸ್ವಭಾವವೇ ಆಕೆಯ ಮೇಲೆ ಪರಿಣಾಮ ಬೀರಿ ಆಕೆಯ ಮನಸ್ಸನ್ನು ಹಗುರವಾಗಿಸುತ್ತದೆ. ಅಲ್ಲದೆ ತಪ್ಪನ್ನು ಮನ್ನಿಸುವ ದೊಡ್ಡತನ ನೀವು ತೋರಿದರೆ, ಅದನ್ನು ಮಾಡುವ ಸಣ್ಣತನ ಅವರಲ್ಲಿ ಪಶ್ಚಾತ್ತಾಪ ಮೂಡಿಸುತ್ತದೆ. ನೀವು ಅದನ್ನು ಎತ್ತಿ ಆಡಿದರೆ ಆಗ ಅವರದನ್ನು ಸಮರ್ಥಿಸಿಕೊಳ್ಳುವ ಹಟಕ್ಕೆ ಬೀಳುತ್ತಾರೆ.
ಗತ ಲೈಂಗಿಕ ಸಂಬಂಧದ ಬಗ್ಗೆ ಸಂಗಾತಿ ಬಾಯಿ ಬಿಟ್ಟಾಗ!?
5. ಆಕೆ ಹೇಳಿದ್ದನ್ನು ಕೇಳಿ ಅನುಮೋದಿಸಿ
ನಿಮ್ಮ ಗರ್ಲ್‌ಫ್ರೆಂಡ್ ಹೇಳುತ್ತಿರುವುದು ತುಂಬಾ ಸಿಲ್ಲಿ ವಿಷಯವಿರಬಹುದು, ಕೂದಲು ಸರಿಯಾಗಿ ಸೆಟ್ ಆಗುತ್ತಿಲ್ಲ ಎಂದೋ, ಕಚೇರಿಯ ಜಗಳಕ್ಕೋ ಅವರ ಮೂಡ್ ಕೆಟ್ಟಿರಬಹುದು. ಅದು ನಿಮಗೆ ಎಷ್ಟೇ ಚೈಲ್ಡಿಶ್ ಎನಿಸಲಿ, ಹೇಳಿದ್ದನ್ನೆಲ್ಲ ಒಪ್ಪಿಕೊಳ್ಳಿ. ನನ್ನ ತರವೇ ಯೋಚಿಸುವವರು ಈ ಜಗತ್ತಿನಲ್ಲಿ ಒಬ್ಬರಾದರೂ ಇದ್ದಾರಲ್ಲಾ ಎಂದೇ ಆಕೆಗೆ ಸಮಾಧಾನ ಸಿಗುತ್ತದೆ. ನಂತರ ಮೂಡ್ ಸರಿಯಾದ ಮೇಲೆ ತಮ್ಮ ಸಿಲ್ಲಿ ವರ್ತನೆಯ ಬಗ್ಗೆ ಅವರೇ ಹೇಳಿಕೊಂಡು ನಗದಿದ್ದರೆ ಕೇಳಿ.
6. ಎಲ್ಲ ಹೊರಹಾಕಲು ಅವಕಾಶ ನೀಡಿ
ಕೆಲವೊಮ್ಮೆ ಹಲವು ಸಮಯದಿಂದ ಕಟ್ಟಿಕೊಂಡು ಬಂದ ಭಾವನೆಗಳ ಪರಿಣಾಮವಾಗಿ ಮಹಿಳೆ ಪದೇ ಪದೆ ಮೂಡ್ ಔಟ್ ಆಗುತ್ತಿರುತ್ತಾಳೆ. ಆಕೆಯ ಮನಸ್ಸಿನಲ್ಲಿ ಕೊರೆಯುತ್ತಿರುವುದೇನು, ಅದು ಏನೇ ಆದರೂ ಹೇಳು, ನಾನು ಅವನ್ನೆಲ್ಲ ಜಡ್ಜ್ ಮಾಡುವುದಿಲ್ಲ ಎಂದು ಹೇಳಿ. ಇದರಿಂದ ಅವರು ಎಲ್ಲ ಕಟ್ಟಿಕೊಂಡ ಭಾವನೆಗಳನ್ನೂ ಹೊರಹಾಕಬಹುದು. ಈ ಸಂದರ್ಭದಲ್ಲಿ ಇದು ತಪ್ಪು, ನಿನಗೆ ಹೀಗನ್ನಿಸಬಾರದಿತ್ತು ಎಂದೆಲ್ಲ ಹೇಳಬೇಡಿ. ಸುಮ್ಮನೆ ಕಿವಿಕೊಡಿ, ಹೆಗಲು ನೀಡಿ. ಅತ್ತರೆ ಸಾಕಷ್ಟು ಅಳಲು ಬಿಡಿ. ಒಮ್ಮೆ ಕಟ್ಟಿಕೊಂಡ ಎಮೋಶನ್ಸ್ ಎಲ್ಲ ಹೊರಹೋದರೆ ಬಹುಕಾಲ ಅವರ ಮೂಡ್ ಸ್ವಿಂಗ್ಸ್ ದೂರವೇ ಉಳಿಯುತ್ತದೆ.