1. ಒಬ್ಬರಿಗೊಬ್ಬರು ಹೆಚ್ಚು ಡಿಪೆಂಡ್‌ ಆಗಿದ್ದೇವೆ

ಮೊದಲಾದರೆ ದುಃಖವಾದಾಗ ನಾನು ಒಬ್ಬಳೇ ಅಳಬೇಕಿತ್ತು. ಆದರೆ ಈಗ ನನಗೆ ಅಳಲಿಕ್ಕೊಂದು ಹೆಗಲು ಯಾವಾಗಲೂ ಸಿಗುತ್ತದೆ. ನಗಲಿಕ್ಕೊಂದು ಜತೆ ಪ್ರತಿ ಕ್ಷಣ ಸಿಗುತ್ತದೆ. ಅವರ ಕೆಲಸದ ಒತ್ತಡ ನನ್ನ ಬಳಿ ಹೇಳಿ ಹಗುರಾಗುತ್ತಾರೆ. ನಾವೀಗ ಒಬ್ಬರಿಗೊಬ್ಬರು ಹೆಚ್ಚು ಡಿಪೆಂಡ್‌ ಆಗಿದ್ದೇವೆ. ಹೆಚ್ಚು ಹತ್ತಿರವಾಗಿದ್ದರಿಂದ ನಾವೀಗ ಪರಸ್ಪರರನ್ನು ಜಾಸ್ತಿ ನಂಬುತ್ತಿದ್ದೇವೆ.

2. ಹೆಚ್ಚು ಪ್ರಾಮಾಣಿಕರಾಗಿದ್ದೇವೆ

ನಾವು ಎಷ್ಟೇ ಹತ್ತಿರ ಇದ್ದರೂ ಎಲ್ಲವನ್ನೂ ಪರಸ್ಪರರ ಬಳಿ ಹೇಳಲು ಆಗುತ್ತಿರಲಿಲ್ಲ. ಕೆಲವೊಂದು ಫೀಲಿಂಗ್ಸು, ಹಲವೊಂದು ವಿಚಾರಗಳು ನಮ್ಮಲ್ಲೇ ಉಳಿಯುತ್ತಿದ್ದವು. ನಿಜ ಹೇಳಬೇಕೆಂದರೆ ಅಡಗಿಸಿಡುತ್ತಿದ್ದೆ. ಆದರೆ ಈಗ ಅಡಗಿಸಿಡಲು ಸಾಧ್ಯವೇ ಇಲ್ಲ. ಎಲ್ಲವನ್ನೂ ಹೇಳುತ್ತಿದ್ದಂತೆ ನಮ್ಮ ಬಂಧ ಗಟ್ಟಿಯಾಗುತ್ತಿದೆ. ಎಲ್ಲವನ್ನೂ ಹೇಳುತ್ತಾ ನಾವು ಪರಸ್ಪರರಿಗೆ ಅರ್ಥವಾಗುವುದಷ್ಟೇ ಅಲ್ಲ ನಮಗೆ ನಾವು ಅರ್ಥವಾಗುತ್ತಿದ್ದೇವೆ.

ಅಜ್ಜ-ಅಜ್ಜಿ ಸಾಂಗತ್ಯದಲ್ಲಿ ಮೊಮ್ಮಕ್ಕಳ ಲಾಕ್‍ಡೌನ್; ಹಳ್ಳಿಯ ಹಿರಿಯ ಜೀವಗಳಿಗೆ ಹಿಗ್ಗು

3. ಇಬ್ಬರೂ ಟೀಮ್‌ ಆಗಿ ಕೆಲಸ ಮಾಡುವುದು ಕಲಿಯುತ್ತಿದ್ದೇವೆ

ಒಂದು ಕಾಲವಿತ್ತು. ಆಗ ಅನೇಕ ಕೆಲಸಗಳನ್ನೂ ಇಬ್ಬರೂ ಒಟ್ಟಾಗಿ ಸೇರಿ ಮಾಡುತ್ತಿದ್ದೆವು. ಕಾಲ ಕಳೆದಂತೆ ಆ ಅಭ್ಯಾಸ ದೂರವಾಯಿತು. ಈಗ ಮತ್ತೆ ಅದೇ ದಿನಗಳಿಗೆ ಬಂದಿದ್ದೇವೆ. ನಾನು ಅಡುಗೆ ಮನೆಯಲ್ಲಿದ್ದರೆ ಅವರೂ ಬರುತ್ತಾರೆ. ಅವರು ಬೆನ್ನ ಹಿಂದೆ ಬಂದು ನಿಂತರೆ ಅದೇನೋ ಸಮಾಧಾನ ನನಗೆ. ಅವರು ಸಣ್ಣ ಪುಟ್ಟಸಹಾಯ ಮಾಡಿದರೂ ನನಗೆ ಒಂದು ಟೀಮ್‌ ಆಗಿ ಕೆಲಸ ಮಾಡಿದ ಫೀಲ್‌ ಬರುತ್ತದೆ. ಹೆಚ್ಚು ಆಯಾಸ ಆಗುವುದಿಲ್ಲ.

4. ಒಬ್ಬರನ್ನೊಬ್ಬರು ಮೆಚ್ಚುವ ಖುಷಿ ಮತ್ತೊಂದಿಲ್ಲ

ಜತೆಗೆ ಕಾಲ ಕಳೆಯುವುದು ಹೆಚ್ಚಾಗುತ್ತಿದ್ದಂತೆ ನಮಗೆ ಗೊತ್ತಿಲ್ಲದ ನಮ್ಮ ಸಂಗಾತಿಯ ಒಳ್ಳೆಯ ಗುಣಗಳು, ಪ್ರತಿಭೆ ಗೊತ್ತಾಗುತ್ತಾ ಹೋಗುತ್ತದೆ. ಅದು ನಿಜವಾದ ಸರ್ಪೈಸ್‌. ಮೊನ್ನೆ ನಾನು ಬಿಡಿಸಿದ ಚಿತ್ರವನ್ನು ನೋಡಿ ಅವರ ಕಣ್ಣಲ್ಲಿ ಉಂಟಾದ ಅಚ್ಚರಿ ನನಗಿನ್ನೂ ಮರೆತಿಲ್ಲ. ಒಬ್ಬರನ್ನೊಬ್ಬರು ಮೆಚ್ಚುವ ಖುಷಿ ಮತ್ತೊಂದಿಲ್ಲ.

5. ಒಳ್ಳೆಯ ಕೇಳುಗರಾಗುವುದು ಈಗ ಮುಖ್ಯ

ಮೊದಲು ಅವರು ಒಂದು ಮಾತಾಡಿದರೆ ನಾನು ಎರಡು ಮಾತಾಡುತ್ತಿದ್ದೆ. ಕೇಳುವ ತಾಳ್ಮೆಯೇ ಇರಲಿಲ್ಲ. ಚರ್ಚೆಗಳು ನಡೆದಾಗ ಮಾತಾಡುವ ಆಸಕ್ತಿಯೇ ಉಳಿದಿರುವುದಿಲ್ಲ. ಆದರೆ ಈಗ ಅವರು ಹೇಳುವುದನ್ನು ನಾನು ಕೇಳುತ್ತಿದ್ದೇನೆ. ನಾನು ಹೇಳುವುದನ್ನು ಅವರು. ನಮ್ಮ ಮಧ್ಯೆ ಮಾತಾಡದೆ ಇರುವುದು ಎಷ್ಟೊಂದು ಉಳಿದಿದೆಯಲ್ಲ ಅನ್ನಿಸಿತು.

ಪ್ರೀತಿಸುವುದೊಂದೇ ಅಲ್ಲ, ಅಭಿವ್ಯಕ್ತಿಯೂ ಒಂದು ಕಲೆ!

6. ಇಂಪ್ರೆಸ್‌ ಮಾಡಲು ಅದ್ಭುತ ಡ್ರೆಸ್‌ ಹಾಕಬೇಕಾಗಿಲ್ಲ

ಹೊರಗೆ ಹೋಗುತ್ತಿದ್ದಾಗ ಡ್ರೆಸ್ಸಿಂಗ್‌, ಮೇಕಪ್ಪು ಅದೂ ಇದು ಅಂತೆಲ್ಲಾ ಎಷ್ಟುರಗಳೆಗಳಿದ್ದುವು. ಆದರೆ ಈಗ ಅವೇನೂ ಇಲ್ಲ. ಲೂಡೋ ಆಡುವುದರಲ್ಲಿ, ಒಟ್ಟಿಗೆ ಸಿನಿಮಾ ನೋಡುವುದರಲ್ಲಿ, ಪರಸ್ಪರರಿಗೆ ಚಹಾ ಮಾಡುವುದರಲ್ಲಿಯೂ ಎಷ್ಟೊಂದು ಸಂತೋಷ, ಸಂಭ್ರಮ ಇದೆ. ನನಗಂತೂ ಈ ದಿನಗಳು ಜೀವನಪರ್ಯಂತ ಮರೆಯದ ನೆನಪುಗಳನ್ನು ಉಳಿಸಿದೆ.