ಹಳೆ ಪ್ರೀತಿ ಮರೆತು ಹೊಸ ಬದುಕಿನತ್ತ...
ಹಳೆಯ ಪ್ರೀತಿ ಬಹುತೇಕರ ಬದುಕಿನಲ್ಲಿ ಹಾಂಟೆಡ್ ನೆನಪಾಗಿ ಕಾಡುತ್ತದೆ. ಅದನ್ನು ಮರೆಯುವುದು ಹೇಗೆ? ಬ್ರೇಕಪ್ ಬಳಿಕ ಎಕ್ಸ್ ಗುಂಗಿನಿಂದ ಪೂರ್ತಿ ಹೊರಬರುವುದು ಹೇಗೆ?
ಹಳೆ ಪ್ರೀತಿ ಎಂದರೆ ಬಹುತೇಕರಿಗೆ ಮೊದಲ ಪ್ರೀತಿ. ನಂತರದಲ್ಲಿ ಪ್ರೀತಿಯಾದರೂ ಮೊದಲ ಪ್ರೀತಿಯ ಗಾಢತೆ ದೊರೆಯದು. ಏಕೆಂದರೆ ಅಲ್ಲಿ ಎಲ್ಲ ಫೀಲಿಂಗ್ಸ್ ಕೂಡಾ ಹೊಸತೇ. ನಂತರದಲ್ಲಿ ಆಗುವುದೆಲ್ಲ ಪುನರಾವರ್ತನೆ. ಹಾಗಾಗಿಯೇ ಮೊದಲ ಪ್ರೀತಿ ಬೇಕಪ್‌ನಲ್ಲಿ ಕೊನೆಯಾದರೆ ಎಕ್ಸ್‌ನ್ನು ಮರೆಯಲು ಜನ ಒದ್ದಾಡಿಬಿಡುತ್ತಾರೆ. ತಾವು ಮಾಡಿಕೊಂಡ ಪ್ರಾಮಿಸ್‌ಗಳು, ಆಡಿಕೊಂಡ ಮಾತುಗಳು, ಕೊಟ್ಟುಕೊಂಡ ಉಡುಗೊರೆಗಳು ಎಲ್ಲವೂ 'ಭೂತ'ವಾಗಿ ಕಾಡಲಾರಂಭಿಸುತ್ತವೆ. ಹೌದು ವಿಫಲ ಪ್ರೀತಿ ಎಂದಿಗೂ ನೋವು ನೀಡುತ್ತದೆ. ದೈಹಿಕ ಗಾಯಗಳು ನೀಡದ ನೋವನ್ನು ಅದು ನೀಡಬಲ್ಲದು. ಹಾಗಿದ್ದೂ ಬದುಕು ಮುಂದೋಡಲು, ಬಿಟ್ಟು ಹೋದವರನ್ನು ಮರೆಯಲೇಬೇಕಾದ ಅನಿವಾರ್ಯತೆ ಇರುತ್ತದೆ. ಹಾಗೆ ಎಕ್ಸ್‌ನ್ನು ಮರೆಯಲು ಇಲ್ಲಿವೆ ಕೆಲ ಸಲಹೆಗಳು.
ಕಪೋಲಕಲ್ಪಿತ
ಎಕ್ಸ್ ಎನ್ನುವ ವ್ಯಕ್ತಿ ಆರಂಭದಲ್ಲಿ ಪರ್ಫೆಕ್ಟ್ ಎನಿಸಿದರೂ, ನಿಧಾನವಾಗಿ ಅವರೂ ಎಲ್ಲರಂತೆ ಎಂಬುದು ಅರಿವಾಗಿರುತ್ತದೆ. ಅವರ ಸದ್ಗುಣಗಳೆಲ್ಲ ಪ್ರೀತಿಯ ಅಮಲಲ್ಲಿ ನೀವು ಕಲ್ಪಿಸಿಕೊಂಡಿದ್ದು ಎಂಬುದು ತಿಳಿಯುತ್ತದೆ. ಸಮಯ ಹೋದಂತೆಲ್ಲ ಅವರ ದುರ್ಬುದ್ಧಿಗಳು, ವೀಕ್ನೆಸ್ ಎಲ್ಲವೂ ಬೆಳಕಿಗೆ ಬರುತ್ತದೆ. ಹಾಗಾಗಿ, ಅವರೇನೋ ದೇವರು ಕೊಟ್ಟ ವರ ಎಂಬಂತೆ ವರ್ತಿಸುವುದು ಬಿಟ್ಟು ಬಿಡಿ. ನಿಮಗೆ ಕೋಪ ಬರಿಸುತ್ತಿದ್ದ ಅವರ ಎಲ್ಲ ಕೆಟ್ಟ ಗುಣಗಳನ್ನು ಪಟ್ಟಿ ಮಾಡಿ. ಖಂಡಿತವಾಗಿ ಈ ಪಟ್ಟಿ ಉದ್ದವಿರುತ್ತದೆ. ಬ್ರೇಕಪ್ ಬಳಿಕ ಅವರು ನಿಮ್ಮನ್ನು ಕಡೆಗಣಿಸಿದ ಬಗ್ಗೆ ಬರೆಯಿರಿ. ಇಷ್ಟೆಲ್ಲ ಮುಗಿವ ಹೊತ್ತಿಗೆ ಎಕ್ಸ್ ಬಗ್ಗೆ ನಿಮ್ಮಲ್ಲಿ ಒಂದು ತಾತ್ಸಾರ ಮೂಡುತ್ತದೆ. ಅದನ್ನು ಹಾಗೆಯೇ ಉಳಿಸಿಕೊಳ್ಳಿ.
ಮಾಡಿದ್ದುಣ್ಣೋ ಮಹರಾಯ ಎಂದು ನಗುತ್ತಿವೆಯಾ ಚಿಪ್ಪು ಹಂದಿಗಳು?
ಸಂಪರ್ಕಿಸಬೇಡಿ
ಎಕ್ಸ್ ಎಂದ ಮೇಲೆ ಅದೊಂದು ಮುಗಿದ ಅಧ್ಯಾಯ. ಅದನ್ನು ಅಲ್ಲಿಯೇ ಬಿಡದಿದ್ದರೆ ಬದುಕು ಮುಂದೋಡದು. ಹಿಂದೆಯೂ ಹೋಗುವುದಿಲ್ಲ. ಮೊದಲಿಗೆ ನೀವು ಮಾಡಬೇಕಾದುದೆಂದರೆ ಅವರನ್ನು ಫೇಸ್‌ಬುಕ್ನಲ್ಲಿ ಅನ್‌ಫ್ರೆಂಡ್ ಮಾಡಿ. ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿ. ಎಲ್ಲ ಸಂಪರ್ಕ ಸೇತುವೆಗಳನ್ನೂ ಮುಚ್ಚಿಬಿಡಿ. ಅವರ ನಂಬರ್ ಫೋನ್‌ನಿಂದ ಡಿಲೀಟ್ ಮಾಡಿ. ಅವರು ಇದುವರೆಗೂ ಮಾಡಿದ ಮೆಸೇಜ್‌ಗಳು, ಕಳುಹಿಸಿದ ಮೇಲ್‌ಗಳು, ಕೊಟ್ಟ ಉಡುಗೊರೆಗಳಿಗೆಲ್ಲ ಸಮಾಧಿ ಕಾಣಿಸಿ. ಅವರಿಗೆ ನೀವು ಬೇಕಾಗಿಲ್ಲವೆಂದ ಮೇಲೆ ನೀವು ಕೂಡಾ ಅವರನ್ನು ನೆನಪಿಸುವ ಯಾವುದನ್ನಾದರೂ ಇಟ್ಟುಕೊಂಡು ಕೊರಗುವ ಅಗತ್ಯವೇನಿದೆ? ಹಿಂದೆ ಪ್ರೀತಿಯಲ್ಲಿದ್ದಾಗ ಯಾವಾಗಲೂ ಒಬ್ಬರಿಗೊಬ್ಬರು ಇರುವ ಬಗ್ಗೆ ಮಾತಾಡಿರಬಹುದು, ಮುಗಿದ ಬಳಿಕವೂ ಫ್ರೆಂಡ್ಸ್ ಆಗಿರುವ ಬಗ್ಗೆ ಭಾಷೆ ಕೊಟ್ಟುಕೊಂಡಿರಬಹುದು. ಅವರು ಜೊತೆಗಿಲ್ಲ ಎಂದ ಮೇಲೆ ಆ ಭಾಷೆಗಳಿಗೆಲ್ಲ ಮಹತ್ವ ಕೊಡುವ ಅಗತ್ಯವಿಲ್ಲ. ಎಕ್ಸ್ ಜೊತೆ ಸಂಪರ್ಕದಲ್ಲಿರುವ ಮೂಲಕ ನೀವು ಪದೇ ಪದೆ ಫ್ರೆಂಡ್ಸ್, ಲವರ್, ಫ್ರೆಂಡ್ಸ್, ಲವರ್ ಎಂದು ಸರಿಯಾಗಿ ಹೆಸರಿಸಲಾರದ ಸಂಬಂಧಕ್ಕೆ ಪದೇ ಪದೆ ಹೋಗಿ ಬರುತ್ತೀರಿ. ಇದು ಮುಂದುವರಿಯುವುದು ಮಾನಸಿಕ ನೆಮ್ಮದಿಯನ್ನು ಕೆಡಿಸುತ್ತದೆಯೇ ಹೊರತು ನೀವಂದುಕೊಂಡ ಭವಿಷ್ಯ ಖಂಡಿತಾ ಇರುವುದಿಲ್ಲ.
ಮೊದಲಿನಂತಾಗುವುದಿಲ್ಲ
ಸಂಬಂಧ ಮುರಿದುಬಿದ್ದಿದ್ದಕ್ಕೆ ಒಂದು ಕಾರಣವಿದೆ. ಯಾವ ಸಂಬಂಧವೂ ಎರಡನೇ ಬಾರಿಗೆ ಮುಂಚಿನಂತೆ ಚೆನ್ನಾಗಿ ನಡೆದ ಉದಾಹರಣೆಯಿಲ್ಲ. ಇನ್ನು ಮುರಿದು ಬಿದ್ದ ಚೂರುಗಳನ್ನು ಎಷ್ಟೇ ಜೋಡಿಸಿದರೂ ಅದು ಮೊದಲಿನಂತಾಗುವುದು ಸಾಧ್ಯವಿಲ್ಲ. ಅವರನ್ನು ಮರೆಯಲು, ಕ್ಷಮಿಸಲು ಸಾಧ್ಯವಾದಷ್ಟು ಶ್ರಮಿಸಿ, ಆದರೆ, ಸರಿಮಾಡಿಕೊಳ್ಳಲು ಮಾತ್ರ ಸಮಯ ವ್ಯರ್ಥ ಮಾಡಬೇಡಿ.
ವರ್ಕೌಟ್
ಈಗ ನೀವು ಮತ್ತೆ ಸಿಂಗಲ್ ಆಗಿರುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹೆಚ್ಚಿಸಿಕೊಳ್ಳಲು, ಹೆಚ್ಚು ರೂಪವಂತರಾಗಲು ಜಿಮ್‌ಗೆ ಹೋಗುವುದನ್ನು ಇಲ್ಲವೇ ಜಾಗಿಂಗ್ ಅಭ್ಯಾಸ ಮಾಡಿಕೊಳ್ಳಿ. ಈ ವರ್ಕೌಟ್ ಮೂಲಕ ಬ್ರೇಕಪ್ ಬಲಿಕ ಉಂಟಾದ ಫ್ರಸ್ಟ್ರೇಶನ್ ಕೂಡಾ ಹೊರ ಹಾಕಲು ಸಾಧ್ಯವಾಗುತ್ತದೆ. ಒಳ್ಳೆ ಶೇಪ್ ಹೊಂದುವುದು ನಿಮ್ಮ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಇದಿಷ್ಟೇ ಅಲ್ಲ, ಸಾಧ್ಯವಾದಷ್ಟು ಬ್ಯುಸಿಯಾಗಿರಿ. ನಿಮಗೆ ಈ ಹಿಂದೆ ಮಾಡಲು ಸಮಯವಿಲ್ಲ ಎಂದು ಬಿಟ್ಟಿದ್ದನ್ನೆಲ್ಲ ಈಗ ಮಾಡಿ. ಬೆಳೆಯಲು ಬೇಕಾದುದನ್ನೆಲ್ಲ ಮಾಡಿ.
ಗೆಳೆಯರ ಸಹವಾಸ
ಪ್ರೀತಿಯಲ್ಲಿ ಬಿದ್ದಾಗ ನೀವು ಮಾಡಬೇಕಾದ ಮೊದಲ ತ್ಯಾಗವೆಂದರೆ ನಿಮಗೆ ಖುಷಿ ಕೊಡುತ್ತಿದ್ದ ಗೆಳೆಯರ ಸಹವಾಸದಿಂದ ಬಹಳಷ್ಟು ದೂರಾಗುವುದು. ಈಗ ಮತ್ತದಕ್ಕೆ ಸಮಯ ಬಂದಿದೆ. ಗೆಳೆಯರೊಂದಿಗೆ ಹ್ಯಾಂಗ್‌ಔಟ್ ಮಾಡಿ, ಜಾಲಿ ಟ್ರಿಪ್ ಹೋಗಿಬನ್ನಿ, ಸಿನಿಮಾಗಳಿಗೆ ಸುತ್ತಾಡಿ. ನಿಮ್ಮ ಹೊಸ ಬದುಕನ್ನು ಎಂಜಾಯ್ ಮಾಡಿ.
ಜಗತ್ತಿನ ಅತಿ ದುಬಾರಿ ಹಣ್ಣುಗಳು- ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
ಕೆಟ್ಟ ದಿನಗಳನ್ನು ನೆನೆಯಿರಿ
ಎಕ್ಸ್ ನಿಮ್ಮನ್ನು ಹೇಗೆ ಅವಾಯ್ಡ್ ಮಾಡುತ್ತಿದ್ದರು, ನಿಮ್ಮ ಬಳಿ ಫೋನ್‌ನಲ್ಲಿ ಮಾತನಾಡುವಂತೆ ನೀವೆಷ್ಟು ಗೋಗರೆಯುತ್ತಿದ್ದಿರಿ, ಅವರ ಗಮನ ಪಡೆಯುವುದಕ್ಕೋಸ್ಕರ ನೀವು ಎಷ್ಟೆಲ್ಲ ಸರ್ಕಸ್ ಮಾಡುತ್ತಿದ್ದಿರಿ, ಎಷ್ಟು ಬಾರಿ ಅತ್ತಿದ್ದೀರಿ, ನಿಮ್ಮ ಸಂಬಂಧ ಯಾರಿಗೂ ತಿಳಿಯದಂತೆ ಹೇಗೆ ಮುಚ್ಚಿಡುತ್ತಿದ್ದರು ಎಲ್ಲವನ್ನೂ ನೆನಪು ಮಾಡಿಕೊಳ್ಳಿ. ಇಂಥ ವ್ಯಕ್ತಿಯ ಜೊತೆ ತಪ್ಪಿದ್ದಕ್ಕಾಗಿ ಸಂತೋಷ ಪಡಿ. ಸ್ಟ್ರಾಂಗ್ ಆಗಿ ಇರುವುದೊಂದೇ ಆಯ್ಕೆ ನಿಮ್ಮ ಮುಂದಿರುವಾಗ ಮಾತ್ರ ನೀವು ಎಷ್ಟು ಸ್ಟ್ರಾಂಗ್ ಎಂಬುದು ನಿಮಗೆ ತಿಳಿದುಬರುತ್ತದೆ ಎಂಬುದನ್ನು ನೆನಪಿಡಿ.