ಒಳ್ಳೆ ಗಂಡನಿದ್ರೂ ಪರ ಪುರುಷನ ಜೊತೆ ಸಂಬಂಧ ಬೆಳೆಸಿದ್ದಾಳೆ ಸ್ನೇಹಿತೆ, ಏನು ಹೇಳೋದು ಈಕೆಗೆ?
ವಿವಾಹೇತರ ಸಂಬಂಧಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಅನೇಕ ಸಂಸಾರದಲ್ಲಿ ಯಾವುದೇ ಸಮಸ್ಯೆಗಳೇ ಇರೋದಿಲ್ಲ. ಪ್ರೀತಿ ತುಂಬಿದ ಕುಟುಂಬವಿದ್ರೂ ಮನಸ್ಸು ಬೇರೆಡೆ ವಾಲುತ್ತದೆ. ಈ ಮಹಿಳೆ ಕಥೆ ಇದಕ್ಕಿಂತ ಭಿನ್ನವಾಗಿಲ್ಲ.
ಸ್ನೇಹ ಬರೀ ಖುಷಿ ಹಂಚಿಕೊಳ್ಳೋದು ಮಾತ್ರವಲ್ಲ ಸ್ನೇಹಿತರ ಮಧ್ಯೆ ಸುಖ, ದುಃಖ ಎಲ್ಲವೂ ವಿನಿಮಯವಾಗ್ಬೇಕು. ಆಪ್ತ ಸ್ನೇಹಿತರು ತಮ್ಮೆಲ್ಲ ಭಾವನೆಗಳನ್ನು ಬಿಚ್ಚಿಡ್ತಾರೆ. ಸಲಹೆಗಳನ್ನು ಕೇಳ್ತಾರೆ. ಸ್ನೇಹಿತನಾದವನು ತನ್ನ ಗೆಳೆಯ ದಾರಿ ತಪ್ಪುತ್ತಿದ್ದಾನೆ ಎಂದಾಗ ಆತನಿಗೆ ಬುದ್ದಿ ಹೇಳಿ ಸರಿ ದಾರಿಗೆ ತರುವ ಹಕ್ಕನ್ನು ಹೊಂದಿದ್ದಾನೆ. ಪ್ರತಿಯೊಬ್ಬರಿಗೂ ಅವರದೇ ಆದ ಜೀವನವಿರುತ್ತದೆ ನಿಜ. ಆದ್ರೆ ಕಣ್ಮುಂದೆಯೇ ಸ್ನೇಹಿತರ ಬಾಳು ಹಾಳಾಗೋದನ್ನು ನೋಡೋದು ಕಷ್ಟ. ಆ ಸಂದರ್ಭದಲ್ಲಿ ಅವರಿಗೆ ಬುದ್ಧಿ ಹೇಳುವುದು ಸ್ನೇಹಿತನ ಕರ್ತವ್ಯ. ಇಲ್ಲೊಬ್ಬ ಮಹಿಳೆ ಈಗ ಇದೇ ಇಕ್ಕಟ್ಟಿಗೆ ಸಿಲುಕಿದ್ದಾಳೆ. ಆಕೆ ಕಣ್ಮುಂದೆಯೇ ಸ್ನೇಹಿತೆ ಬಾಳು ಹಾಳಾಗ್ತಿದೆ. ದಾಂಪತ್ಯ ದಾರಿ ತಪ್ಪುತ್ತಿದೆ. ಎಲ್ಲ ವಿಷ್ಯ ತಿಳಿದೂ ಆಕೆ ಗಂಡನಿಗೆ ಏನನ್ನೂ ಹೇಳುವ ಸ್ಥಿತಿಯಲ್ಲಿ ಈ ಮಹಿಳೆಯಿಲ್ಲ. ಜೊತೆಗೆ ಸ್ನೇಹಿತೆಯನ್ನು ಹೇಗೆ ಸರಿ ಮಾರ್ಗಕ್ಕೆ ತರಬೇಕು ಎಂಬುದು ಗೊತ್ತಾಗ್ತಿಲ್ಲ.
ಆಕೆ ವಿವಾಹಿತ ಮಹಿಳೆ. ಆಕೆ ಸಂಸಾರ (Family) ದಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದ್ರೆ ಸ್ನೇಹಿತೆ (Friend) ಸಂಸಾರವೇ ಮಹಿಳೆಗೆ ಈಗ ದೊಡ್ಡ ತಲೆನೋವಾಗಿದೆ. ಸ್ನೇಹಿತೆಗೂ ವಿವಾಹ (Marriage) ವಾಗಿದೆ. ಪತಿ ಆಕೆಯನ್ನು ತುಂಬಾ ಪ್ರೀತಿ ಮಾಡ್ತಾನಂತೆ. ಆದ್ರೆ ಸ್ನೇಹಿತೆ ದಾರಿ ತಪ್ಪಿದ್ದಾಳಂತೆ. ಆಕೆ ಅಕ್ರಮ ಸಂಬಂಧ ಬೆಳೆಸಿದ್ದಾಳಂತೆ. ಅಕ್ರಮ ಸಂಬಂಧದ ಬಗ್ಗೆ ಸ್ನೇಹಿತೆ ಬಿಡಿಬಿಡಿಯಾಗಿ ಎಲ್ಲವನ್ನೂ ಮಹಿಳೆ ಮುಂದೆ ಹೇಳಿದ್ದಾಳೆ. ಪತಿಗೆ ಹೇಗೆ ಮೋಸ ಮಾಡ್ತಿದ್ದೇನೆ ಎಂಬುದನ್ನೂ ಹೇಳಿದ್ದಾಳೆ. ಈ ವಿಷ್ಯ ಕೇಳಿದ ಮಹಿಳೆ ಶಾಕ್ (Shock) ಗೆ ಒಳಗಾಗಿದ್ದಾಳೆ. ಆದ್ರೆ ಪತಿಗೆ ಮೋಸ ಮಾಡ್ತಿರುವ ಸ್ನೇಹಿತೆಗೆ ಕಿಂಚಿತ್ತು ವೇದನೆಯಿಲ್ಲ ಎನ್ನುತ್ತಾಳೆ ಮಹಿಳೆ. ಆಕೆ ಗಂಡ, ಪತ್ನಿಯನ್ನು ಅತಿಯಾಗಿ ಪ್ರೀತಿ ಮಾಡ್ತಾನೆ. ನನಗೆ ವಿಷ್ಯ ತಿಳಿದ್ಮೇಲೆ ನಿದ್ರೆ ಬರ್ತಾ ಇಲ್ಲ. ಸ್ನೇಹಿತೆಗೆ ಏನು ಹೇಳಲಿ ಎಂದು ಪ್ರಶ್ನೆ ಕೇಳಿದ್ದಾಳೆ.
ತಜ್ಞ (Expert ) ರ ಸಲಹೆ : ವಿವಾಹೇತರ ಸಂಬಂಧ (Extra Marital Affair) ಈಗ ಕಾಮನ್ ಎನ್ನುತ್ತಾರೆ ತಜ್ಞರು. ಮೂವರಲ್ಲಿ ಒಬ್ಬರು ಇಂಥ ಸಂಬಂಧ ಹೊಂದಿದ್ದಾರೆ. ನಿಮ್ಮ ಸ್ನೇಹಿತೆ ಕೂಡ ಇದ್ರಲ್ಲಿ ಒಬ್ಬರು. ಸ್ನೇಹಿತೆ ಎಲ್ಲವನ್ನೂ ನಿಮ್ಮ ಮುಂದೆ ಹೇಳಿಕೊಂಡಿದ್ದಾಳೆ ಎಂದಾದ್ಮೇಲೆ ನೀವು ಅದನ್ನು ಗುಟ್ಟಾಗಿ ಕಾಪಾಡಿಕೊಳ್ಳಬೇಕು ಎನ್ನುತ್ತಾರೆ ತಜ್ಞರು. ಹಾಗೆಯೇ ಆಕೆ ಜೊತೆ ಮಾತನಾಡುವುದು ಮುಖ್ಯ ಎನ್ನುತ್ತಾರೆ ತಜ್ಞರು.
ಸ್ನೇಹಿತೆ ಎಂಬ ಸಲಿಗೆಯಲ್ಲಿ ಆಕೆ ಮುಂದೆ ದೊಡ್ಡ ದನಿಯಲ್ಲಿ ಮಾತನಾಡುವುದು ಒಳ್ಳೆಯದಲ್ಲ. ಮೊದಲು ಆಕೆ ವಿವಾಹೇತರ ಸಂಬಂಧ ಬೆಳೆಸಲು ಕಾರಣವೇನು ಎಂಬುದನ್ನು ತಿಳಿಯುವ ಪ್ರಯತ್ನ ನಡೆಸಿ ಎಂದಿದ್ದಾರೆ. ಆಕೆ ಬೇರೊಬ್ಬ ವ್ಯಕ್ತಿಗೆ ಆಕರ್ಷಿತಳಾಗಲು ಕಾರಣವೇನು ಹಾಗೆ ಈಗಿನ ಸಂಬಂಧದಲ್ಲಿ ಏನೆಲ್ಲ ಸಮಸ್ಯೆಯಿದೆ ಎಂಬುದನ್ನು ನೀವು ಅರಿತಾಗ ಅದಕ್ಕೆ ಒಂದು ಪರಿಹಾರ ಕಂಡುಕೊಳ್ಳಬಹುದು ಎಂಬುದು ತಜ್ಞರ ಮಾತು.
ಸ್ನೇಹಿತೆ ಜೊತೆ ನಿಧಾನವಾಗಿ ಮಾತನಾಡಿ. ಆಕೆ ಮಾಡ್ತಿರುವ ಕೆಲಸ ನಿಮಗೆ ಸೂಕ್ತವೆನ್ನಿಸುತ್ತಿಲ್ಲ ಎಂಬುದನ್ನು ಆಕೆಗೆ ಹೇಳಿ. ಪತಿಗೆ ಮೋಸ ಮಾಡುವುದ್ರಿಂದ ಅಥವಾ ಅಕ್ರಮ ಸಂಬಂಧದಿಂದ ಏನೆಲ್ಲ ನಷ್ಟ ಅನುಭವಿಸಬೇಕು ಎಂಬುದನ್ನು ಹೇಳಿ. ಅಕ್ರಮ ಸಂಬಂಧ ಶಾಶ್ವತವಲ್ಲ ಎಂಬುದನ್ನು ತಿಳಿ ಹೇಳಿ ಎಂದಿದ್ದಾರೆ ತಜ್ಞರು.
ವಿವಾಹ, ವಿವಾಹೇತರ ಸಂಬಂಧ ಎಲ್ಲವೂ ವೈಯಕ್ತಿಕ ವಿಚಾರಗಳು. ನೀವು ಸ್ನೇಹಿತೆ ಎನ್ನುವ ಕಾರಣಕ್ಕೆ ಆಕೆಗೆ ಸಲಹೆ ನೀಡಬಹುದೇ ವಿನಃ ಆಕೆ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ. ಹಾಗೆ ಆಕೆಗೆ ಶಿಕ್ಷೆ ನೀಡಲು ಸಾಧ್ಯವಿಲ್ಲ. ನಿಮ್ಮ ಅಭಿಪ್ರಾಯವನ್ನು ಮುಂದಿಡಿ. ಆಕೆ ಅದನ್ನು ಅರ್ಥೈಸಿಕೊಂಡ್ರೆ ಸರಿ, ಇಲ್ಲವೆಂದ್ರೆ ಈ ವಿಷ್ಯವನ್ನು ಬಿಡ್ಬಿಡಿ ಎನ್ನುತ್ತಾರೆ ತಜ್ಞರು.