Asianet Suvarna News Asianet Suvarna News

ಪ್ರಧಾನಿ ಅಮ್ಮನಾದರೂ , ಶ್ರೀ ಸಾಮಾನ್ಯರಂತೆಯೇ ನಡೆಯಿತು ಅಂತ್ಯ ಸಂಸ್ಕಾರ!

ಪ್ರಧಾನಿ ಮೋದಿ ತಾಯಿ ಹೀರಾಬೆನ್ ಶತಾಯುಷಿ. ಎರಡೆರಡರು ಬಾರಿ ಪ್ರಧಾನಿಯಾದ ಮೋದಿಯನ್ನು ಹೆತ್ತು ಕೊಟ್ಟ ಆ ಮಹಾನ್ ತಾಯಿಯ ಅಂತ್ಯ ಸಂಸ್ಕಾರ ಆಗಿದ್ದು ಮಾತ್ರ ಶ್ರೀ ಸಾಮಾನ್ಯನಂತೆಯೇ. 

Heerabens mortal remains consigned to flames PM Modi brothers perform last rites as common man
Author
First Published Dec 30, 2022, 5:25 PM IST

- ವಿನಯ್ ಶಿವಮೊಗ್ಗ

ಮೋದಿಯವರು ಮೊದಲ ಬಾರಿ ಈ ದೇಶದ ಪ್ರಧಾನಿಯಾದಾಗ ಈ ಹಿಂದೆ ತನ್ನ ದೇಶಕ್ಕೆ ಬರದಂತೆ ನಿರ್ಬಂಧಿಸಿತ್ತು ಅಮೆರಿಕ. ಅದೇ ಅಮೆರಿಕ ರತ್ನಗಂಬಳಿ ಹಾಸಿ ಅವರನ್ನು ಆಹ್ವಾನಿಸಿತ್ತು. ಅಮೆರಿಕಕ್ಕೆ ಭೇಟಿ ನೀಡಿದ ಮೋದಿಯವರು ಫೇಸ್ ಬುಕ್‌ನ ಕೇಂದ್ರ  ಕಚೇರಿಗೆ ತೆರಳಿ, ಅಲ್ಲಿನ ಒಂದು ಖಾಸಗಿ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಸಂದರ್ಶನದ ಒಂದು ಪ್ರಶ್ನೆಗೆ ತನ್ನ ಹಿನ್ನೆಲೆಯನ್ನು ಕೇಳಿದಾಗ, ಮೋದಿಯವರು ಒಂದು ಕ್ಷಣ ಭಾವುಕರಾಗಿ ತನ್ನ ತಾಯಿಯ ಕುರಿತು ತಮಗೆ ಇರುವ ಅಪಾರ ಶ್ರದ್ದೆ, ಪ್ರೇಮವನ್ನು ವ್ಯಕ್ತಪಡಿಸಿದ್ದರು. ತನ್ನ ತಾಯಿ ಇತರೆ ಶ್ರೀಮಂತರ ಮನೆಯಲ್ಲಿ ಕೆಲಸ ಮಾಡಿ, ಅಲ್ಲಿಂದ ತಂದ ಆಹಾರವನ್ನು ನಮಗೆ ಕೊಟ್ಟು, ಅಲ್ಲಿ ಸಂಪಾದಿಸಿದ ಸಣ್ಣ ಪ್ರಮಾಣದ ಹಣದಲ್ಲಿ ಅತ್ಯಂತ ಯಶಸ್ವಿಯಾಗಿ ಸಂಸಾರದ ಸೂತ್ರ ಹಿಡಿದಿದ್ದರು. ಆರು ಮಕ್ಕಳ ಮಹಾತಾಯಿ ಎಂದಿಗೂ ಸ್ವಾಭಿಮಾನವನ್ನು ಬಿಟ್ಟು ಬದುಕದಂತೆ ಕಲಿಸಿದ್ದು ತಾಯಿಯವರು ಎಂದು ಮೋದಿಯವರು ಬಹಳ ಕೃತಜ್ಞತೆಯಿಂದ ಅಮ್ಮನನ್ನು ನೆನೆಪಿಸಿಕೊಂಡಿದ್ದರು. 

ಹೀರಾಬಿನ್ ಎಲ್ಲರಿಗೂ ದೊಡ್ಡದಾಗಿ ಕಾಣುವುದು ಅವರು ಮಕ್ಕಳಿಗೆ ಕೊಟ್ಟ ಸಂಸ್ಕಾರದಿಂದ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ತಾಯಿಯೇ ಮೊದಲ ಗುರು ಎನ್ನುವ ಗಾದೆಗೆ ಘನತೆ ತರುವಂತೆ ಆರು ಮಕ್ಕಳ ಪಡೆದ ಹೀರಾಬಾಯಿ ಸಣ್ಣ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡರೂ, ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ, ತಾನು ನಂಬಿದ ಎಲ್ಲ ಸಿದ್ಧಾಂತಗಳಿಗೆ ಬದ್ಧರಾಗಿ, ಜೀವನ ನಡೆಸಿದ ಮಹಾಮಾತೆ. ತಮ್ಮ ಇಳಿ ವಯಸ್ಸಿನಲ್ಲಿಯೂ ಮಗ ಪ್ರಧಾನಿಯಾದನೆಂದು ಬೀಗದೆ, ಅವನ ಆಶ್ರಯವನ್ನೂ ಬಯಸದೇ ತಮ್ಮ ಜೀವನವನ್ನು ತಾವೇ ಮುನ್ನಡೆಸಿದವರು. ಅಷ್ಟೇ ಎಲ್ಲ ರಾಜಕೀಯ ಚಟುವಟಿಕೆಯಿಂದ ದೂರವಿದ್ದು, ಅತ್ಯಂತ ಸರಳ ರೀತಿಯಲ್ಲಿ ಬದುಕಿದ, ಮೋದಿ ಅವರ ತಾಯಿಯವರು ಎಷ್ಟೋ ವಿಷಯಗಳಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ಆದರ್ಶವಾಗಿ ನಿಲ್ಲುತ್ತಾರೆ. ಭಾರತೀಯ ನಾರಿಯ ಸ್ವಾವಲಂಬಿ ಬದುಕು, ಸಹನ ಶೀಲತೆ ಹಾಗೂ ಸೈರಣೆಗೆ ದೊಡ್ಡ ಉದಾಹರಣೆ ಹಿರಾಬೇನ್. ವಜ್ರದಂತೆ ಕಠೋರವಾದರೂ, ಕುಸುಮದಂತೆ ಮೃದುವಾದ ಹಿರಾಬೇನ್ ಹಾಗೂ ಮೋದಿ ಅವರ ಭೇಟಿಯಾದ ಪ್ರತಿ ಕ್ಷಣವೂ ಇಡೀ ದೇಶದಲ್ಲಿ ಆ ತಾಯಿ ಮಗನ ಪ್ರೀತಿ ವಿಶ್ವಾಸದ ಚಿತ್ತವನ್ನು ನೋಡಿ, ಇಡೀ ದೇಶವೇ ಪುಳಕಗೊಳ್ಳುತ್ತಿತ್ತು. ಮೋದಿಯವರು ವಿಶ್ವನಾಯಕನಾಗಿ ಬೆಳೆಯುವ ಮಟ್ಟದಲ್ಲಿ ಅವರ ತಾಯಿ ಹೀರಾ ಬೇನ್ ನೀಡಿದ ಸಂಸ್ಕಾರ ಪ್ರತಿಫಲಿಸುತ್ತದೆ. 

ನಿಮ್ಮ ತಾಯಿ ನಮ್ಮ ತಾಯಿ ಇದ್ದಂತೆ: ಮೋದಿಗೆ ಮಮತಾ ಬ್ಯಾನರ್ಜಿ ಸಾಂತ್ವನ

ಈ ಸಂದರ್ಭದಲ್ಲಿ ಮೋದಿಯವರು ತಮ್ಮ ಟ್ವೀಟಿನಲ್ಲಿ ಹೇಳಿರುವಂತೆ, ನನ್ನ ತಾಯಿಯಲ್ಲಿ ನಾನು ತ್ರಿಮೂರ್ತಿಗಳನ್ನು ಕಂಡೆ. ತಾಯಿಯ ಮೂಲಕ ನಾನು ಪ್ರಪಂಚವನ್ನು ಕಂಡುಕೊಂಡೆ ಎಂದು ಭಾವುಕರಾಗಿದ್ದಾರೆ ಮೋದಿ. ಪ್ರಧಾನಿ ಮೋದಿ ತಾಯಿ ತೀರಿಕೊಂಡಿದ್ದು, ಪಾರ್ಥಿವ ಶರೀರ ಮೂರು ಮೂರು ದಿನಗಳಿರುತ್ತೆ. ದೇಶದ ಗಣ್ಯಾತಿ ಗಣ್ಯರು ಅಂತಿಮ ದರ್ಶನ ಪಡೆಯಲು ಆಗಮಿಸುತ್ತಾರೆ. ಶವ ಯಾತ್ರೆ ನಡೆಯುತ್ತೆ ಎಂದೆನಿಸಿತ್ತು. ಆದರೆ, ಅಸುನೀಗಿದ ಮೂರೇ ಮೂರು ಗಂಟೆಗಳಲ್ಲಿ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳೂ ಮುಗಿದಿದ್ದವು. ಸಾರ್ವಜನಕ ದರ್ಶನಕ್ಕೂ ಇರಲಿಲ್ಲ ಅವಕಾಶ. ಸಮಾನ್ಯರಲ್ಲಿ ಸಾಮಾನ್ಯರಂತೆಯೇ ಮುಗಿಯಿತು ಮೋದಿ ಮಾತೆಯ ಅಂತ್ಯ ಸಂಸ್ಕಾರ. 

ಇವತ್ತಿನ ದಿನಗಳಲ್ಲಿ ಬಹಳ ಅಪರೂಪವಾಗಿ ಕಾಣುವಂತಹ ಅತ್ಯಂತ ನಮ್ರ, ಸರಳ ಬದುಕು, ಯಾವುದೇ ಆಡಂಬರವಿರಲಿಲ್ಲ.  ತತ್ವ ಸಿದ್ಧಾಂತಗಳಿಗೆ ಒಪ್ಪಿ, ಸವೆದ ಜೀವವದು. ಭಾರತೀಯ ಸಂಸ್ಕೃತಿ ಸನಾತನ ಪ್ರಜ್ಞೆಗೆ ತಲೆಯೊಡ್ಡಿದ ಮೋದಿಯವರ ತಾಯಿಯಾಗಿ, ಶತಾಯುಷಿಯಾಗಿ, ಆರೋಗ್ಯವಂತರಾಗಿ ಸರಳ ಜೀವನ ನಡೆಸಿದ ಹಿರಾಬೇನ್ ನಮ್ಮ ನಡುವಿನ ಒಂದು ಅಚ್ಚರಿ. ಇಂತಹ ತಾಯಿಯನ್ನು ಕಳೆದುಕೊಂಡ ಮೋದಿಯವರಿಗೆ ದುಃಖವನ್ನು ಭರಿಸುವ ಶಕ್ತಿ ಆ ಪರಮಾತ್ಮ ಕೊಡಬೇಕು. ಎಷ್ಟೋ ವಿಷಯಗಳಲ್ಲಿ ಸಾಮಾನ್ಯ ವ್ಯಕ್ತಿ ಅಸಾಮಾನ್ಯ ಉದಾಹರಣೆಯಾಗಿ ನಿಲ್ಲುತ್ತಾರೆ, ಅದಕ್ಕೆ  ಹಿರಾಬೇನ್ ಸಾಕ್ಷಿ.

ತಾಯಿಯ ಜೊತೆ 'ಮೋದಿ'ಗೆ ದೊಡ್ಡ ಮಟ್ಟದ ಬಾಂಧವ್ಯ ಇತ್ತು: ಕುಮಾರಸ್ವಾಮಿ

Follow Us:
Download App:
  • android
  • ios