Global Day Of Parents : ಪಾಲಕರಿಗೆ ಥ್ಯಾಂಕ್ಸ್ ಹೇಳೋದ ಮರೀಬೇಡಿ
ಸದಾ ನಮ್ಮ ಹಿಂದೆ ನಿಲ್ಲುವ ದೊಡ್ಡ ಶಕ್ತಿ ಅಂದ್ರೆ ಪಾಲಕರು. ದುಃಖವಿರಲಿ, ಸುಖವಿರಲಿ ಫಲಾಫಲ ಅಪೇಕ್ಷೆ ಮಾಡದೆ ಸದಾ ಮಕ್ಕಳ ಏಳ್ಗೆಯನ್ನು ಬಯಸುವ ಪಾಲಕರಿಗೆ ಸಲಾಂ ಹೇಳಲೇಬೇಕು.
ಜೀವನದಲ್ಲಿ ತಂದೆ – ತಾಯಿ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಯಾವುದೇ ಸ್ವಾರ್ಥವಿಲ್ಲದೆ ತಮ್ಮ ಮಕ್ಕಳಿಗಾಗಿ ಇಡೀ ಜೀವನವನ್ನು ಮುಡುಪಾಗಿಡುವವರು ಪಾಲಕರು. ಅವರಿಂದಲೇ ನಮಗೊಂದು ಗುರುತು ಸಿಗುತ್ತದೆ. ನೀವು ಎಷ್ಟೇ ದೊಡ್ಡ ಸ್ಥಾನದಲ್ಲಿರಿ ಇಲ್ಲ ಎಷ್ಟೇ ಯಶಸ್ಸನ್ನು ಸಾಧಿಸಿರಿ ಅದಕ್ಕೆ ಪಾಲಕರು ಕಾರಣವಾಗಿರ್ತಾರೆ. ಪಾಲಕರ ಸಂಸ್ಕಾರ, ಅವರು ತೋರಿಸಿದ ದಾರಿ, ಅವರ ಶ್ರಮದಿಂದ ನಿಮಗೆ ಇದೆಲ್ಲ ಧಕ್ಕಿರುತ್ತದೆ. ಅವರಿಗಾಗಿಯೇ ಜೂನ್ ಒಂದನ್ನು ಮೀಸಲಿಡಲಾಗಿದೆ. ಪೋಷಕರ ಮಹತ್ವ ತಿಳಿಸಲು ಹಾಗೂ ಅವರ ಬದ್ಧತೆಯನ್ನು ಗೌರವಿಸಲು ಜೂನ್ ಒಂದರಂದು ಪ್ರತಿ ವರ್ಷ ಜಾಗತಿಕ ಪೋಷಕರ ದಿನವನ್ನು ಆಚರಿಸಲಾಗುತ್ತದೆ.
ಜಾಗತಿಕ ಪೋಷಕ (Parents) ರ ದಿನ ಶುರುವಾಗಿದ್ದು ಹೇಗೆ? : ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು, ಮಕ್ಕಳ (Children) ಭವಿಷ್ಯಕ್ಕಾಗಿ ಪಾಲಕರು ಶ್ರಮಿಸುತ್ತಾರೆ. ಕೂಡಿಟ್ಟ ಹಣವನ್ನೆಲ್ಲ ಮಕ್ಕಳಿಗಾಗಿ ಖಾಲಿ ಮಾಡ್ತಾರೆ. ಪಾಲಕರು ವೃದ್ಧಾಪ್ಯಕ್ಕೆ ಬರ್ತಿದ್ದಂತೆ ಮಕ್ಕಳು ಅವರ ಜವಾಬ್ದಾರಿ ಬಿಟ್ಟು, ಓಡಿ ಹೋಗ್ತಾರೆ. ಇದು ಆಗಬಾರದು ಎನ್ನುವ ಕಾರಣಕ್ಕೆ ಶುರುವಾಗಿದ್ದು ಜಾಗತಿಕ ಪೋಷಕರ ದಿನ. ಜೂನ್ 1, 2012 ರಂದು, ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಈ ದಿನವನ್ನು ಆಚರಿಸಲು ಅಧಿಕೃತ ಘೋಷಣೆ ಮಾಡಲಾಯಿತು.
Parenting Tips : ಮಕ್ಕಳಿಗೆ ಮೊಬೈಲ್ ಫೋನ್ ನೀಡಲು ಇದು ಬೆಸ್ಟ್
1980 ರ ದಶಕದಲ್ಲಿ ವಿಶ್ವಸಂಸ್ಥೆ (United Nation) ಯು ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಲು ಪ್ರಾರಂಭಿಸಿತ್ತು. ಡಿಸೆಂಬರ್ 9, 1989 ರಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 1994 ಅನ್ನು ಅಂತರರಾಷ್ಟ್ರೀಯ ಕುಟುಂಬದ ವರ್ಷವೆಂದು ಘೋಷಿಸಲಾಯಿತು. 1993 ರ ಸಾಮಾನ್ಯ ಸಭೆಯಲ್ಲಿ ಪ್ರತಿ ವರ್ಷ ಮೇ 15 ಅನ್ನು ಅಂತರರಾಷ್ಟ್ರೀಯ ಕುಟುಂಬದ ದಿನವಾಗಿ ಆಚರಿಸಲು ನಿರ್ಧರಿಸಿತು. 2012ರಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜೂನ್ ಒಂದನ್ನು ಜಾಗತಿಕ ಪೋಷಕರ ದಿನವೆಂದು ಘೋಷಿಸಿತು. ಇದನ್ನು ವಿಶ್ವದಾದ್ಯಂತ ಪೋಷಕರ ಗೌರವಾರ್ಥವಾಗಿ ವಾರ್ಷಿಕವಾಗಿ ಆಚರಿಸಲಾಗುತ್ತದೆ. ಇದನ್ನು ವಿವಿಧ ದೇಶಗಳಲ್ಲಿ ವಿವಿಧ ದಿನಾಂಕಗಳಲ್ಲಿ ಆಚರಿಸಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ ಇದನ್ನು ಜುಲೈ 4 ನೇ ಭಾನುವಾರ, ದಕ್ಷಿಣ ಕೊರಿಯಾದಲ್ಲಿ ಮೇ 8ರಂದು ಆಚರಿಸಲಾಗುತ್ತದೆ.
ಜನರು ತಮ್ಮ ಪೋಷಕರೊಂದಿಗೆ ಸಮಯ ಕಳೆಯಲಿ, ಅವರಿಗೆ ಉಡುಗೊರೆಗಳನ್ನು ನೀಡಲಿ. ಒಟ್ಟಿಗೆ ಚಲನಚಿತ್ರಗಳನ್ನು ವೀಕ್ಷಿಸಲಿ ಎಂಬುದು ವಿಶ್ವಸಂಸ್ಥೆಯ ಆಶಯ. ಪೋಷಕರೊಂದಿಗೆ ಸಮಯ ಕಳೆಯುವ ಮೂಲಕ ಕುಟುಂಬದ ಬಂಧವನ್ನು ಗಟ್ಟಿಗೊಳಿಸುವ ಉದ್ದೇಶದಿಂದಲೇ ವಿಶ್ವಸಂಸ್ಥೆ ಇದನ್ನು ಶುರು ಮಾಡಿದೆ. ಮಗುವಿನ ವ್ಯಕ್ತಿತ್ವದ ಬೆಳವಣಿಗೆ ಹಾಗೂ ಸಾಮರಸ್ಯದ ಜೀವನಕ್ಕೆ ಪೋಷಕರ ಉಪಸ್ಥಿತಿಯು ಬಹಳ ಮುಖ್ಯ ಎಂದು ಯುಎನ್ ಹೇಳಿದೆ. ಮಕ್ಕಳು ಕೌಟುಂಬಿಕ ವಾತಾವರಣದಲ್ಲಿ ಮತ್ತು ಸಂತೋಷ, ಪ್ರೀತಿ ಮತ್ತು ತಿಳುವಳಿಕೆಯ ವಾತಾವರಣದಲ್ಲಿ ಬೆಳೆಯಬೇಕು ಎಂದು ವಿಶ್ವಸಂಸ್ಥೆ ಹೇಳಿದೆ.
Relationship Tips: ಎಲ್ಲದಕ್ಕೂ ಮತ್ತೊಬ್ಬರ ಅನುಮತಿಗೆ ಕಾಯೋದ್ಯಾಕೆ?
ಈ ದಿನವನ್ನು ಹೀಗೆ ಕಳೆಯಿರಿ : ಈ ದಿನ ಪೋಷಕರು ಮತ್ತು ಮಕ್ಕಳಿಗೆ ಸೀಮಿತವಾಗಿದೆ. ಬೆಳಿಗ್ಗೆ ಕೆಲಸವಿದೆ ಎನ್ನುವ ಪಾಲಕರು ಅಥವಾ ಮಕ್ಕಳು ರಾತ್ರಿ ಒಟ್ಟಿಗೆ ಆಹಾರ ಸೇವನೆ ಮಾಡಬಹುದು. ಎಲ್ಲರೂ ಒಟ್ಟಾಗಿ ಹೊಟೇಲ್ ಗೆ ಹೋಗಬಹುದು. ಇಲ್ಲವೆ ಮಕ್ಕಳು, ಪಾಲಕರಿಗಾಗಿ ವಿಶೇಷ ಅಡುಗೆ ತಯಾರಿಸಿ ನೀಡ್ಬಹುದು. ಮಕ್ಕಳು – ಪಾಲಕರು ಸೇರಿ ವಿನೋದದ ಆಟಗಳನ್ನು ಆಡ್ಬಹುದು. ಇದ್ರಿಂದ ಇಬ್ಬರು ರಿಲ್ಯಾಕ್ಸ್ ಆಗುವ ಜೊತೆಗೆ ಪರಸ್ಪರ ಅರ್ಥ ಮಾಡಿಕೊಳ್ಳಲು ಇದು ಸಹಕಾರಿಯಾಗುತ್ತದೆ. ಕೆಲಸದ ಕಾರಣ ದೂರದ ಊರುಗಳಲ್ಲಿರುವ ಮಕ್ಕಳು ಅಥವಾ ಪೋಷಕರು, ವಿಡಿಯೋ ಕಾಲ್ ಮೂಲಕ ಮಕ್ಕಳನ್ನು ಸಂಪರ್ಕಿಸಿ, ಅವರಿಗೆ ಕೆಲ ಗಂಟೆ ಮೀಸಲಿಟ್ಟು, ಮನಸ್ಸು ಬಿಚ್ಚಿ ಮಾತನಾಡಬಹುದು. ಈದಿನ ಎಲ್ಲ ಮಕ್ಕಳು ಅವರ ಪಾಲಕರಿಗೆ ಧನ್ಯವಾದ ಹೇಳುವ ಅಗತ್ಯವಿದೆ. ಹಾಗೆಯೇ ಪಾಲಕರನ್ನು ಪ್ರೀತಿಯಿಂದ ನೋಡಿಕೊಳ್ಳುವ ಪಣತೊಡಬೇಕಿದೆ.