ಅಹಂಕಾರದ ಕೊಳವೆ ಬಾವಿಯಿಂದ ಮೇಲೇಳಲು 7 ದಾರಿಗಳು

ನಂಗೆಲ್ಲಾ ಗೊತ್ತು ಅನ್ನೋದು ರೋಗ ಲಕ್ಷಣ. ನಿಂಗೇನು ಗೊತ್ತು ಅಂದರೆ ರೋಗ ಉಲ್ಬಣ. ಕಲಿಯೋಕೆ ಏನೂ ಇಲ್ಲ ಅಂತ ಕೂತರೆ ನನ್ನ ಯಶಸ್ಸಿನ ಸಾವಿಗೆ ನಾನೇ ಕಾರಣ. ಇಗೋ-ಬರೀ ಮೂರಕ್ಷರ. ಅದು ನಮ್ಮ ಒಳಗೇ ಮಾಡುವ ದುಷ್ಪರಿಣಾಮ ಭೀಕರ. ಕ್ಯಾನ್ಸರಿಗಾದರೂ ಮದ್ದುಂಟು, ಅಹಂಕಾರ ಮಿತಿ ಮೀರಿದರೆ ಆಪತ್ತು.

here are the tips for how to overcome from ego problem

ವಯಸ್ಸಾಯ್ತು ಅಂತ ಅಳೆಯಲು ಮೊದಲೆಲ್ಲಾ ಆ ವ್ಯಕ್ತಿಗಿರುವ ಅಹಂಕಾರವನ್ನು ನೋಡಿದರೆ ಸಾಕಾಗುತ್ತಿತ್ತು. ಆದರೆ ಈಗ ಹಾಗಿಲ್ಲ. ಎಷ್ಟು ಬೇಗನೆ ಮನುಷ್ಯನಿಗೆ ಹೆಸರು, ಹಣ, ಕೀರ್ತಿ ಬರಬಹುದೋ, ಅದಕ್ಕಿಂತ ಬೇಗ ಅಹಂಕಾರವೇ ಬಂದುಬಿಡುತ್ತದೆ. ನಮ್ಮ ಡಬ್ ಸ್ಮ್ಯಾಶ್, ನಮ್ಮ ಫೋಟೋಗೆ ಬೀಳುವ ಲೈಕು, ನಮ್ಮ ಬಾಸ್‌ನ ಒಂದು ಮೆಚ್ಚುಗೆಯ ಮಾತು, ಅಪ್ರೈಸಲ್ಲಿನಲ್ಲಿ ಕೊಟ್ಟ ರೇಟಿಂಗು, ಮೊದಮೊದಲೇ ಸಿಕ್ಕ ದುಬಾರಿ ಸಂಬಳ, ಏರಿದ ಇಂಕ್ರಿಮೆಂಟು- ಇವೆಲ್ಲ ತೀರಾ ಚಿಕ್ಕ ವಯಸ್ಸಿಗೇ ನಮ್ಮ ಲೈಫಿನ ಅಕೌಂಟಲ್ಲಿ ‘ಇಗೋ’ ಎಂಬುದನ್ನು ಜಮೆ ಮಾಡಿಬಿಡಬಹುದು. ಇದು ನಮ್ಮ ಬೆಳವಣಿಗೆ, ಸಾಧನೆಯನ್ನು ಕುಂಠಿತಗೊಳಿಸೋ ಅಪಾಯಗಳು.

ಇದಕ್ಕೆ ಪರಿಹಾರ? ಹೊಸ ಕಾಲಕ್ಕೆ ಬಹಳ ಬೇಗ ಮತ್ತು ಬಹಳ ಸಲೀಸಾಗಿ ನಮ್ಮನ್ನು ಇಗೋಯಿಸ್ಟಿಕ್ ಮಾಡುವ ಶಕ್ತಿ ಇದೆ, ಆದರೆ ಅದನ್ನು ಕಳಕೊಳ್ಳಲು ಮಾತ್ರ ಯಾರೂ ದಾರಿ ತೋರುವುದಿಲ್ಲ, ನಮಗೆ ನಾವೇ ಹುಡುಕಿಕೊಳ್ಳಬೇಕು. ಅಂಥ ಇಗೋವನ್ನು ಹೋಗೋ ಅಂತ ಹೊಡೆದೋಡಿಸಲು ಇಲ್ಲಿವೆ 7 ಹಾದಿಗಳು

ಮಗುವಾಯ್ತು, ಮನೆಯಲ್ಲೇ ಇರ್ಲಾ, ಕೆಲಸಕ್ಕೆ ಹೋಗ್ಲಾ?

ಏನ್ ಮಹಾ ಗೊತ್ತಿದೆ ನನಗೆ?

ಮೊದಲು ನಮಗೆ ಅಷ್ಟೊಂದೆಲ್ಲಾ ಏನು ಗೊತ್ತಿದೆ ಅಂತ ಕೇಳಿಕೊಳ್ಳಿ. ಒಂದರ್ಧ ಗಂಟೆ ನಿಮ್ಮ ಇಂಟರ್ ನೆಟ್ ಕೈಕೊಟ್ಟರೆ, ಯಾರಾದರೂ ಒಂದು ಪ್ರಶ್ನೆ ಕೇಳಿದರೆ ಗೂಗಲ್ ಮಾಡದೇ ನಿಮಗೆ ಉತ್ತರ ಕೊಡಲು ಗೊತ್ತಿದೆಯಾ ಅಂತ ನಿಮ್ಮನ್ನು ನೀವೇ ಕೇಳಿಕೊಳ್ಳಿ. ನನಗೆಲ್ಲಾ ಗೊತ್ತು ಅಂತ ಅಂದುಕೊಳ್ಳುವ ನಿಮಗೆ ಆಕ್ಚುವಲಿ ಏನೂ ಗೊತ್ತಿಲ್ಲ, ಮತ್ತೆಂತ ನಿಮಗೆ ಇಗೋ? ಮಿಸ್ ಗೂಗಲ್ಲುಗೆ, ಮಿಸ್ಟರ್ ಡಿಕ್ಷನರಿಗೆ, ನಿಮ್ಮ ತಂದೆಗೆ, ನಿಮ್ಮ ಬಾಸಿಗೆ, ನಿಮ್ಮ ಸೀನಿಯರ್ ಗೆ ಗೊತ್ತಿರುವಷ್ಟು ನಿಮಗೆ ಗೊತ್ತಿಲ್ಲ. ನನಗೇನೂ ಗೊತ್ತಿಲ್ಲ ಅಂತ ನಿಮ್ಮ ತಲೆಯನ್ನು ಖಾಲಿ ಮಾಡಿಕೊಳ್ಳುವುದು ಇಗೋ ಕೊಲ್ಲುವ ಮೊದಲ ದಾರಿ- ತಿಳೀರಿ.

ಗೆದ್ದೋರಿಗೆಲ್ಲ ಸೋಲುಂಟು

ನಿಮಗೆ ಇಗೋ ಬರೋದಕ್ಕೆ ಕಾರಣ, ಈವರೆಗಿನ ನಿಮ್ಮ ದಾರಿಯಲ್ಲಿ ಸಿಕ್ಕ ಪುಡಿ ಗೆಲುವುಗಳು. ಯಾವುದೋ ಪ್ರಾಜೆಕ್ಟ್ ಅಪ್ರೂವ್ ಆಯ್ತು, ಯಾವುದೋ ಸ್ಟೇಟಸ್ಸಿಗೆ ಲೈಕು ಬಂತು, ಯಾವುದೋ ಸಣ್ಣ ಕೆಲಸಕ್ಕೆ ಒಳ್ಳೆಯ ರಿವಾರ್ಡ್ ಬಂತು- ಹೀಗೆ. ಆದರೆ ಇವೆಲ್ಲಾ ಸಣ್ಣಪುಟ್ಟ ನವೆ ಕೊಡುವ ಖುಷಿಯಷ್ಟೇ ಕ್ಷಣಿಕ. ಜಗತ್ತನ್ನೇ ಗೆದ್ದು ತುದಿ ಮುಟ್ಟಿ ನಿಂತವರೆಲ್ಲಾ ಜೀವನದಲ್ಲಿ ತುಂಬ ಸೋತವರು, ಅವರಿಗೆಲ್ಲಾ ನೋವಿನ, ಸೋಲಿನ ರುಚಿ ಗೊತ್ತಿದೆ, ನಿಮಗೆ ಇನ್ನೂ ಆ ಸೋಲು ಸಿಕ್ಕಿಲ್ಲ, ಸೋಲಿನ ರುಚಿ ಗೊತ್ತಿಲ್ಲ. ಗೆಲುವಿನ ಖುಷಿ ನಾಲಗೆಯ ತುದಿಗೆ ಸಿಕ್ಕ ಜೇನಿನ ಸವಿ ಮಾತ್ರ, ಆ ಜೇನುತುಪ್ಪ ತಯಾರಾಗಲು ಕಾರಣವಾದ ಜೇನು ನೋಣಗಳು ಮಾರಣಾಂತಿಕ ಎಂಬುದು ನೆನಪಿರಲಿ. ಗೆಲುವಿನ ಬೆನ್ನಲ್ಲಿ ಸೋಲಿನ ನೋವುಂಟು. 

ಸಂಬಂಧದಲ್ಲಿ ಈ ವಿಷಯಗಳು ನಿಮ್ಮವನನ್ನು ಅಭದ್ರತೆಗೆ ದೂಡುತ್ತವೆ!

 ಮರೆಯದಿರಿ. ಏನ್ ಮಹಾ ಗೊತ್ತಿದೆ ನನಗೆ?

ನಿಮಗೆ ಮೆದುಳೊಂದೇ ಇದ್ದರೆ ಸಾಲದು, ಬೇರೆ ಅಂಗಾಂಗಗಳೂ ಕೆಲಸ ಮಾಡಬೇಕು. ಯಾವುದೋ ಸಿಂಗಲ್ ಪ್ರತಿಭೆ ನಿಮ್ಮನ್ನು ಬಹಳ ದೂರ ಕೊಂಡೊಯ್ಯದು. ಜಾನ್ ಡೆಲೋರಿಯಾನ್ ಎಂಬ ವಿಶ್ವಪ್ರಸಿದ್ಧ ಇಂಜಿನಿಯರ್, ಕೆಟ್ಟ ಮೆನೇಜರ್ ಆಗಿಯೂ ಪ್ರಸಿದ್ಧನಾಗಿದ್ದನಂತೆ.ಅವನು ಎಷ್ಟೇ ಜೀನಿಯಸ್ ಆದರೂ ತನ್ನ ಕೈಕೆಳಗೆ ಕೆಲಸ ಮಾಡುವವರನ್ನು ಮ್ಯಾನೇಜ್ ಮಾಡಲು ಸೋಲುತ್ತಿದ್ದ. ಹಾಗಾಗಿ ನಾವೂ ಕೂಡ ಒಂದೊಂದು ಪ್ರತಿಭೆ ಜೊತೆ ಬೇರೆ ಬೇರೆ ಥರದ ಕೌಶಲವನ್ನು ಕಲಿತು, ಬೆಳೆಯುತ್ತಾ ಹೋಗುವುದನ್ನು ಕಲಿಯಬೇಕು. ಆಗ ನಮ್ಮ ಅಹಂಕಾರ ಅಳಿದು, ವಿನಯ ಬೆಳೆಯುತ್ತದೆ- ಬೆಳೆಸಿ.

ಏನೆಲ್ಲ ಗೊತ್ತಿಲ್ಲ ಅನ್ನೋದು ಗೊತ್ತಿರಲಿ

ಅಹಂಕಾರ ಅನ್ನೋದು ಇದೆಯಲ್ಲ, ಅದರ ಕೆಟ್ಟ ಬುದ್ಧಿ ಏನು ಎಂದರೆ ಮೊದಲು ನಿಮಗೆ ಎಲ್ಲಾ ಗೊತ್ತು ಅನ್ನುವ ಭ್ರಮೆಯನ್ನು ಮೂಡಿಸುತ್ತದೆ. ಹಾಗಾಗಿ ಎಲ್ಲವನ್ನೂ ಮಾಡೋದಕ್ಕೆ ಹೋಗಿ ಎಡವುತ್ತೀರಿ. ಹಾಗಾಗಿ ಮೊದಲು ನಿಮಗೆ ‘ಏನೆಲ್ಲಾ ಗೊತ್ತಿಲ್ಲ’, ‘ಏನೇನನ್ನೆಲ್ಲ ನಾನು ಮಾಡೋಕೆ ಹೋಗಬಾರದು’ ಅಂತ ನಿಮಗೆ ನೀವು ಅರ್ಥ ಮಾಡಿಕೊಳ್ಳಿ. ಅನಂತರ ಆ ಕೆಲಸ ಯಾರಿಗೆ ಚೆನ್ನಾಗಿ ಬರುತ್ತದೋ, ಅವರನ್ನ ಗೌರವಿಸಿ, ಅವರನ್ನು ವಿಶ್ವಾಸದಿಂದ ನಡೆಸಿಕೊಳ್ಳಿ-ಅಲ್ವಾ?

ಫ್ರೆಂಡ್ ರಿಕ್ವೆಸ್ಟ್ ನೋಡಿ ಸ್ಟಾರ್ ಆಗಬೇಡಿ

ನಿಮ್ಮ ಎಫ್ ಬಿ ಅಕೌಂಟಿನ ಲೈಕುಗಳ ಸಂಖ್ಯೆ, ನಿಮ್ಮ ಟ್ವಿಟರ್, ಇನ್ ಸ್ಟಾ ಫಾಲೋವರ್ಸು, ನೀವು ಪೆಂಡಿಂಗ್ ಇಟ್ಟಿರುವ ಎಫ್ ಬಿ ಫ್ರೆಂಡ್ ರಿಕ್ವೆಸ್ಟ್ ಗಳ ಸಂಖ್ಯೆ- ಇವುಗಳ ಆಧಾರದಲ್ಲಿ ನಿಮ್ಮನ್ನು ನೀವು  ಸಿಕ್ಕಾಪಟ್ಟೆ ಫೇಮಸ್ಸು ಅಂತ ತಿಳಿದುಕೊಳ್ಳುವುದನ್ನು ಮೊದಲು ಬಿಡಿ. ಅಮಿತಾಬ್ ಬಚ್ಚನ್ ಅವರಂಥ ಸೂಪರ್‌ಸ್ಟಾರ್ ಕೆಲ ವರ್ಷಗಳ ಹಿಂದೆ ಬ್ಯಾಂಕಿಗೆ ಹೋದಾಗ ಸೆಕ್ಯುರಿಟಿ ಗಾರ್ಡು ಒಳಗೆ ಬಿಟ್ಟಿರಲಿಲ್ಲವಂತೆ. ‘ನಾನು ಅಮಿತಾಬ್ ಬಚ್ಚನ್’ ಅಂದಿದ್ದಕ್ಕೆ ‘ನೀನು ಯಾರಾದರಾಗಲಿ, ಐಡಿ ಕಾರ್ಡು ತೋರಿಸು’ ಅಂದಿದ್ದನಂತೆ. ಹಾಗಾಗಿ ಎಂಥ ಜನಪ್ರಿಯರಾದರೂ ಜಗತ್ತಿಗೇ ಗೊತ್ತಿರೋಕೆ ಸಾಧ್ಯವಿಲ್ಲ ಅಂದ ಮೇಲೆ ನೀವು ಫೇಮಸ್ಸು ಅಂತ ಹೇಗಾದರೂ ಎದೆಯುಬ್ಬಿಸಿ ತಿರುಗಲಾದೀತು- ಅಲ್ವಾ?

ಪ್ರಕೃತಿ ಮುಂದೆ ನಿಂತು ನೋಡಿ

ಒಂದು ಹೂವು ಪರಿಮಳ ತರಬೇಕೆಂದರೆ ಅದು ಬೀಜದಿಂದ ಗಿಡವಾಗಿ, ಗಿಡದಿಂದ ಹೂವಾಗಿ, ಆ ಹೂವಿಂದ ಗಂಧ ಹೊರಹೊಮ್ಮಬೇಕು. ನಾವು ಕುಡಿವ ಹಾಲು ಯಾವತ್ತೋ, ಎಷ್ಟೋ ವರ್ಷಗಳ ಹಿಂದೆ ಹಸುವೊಂದು ಹುಟ್ಟಿ, ಅದು ಗರ್ಭ ಧರಿಸಿ, ಕರು ಹಾಕಿ, ಕೆಚ್ಚಲಲ್ಲಿ ಹಾಲು ಕಟ್ಟಿಕೊಂಡುದರ ಫಲ. ಪ್ರತಿ ಜೀವಿ, ಕ್ರಿಮಿ, ಕೀಟ, ಹುಲ್ಲು, ಹೂವು, ಪೊಟರೆ, ಕಾನು, ಮಟ್ಟಿಗಳಿಗೂ ಒಂದು ಲೈಫ್ ಜರ್ನಿ ಇದೆ. ನಮ್ಮದೂ ಅಂಥದೇ ಜರ್ನಿ. ಪ್ರಕೃತಿಗಿಲ್ಲದ ಎಕ್ಸ್ ಟ್ರಾ ಕೊಬ್ಬು ನಮ್ಮ ಬುದ್ಧಿಯಲ್ಲಿ ಯಾಕೆ ಇದೆ- ಹೇಳಿ?

ಅಗೆದಷ್ಟೂ ಆಳಕ್ಕೆ ಸಿಗೋದು ನೆಲವೇ

ಇಗೋ ಕಾರಣಕ್ಕಾಗಿ, ಹೊಸದೇನನ್ನೂ ಕಲಿಯದೇ, ತಿಳಿಯದೇ, ನನ್ನ ಶಕ್ತಿ, ಸಾಮರ್ಥ್ಯಕ್ಕೆ ಬೆಲೆ ಇಲ್ಲ ಅಂತ ಕೊರಗೋದೂ ಒಂಥರ ಇಗೋ. ಅದು ಉಪಯೋಗಕ್ಕೆ ಬರೋದಿಲ್ಲ, ಇನ್ನಷ್ಟೂ ನಮ್ಮ ಕೆಲಸ ಕಾರ್ಯವನ್ನು ತಡೆಯುತ್ತದಷ್ಟೇ, ಈ ಸುಪೀರಿಯಾರಿಟಿ ಕಾಂಪ್ಲೆಕ್ಸು ಅನ್ನೋದು, ನೆಲ ಅಗೆದಷ್ಟೇ ನಿಷ್ಪ್ರಯೋಜಕ ವಿಚಾರ. ಎಷ್ಟೇ ಆಳಕ್ಕೆ ಅಗೆದರೂ ನೆಲವೇ ಸಿಗುತ್ತದೆ ಹೊರತೂ ನೆಲೆ ಸಿಗೋದಿಲ್ಲ, ಇಲ್ಲದೇ ಇರೋ ಚಿನ್ನ, ವಜ್ರ, ವೈಢೂರ್ಯದ ಕೊಪ್ಪರಿಗೆಯೂ ಸಿಕ್ಕೋದಿಲ್ಲ. ಪ್ರಾಮಾಣಿಕವಾಗಿ ಕರ್ತವ್ಯ, ಶ್ರಮ ಎಂಬ ಒಂದು ಗಿಡ ಊರಿದರೆ ಯಾವತ್ತೋ ಅದು ಮರವಾಗಿ ಫಲ ಕೊಡಬಹುದು- ಏನಂತೀರಾ?

ಇಗೋ ಇಲ್ಲಿದೆ ego ಕಿಲ್ಲರ್

ಮೊನ್ನೆ ಬೆಂಗಳೂರಿನ ಲಿಟ್ ಫೆಸ್ಟ್ ನಲ್ಲಿ ‘ಜೋಯಾ ಫ್ಯಾಕ್ಟರ್’ಖ್ಯಾತಿಯ ಲೇಖಕಿ ಅನುಜಾ ಚೌಹಾಣ್, ಇಗೋ ಬಗ್ಗೆ ಹೇಳುತ್ತಿದ್ದರು.‘ಅಡ್ವರ್ಟೈಸ್‌ಮೆಂಟ್ ಇಂಡಷ್ಟ್ರಿಗೆ ನೀವು ಬಂದರೆ ಅಲ್ಲಿ ನಿಮ್ಮ ಅಹಂಕಾರದ ನೀರಿಳಿಸುತ್ತಾರೆ. ಯಾಕೆಂದರೆ ಅಲ್ಲಿ ನಾನು ಸೀನಿಯರು, ನಾನು ಇಷ್ಟೆಲ್ಲಾ ಸಾಧನೆ ಮಾಡಿದ್ದೇನೆ ಅಂತ ಬೀಗುವ ಹಾಗೇ ಇಲ್ಲ. ಜೂನಿಯರು, ಸೀನಿಯರು ಎಲ್ಲಾ ಇರೋ ಮೀಟಿಂಗಲ್ಲಿ ನೀವು ಕೂರಬೇಕು, ನಿಮ್ಮ ಹೊಸ ಐಡಿಯಾ ಕೊಡಬೇಕು, ಅದನ್ನ ಎಲ್ಲರೂ ಸೇರಿ ಅನುಮೋದಿಸಬೇಕು. ಅಲ್ಲಿ ನಮಗೆ ಐಡಿಯಾ ಕೊಡೋ ಶಕ್ತಿ ಇಲ್ಲ ಅಂದ್ರೆ ಎಷ್ಟು ಸಾಧನೆ ಮಾಡಿದರೂ ಅಷ್ಟೇ. ನಮ್ಮ ಅಹಂಕಾರವನ್ನೆಲ್ಲಾ ಕಳಕೊಳ್ಳಬೇಕು ಅಂದ್ರೆ ಅಲ್ಲಿ ಸ್ವಲ್ಪ ಸಮಯ ಕೆಲಸ ಮಾಡಬೇಕು.’ ಇವತ್ತಿನ ಕಾಂಪಿಟೇಶನ್ನು ಯುಗದಲ್ಲಿ ನಿಮ್ಮ ಇಗೋ ನಿಮ್ಮನ್ನು ಸಾಯಿಸುತ್ತದೆ ಅನ್ನೋದು ಅನುಜಾ ಚೌಹಾಣ್ ಮಾತಿನ ಭಾವಾರ್ಥ.

Ego test ಮಾಡಿಸಿಕೊಳ್ಳಿ 

F....k off, who cares, dont cares  - ನಾವು ವಿವಿಧ ಮೀಡಿಯಾಗಳಲ್ಲಿ ಬಳಸುವ ಇಂಥ ಪದಗಳೆಲ್ಲ ನಮ್ಮ ಇಗೋವನ್ನು ಪ್ರತಿನಿಧಿಸೋ ಪದಗಳೇ. ಇದನ್ನೆಲ್ಲಾ ಬಳಸುವ ಮೂಲಕ ನಾನು ಸರ್ವಶಕ್ತ ಅಂತ ಜಗತ್ತಿಗೇ ಹೇಳುವ, ಬೇರೆ ಎಲ್ಲರನ್ನೂ, ಎಲ್ಲವನ್ನೂ ನಿರಾಕರಿಸುವ ದುರಹಂಕಾರ ಕಾಣಿಸುತ್ತಿರುತ್ತದೆ. ನಮ್ಮಲ್ಲಿ ಈ ಲಕ್ಷಣ ಕಂಡುಬಂದರೆ ಆದಷ್ಟು ಬೇಗ ಇಗೋ ಟೆಸ್ಟ್ ಮಾಡಿಸಿಕೊಳ್ಳುವುದು ಒಳ್ಳೆಯದು.

- ಚಿತ್ಕಲಾ ಆರ್ ಎಸ್

Latest Videos
Follow Us:
Download App:
  • android
  • ios