Asianet Suvarna News Asianet Suvarna News

ನಿಮ್ಮ ತಾಯಿ ನಮ್ಮ ತಾಯಿ ಇದ್ದಂತೆ: ಮೋದಿಗೆ ಮಮತಾ ಬ್ಯಾನರ್ಜಿ ಸಾಂತ್ವನ

ಮಾತೃ ವಿಯೋಗಕ್ಕೊಳಗಾದ ದುಃಖದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಪಶ್ಚಿಮ ಬಂಗಾಳ ಸಿಎಂ ಆಗಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.

west Bengal cm mamata banerjee express grief on Prime Minister Narendra Modi mother heeraben death akb
Author
First Published Dec 30, 2022, 4:44 PM IST

ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಶತಾಯುಷಿ ಹೀರಾಬೇನ್ ಅವರು ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ಹೀರಾಬೇನ್ ನಿಧನಕ್ಕೆ ದೇಶದ ಅನೇಕ ಗಣ್ಯರು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ. ಮಾತೃ ವಿಯೋಗಕ್ಕೊಳಗಾದ ದುಃಖದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಪಶ್ಚಿಮ ಬಂಗಾಳ ಸಿಎಂ ಆಗಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕೂಡ ಸಂತಾಪ ವ್ಯಕ್ತಪಡಿಸಿದ್ದು, ನಿಮ್ಮ ತಾಯಿ ನಮ್ಮ ತಾಯಿ ಇದ್ದಂತೆ. ದಯವಿಟ್ಟು ಸ್ವಲ್ಪ ಕಾಲ ವಿರಾಮ ತೆಗೆದುಕೊಳ್ಳಿ, ನಿಮ್ಮ ತಾಯಿಯ ಸಾವಿಗೆ ಹೇಗೆ ಸಂತಾಪ ಸೂಚಿಸಬೇಕು ಎಂದು ನನಗೆ ತಿಳಿದಿಲ್ಲ, ನಿಮ್ಮ ತಾಯಿ ನನ್ನ ತಾಯಿ ಇದ್ದಂತೆ ನಾನು ಈ ಕ್ಷಣ ನನ್ನ ತಾಯಿಯನ್ನು ಸಹ ನೆನೆಯುತ್ತಿದ್ದೇನೆ ಎಂದು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಮಾಧಾನ ಹೇಳಿದ್ದಾರೆ. 

ಮೊದಲೇ ಯೋಜಿಸಲ್ಪಟ್ಟಂತೆ ಇಂದು ಪ್ರಧಾನಿ (Prime Minister) ನರೇಂದ್ರ ಮೋದಿ (Narendra Modi) ಪಶ್ಚಿಮ ಬಂಗಾಳಕ್ಕೆ (West Bengal) ಭೇಟಿ ನೀಡಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಬೇಕಿತ್ತು. ಆದರೆ ಇಂದು ಮುಂಜಾನೆ ಅವರ ತಾಯಿ ನಿಧನರಾದ ಹಿನ್ನೆಲೆಯಲ್ಲಿ ಸೀದಾ ತಮ್ಮೂರಿಗೆ ಹೊರಟು ಹೋದ ಪ್ರಧಾನಿ ಮೋದಿ, ತಾಯಿಯ ಅಂತಿಮ ದರ್ಶನ ಪಡೆದು ಮಗನಾಗಿ ಅಂತಿಮ ವಿಧಿವಿಧಾನದಲ್ಲಿ ಭಾಗಿಯಾದರು. 

ಇತ್ತ ಪಶ್ಚಿಮ ಬಂಗಾಳದಲ್ಲಿ (West Bengal) ಹೌರಾ (Howrah) ಮತ್ತು ನ್ಯೂ ಜಲ್ಪೈಗುರಿಯನ್ನು (New Jalpaiguri) ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ (Vande Bharat express) ರೈಲಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ತಾಯಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ದೈಹಿಕವಾಗಿ ಭಾಗವಹಿಸಬೇಕಿತ್ತು. ಆದರೆ ತಾಯಿಯ ನಿಧನದ ಹಿನ್ನೆಲೆಯಲ್ಲಿ ತಾಯಿಯ ಅಂತಿಮ ವಿಧಿ ವಿಧಾನಗಳನ್ನು ನಡೆಸಿಕೊಟ್ಟು ಒಂದು ಗಂಟೆ ನಂತರ ಪ್ರಧಾನಿ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗಿಯಾದರು.

ಈ ಕಾರ್ಯಕ್ರಮದಲ್ಲಿ ನಂತರ ಮಾತನಾಡಿದ ಮಮತಾ ಬ್ಯಾನರ್ಜಿ (Mamata Banerjee), ಪ್ರಧಾನಿ ಮೋದಿ ಅವರು ಚಾಲನೆ ನೀಡಿದ ಐದು ರೈಲ್ವೇ ಯೋಜನೆಗಳ ಪೈಕಿ ನಾಲ್ಕು ಯೋಜನೆಗಳನ್ನು ತಾವು ರೈಲ್ವೆ ಸಚಿವರಾಗಿದ್ದ (railway minister) ಅವಧಿಯಲ್ಲಿ ಪ್ರಾರಂಭಿಸಲಾಗಿತ್ತುಎಂದು ಮಮತಾ ಬ್ಯಾನರ್ಜಿ ಹೇಳಿದರು. ಪ್ರಧಾನಿ ಮೋದಿಯವರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಬೇಕಿತ್ತು. ಆದರೆ ಅಷ್ಟರಲ್ಲಿ ಅವರ ತಾಯಿಯ ಸಾವಿನ ಸುದ್ದಿ ಕೇಳಿ ಬಂದ ಹಿನ್ನೆಲೆಯಲ್ಲಿ ಗುಜರಾತ್‌ನ ಗಾಂಧಿನಗರದತ್ತ ಪ್ರಯಾಣ ಬೆಳೆಸಿದರು. ನಂತರ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗಿಯಾದರು. 

ಪ್ರಧಾನಿ ಮೋದಿ ತಾಯಿ ಹೀರಾಬೆನ್‌ ನಿಧನ: ಗಣ್ಯರ ಸಂತಾಪ

ಇತ್ತ ಈ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಂ (Jai Shri Ram) ಎಂದು ಘೋಷಣೆ ಕೂಗಿದ್ದು, ಇದರಿಂದ ಸಿಎಂ ಮಮತಾ ಬ್ಯಾನರ್ಜಿ ಅಲ್ಲಿ ವೇದಿಕೆಯೇರಲು ನಿರಾಕರಿಸಿದ ಘಟನೆ ನಡೆಯಿತು. ಈ ವೇಳೆ ರೇಲ್ವೆ ಸಚಿವ ಅಶ್ವಿನ್ ವೈಷ್ಣವ್ (Ashwini Vaishnaw) ಅವರು ಆಕೆಯ ಮನವೊಲಿಸುವ ಪ್ರಯತ್ನ ಮಾಡಿದರಾದರು ಅದು ಫಲ ಕೊಡಲಿಲ್ಲ. ಇದೇ ವೇಳೆ ಹಿರಿಯ ಬಿಜೆಪಿ ನಾಯಕರು  ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮತ್ತು ಸುಭಾಷ್ ಸರ್ಕಾರ್ (Subhash Sarkar) ಅವರು ಬಿಜೆಪಿ ಕಾರ್ಯಕರ್ತರಿಗೆ, ಇದು ಸರ್ಕಾರಿ ಕಾರ್ಯಕ್ರಮ, ರಾಜಕೀಯ ಕಾರ್ಯಕ್ರಮವಲ್ಲ ಇಲ್ಲಿ ಘೋಷಣೆ ಕೂಗದಿರುವಂತೆ ಮನವಿ ಮಾಡುವ ದೃಶ್ಯಗಳು ಕಂಡು ಬಂದವು. ಇತ್ತ ವೇದಿಕೆಯ ಪಕ್ಕದಲ್ಲಿ ಮಮತಾ ಬ್ಯಾನರ್ಜಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅವರು ಪ್ರಧಾನಿಯವರ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿ, ಇಷ್ಟು ದೊಡ್ಡ ವೈಯಕ್ತಿಕ ನಷ್ಟವನ್ನು ಅನುಭವಿಸುತ್ತಿದ್ದರೂ ಕಾರ್ಯಕ್ರಮಕ್ಕೆ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸೇರಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು.

ಹೀರಾಬೇನ್ ಮೋದಿ ಅವರು ಮುಂಜಾನೆ 3.30 ರ ಸುಮಾರಿಗೆ ಅಹ್ಮದಾಬಾದ್‌ನ(Ahmedabad) ಯುಎನ್ ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ರಿಸರ್ಚ್ ಸೆಂಟರ್‌ನಲ್ಲಿ (UN Mehta Institute of Cardiology and Research Centre in Ahmedabad) ನಿಧನರಾಗಿದ್ದರು. ಬುಧವಾರ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಇನ್ನಿಲ್ಲ

Follow Us:
Download App:
  • android
  • ios