ಮನೆಯಿಂದ ಹೊರಗೆ ಕಾಲಿಡುವಂತಿಲ್ಲ. ಶಾಪಿಂಗ್, ಪಾರ್ಟಿ ಏನೂ ಮಾಡೋಕೆ ಆಗ್ತಿಲ್ಲ ಎಂದು ಲಾಕ್‍ಡೌನ್‍ಗೆ, ಕೊರೋನಾಕ್ಕೆ ಕೆಲವರು ಹಿಡಿಶಾಪ ಹಾಕುತ್ತಿರಬಹುದು. ಆದ್ರೆ ಇದೇ ಕಾರಣಕ್ಕೆ ಹಳ್ಳಿಗಳಲ್ಲಿರುವ ಅಜ್ಜಿ ಮನೆ ಸೇರಿರುವ ಮಕ್ಕಳು ಮಾತ್ರ ಖುಷಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ. ನಗರದ ಬಿಡುವಿಲ್ಲದ ಜೀವನಶೈಲಿ, ಸ್ಕೂಲ್, ಟ್ಯೂಷನ್, ಡೇಕೇರ್ ಎಲ್ಲವುದರಿಂದ ಮುಕ್ತಿ ಸಿಕ್ಕು ಅಜ್ಜಿ-ಅಜ್ಜನ ನೆರಳಲ್ಲಿ ಹಾಯಾಗಿದ್ದಾರೆ. ಇಷ್ಟು ವರ್ಷ ಅಜ್ಜ-ಅಜ್ಜಿ ಬೇಸಿಗೆ ಹಾಗೂ ದಸರಾ ರಜೆ ನೆಪದಲ್ಲಿ ಹೆಚ್ಚೆಂದ್ರೆ ಒಂದು ವಾರ ಅಪ್ಪ-ಅಮ್ಮನ ಜೊತೆಗೆ ಬಂದು ಹೋಗುತ್ತಿದ್ದ ಮೊಮ್ಮಕ್ಕಳೊಂದಿಗೆ ಕಳೆದ ಕ್ಷಣಗಳನ್ನೇ ವರ್ಷವಿಡೀ ನೆನಪಿಸಿಕೊಂಡು ಖುಷಿಪಡುತ್ತಿದ್ರು. ಆದ್ರೆ ಕೊರೋನಾದಿಂದಾಗಿ ಮೊಮ್ಮಕ್ಕಳು ಮಡಿಲು ಸೇರಿದ್ದಾರೆ. ತೋಟ, ಗದ್ದೆ, ಕೆರೆ, ಗುಡ್ಡ ಎಂದು ಸಂಜೆ ಹೊತ್ತು ಮೊಮ್ಮಕ್ಕಳನ್ನು ಕರೆದುಕೊಂಡು ಮಂಡಿನೋವನ್ನೂ ಮರೆತು ಅಜ್ಜ ವಾಕಿಂಗ್ ಮಾಡುತ್ತಾರೆ. ಅಜ್ಜಿಗಂತೂ ಮತ್ತೆ ಯೌವನ ಮರುಕಳಿಸಿದೆ. ಇಷ್ಟು ದಿನ ಬಿಡದೆ ಕಾಡುತ್ತಿದ್ದ ಎಲ್ಲ ನೋವು ಮಾಯವಾಗಿದ್ದು, ಉತ್ಸಾಹದಿಂದ ನಾನಾ ಖಾದ್ಯಗಳನ್ನು, ತಿಂಡಿ-ತಿನಿಸನ್ನು ಮೊಮ್ಮಕ್ಕಳಿಗಾಗಿ ಸಿದ್ಧಪಡಿಸಿ, ಬಡಿಸುತ್ತಿದ್ದಾರೆ. ಸರ್ಕಾರ ಲಾಕ್‍ಡೌನ್ ಮುಂದುವರಿಸೋದಾಗಿ ಘೋಷಿಸಿದಾಗ ಅದೆಷ್ಟು ಮಂದಿ ಸಂಕಟ ಅನುಭವಿಸಿದ್ರೋ, ಕಿರಿಕಿರಿ ಮಾಡಿಕೊಂಡ್ರೋ ಗೊತ್ತಿಲ್ಲ. ಆದ್ರೆ ಅಜ್ಜ-ಅಜ್ಜಿ ಎಂಬ ಹಿರಿಜೀವಗಳು ಮಾತ್ರ ಹಿರಿಹಿರಿ ಹಿಗ್ಗಿದಂತೂ ಸುಳ್ಳಲ್ಲ. 

ನಾನೇಕೆ ಅಷ್ಟೊಂದು ಭಾವಜೀವಿ? ಈ ಪ್ರಶ್ನೆ ಕಾಡ್ತಿದ್ರೆ ಇಲ್ಲಿದೆ ಉತ್ತರ

ಗ್ರಾಮೀಣ ಕ್ರೀಡೆಗೆ ಮರುಜೀವ
ಅಜ್ಜಿ ಮನೆಯ ಅಂಗಳದಲ್ಲಿ ಈಗ ಮಕ್ಕಳ ಆಟದ್ದೇ ಕಾರುಬಾರು. ಅದ್ರಲ್ಲೂ 4-5 ಮಕ್ಕಳು ಒಟ್ಟಿಗೆ ಸೇರಿದ್ದಾರೆ ಅಂದ್ರೆ ಕೇಳೋದೆ ಬೇಡ. ಕಬಡ್ಡಿ, ಚಿನ್ನಿದಾಂಡು, ರಗೋಲಿ, ಮರಕೋತಿ, ಅಡುಗೆ ಆಟ...ಹೀಗೆ ನಗರದಲ್ಲಿ ಆಡಲಾಗದ ಹಳ್ಳಿ ಸೊಗಡಿನ ಆಟಗಳಲ್ಲಿ ಮಕ್ಕಳು ಸ್ಕೂಲ್, ಎಕ್ಸಾಂ, ಟ್ಯೂಷನ್ ಎಂಬ ಎಲ್ಲ ಒತ್ತಡಗಳನ್ನು ಮರೆತು ನಿರಾಳರಾಗಿದ್ದಾರೆ. ಕೊರೋನಾದ ಕಾರಣಕ್ಕೆ ಗ್ರಾಮೀಣ ಕ್ರೀಡೆಗಳಿಗೆ ಮರುಜೀವ ಬಂದಿದೆ.

ಪ್ರಾಣಿ, ಪಕ್ಷಿಗಳ ಸಂಗ
ನಗರದಲ್ಲಿ ಕಾಣಸಿಗದ ಅಥವಾ ಕಣ್ಣಿಗೆ ಬಿದ್ದರೂ ಗಮನಿಸಲಾಗದಷ್ಟು ಒತ್ತಡಕ್ಕೆ ಸಿಲುಕಿರುವ ಮಕ್ಕಳಿಗೆ ಹಳ್ಳಿಗಳಲ್ಲಿ ತೋಟ, ಕೆರೆಕಟ್ಟೆ ಮೇಲೆ ಕುಳಿತ ಹಕ್ಕಿಗಳನ್ನು ನೋಡೋದೆ ಕೆಲಸವೀಗ. ಪ್ಯಾಕೆಟ್ ಹಾಲು ನೋಡಿದ ಮಕ್ಕಳು ಅಜ್ಜಿ ಹಸುವಿನ ಕೆಚ್ಚಲಿಂದ ಹಾಲು ಹಿಂಡೋದನ್ನು ಕುತೂಹಲಭರಿತ ಕಣ್ಣುಗಳಿಂದ ನೋಡುತ್ತಿದ್ದಾರೆ. ಇನ್ನು ನಾಯಿ, ಬೆಕ್ಕು, ಕೋಳಿಗಳ ಬೆನ್ನ ಹಿಂದೆ ಓಡುವ ಖುಷಿ ನಗರದ ಯಾವ ಪಾರ್ಕ್‍ಗೆ ಹೋದ್ರೂ ಸಿಗಲಿಕ್ಕಿಲ್ಲ. 

ಅಜ್ಜಿಯ ಕೈರುಚಿ
ಫಿಜ್ಜಾ, ಬರ್ಗರ್, ನೂಡಲ್ಸ್, ಪೇಸ್ಟ್ರೀಸ್ ಎಂದು ನಾಲಗೆಗೆ ರುಚಿಸುವ ತಿನಿಸನ್ನೆಲ್ಲ ತಿಂದು ಆರೋಗ್ಯಕರ ಖಾದ್ಯಗಳ ರುಚಿ ಮರೆತ ಮಕ್ಕಳು ಅಜ್ಜಿ ಮಾಡುವ ಹೆಸರುಬೇಳೆ ಪಾಯಸ, ಅನಾನಸು ಕೇಸರಿಬಾತ್, ಮಾವಿನಹಣ್ಣಿನ ಚಟ್ನಿ, ಹಲಸಿನ ಕಾಯಿ ಚಿಪ್ಸ್‍ಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿದ್ದಾರೆ. ಅಜ್ಜಿಗೋ ಮಕ್ಕಳಿಗೆ ದಿನವೂ ನಾನಾ ಖಾದ್ಯಗಳನ್ನು ಸಿದ್ಧಪಡಿಸಿ ಬಡಿಸೋದೆ ಪರಮಸುಖ ಎಂಬ ಭಾವನೆ. 

ಮಕ್ಕಳನ್ನು ಕೊಲೀಗ್ಸ್‌ ಥರ ಟ್ರೀಟ್‌ ಮಾಡಬಹುದಾ?

ಅಜ್ಜನ ಕಥೆ ಕೇಳಿ ನಿದ್ರೆಗೆ ಜಾರುವ ಸುಖ
ಟಿವಿ, ಮೊಬೈಲ್‍ಗಳೇ ಎಂಟರ್‍ಟೈನ್‍ಮೆಂಟ್ ಎಂದು ಭಾವಿಸಿದ್ದ ಮಕ್ಕಳಿಗೆ ಅಜ್ಜ ಹೇಳುವ ಪೌರಾಣಿಕ ಪಾತ್ರಗಳ ಮುಂದೆ ಸ್ಪೈಡರ್‍ಮ್ಯಾನ್, ರೆಡ್ ರೇಂಜರ್ಸ್ ಮುಂತಾದ ಕಾರ್ಟೂನ್ ಹೀರೋಗಳು ಡಲ್ ಆಗಿವೆ. ರಾತ್ರಿ ಮಲಗುವಾಗ ಅಜ್ಜ ಕಥೆ ಹೇಳುತ್ತಿದ್ರೆ ಅದನ್ನು ಕೇಳುತ್ತ ಕೇಳುತ್ತ ನಿದ್ರೆ ಆವರಿಸಿದ್ದೆ ತಿಳಿಯುತ್ತಿಲ್ಲ. ಹೋಂವರ್ಕ್ ಮುಗಿದಿಲ್ಲ, ಎಕ್ಸಾಂ ಹತ್ತಿರ ಬರುತ್ತಿದೆ ಎಂಬ ಯಾವ ಭಯವೂ ಇಲ್ಲದ ಕಾರಣ ಬೆಚ್ಚಿಬೀಳಿಸುವ ಕನಸುಗಳು ಬೀಳುತ್ತಿಲ್ಲ. ಕನಸಲ್ಲೂ ಅಜ್ಜನ ಕಥೆಯ ಪಾತ್ರಗಳೇ ಕಾಣಿಸಿಕೊಳ್ಳುವ ಜೊತೆಗೆ ಸುಖ ನಿದ್ರೆಯೂ ಪ್ರಾಪ್ತಿಯಾಗುತ್ತಿದೆ. 

ಹಪ್ಪಳ-ಸಂಡಿಗೆ ಮಾಡೋ ಖುಷಿ
ಹಪ್ಪಳ, ಸಂಡಿಗೆ ತಿಂದಷ್ಟೇ ಗೊತ್ತಿದ್ದ ಮಕ್ಕಳಿಗೆ ಈಗ ಅಜ್ಜಿ ಜೊತೆ ಸೇರಿ ಹಪ್ಪಳ-ಸಂಡಿಗೆ ಮಾಡುವ ಸಂಭ್ರಮ. ಹಪ್ಪಳ ಲಟ್ಟಿಸುವ, ಒಣಗಿಸುವ ಕಾರ್ಯದಲ್ಲಿ ಮಕ್ಕಳು ಅಜ್ಜಿಗೆ ಹೆಗಲು ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ನಗರ ಬಿಟ್ಟು ಊರಿಗಿಳಿದಿರುವ ಅಪ್ಪ-ಅಮ್ಮ, ಅತ್ತೆ-ಮಾವ, ದೊಡ್ಡಮ್ಮ –ದೊಡ್ಡಪ್ಪ ಹೀಗೆ ಎಲ್ಲರೂ ಹಪ್ಪಳ, ಸಂಡಿಗೆ, ಶ್ಯಾವಿಗೆ, ಉಪ್ಪಿನಕಾಯಿ ಮಾಡೋದ್ರಲ್ಲಿ ಕೈಜೋಡಿಸುತ್ತ ಟೈಮ್‍ಪಾಸ್ ಮಾಡುತ್ತಿದ್ದಾರೆ.

ವಿಡಿಯೋ ಕಾಲಿಂಗ್‍ನಲ್ಲೇ ಎಷ್ಟೆಲ್ಲ ಮೋಜು-ಮಸ್ತಿ ಮಾಡ್ಬಹುದು ಗೊತ್ತಾ?

ಮಾವು, ಹಲಸು ಕೀಳೋದೆ ಕೆಲಸ
ಈಗಂತೂ ಮಾವು, ಹಲಸಿನ ಸೀಸನ್. ಮಕ್ಕಳಿಗೆ ಇದಕ್ಕಿಂತ ಖುಷಿಯ ಸಮಯ ಬೇರೆ ಯಾವುದಿದೆ? ತೋಟಗಳಲ್ಲಿರುವ ಹಲಸು, ಮಾವು ಮಾರಗಳನ್ನೇರಿ ಹಣ್ಣು, ಕಾಯಿ ಕೊಯ್ದು ರುಚಿ ನೋಡುತ್ತಿದ್ದಾರೆ. ಬಾಳೆಹಣ್ಣು, ಸೀಬೆಹಣ್ಣು ಸೇರಿದಂತೆ ಮನೆಯ ತೋಟದಲ್ಲಿ ಬೆಳೆದ ಹಣ್ಣುಗಳನ್ನು ಚಪ್ಪರಿಸಿಕೊಂಡು ತಿನ್ನುತ್ತಿದ್ದಾರೆ.