ನಿನಗೆ ಕ್ಯಾನ್ಸರ್ ಇದೆ. ನೀನಿನ್ನು ಕೇವಲ ಒಂದೇ ತಿಂಗಳು ಬದುಕೋದು ಅಂದ್ರು ಗೈನಕಾಜಿಸ್ಟ್. ಮುಂದೇನಾಯಿತು?

ಆಗ ನನಗೆ ಕೇವಲ ಹತ್ತೊಂಬತ್ತು ವರ್ಷ. ನನ್ನ ಋತುಚಕ್ರದಲ್ಲಿ ಏನೋ ಸಮಸ್ಯೆ ಇದೆ ಎಂದು ಗೈನಕಾಲಜಿಸ್ಟ್ ಅನ್ನು ಭೇಟಿ ಮಾಡಿದ್ದೆ. ಆಗ ಅವರು ನನಗೆ ಕೆಲವು ಸ್ಕ್ಯಾನಿಂಗ್ ಮಾಡಿ, ನನ್ನ ಅಪ್ಪನ ಅಮ್ಮನ ಬಳಿ ಹೇಳಿದರು- ''ಆಕೆಗೆ ಗರ್ಭಕೋಶದ ಕ್ಯಾನ್ಸರ್ ಇದೆ. ಇನ್ನು ಆಕೆ ಬದುಕುವುದು ಕೇವಲ ಒಂದು ತಿಂಗಳು ಮಾತ್ರ...'' ಈ ಮಾತು ನನ್ನ ಪ್ಯಾಮಿಲಿಯವರನ್ನು ದುಃಖದಲ್ಲಿ ಕೆಡವಿ, ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿತು.

ನಾನು ಕೂಡ ಈ ಮಾತಿನಿಂದ ದಂಗುಬಡಿದುಹೋದೆ. ನನ್ನ ಆಂಟಿಯನ್ನು ತಬ್ಬಿಕೊಂಡು ''ನಾನು ಸಾಯ್ತಿದೀನಿ'' ಎಂದು ಜೋರಾಗಿ ಅತ್ತೆ. ಒಂದು ಸಣ್ಣ ಋತುಚಕ್ರದ ಸಮಸ್ಯೆ ಎಂದು ಭಾವಿಸಿ ಹೋದದ್ದು ದೊಡ್ಡ ಪ್ರಪಾತವೇ ಆಗಿತ್ತು. ನನ್ನ ಅಪ್ಪ ಅಮ್ಮ ಅಸಹಾಯಕತೆಯಿಂದ ದಗ್ಧರಾಗಿದ್ದರು.

ಮಾರನೆಯ ದಿನದಿಂದಲೇ ನನ್ನ ಕೀಮೋಥೆರಪಿ ಸ್ಟಾರ್ಟ್‌ ಆಗಲಿದೆ ಎಂದು ಗೈನಕಾಲಜಿಸ್ಟ್ ಹೇಳಿದರು. ನಾವು ಕಾರ್‌ನಲ್ಲಿ ಮನೆಗೆ ಬಂದೆವು. ನಮ್ಮ ನಡುವೆ ಅಸಹನೀಯ ಮೌನ ಹರಡಿತ್ತು. ಅಮ್ಮ ನನ್ನನ್ನು ತಬ್ಬಿಕೊಂಡು ಮತ್ತಿಟ್ಟರು. ''ನೀನು ಪ್ಯಾರಿಸ್‌ಗೆ ಹೋಗುವುದಕ್ಕೆ ಬಯಸಿದ್ದೆ ಅಲ್ವಾ? ನಾನು ನಿನ್ನನ್ನು ಅಲ್ಲಿಗೆ ಕಳಿಸ್ತೀನಿ. ಅದೇನೇ ಆಗ್ಲಿ, ಎಷ್ಟಾದ್ರೂ ಖರ್ಚಾಗ್ಲಿ. ನಿನ್ನ ಎಲ್ಲ ಕನಸೂ ನನಸಾಗುವಂತೆ ನಾನು ಮಾಡ್ತೀನಿ,'' ಎಂದಳು ಅಮ್ಮ.

ನನಗೆ ಈಗ ನಿಜಕ್ಕೂ ನಿನ್ನ ಜೊತೆ ಇರಬೇಕು ಎಂಬ ಆಸೆ ಅಂತ ಅಮ್ಮನಿಗೆ ಹೇಳಿದೆ. ಆ ದಿನ ರಾತ್ರಿ ನನಗೆ ನಿದ್ರೆಯೇ ಬರಲಿಲ್ಲ. ಮರುದಿನ ಬೆಳಗೆ ನಾನು ಎದ್ದರೆ, ನಾನು ಸಾವಿಗೆ ಇನ್ನೂ ಒಂದು ದಿನ ಹತ್ತಿರವಾಗುತ್ತೇನೆ ಎಂಬ ಯೋಚನೆಯೇ ಮನದಲ್ಲಿ ಬರುತ್ತಿತ್ತು. ''ನಿನಗೆ ಆರೋಗ್ಯ ಮರಳಿ ಬರೋಕೆ ಎಷ್ಟೇ ಖರ್ಚಾಗ್ಲಿ ಚಿಂತೆಯಿಲ್ಲ, ನನ್ನ ಆಸ್ತಿಯೆಲ್ಲ ಮಾರಾಟ ಆದ್ರೂ ಪರವಾಗಿಲ್ಲ'' ಅಂತ ಡ್ಯಾಡಿ ಭರವಸೆ ಕೊಟ್ಟರು.

ಮದುವೆಯಾಗಲು ಸರಿಯಾದ ಸಮಯ ಯಾವುದು? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ ...

ಮರುದಿನ ಬೆಳಗ್ಗೆ ನನ್ನ ತಂದೆ ನನ್ನನ್ನು ಇನ್ನೊಂದು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿನ ಡಾಕ್ಟರ್ ಕೆಲವು ಟೆಸ್ಟ್ ಮಾಡಿ, ''ಇವಳಿಗೆ ಕ್ಯಾನ್ಸರ್ ಇದೆ ಅಂತ ನಂಗೆ ಅನಿಸೋಲ್ಲ. ಆದ್ರೆ ಖಚಿತವಾಗಿ ಹೇಳೋಕೆ ಮೊದಲು ಸರ್ಜರಿ ಮಾಡಬೇಕು,'' ಎಂದರು. ಸರ್ಜರಿಗೆ ಮೂರು ದಿನ ಉಳಿದಿತ್ತು. ಆ ಮೂರು ದಿನಗಳಲ್ಲಿ ನಾನು ಪೂರ್ತಿಯಾಗಿ ನನ್ನ ಫ್ಯಾಮಿಲಿಯ ಜೊತೆಗೇ ಇದ್ದೆ.

ಅಮ್ಮನ ಜೊತೆಗೆ ಮಂದಿರಕ್ಕೆ ಹೋದೆ. ನನ್ನ ತಂಗಿ- ತಮ್ಮ ಸ್ಕೂಲಿನಿಂದ ಬಂದ ಮೇಲೆ ಅವರ ಜೊತೆ ಆಟವಾಡಿದೆ. ಸಾಮಾನ್ಯವಾಗಿ ನನ್ನ ಜೊತೆ ಮಾತನಾಡದೆ ನನ್ನ ತಂದೆ ಕೂಡ ನನ್ನ ಜೊತೆ ಮನಬಿಚ್ಚಿ ಮಾತನಾಡಿದರು. ''ಕಾಲೇಜು ಲೈಫು ಹ್ಯಾಗಿದೆ? ಯಾರಾದ್ರೂ ಬಾಯ್‌ಫ್ರೆಂಡ್ ಇದ್ದಾರಾ?'' ಎಂದೆಲ್ಲ ವಿಚಾರಿಸಿಕೊಂಡರು!

ಸರ್ಜರಿಗೆ ಹೋದಾಗ ನನ್ನ ಮನದಲ್ಲಿ ಯಾವುದೇ ನಿರೀಕ್ಷೆ ಇರಲಿಲ್ಲ. ತುಂಬಾ ಕೆಟ್ಟದನ್ನು ನಿರೀಕ್ಷಿಸಿಕೊಂಡೇ ಹೋಗಿದ್ದೆ. ಆದರೆ ಸರ್ಜರಿ ಮಾಡಿ ನೋಡಿದ ಡಾಕ್ಟರ್ ಹೇಳಿದ ಪ್ರಕಾರ, ಅದೊಂದು ಸಿಸ್ಟ್ ಅಥವಾ ಗುಳ್ಳೆ ಮಾತ್ರ ಆಗಿತ್ತು. ಅದನ್ನು ತೆಗೆದುಹಾಕಲಾಯಿತು. ನಾವೆಲ್ಲಾ ಒಂದು ಬಗೆಯ ನಿಟ್ಟುಸಿರು ಸಮಾಧಾನದಿಂದ ಅತ್ತುಬಿಟ್ಟೆವು.

ಮೊದಲು ಗೈನಕಾಲಜಿಸ್ಟ್ ಹೇಳಿದ್ದ ನನ್ನ 'ಎಕ್ಸ್‌ಪೈರಿ ಡೇಟ್' ಅನ್ನು ಕೂಡ ಯಶಸ್ವಿಯಾಗಿ ದಾಟಿ ನಾನು ಬದುಕುಳಿದೆ. ಆದರೆ ನನಗೆ ಒಂದು ಬಗೆಯ ಮಾನಸಿಕ ವಿಪ್ಲವ ಇತ್ತು. ಅದನ್ನು ನಿವಾರಿಸಿಕೊಳ್ಳಲು ಕೌನ್ಸೆಲಿಂಗ್ ಮಾಡಿಸಿಕೊಂಡೆ. ಈಗಲೂ ನನಗೂ ಆಗಾಗ ಭಯವಾಗುತ್ತದೆ- ಋತುಚಕ್ರ ಒಂದೆರಡು ದಿನ ಏರುಪೇರಾದರೂ ಆತಂಕವಾಗುತ್ತದೆ. ಹಾಸ್ಪಿಟಲ್‌ಗೆ ಹೋಗುವುದು ಎಂದರೆ ಥರಗುಟ್ಟುವಂತೆ ಆಗುತ್ತದೆ. ಆದರೆ ನಾನು ಬದುಕಿದ್ದೇನೆ; ಅದಕ್ಕಾಗಿ ನಾನು ದೇವರಿಗೆ ಋಣಿಯಾಗಿದ್ದೇನೆ.

ಅನಾದಿ ಕಾಲದಿಂದಲೂ ಭಾರತದಲ್ಲಿ ಲವ್ ಮ್ಯಾರೇಜ್, ಲಿವ್ ಇನ್ ರಿಲೇಷನ್‌ಶಿಪ್ ಇತ್ತಲ್ವಾ! ...

ಈಗ ನಾನು ಬದುಕನ್ನು ಪೂರ್ತಿಯಾಗಿ ಸವಿಯುವುದನ್ನು ಕಲಿತಿದ್ದೇನೆ. ಪಾರ್ಕಿನಲ್ಲಿ ಮಕಾಡೆಯಾಗು ಬಿದ್ದುಕೊಳ್ಳುವುದು ಹಿತವಾಗುತ್ತದೆ. ಫ್ಯಾಮಿಲಿಯ ಜೊತೆ ಕಳೆಯುವ ಸಮಯ ಇಷ್ಟವಾಗುತ್ತದೆ. ದೇಶವಿಡೀ ಸುತ್ತಾಡಿ ಆನಂದಪಡುತ್ತೇನೆ. ಹೊಸ ತಾಣಗಳನ್ನು ಪರಿಚಯ ಮಾಡಿಕೊಳ್ಳುವುದು ತುಂಬಾ ಖುಷಿ. ನಾನು ನೋಡಿದ ಮತ್ತು ಅನುಭವಿಸಿದ ಸಂಗತಿಗಳನ್ನು ಪೂರ್ತಿಯಾಗಿ ನೆನಪಿಟ್ಟುಕೊಳ್ಳುತ್ತೇನೆ. ನನ್ನ ಕುಟುಂಬದ ಎಲ್ಲರ ಜೊತೆಗೂ ಪ್ರತಿನಿತ್ಯ ಮಾತಾಡುತ್ತೇನೆ ಮತ್ತು ನನ್ನದೇ ಆದ ಬೇಕಿಂಗ್ ಬ್ಯುಸಿನೆಸ್ ಕೂಡ ಆರಂಭಿಸಿದ್ದೇನೆ.

ಕಾಲು ಮುರಿದರೂ, ಹೃದಯಾಘಾತ ಆದರೂ ಈ ಜೋಡಿ ಜಗತ್ತು ಸುತ್ತೋದು ಬಿಡಲಿಲ್ಲ! ...

ಗೈನಕಾಲಜಿಸ್ಟ್ ಅಂದು ಯಾಕೆ ಹಾಗೆ ಹೇಳಿದರು ಎಂಬುದು ನನಗೆ ತಿಳಿಯದು. ಆದರೆ ಆಕೆಯ ನಿರ್ಲಕ್ಷ್ಯ ನನ್ನ ಫ್ಯಾಮಿಲಿಯನ್ನು ಪೂರ್ತಿಯಾಗಿ ಘಾಸಿಗೊಳಿಸಿತು. ಆದರೆ ನಾನು ಆಕೆಯನ್ನು ಪೂರ್ತಿ ಕ್ಷಮಿಸಿದ್ದೇನೆ. ಇದರಿಂದ ನಾನು ಕಲಿತದ್ದು ಏನೆಂದರೆ, ಕೋಪಗಳನ್ನು ಇಟ್ಟುಕೊಳ್ಳುವುದಕ್ಕೆ ಸಾಲದಷ್ಟು ಬದುಕೆಂಬುದು ತುಂಬಾ ಸಣ್ಣದು. ಇಲ್ಲಿ ಬದುಕುವುದು ಮತ್ತು ಪ್ರೀತಿಸುವುದೇ ತುಂಬಾ ಮುಖ್ಯ. ನಿಮ್ಮ ಪ್ರೀತಿಪಾತ್ರರಿಗೆ ನಾವು ಅವರನ್ನು ಪ್ರೀತಿಸುತ್ತೇವೆ ಎಂದು ಹೇಳುವುದಕ್ಕೂ ಮೊದಲೇ ನಮ್ಮ ಜೀವನ ಮುಗಿಯಬಹುದು. ಹೀಗಾಗಿ ನಾನು ಹೇಳುವುದು- ಜೀವನದ ಪ್ರತಿಯೊಂದು ಕ್ಷಣವನ್ನೂ ಉತ್ಕಟವಾಗಿ ಜೀವಿಸಿರಿ.