ಚೀನಾದ ಕಂಪನಿಯೊಂದು ಸೆಪ್ಟೆಂಬರ್ ಒಳಗೆ ಮದುವೆಯಾಗದಿದ್ದರೆ ಕೆಲಸದಿಂದ ತೆಗೆದುಹಾಕುವುದಾಗಿ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದೆ. ಈ ವಿವಾದಾತ್ಮಕ ನಿಯಮವು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ, ಅಲ್ಲಿ ಅನೇಕರು ಕಂಪನಿಯ ನಿರ್ಧಾರವನ್ನು ಟೀಕಿಸಿದ್ದಾರೆ.
ಮದುವೆ ಪ್ರೀತಿ, ಪ್ರೇಮ ಎಲ್ಲವೂ ವ್ಯಕ್ತಿಯೊಬ್ಬನ ವೈಯಕ್ತಿಕ ಆಯ್ಕೆ, ಆತನಿಗೆ/ಆಕೆಗೆ ಇಷ್ಟವಿದ್ದರೆ ಮದುವೆಯಾಗಬಹುದು ಇಲ್ಲದೇ ಹೋದರೆ ಒಂಟಿಯಾಗಿಯೇ ಇರಬಹುದು. ನೀನು ಮದುವೆಯಾಗಲೇಬೇಕು ಎಂದು ಅವರ ಕುಟುಂಬದವರು ಸ್ನೇಹಿತರು, ಆತ್ಮೀಯರಷ್ಟೇ ಅವರಿಗೆ ಒತ್ತಡ ಹೇರಬಹುದು. ಆದರೆ ಅವರು ಕೆಲಸ ಮಾಡುವ ಸಂಸ್ಥೆಗೆ ಇಂತಹ ವೈಯಕ್ತಿಕ ವಿಚಾರದಲ್ಲಿ ಮೂಗು ತೂರಿಸುವ ಅವಕಾಶ ಎಲ್ಲೂ ಇಲ್ಲ. ಆದರೆ ಚೀನಾದಲ್ಲಿ ಸೆಪ್ಟೆಂಬರ್ ಒಳಗೆ ಮದುವೆಯಾಗದೇ ಹೋದರೆ ಕೆಲಸದಿಂದ ತೆಗೆದು ಹಾಕುವುದಾಗಿ ಸಂಸ್ಥೆಯೊಂದು ತನ್ನ ಕಂಪನಿಯಲ್ಲಿ ಕೆಲಸಕ್ಕಿರುವ ಅವಿವಾಹಿತ ಯುವಕ ಯುವತಿಯರಿಗೆ ವಾರ್ನ್ ಮಾಡಿದೆ. ಇದರಿಂದ ಅವಿವಾಹಿತ ಸಿಂಗಲ್ಸ್‌ಗಳು ದಿಕ್ಕು ತೋಚದಾಗಿದ್ದಾರೆ. ಈ ವಿಚಾರವೀಗ ಅಲ್ಲಿನ ಸೋಶೀಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಆದರೆ ಸಂಸ್ಥೆಯ ಈ ನಿಯಮದ ಹಿಂದಿರುವ ಕಾರಣ ಸಂಸ್ಥೆಯಲ್ಲಿ ಮದುವೆ ಪ್ರಮಾಣವನ್ನು ಹೆಚ್ಚು ಮಾಡುವುದಾಗಿದೆ. ಆದರೆ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಸಂಸ್ಥೆಯ ಈ ವಿವಾದಾತ್ಮಕ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ವರದಿಯ ಪ್ರಕಾರ ಕಂಪನಿಯೂ ಜನವರಿಯಲ್ಲಿ ಈ ವಿವಾದಿತ ಯೋಜನೆಯನ್ನು ಜಾರಿಗೆ ತಂದಿದ್ದು, ಕಂಪನಿಯಲ್ಲಿ ವಿವಾಹಿತರ ಪ್ರಮಾಣ ಹೆಚ್ಚಿಸುವುದಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ವರದಿಯಾಗಿದೆ.
28 ರಿಂದ 58 ವರ್ಷ ವಯಸ್ಸಿನೊಳಗಿರುವ ಒಂಟಿಯಾಗಿರುವ ಹಾಗೂ ವಿಚ್ಛೇದಿತ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಈ ನೀತಿಯು ಜಾರಿಗೆ ಬಂದಿದ್ದು, ತನ್ನ ಕಚೇರಿಯಲ್ಲಿರುವ ಸಿಬ್ಬಂದಿಗೆ ಸೆಪ್ಟೆಂಬರ್ ವೇಳೆಗೆ ಮದುವೆಯಾಗಿ ನೆಲೆ ಕಾಣಲು ಸೂಚಿಸುತ್ತಿದೆ. ಈ ನಿಯಮವನ್ನು ಪಾಲಿಸಲು ವಿಫಲರಾದ ಉದ್ಯೋಗಿಗಳು ಮಾರ್ಚ್ ವೇಳೆಗೆ ಸ್ವಯಂ ವಿಮರ್ಶೆ ಪತ್ರವನ್ನು ಸಲ್ಲಿಸಬೇಕು, ಹಾಗೆಯೇ ಜೂನ್ ವೇಳೆಗೆ ಇನ್ನೂ ಅವಿವಾಹಿತರಾಗಿ ಉಳಿದಿರುವವರನ್ನು ಮೌಲ್ಯಮಾಪನಕ್ಕೆ ಒಳಪಡಿಸಲಾಗುತ್ತದೆ ಹಾಗೂ ಅವರು ತಮಗೆ ನೀಡಿದ ಗಡುವಿನೊಳಗೆ ಒಂಟಿಯಾಗಿ ಉಳಿದರೆ, ಅವರನ್ನು ಕಂಪನಿ ವಜಾಗೊಳಿಸಬಹುದು.
ಸಾಂಪ್ರದಾಯಿಕ ಚೀನೀ ಮೌಲ್ಯಗಳಾದ ನಿಷ್ಠೆ ಮತ್ತು ವಂಶಾಭಿವೃದ್ಧಿಯನ್ನು ಅನುಮೋದಿಸುವ ಮೂಲಕ ಕಂಪನಿಯು ತನ್ನ ಈ ನೀತಿಯನ್ನು ಸಮರ್ಥಿಕೊಂಡಿದೆ.. ಕಂಪನಿಯು ತನ್ನ ಪ್ರಕಟಣೆಯಲ್ಲಿ, ವಿವಾಹ ದರವನ್ನು ಸುಧಾರಿಸಲು ಸರ್ಕಾರದ ಕರೆಗೆ ಪ್ರತಿಕ್ರಿಯಿಸದಿರುವುದು ಅಪ್ರಾಮಾಣಿಕತೆಯಾಗಿದೆ.. ನಿಮ್ಮ ಹೆತ್ತವರ ಮಾತನ್ನು ಕೇಳದಿರುವುದು ನಿಷ್ಠಾವಂತ ಮಕ್ಕಳ ಲಕ್ಷಣಗಳಲ್ಲ, ನಿಮ್ಮನ್ನು ಒಂಟಿಯಾಗಿರಲು ಬಿಡುವುದು ಸರಿಯಲ್ಲ. ನಿಮ್ಮ ಸಹೋದ್ಯೋಗಿಗಳ ನಿರೀಕ್ಷೆಗಳನ್ನು ವಿಫಲಗೊಳಿಸುವುದು ಅನ್ಯಾಯ ಎಂದು ಸಂಸ್ಥೆ ಹೇಳಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಈ ಘೋಷಣೆಯು ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಒಬ್ಬ ಬಳಕೆದಾರರು, "ಈ ಹುಚ್ಚು ಕಂಪನಿಯು ತನ್ನದೇ ಆದ ವ್ಯವಹಾರವನ್ನು ನೋಡಿಕೊಳ್ಳಬೇಕು ಮತ್ತು ಉದ್ಯೋಗಿಗಳ ವೈಯಕ್ತಿಕ ಜೀವನದಿಂದ ದೂರವಿರಬೇಕು ಎಂದು ಆಗ್ರಹಿಸಿದ್ದಾರೆ. ಮತ್ತೊಬ್ಬರು, ಅವರು ನೀತಿಯನ್ನು ಜಾರಿಗೊಳಿಸಲಿ. ವಜಾಗೊಳಿಸಿದ ಉದ್ಯೋಗಿಗಳು ಮಧ್ಯಸ್ಥಿಕೆಗೆ ಅರ್ಜಿ ಸಲ್ಲಿಸಬಹುದು ಮತ್ತು ಉತ್ತಮ ಮೊತ್ತದ ಪರಿಹಾರವನ್ನು ಪಡೆಯಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಮೂರನೆಯವರು, ಮಕ್ಕಳಿಲ್ಲದ ಕಾರಣಕ್ಕೆ ವಿವಾಹಿತ ಉದ್ಯೋಗಿಗಳನ್ನು ಶಿಕ್ಷಿಸುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಚೀನಾದಲ್ಲಿ ಜನಸಂಖ್ಯೆ ಹಾಗೂ ವಿವಾಹ ದರಗಳು ಕುಸಿಯುತ್ತಿರುವ ನಡುವೆಯೇ ಈ ವಿವಾದ ಉಂಟಾಗಿದೆ. ಕಳೆದ ವರ್ಷ, ವಿವಾಹಗಳ ಸಂಖ್ಯೆ 6.1 ಮಿಲಿಯನ್‌ಗೆ ಇಳಿದಿದ್ದು, ಹಿಂದಿನ ವರ್ಷದ 7.68 ಮಿಲಿಯನ್‌ನಿಂದ 20.5 ಪ್ರತಿಶತದಷ್ಟು ಕುಸಿತ ಕಂಡಿದೆ. ಇದರ ಹೊರತಾಗಿಯೂ, ಚೀನಾದಲ್ಲಿ 2024 ರಲ್ಲಿ 9.54 ಮಿಲಿಯನ್ ನವಜಾತ ಶಿಶುಗಳು ಜನಿಸಿವೆ. ಇದು 2017 ರ ನಂತರದ ಜನನ ದರದಲ್ಲಿ ಮೊದಲ ಹೆಚ್ಚಳವಾಗಿದೆ ಎಂದು ವರದಿಯಾಗಿದೆ.
