ಬರಿ ಸ್ನೇಹಿತೆಯಾದ ಮಾತ್ರಕ್ಕೆ ಕೈ ಕೈ ಹಿಡಿದು ನಡೆಯುತ್ತಾಳಾ? ತೊಡೆಯ ಮೇಲೆ ಮಲಗಿಸಿಕೊಂಡು ಸಮಾಧಾನ ಮಾಡುತ್ತಾಳಾ? ತೀರಾ ಪ್ರೀತಿ ಅಂದುಕೊಂಡರೆ ಆರು ತಿಂಗಳಿಗೆ, ಮೂರು ತಿಂಗಳಿಗೊಮ್ಮೆ ಫೋನು ಭೇಟಿ ಯಾಕೆ? ಪ್ರೀತಿಯಲ್ಲಿರುವಂತೆ ವಿಚಿತ್ರವಾದ ಪೊಸೆಸಿವ್‌ನೆಸ್‌, ಹೇರಿಕೆಗಳು, ಅಪ್ಪುಗೆಯಲ್ಲಿನ ಭಿನ್ನವಾದ ಕನಲಿಕೆಗಳು ಯಾಕಿಲ್ಲ? ಜಸ್ಟ್‌ ಮೂರು ಮತ್ತೊಂದರಂತಾಗಿದ್ದರೆ ಆರೇಳು ತಿಂಗಳಿಗೆ ಯಾಕೆ ಮುಖ ತಿರುಗಿಸಿಕೊಂಡು ಹೋಗಲಿಲ್ಲ. ಹಾಗಾದರೆ ಇದೇನಿದು? ನನಗೂ ಗೊತ್ತಿಲ್ಲ, ಸಾರಿ ಇಲ್ಲಿ ಎಲ್ಲಕ್ಕೂ ಹೆಸರುಗಳಿರುವುದಿಲ್ಲ.

ನನಗೆ ಆಗಾಗ್ಗೆ ಅವಳ ನೆನಪಾಗುತ್ತದೆ. ನೆನಪಾದ ತಕ್ಷಣ ನಂಬರ್‌ ಡಯಲ್‌ ಮಾಡಿ ಹಲೋ ಅನ್ನುವುದಿಲ್ಲ. ಆ ನೆನಪು ಖುಷಿಯೊಂದನ್ನು ತುಟಿಯ ಮೇಲೆ ಹಿತವಾಗಿ ನಗು ತಂದಿಟ್ಟು ಹೋಗುತ್ತದೆ. ಹಾಗಂತ ನಾನು ಅವಳಿಗೆ ಫೋನ್‌ ಮಾಡುವುದೇ ಇಲ್ಲ ಅಂತಲ್ಲ. ಎಂದೊ ಒಮ್ಮೆ ಸುಮ್ಮನೆ ರಿಂಗಣಿಸಿ ‘ಹೇಗಿದ್ದೀಯಾ?’ ಅಂತೀನಿ. ದೂರುಗಳಿರುವುದಿಲ್ಲ, ಡಿಮ್ಯಾಂಡ್‌ಗಳಿರುವುದಿಲ್ಲ. ಆಕೆ ನಗಿಸುತ್ತಾಳೆ, ನಾನು ರೇಗಿಸುತ್ತೇನೆ.

ಇನ್ನೂ ಮಾತನಾಡಬೇಕಿತ್ತು ಅಂತ ಫೋನಿಟ್ಟು ಬಿಡುತ್ತೇನೆ. ಅವತ್ತೇ ಸಂಜೆ ಮತ್ತೆ ಫೋನಿಗೆ ತಾಕಿಕೊಂಡು ಮಾತಿಗಿಳಿಯುವುದಿಲ್ಲ. ಅವಳು ಮತ್ತೆಂದು ಕರೆ ಮಾಡುತ್ತಾಳೆ? ಗೊತ್ತಿಲ್ಲ. ನಾನಂತೂ ತುಂಬಾ ಮೂಡಿ; ಮಾಡಿದರೆ ಮಾಡಿದೆ ಇಲ್ಲ ಅಂದರೆ ಇಲ್ಲ. ಮತ್ತೆ ಅದೆಷ್ಟುತಿಂಗಳೋ!

ನಾವು ಭೇಟಿಯಾಗಿದ್ದು ಹೆಚ್ಚೆಂದರೆ ಏಳೆಂಟು ಸಲವೇ ಇರಬೇಕು. ಪದೇ ಪದೇ ಭೇಟಿಯಾಗಬೇಕು ಅನ್ನುವ ತುಡಿತವೇನು ಇರುವುದಿಲ್ಲ. ಆದರೆ ಪ್ರತಿ ಭೇಟಿಯಲ್ಲೂ ಇಬ್ಬರೂ ಕೈ ಕೈ ಹಿಡಿದು ಅದೆಷ್ಟೊದೂರ ನಡೆಯುತ್ತೇವೆ. ದೇಹಕ್ಕೆ ಸಲುಗೆಗಳಿಲ್ಲ ಆದರೆ ಮಾತಿಗೆ ಸಲುಗೆಯ ನಿರ್ಬಂಧವಿಲ್ಲ. ನಾವಿಬ್ಬರೂ ಹೀಗೆ ದಿನಪೂರ್ತಿ ಬೆರೆತು ಕಳೆಯುವಾಗ ಅಂಗಳದ ಮಣ್ಣಿನಲ್ಲಿ ಆಡುವ ಥೇಟ್‌ ಮಕ್ಕಳಾಗಿ ಬಿಡುತ್ತವೆ.

ಆಕೆಯ ನೆನಪಾದಾಗಲೆಲ್ಲ ಒಮ್ಮೆಲೆ ಏಸಿ ರೂಮಿನೊಳಗೆ ನುಗ್ಗಿದಂತಹ ತಂಪಾಗುತ್ತದೆ. ನಮ್ಮ ನಡುವೆ ಅಂತಹ ದೊಡ್ಡ ನಿರೀಕ್ಷೆಗಳೇನು ಇಲ್ಲ. ಇದ್ರೆ ಇರ್ತಾಳೆ ಹೋದ್ರೆ ಹೋಗ್ತಾಳೆ ಅನ್ನುವ ಉಡಾಫೆ ಇಲ್ಲ. ನಮ್ಮ ನಡುವೆ ದುಡ್ಡು ಬರುವುದಿಲ್ಲ. ಬಂದರೂ ನಾವು ಬಿಟ್ಟುಕೊಳ್ಳುವುದಿಲ್ಲ. ಪೊಸೆಸಿವ್‌ನೆಸ್‌ ಅಂತೂ ಕೇಳಲೇಬೇಡಿ.

ಅಹಂಕಾರ ಹುಟ್ಟಲೇ ಇಲ್ಲ ನೋಡಿ. ಅವಳ ಕಷ್ಟವನ್ನು ಸುಖವನ್ನು ದೂರದಿಂದಲೇ ಗಮನಿಸುತ್ತಿರುತ್ತೇನೆ. ಅವತ್ತೊಂದಿನ ನಾನು ಕೆಲಸ ಮಾಡುವ ಜಾಗಕ್ಕೆ ಬಂದು ಕೈಯಲ್ಲಿ ಐವತ್ತು ಸಾವಿರ ಇಟ್ಟು ಬಿಟ್ಟಿದ್ದಳು. ಅಮ್ಮನಿಗೆ ಹುಷಾರಿಲ್ಲದಿರುವುದನ್ನು ನಾನು ಅವಳಿಗೆ ಹೇಳಿರಲಿಲ್ಲ. ಆಸ್ಪತ್ರೆ ಖರ್ಚಿಗೆ ಏನು ಮಾಡ್ತೀಯಾ? ಏನೋ? ಇಟ್ಕೋ ಅಂದಿದ್ದಳು. ಆದರೆ ನನ್ನಲ್ಲಿ ಹಣವಿತ್ತು, ಅದನ್ನು ಅಷ್ಟೇ ನಯವಾಗಿ ತಿರಸ್ಕರಿಸಿದೆ.

ನಾನು ಹೇಳದಿದ್ದರೂ ನನ್ನ ಕಷ್ಟಗಳನ್ನು ಅಲ್ಲೆಲ್ಲೋ ದೂರದಲ್ಲಿದ್ದು ಗಮನಿಸಿದ್ದಳಲ್ಲ, ಅದೊಂದೇ ಸಾಕು. ಈ ದುಡ್ಡಿನಿಂದ ಅದೆಲ್ಲ ಕಳೆದುಕೊಳ್ಳಬೇಕು. ನನಗೆ ದುಡ್ಡು ಎಂದರೆ ಭಯ. ನನಗವಳ ಹುಟ್ಟಿದ ತಾರೀಖು ಗೊತ್ತು ಆದರೆ ವರ್ಷ ಗೊತ್ತಿಲ್ಲ. ತಿಳಿದುಕೊಳ್ಳಬಾರದು ಅನ್ನುವುದು ನನ್ನ ಉದ್ದೇಶ. ಹಿರಿಯವಳಾ? ಚಿಕ್ಕವಳಾ? ಅಂತ ಗೊತ್ತಾದಮೇಲೆ ಮನಸ್ಸು ಅದರಲ್ಲಿ ಮತ್ತೀನ್ನೇನೊ ಹುಡುಕ ತೊಡಗುತ್ತದೆ.

ನಾವು ಪರಸ್ಪರ ಹೆಸರಿನಿಂದಲೇ ಕರೆದುಕೊಳ್ಳುತ್ತೇವೆ. ಹೆಚ್ಚೆಂದರೆ ಅವಳು ಡುಮ್ಮ ಅಂತಾಳೆ, ನಾನು ರಾಣಿ ಅಂತೀನಿ. ಆಮೇಲೆ ಇಬ್ಬರು ಒಟ್ಟಿಗೆ ನಕ್ಕು ಬಿಡ್ತೀವಿ. ತುಂಬಾ ದಿನ ಸಿಗದೆ ಇದ್ದಾಗ ಫೋನ್‌ ಬರದೆ ಇದ್ದಾಗ ಎಲ್ಲಿ ಹೋಗ್ತಾಳೆ ಬಿಡು ಭೂಮಿ ಗುಂಡಗಿದೆ ಸಿಗದೇ ಎಲ್ಲಿ ಹೋಗ್ತಾಳೆ ಅಂತ ಅಂದ್ಕೋತೀನಿ. ನಾವು ಈ ಬಂಧವನ್ನು ಕಳೆದುಕೊಳ್ಳುತ್ತೀವಿ ಅಂತ ಭಯವಿಲ್ಲ. ನಾವು ಇದೀವಿ, ಇರ್ತೀವಿ ಅಷ್ಟೇ ಅಂತಾಳೆ. ಇದೊಂದು ಮೆಚುರಿಟಿಯಾ? ಅವೆಲ್ಲ ನನಗೆ ಗೊತ್ತಿಲ್ಲ.

ಮೊನ್ನೆ ಸ್ನೇಹಿತನೊಬ್ಬ ಇದೆಲ್ಲಾ ನಿನ್ನ ಹೆಂಡತಿಗೆ ಗೊತ್ತಾ? ಅಂತ ಕೇಳಿದ್ದ. ಯಾವುದೆಲ್ಲಾ ಅಂತ ಕೇಳಬೇಕು ಅಂದುಕೊಂಡು ಸುಮ್ಮನಾದೆ. ನನ್ನ ನಡುವೆ ಯಾವುದೆಲ್ಲಾ ಇದೆ ಅನ್ನುವುದು ನನಗೂ ಆಶ್ಚರ್ಯವಾಗಿ ನಕ್ಕು ಬಿಟ್ಟೆ. ಅವನು ಕೇಳಿದ ರೀತಿಯಲ್ಲಿಯೇ ಅವನ ಉದ್ದೇಶವೇನು ಅನ್ನುವುದು ಸ್ಪಷ್ಟವಿತ್ತು. ಇವರು ನಿಮ್ಮ ಹೆಂಡತಿಗೆ ಪರಿಚಯನಾ? ಅಂತ ಕೇಳಿದರೆ ಅರ್ಥದ ಸೊಬಗೇ ಬೇರೆ. ಹೋಗ್ಲಿ ಬಿಡಿ ಜಗತ್ತೇ ಹಾಗೆ ಅವನು ಅದರ ಪ್ರತಿನಿಧಿ ಅಷ್ಟೇ.

ನಾನು ಕೂಡ ಯಾರೋ ಒಬ್ಬ ಹುಡುಗ ಹುಡುಗಿ ನಮ್ಮ ಹಾಗೆ ಇರುವುದನ್ನು ಹೊರಗಿನಿಂದ ನೋಡಿ ತನ್ನಷ್ಟಕ್ಕೆ ತಾನೇ ಏನಾದರೊಂದು ಸಂಬಂಧವನ್ನು ಕಲ್ಪಿಸಿಕೊಳ್ಳಲಾರೇನೆ? ಹೆಂಡತಿಯಾದವಳಿಗೆ ಹೇಳಿಕೊಂಡರೆ ಅಲ್ಲೇನು ಇಲ್ಲದೆ ಇರುವುದಕ್ಕೆ ಮೂಡುವ ಅರ್ಥಗಳು, ಅರ್ಥೈಸಲ್ಪಡುವ ವಿಚಿತ್ರ ಸಂಬಂಧದ ಲೇಬಲ್‌ಗಳು ನನಗೆ ವಾಕರಿಕೆ ಬರಿಸುತ್ತದೆ.

ಕೆಲವೊಂದು ಗೊತ್ತಾಗುವುದಕ್ಕಿಂತ ಗೊತ್ತಾಗದೇ ಇರುವುದು ವಾಸಿ. ಅವಳು ಮತ್ತು ನನ್ನ ನಡುವೆ ಇರುವ ತಪ್ಪಾದರೂ ಯಾವುದು? ತಪ್ಪುಗಳು ಸಂಬಂಧದಲ್ಲಿಲ್ಲ. ಅರ್ಥಮಾಡಿಕೊಳ್ಳುವವರ ಮನಸ್ಸಿನಲ್ಲಿದೆ.

ಯಾವುದು ಈ ಬಂಧ? ಬರಿ ಸ್ನೇಹಿತೆಯಾದ ಮಾತ್ರಕ್ಕೆ ಕೈ ಕೈ ಹಿಡಿದು ನಡೆಯುತ್ತಾಳಾ? ತೊಡೆಯ ಮೇಲೆ ಮಲಗಿಸಿಕೊಂಡು ಸಮಾಧಾನ ಮಾಡುತ್ತಾಳಾ? ತೀರಾ ಪ್ರೀತಿ ಅಂದುಕೊಂಡರೆ ಆರು ತಿಂಗಳಿಗೆ, ಮೂರು ತಿಂಗಳಿಗೊಮ್ಮೆ ಫೋನು ಭೇಟಿ ಯಾಕೆ? ಪ್ರೀತಿಯಲ್ಲಿರುವಂತೆ ವಿಚಿತ್ರವಾದ ಪೊಸೆಸಿವ್‌ನೆಸ್‌, ಹೇರಿಕೆಗಳು, ಅಪ್ಪುಗೆಯಲ್ಲಿನ ಭಿನ್ನವಾದ ಕನಲಿಕೆಗಳು ಯಾಕಿಲ್ಲ?

ಜಸ್ಟ್‌ ಮೂರು ಮತ್ತೊಂದರಂತಾಗಿದ್ದರೆ ಆರೇಳು ತಿಂಗಳಿಗೆ ಯಾಕೆ ಮುಖ ತಿರುಗಿಸಿಕೊಂಡು ಹೋಗಲಿಲ್ಲ. ಹಾಗಾದರೆ ಇದೇನಿದು? ನನಗೂ ಗೊತ್ತಿಲ್ಲ, ಗೊತ್ತು ಮಾಡಿಕೊಳ್ಳುವ ಅವಶ್ಯಕತೆಯೂ ಇಲ್ಲ. ಸಾರಿ ಇಲ್ಲಿ ಎಲ್ಲಕ್ಕೂ ಹೆಸರುಗಳಿರುವುದಿಲ್ಲ.

- ಸದಾಶಿವ್‌ ಸೊರಟೂರು