ಟಿ.ವಿ. ವಾಹಿನಿಗಳ ಅಷ್ಟೂ ಕಾರ್ಯಕ್ರಮಗಳು ಕೊರೋನಾವನ್ನೇ ಸುತ್ತಿವರಿದ್ದರೆ, ಪತ್ರಿಕೆಗಳ ಸೀಮಿತ ಪುಟಗಳಲ್ಲೂ ಕ್ರೀಡೆ, ಸಂಪಾದಕೀಯ, ಅಪರಾದ ಬಿಟ್ಟರೆ ಮತ್ತೆಲ್ಲ ಕೊರೋನಾಮಯ. ಜಾಗತಿಕ, ರಾಷ್ಟ್ರೀಯ, ಪ್ರಾದೇಶಿಕ, ಜಿಲ್ಲಾವಾರು ಅಂಕಿ ಅಂಶಗಳು, ಸ್ವಾರಸ್ಯಗಳು, ಲೇಖನಗಳು ಎಲ್ಲವೂ ಕೋವಿಡ್ 19 ಸೀಲ್ ಅಂಟಿಸಿಕೊಂಡೇ ಬರುತ್ತಿವೆ. ಜಿಲ್ಲಾ, ತಾಲೂಕು ಮಟ್ಟದ ಪತ್ರಿಕೆ, ಟಿ.ವಿ.ವಾಹಿನಿಗಳಲ್ಲೂ 2 ತಿಂಗಳ ಹಿಂದೆಯಷ್ಟೇ ಅಲ್ಪಸ್ವಲ್ಪ ಪರಿಚಯವಾದ ಕೊರೋನಾ ಬಗ್ಗೆಯೇ ಮಾತನಾಡಬೇಕಾದ ಪರಿಸ್ಥಿತಿ ಬಂದಿದೆ.

 ಎಲ್ಲದಕ್ಕಿಂತ ಜನರನ್ನು ಕಾಡುತ್ತಿರುವುದು, ಬೆಚ್ಚಿ ಬೀಳಿಸುತ್ತಿರುವುದು ಅಂಕಿ ಅಂಶ. ಕಡಿಮೆಯಾದಂತೆ ಕಂಡು ಹೆಚ್ಚಾಗುವುದು, ಹೇಳದೇ ಕೇಳದೆ ಕಾಡುವುದು, ಕಾರಣವನ್ನು ಬಚ್ಚಿಟ್ಟು ಧುತ್ತನೆ ಆಪೋಶನ ತೆಗೆದುಕೊಳ್ಳುವ ಕೊರೋನಾ ಅರ್ಥವಾಗದ ಒಗಟು ಮಾತ್ರವಲ್ಲ, ಎಂದೂ ಮುಗಿಯದ ಕಾಟವೇನೋ ಎಂಬಷ್ಟು ಮಟ್ಟಿಗೆ ಕೋವಿಡ್ ಯುಗವನ್ನು ತೆರೆದಿಟ್ಟಿದೆ.... ತನ್ನ ಪುಟಗಳನ್ನು ತೆರೆಯುತ್ತಲೇ ಇದೆ.

ಕಿಚನ್ ಎಂಬ ಮೆಡಿಕಲ್‌ನಲ್ಲಿ ಸಿಗುತ್ತೆ ಪೇಯಿನ್ ಕಿಲ್ಲರ್

ಈಗ ಯಾರೂ ಯಾವುದಕ್ಕೂ ಶಂಕುಸ್ಥಾಪನೆ ಮಾಡುವುದಿಲ್ಲ, ಉದ್ಘಾಟನೆ ಆಗುವುದಿಲ್ಲ, ಅಧಿವೇಶನಗಳು ನಡೆಯುವುದಿಲ್ಲ, ಸಭೆ, ಸಮಾರಂಭ ನಡೆಸುವಂತಿಲ್ಲ. ಗಡದ್ದಿನ ಮದುವೆ ಆಗುವಂತಿಲ್ಲ, ವಿಮಾನ, ರೈಲುಗಳು ರದ್ದಾಗುವುದು, ವಿಳಂಬವಾಗುವುದು ನಡೆಯುವುದಿಲ್ಲ, ಶಾಲಾ ಕಾಲೇಜು ಫಲಿತಾಂಶ ಬರುವುದಿಲ್ಲ, ವೇಗದ ಓಟಗಾರ, ಅತಿ ಹೆಚ್ಚು ವಿಕೆಟ್ ಪಡೆದವ, ಶತಕ ಪೂರೈಸಿದವ ಯಾರೂ ಮೈದಾನದೊಳಗಿಲ್ಲ, ಪ್ರಶಸ್ತಿ ಘೋಷಣೆಗಳು, ಸಾಲ ಮೇಳಗಳು, ಆಯ್ಕೆ ಶಿಬಿರಗಳು, ಸಂದರ್ಶನಗಳು, ಸಿನಿಮಾ ಬಿಡುಗಡೆ, ಶತದಿನೋತ್ಸವ, ಸುದ್ದಿಗೋಷ್ಠಿ ಯಾವುದೂ ಮಾಡುವಂತಿಲ್ಲ, ಮಾಡುವ ಪರಿಸ್ಥಿತಿಯಲ್ಲೂ ಇಲ್ಲ. ಸುದ್ದಿಗಳ ಮೂಟೆಯನ್ನೇ ಗಂಟು ಕಟ್ಟಿ ಅಟ್ಟಕ್ಕೆ ಎಸೆದ ಹಾಗೆ... ವೈರಸ್ಸು ದೇಹಗಳನ್ನು ಮಾತ್ರ ತಟ್ಟಿದ್ದಲ್ಲ, ಎಲ್ಲ ಸುದ್ದಿ ಮೂಲಗಳನ್ನು ಕುಲಗೆಡಿಸಿ ಮಾಡಿ ಕೊರೋನಾ ಮಾತ್ರ ವಿಜೃಂಭಿಸುತ್ತಿದೆ.   

ದೊಡ್ಡದೊಂದು ಸುನಾಮಿ ಬಂದ ಹಾಗೆ,  ದಾರಿ ಕಾಣದ ಗಾಳಿ ಮಳೆಯ ಹಾಗೆ, ಚಂಡ ಮಾರುತದ ಹಾಗೆ ಎಲ್ಲವನ್ನು ಅರೆದು ನೀರು ಕುಡಿದ ಹಾಗೆ ಕೈಕಾಲು ಕಟ್ಟಿ ಹಾಕಿ ಮೂಲಗುಂಪಾಗಿಸಿ ಸಹಜದ ಸುದ್ದಿಗಳ ಹರಿವನ್ನು ಬಂದ್ ಮಾಡಿದೆ ಕೊರೋನಾ.  ಶೀರ್ಷಿಕೆ, ವಿವರಣೆ, ಫೋಟೋ, ಚಿತ್ರಶೀರ್ಷಿಕೆ, ಮುಖಪುಟ, ಪುರವಣಿ,ಸ ಸಂಪಾದಕೀಯ ಪುಟ, ವೆಬ್ ಆವೃತ್ತಿ ಅಷ್ಟೆ ಯಾಕೆ ಜಾಹೀರಾತು ಕೂಡಾ ಕೊರೋನಾ ಜಾಗೃತಿಯ ಕುರಿತೇ ಬರುತ್ತಿವೆ. ಕಾರ್ಟೂನುಗಳು, ಕವನಗಳು, ಗಾಯಕರ ಹಾಡುಗಳು, ಕಥೆಗಾರರ ಬರಹಗಳು, ಯಕ್ಷಗಾನ ಭಾಗವತರ ಹೊಸ ಬರವಣಿಗೆಗಳು ಎಲ್ಲ ಕೊರೋನಾದ ಸುತ್ತಲೇ ಸುತ್ತುತ್ತಿವೆ.

ಕೊರೋನಾ ಬಂದ ಕೂಡಲೇ ಸಾಯೋಲ್ಲ, ಇಲ್ ಕೇಳಿ ವಾಸಿಯಾದ ರೋಗಿ ಮಾತು .

ಸಂದರ್ಶನಗಳು, ಅನುಭವಗಳು, ಹತಾಶೆಯ ವಿಶೇಷ ವರದಿಗಳೂ ಕೊರೋನಾವನ್ನೇ ವ್ಯಾಪಿಸಿವೆ. ಕ್ರೀಡೆ, ಅಪರಾಧ, ರಾಜಕೀಯ, ಭಾಷಾಂತರ, ಸಿನಿಮಾ, ಪುರವಣಿ ಬರಹಗಳ ವೈವಿಧ್ಯಮಯ ಸುದ್ದಿಗಾರರೆಲ್ಲರೂ ಕೊರೋನಾ ಛಾಯೆಯಿಲ್ಲದೆ ಏನನ್ನೂ ಬರೆಯದ ಹಾಗಾಗಿದೆ. ಲಾಕ್ ಡೌನ್, ಕ್ವಾರಂಟೇನ್, ಶಂಕಿತರು, ಸೋಂಕಿತರು, ಗಂಟಲ ದ್ರವ ಮಾದರಿ.... ಹೀಗೆ ಕೊರೋನಾ ಬಂದ ಬಳಿಕ ಅನಕ್ಷರಸ್ಥರಿಗೂ ಇವೆಲ್ಲ ಅರ್ಥ ಆಗುವಷ್ಟರ ಮಟ್ಟಿಗೆ ಕೊರೋನಾ ಶಬ್ದಕೋಶ ನಾಲಿಗೆಯ ತುದಿಯಲ್ಲಿದೆ.

ಡಿಸೆಂಬರ್ ನಂತರದ ಪತ್ರಿಕೆಗಳನ್ನೆಲ್ಲ ಹಾಗೆಯೇ ಎತ್ತಿಟ್ಟರೆ ಮುಂದೊಂದು ಕಾಲಕ್ಕೆ ಇದೊಂದು ಇತಿಹಾಸದ ಪುಟಗಳಾಗಬಹುದು. ಶುರುವಿನಲ್ಲಿ ಸಿಂಗಲ್ ಕಾಲಂ ಒಳಪುಟದ ಸುದ್ದಿಯಾಗಿದ್ದ ಕೊರೋನಾ ಹೇಗೆ ಮುಖಪುಟಕ್ಕೆ ನಿಧಾನವಾಗಿ ಬಂತು, ಮತ್ತೆ ಹೇಗೆ ವೇಗವಾಗಿ ಮುಖ್ಯ ಹೆಡ್ ಲೈನ್ ಜಾಗವನ್ನು ಆಕ್ರಮಿಸಿತು, ಕ್ರಮೇಣ ಪ್ರತಿ ಪುಟಕ್ಕೂ ದಾಳಿಯಿಟ್ಟುದ್ದು ಮಾತ್ರವಲ್ಲದೆ, ಪುರವಣಿ, ಕ್ರೀಡೆ, ಸಿನಿಮಾ ಪ್ರತಿ ವಿಭಾಗದ ಜಾಗದಲ್ಲೂ ಸ್ಥಾನ ಪಡೆದು ಯಾವ ಏರಿಯಾದಲ್ಲೂ ಕೊರೋನಾ ಬಿಟ್ಟು ಮತ್ತಿನ್ನೇನೂ ಇಲ್ಲ ಎಂಬಂತೆ ಮಾಡಿದೆ.

ಕೋವಿಡ್ ಸೋಲಿಸಲು ಪ್ರಾಣಾಯಾಮ ಬ್ರಹ್ಮಾಸ್ತ್ರ: ದಿಲ್ಲಿಯ ಮೊದಲ ರೋಗಿ

ಪ್ರಚಲಿತವೇ ಸದ್ಯಕ್ಕೆ ಸುದ್ದಿ. ಈ ಹೊತ್ತಿಗೆ ಅಷ್ಟೆತ್ತರ ಬೆಳೆದು ಎಲ್ಲವನ್ನು ಮರೆ ಮಾಡಿರುವುದು ಕೊರೋನಾ. ಅದಕ್ಕೇ ಸಹಜವಾಗಿ ಅದುವೇ ಸುದ್ದಿಯಾಗಿದೆ. ಕೊರೋನಾ, ಕೊರೋನಾದ ಅಡ್ಡ ಪರಿಣಾಮ, ಸಂಶೋಧನೆ, ಸಾಧ್ಯತೆ, ಗಂಭೀರತೆ, ಸ್ವಾರಸ್ಯ, ಬಿಕ್ಕಟ್ಟು, ಪೇಚಾಟ, ದಯನೀಯ ಸಂದರ್ಭ, ಕರುಣಾಜನಕ ಕಠೋರ ಸತ್ಯಗಳು, ಮಾನವೀಯತೆ ವರ್ಸಸ್ ವಸ್ತುನಿಷ್ಠತೆ ಹೀಗೆ... ಎಷ್ಟೊಂದು ಮಜಲುಗಳಿಂದ ರೋಗ ಭೀತಿ, ರೋಗ ಬಾಧೆ, ರೋಗ ಸಾಧ್ಯತೆಗಳ ಸುದ್ದಿಗಳು ಹಗಲಿರುಳೆನ್ನದೆ ಸದ್ದು ಮಾಡುತ್ತಲೇ ಇವೆ.

ನಿನ್ನೆ ಸತ್ತಿಹುದೀಗ... ನಾಳೆ ಹುಟ್ಟದೆ ಇರದು... ಆದರೆ ಇಂದು ಈ ಹೊತ್ತು ಮಾತ್ರ ಸರಿದು ಹೋಗಬಾರದೇ ಎಂಬ ಪ್ರಾರ್ಥನೆ ಇದ್ದರೂ ಮತ್ತದೇ ಸದ್ದು ಕೊರೋನಾ ಕೊರೋನಾ....ಕೊರೋನಾ ಸುದ್ದಿ ಬೇಡವೆಂದು ದೂರ ಸರಿಯುವಂತಿಲ್ಲ, ತಿಳಿದ ಬಳಿಕ ಮೈಮರೆಯುವ ಹಾಗಿಲ್ಲ. ನಿಖರ ಸುದ್ದಿಯನ್ನೇ ಅರಿತುಕೊಳ್ಳಿ, ಮನೆಯೊಳಗೆ ಸುರಕ್ಷಿತರಾಗಿರಿ. ಇದು ಕನ್ನಡಪ್ರಭ ಕಾಳಜಿ.

-ಕೃಷ್ಣಮೋಹನ ತಲೆಂಗಳ.