Asianet Suvarna News Asianet Suvarna News

ವಿಡಿಯೋ ಕಾಲಿಂಗ್‍ನಲ್ಲೇ ಎಷ್ಟೆಲ್ಲ ಮೋಜು-ಮಸ್ತಿ ಮಾಡ್ಬಹುದು ಗೊತ್ತಾ?

ಲಾಕ್‍ಡೌನ್‍ನಿಂದಾಗಿ ಮೀಟಿಂಗ್, ಶಾಪಿಂಗ್, ಪಾರ್ಟಿ ಎಲ್ಲವೂ ಬಂದ್ ಆಗಿವೆ. ಆದ್ರೇನು ವಿಡಿಯೋ ಕಾಲ್ ಇದೆಯಲ್ಲ. ವಿಡಿಯೋ ಕಾಲ್ ಮೂಲಕವೇ ಫ್ರೆಂಡ್ಸ್ ಜೊತೆಗೆ ಸಖತ್ ಮಸ್ತಿ ಮಾಡ್ಬಹುದು.

Fun activities you can take on video call
Author
Bangalore, First Published Apr 21, 2020, 7:51 PM IST

ಲಾಕ್‍ಡೌನ್‍ನಿಂದಾಗಿ ಮನೆ ಹೊರಗೆ ಕಾಲಿಡುವಂತಿಲ್ಲ. ಸ್ನೇಹಿತರು,ಆತ್ಮೀಯರು, ಬಂಧುಗಳು ಯಾರನ್ನೂ ಮೀಟ್ ಮಾಡೋಕಾಗುತ್ತಿಲ್ಲ.ವೀಕೆಂಡ್‍ಗಳ ಶಾಪಿಂಗ್, ಪಾರ್ಟಿ, ಔಟಿಂಗ್ ಎಲ್ಲ ಈಗ ಬರೀ ನೆನಪುಗಳಷ್ಟೆ. ಅದೆಷ್ಟೇ ಬೇಜಾರಾದ್ರೂ,ಮನಸ್ಸು ಮನೆಬಿಟ್ಟು ಹೊರಗೆ ಹೋಗೋಣ ಎಂದು ಹಟ ಹಿಡಿದ್ರೂ ಮನೆಯಲ್ಲೇ ಕುಳಿತಿರಬೇಕಾದ ಅನಿವಾರ್ಯತೆಗೆ ಎಲ್ಲರೂ ಸಿಲುಕಿದ್ದೇವೆ. ಇಂಥ ಟೈಮ್‍ನಲ್ಲಿ ಮನಸ್ಸಿಗೆ ಸ್ವಲ್ಪ ಖುಷಿ, ಉಲ್ಲಾಸ ತುಂಬುತ್ತಿರೋದು ಮೊಬೈಲ್. ಅದ್ರಲ್ಲೂ ವಿಡಿಯೋ ಕಾಲಿಂಗ್ ಬೇಸರವನ್ನು ಒಂದಿಷ್ಟು ತಗ್ಗಿಸುವ ಕೆಲಸ ಮಾಡುತ್ತಿದೆ. ವರ್ಚುವಲ್ ಸೋಷಿಯಲೈಸಿಂಗ್ ಇತ್ತೀಚೆಗೆ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸುತ್ತಿದೆ. ಒಬ್ಬರ ಮುಖ ಒಬ್ಬರು ನೋಡುತ್ತ ಮಾತನಾಡೋದು ಇಲ್ಲವೆ ಗ್ರೂಪ್ ಕಾಲಿಂಗ್ ಮೂಲಕ ಕಸಿನ್ಸ್ ಅಥವಾ ಫ್ರೆಂಡ್ಸ್ ಜೊತೆಗೆ ಹರಟುತ್ತಿದ್ದರೆ ಒತ್ತಡ ತಗ್ಗಿ ಮನಸ್ಸು ನಿರಾಳವಾಗುತ್ತೆ. ಆದ್ರೆ ಲಾಕ್‍ಡೌನ್ ಪ್ರಾರಂಭವಾಗಿ ತಿಂಗಳಾಗುತ್ತ ಬಂತು. ಹೀಗಾಗಿ ಮಾತನಾಡಿದ್ದೇ ಮಾತನಾಡಿ, ಕೆಲವರಿಗೆ ಬೋರ್ ಆಗೋಕೆ ಶುರು ಆಗಿರಬಹುದು. ಹಾಗಾದ್ರೆ ವಿಡಿಯೋ ಕಾಲ್ ಸಂಭಾಷಣೆಯನ್ನು ಇಂಟ್ರೆಸ್ಟಿಂಗ್ ಆಗಿಸಲು ಏನ್ ಮಾಡ್ಬಹುದು?

ಅವನಲ್ಲಿ, ಇವಳಿಲ್ಲಿ...ಆದರೂ, ಪ್ರೀತಿ ಬಾಡದಂತೆ ಏನು ಮಾಡಬೇಕು?

ಅಂತ್ಯಾಕ್ಷರಿ ಹಾಡಿ
ನಿಮ್ಮ ಹೈಸ್ಕೂಲ್ ಅಥವಾ ಕಾಲೇಜ್ ಫ್ರೆಂಡ್ಸ್ ಗ್ರೂಪ್‍ನ ಎಲ್ಲ ಸದಸ್ಯರಿಗೂ ಗ್ರೂಪ್ ವಿಡಿಯೋ ಕಾಲ್ ಮಾಡಿ ಮಾತನಾಡುವ ಅಭ್ಯಾಸವಿದ್ರೆ, ಅಂತ್ಯಾಕ್ಷರಿ ಟ್ರೈ ಮಾಡಬಹುದು. ಈಗಂತೂ ಗ್ರೂಪ್ ಕಾಲಿಂಗ್ ಅವಕಾಶವಿರುವ ಅನೇಕ ಆಪ್‍ಗಳಿವೆ. ನಿಮ್ಮಲ್ಲೇ ಎರಡು ಟೀಂ ಮಾಡ್ಕೊಂಡು ಅಥವಾ ಒಬ್ಬೊಬ್ಬರೇ ಅಂತ್ಯಾಕ್ಷರಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಇದರಿಂದ ಫ್ರೆಂಡ್ಸ್ ಜೊತೆಗೆ ನೀವು ಇದ್ದೀರಿ ಎಂಬ ಭಾವನೆ ಮೂಡುತ್ತದೆ. ಎಲ್ಲರೂ ಒಂದೆಡೆ ಸೇರಿದ ಅನುಭವ ಸಿಗುತ್ತದೆ. ಇದರಿಂದ ಟೈಂ ಪಾಸ್ ಆಗುವ ಜೊತೆಗೆ ಮನಸ್ಸು ರಿಲ್ಯಾಕ್ಸ್ ಆಗುತ್ತೆ ಕೂಡ. 

ಹಳೆಯ ದಿನಗಳ ಮೆಲುಕು
ನಿಮ್ಮ ಕಾಲೇಜ್ ಅಥವಾ ಹೈಸ್ಕೂಲ್ ಅಥವಾ ಆತ್ಮೀಯ ಸ್ನೇಹಿತರಿಗೆ ಗ್ರೂಪ್ ಕಾಲ್ ಮಾಡಿ ಅವರೊಂದಿಗೆ ಕಳೆದ ಮೋಜು-ಮಸ್ತಿಯ ದಿನಗಳನ್ನು ನೆನಪಿಸಿಕೊಳ್ಳಲು ಇದು ಒಳ್ಳೆಯ ಸಮಯ. ನೀವೆಲ್ಲ ಒಟ್ಟಾಗಿ ಪಿಕ್‍ನಿಕ್ ಅಥವಾ ಟೂರ್‍ಗೆ ಹೋದಾಗ ನಡೆದ ಘಟನೆಗಳು, ಲೇಟ್‍ನೈಟ್ ಪಾರ್ಟಿಗಳನ್ನು ಸ್ಮರಿಸಿಕೊಳ್ಳಬಹುದು. ಇದರಿಂದ ಒಂದಿಷ್ಟು ಹಾಸ್ಯಭರಿತ ಘಟನಾವಳಿಗಳು ನೆನಪಿಗೆ ಬಂದು ಮನಸ್ಸು ಬಿಚ್ಚಿ ನಗಲು ಅವಕಾಶ ಸಿಗುತ್ತದೆ. ಲಾಕ್‍ಡೌನ್‍ನಿಂದ ಯಾರನ್ನೂ ಮೀಟ್ ಮಾಡಲು ಸಾಧ್ಯವಾಗಿಲ್ಲ, ಪಾರ್ಟಿ ಮಾಡಲು ಆಗುತ್ತಿಲ್ಲ ಎಂಬ ಬೇಸರ ಕೂಡ ದೂರವಾಗುತ್ತೆ.

ಹಳೆ ಪ್ರೀತಿ ಮರೆತು ಹೊಸ ಬದುಕಿನತ್ತ

ಪುಸ್ತಕ ಓದಿ, ವಿಮರ್ಶೆ ಹಂಚಿಕೊಳ್ಳಿ
ನಿಮಗೂ ಹಾಗೂ ನಿಮ್ಮ ಕುಚುಕು ಗೆಳೆಯನಿಗೆ ಪುಸ್ತಕಗಳನ್ನು ಓದುವ ಹುಚ್ಚಿದ್ರೆ ಲಾಕ್‍ಡೌನ್‍ಗಿಂತ ಒಳ್ಳೆಯ ಸಮಯ ಬೇರೆ ಸಿಗಲು ಸಾಧ್ಯವಿಲ್ಲ. ನೀವಿಬ್ರು ವಾರಕ್ಕೊಂದು ಪುಸ್ತಕ ಓದಿ, ಅದರ ಕುರಿತು ಅಭಿಪ್ರಾಯಗಳನ್ನೇಕೆ ಹಂಚಿಕೊಳ್ಳಬಾರದು? ಇದ್ರಿಂದ ಇಬ್ಬರಿಗೂ ಫೋನ್‍ನಲ್ಲಿ ಮಾತಾಡೋಕೆ ಒಂದು ಟಾಪಿಕ್ ಸಿಗುವ ಜೊತೆಗೆ ಜ್ಞಾನವೂ ಹೆಚ್ಚುತ್ತೆ. ನೀವು ಮತ್ತು ನಿಮ್ಮ ಸ್ನೇಹಿತ ಒಂದೇ ಪುಸ್ತಕವನ್ನು ಓದಿ, ವಿಮರ್ಶೆ ಮಾಡಬಹುದು. ಒಂದು ವೇಳೆ ಇಬ್ಬರ ಬಳಿ ಬೇರೆ ಬೇರೆ ಪುಸ್ತಕಗಳಿದ್ರೆ ಅವುಗಳನ್ನು ಓದಿ ನಿಮ್ಮ ಅನಿಸಿಕೆಗಳನ್ನು ವಿನಿಮಯ ಮಾಡಿಕೊಳ್ಳಬಹುದು.

ಹೊಸ ರೆಸಿಪಿ ಕಲಿಕೆ
ಎರಡು ದಿನಕ್ಕೂ ಇಲ್ಲವೆ ವಾರಕ್ಕೊಮ್ಮೆ ನಿಮ್ಮ ಫ್ರೆಂಡ್ಸ್ ಸರ್ಕಲ್‍ನಲ್ಲಿ ಒಬ್ಬರು ಉಳಿದವರಿಗೆ ಹೊಸ ರೆಸಿಪಿಯೊಂದನ್ನು ಮಾಡೋದು ಹೇಗೆ ಎಂದು ಕಲಿಸಬೇಕು. ಅದೂ ಗ್ರೂಪ್ ವಿಡಿಯೋ ಕಾಲ್ ಮೂಲಕ. ಇದೊಂಥರ ಲೈವ್ ಲರ್ನಿಂಗ್ ಸೆಶನ್ ಇದ್ದಂಗೆ. ಅಂದ್ರೆ ಒಬ್ಬರು ರೆಸಿಪಿಯನ್ನು ವಿವರಿಸುತ್ತ, ಮಾಡುತ್ತಿದ್ರೆ ಉಳಿದವರು ಕೂಡ ಅವರ ನಿರ್ದೇಶನಗಳಿಗೆ ಅನುಗುಣವಾಗಿ ತಮ್ಮ ಮನೆಯ ಅಡುಗೆ ಮನೆಯಲ್ಲೇ ಆ ರೆಸಿಪಿಯನ್ನು ಟ್ರೈ ಮಾಡಬೇಕು. ಇದ್ರಿಂದ ಎಲ್ಲರೂ ಆ ರೆಸಿಪಿಯನ್ನು ಕಲಿಯೋದರ ಜೊತೆಗೆ ರುಚಿಯನ್ನೂ ನೋಡಿದಂತಾಗುತ್ತೆ. ಈ ಕುಕ್ಕಿಂಗ್ ಸೆಶನ್ ಮಜಾ ಕೊಡೋದ್ರಲ್ಲಿ ಡೌಟೇ ಇಲ್ಲ.

ಕೊರೋನಾ ಕಾಲದ ನಂತರ....ಹೀಗೊಂದು ಊಹೆ!

ಡಬ್ಬಿಂಗ್ ಆರ್ಟಿಸ್ಟ್
ನಿಮ್ಮ ಫ್ರೆಂಡ್ಸ್ ಗ್ರೂಪ್‍ನಲ್ಲಿರುವ ಎಲ್ಲರೂ ಯಾವುದಾದ್ರೂ ಒಂದು ಕಾಮನ್ ಹಾಡಿನ ತುಣುಕು ಅಥವಾ ಡೈಲಾಗ್‍ಗೆ ನಟಿಸಿ ತೋರಿಸೋದು ಇಲ್ಲವೆ ಆ ಡೈಲಾಗ್ ಅನ್ನು ಒರಿಜಿನಲ್ ಸ್ಟೈಲ್‍ನಲ್ಲಿ ಹೇಳೋದು. ವಿಡಿಯೋ ಕಾಲ್‍ನಲ್ಲೇ ಈ ಆಕ್ಟಿಂಗ್ ಲೈವ್ ಆಗಿ ನಡೀಬೇಕು. ಹೊಟ್ಟೆ ಹುಣ್ಣಾಗಿಸುವಷ್ಟು ನಗಲು ಇದು ಒಳ್ಳೆಯ ಅವಕಾಶ.

Follow Us:
Download App:
  • android
  • ios