ಅಪ್ಪ ಹಿಟ್ಲರ್ ಅಲ್ಲ, ಹೀರೋ!

ಅಪ್ಪನನ್ನು ಬಾಲ್ಯದಲ್ಲಿ ಅರ್ಥ ಮಾಡಿಕೊಳ್ಳುವ ರೀತಿಯೇ ಬೇರೆ. ಯೋಚನಾ ಶಕ್ತಿ ಬಂದ ಮೇಲೆ ಅರ್ಥವಾಗುವ ಅಪ್ಪನೇ ಬೇರೆ. ಈ ವಿದ್ಯಾರ್ಥಿನಿ ತನ್ನಪ್ಪನ ಬಗೆಗೆ ಹೇಳಿದ್ದಿಷ್ಟು...

Father is not a hitler skr

ಸಿಂಧು ಹೆಗಡೆ, ಎಸ್. ಡಿ. ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ

ನನ್ನಪ್ಪ ಒಂದಿನವು ಐ ಲವ್ ಯು ಮಗಳೇ ಎಂದಿಲ್ಲ. ಹ್ಯಾಪಿ ಬರ್ತಡೇ ಎಂದು ಒಮ್ಮೆಯೂ ವಿಶ್ ಮಾಡಿಲ್ಲ. ನನಗೆ ಅಪ್ಪ ನನ್ನನು ತಬ್ಬಿಕೊಂಡ ನೆನಪಿಲ್ಲ! ಹಾಸ್ಟೆಲ್ನಲ್ಲಿ ಇರುವ ನಾನು ಒಂದುದಿನವು ಅಪ್ಪನಿಗೆ ಕರೆ ಮಾಡಿ ಅಪ್ಪ ಹೆಂಗಿದ್ದೆ? ಎಂದು ಕೇಳಿಲ್ಲ. ಆದರೂ ಎಲ್ಲರಂತೆ ನಂಗೂ ಅಪ್ಪ ಅಂದ್ರೆ ಒಂತರಾ ಭಯ ಒಂದ್ ರಾಶಿ ಪ್ರೀತಿ! ಹತ್ತನೇ ಕ್ಲಾಸಲ್ಲಿ ಕಡಿಮೆ ಮಾರ್ಕ್ಸ್ ಬಂದಾಗ ಬೈಯ್ಯಲಿಲ್ಲ ಬದಲಾಗಿ ಓದಿದ್ರೆ ಟಾಪರ್ ಆಗ್ತಿದ್ದೆ ಮಂಗ ಎಂದಿದ್ರು. ಗಾಡಿ ಕಲಿಯುವಾಗ ಬಿದ್ದು ಒಂದಷ್ಟು ಖರ್ಚು ಮಾಡಿಸಿದಾಗಲು, ಈಗ ಮಾಡಿದ ತಪ್ಪನ್ನ ಮತ್ತೆ ಮಾಡಬೇಡ ಮಗಳೇ ಎಂದಷ್ಟೇ ಹೇಳಿದ್ರು.

ಮೊದಲೆಲ್ಲಾ ನಮ್ಮಪ್ಪ ತುಂಬಾ ಓದಿಲ್ಲ ಅಷ್ಟು ತಿಳಿದಿಲ್ಲ, ಚನ್ನಾಗಿ ಮಾತಡಲ್ಲ ಅದಕ್ಕೆ ಶಾಲೆಯ ಪಾಲಕರ ಸಭೆಗೆ ಅಮ್ಮನ್ನೇ ಕಳಿಸ್ತಾರೆ, ಹೀಗೆ ಏನೇನೋ ಅಂದುಕೊಂಡಿದ್ದೆ. ಆದ್ರೆ ಬುದ್ಧಿ ಬಂದಮೇಲೆ ಗೊತ್ತಾಗಿದ್ದು ಅಪ್ಪ ನಾನಂದುಕೊಂಡಂತಲ್ಲ. ಪೊಲಿಟಿಕಲ್ ಸೈನ್ಸ್, ಜರ್ನಲಿಸಂ ಓದಿದ ನಾನು ಅಪ್ಪನ ಮುಂದೆ ಸಪ್ಪೆ! ಕೆಲವೊಮ್ಮೆ, ನಮ್ಮಪ್ಪ ಓದಿದ್ರೆ ಇಷ್ಟೊತ್ತಿಗೆ ಎಲ್ಲೋ ಇರ್ತಿದ್ರು ಅನ್ನಿಸುತ್ತೆ.

ಬದುಕಿನ ದೊಡ್ಡ ಅಲೆಗಳಿಗೆ ಬೆದರದೆ ಈಜೋದು ಹೇಳಿಕೊಟ್ಟ ಅಪ್ಪ!

ನನ್ನ ಒಂದು ಬರಹ ಪ್ರಕಟಗೊಂಡರೆ ಯಾವುದೋ ವಿಡಿಯೋದಲ್ಲಿ ನಾನು ಕಾಣಿಸಿಕೊಂಡರೆ ಅಪ್ಪ ಉರಿಗೆಲ್ಲಾ ತೋರಿಸಿ ಖುಷಿ ಪಡುತ್ತಾರೆ . ಕ್ಷೇತ್ರದ ಎಂ.ಎಲ್.ಎ ನಮ್ಮ ಮನೆಗೆ ಬಂದಾಗೆಲ್ಲಾ 'ನನ್ನ ಮಗಳ ಓದು ಮುಗಿಲಿ, ಮೈಕ್ ಹಿಡಿದು ನಿಮ್ಮ ಇಂಟರ್ವ್ಯೂ ಮಾಡ್ತಾಳೆ' ಎಂದು ಹೆಮ್ಮೆ ಪಡುತ್ತಾರೆ. ಪ್ರತಿಬಾರಿ ನಾನು ಹಾಸ್ಟೆಲ್ ನಿಂದ ಮನೆಗೆ ಹೋದಾಗಲೂ ' ಅಯ್ಯೋ ಮಗಾ ಮುಂದಿನ ಸಲ ನೀನು ಬರೋವಾಗ ಬಾಗಿಲು ಅಗಲ ಮಾಡಿಸ್ತೆ, ಹಿಂಗೆ ದಿನಾ ದಿನಾ ನೀನು ಡುಮ್ಮಿ ಆಗ್ತಿದ್ರೆ ಮುಂದಿನ ಸಲ ಈ ಬಾಗಿಲಲ್ಲಿ ಬರೋದು ಕಷ್ಟ' ಎಂದು ಹೀಯಾಳಿಸಿ ನಗುವ ಅಪ್ಪ ಮನೆಯಿಂದ ಹೊರಡುವ ಮೊದಲು ನನ್ನಿಷ್ಟದ ಕುರುಕುಲು ತಿಂಡಿಗಳನ್ನು ಸ್ಪೆಷಾಲ್ಲಾಗಿ ಹೇಳಿ ಮಾಡಿಸಿ ತರುತ್ತಾರೆ. ಈ ಬಾರಿಯಂತೂ ನನಗಿಷ್ಟ ಎಂದು ಹಲಸಿನ ಸೀಜನ್ ಮುಗಿದಿದ್ದರು ಎಲ್ಲಿಂದಲೋ ಹಲಸಿನ ಕಾಯಿ ತಂದು ಚಿಪ್ಸ್ ಮಾಡಿ ಕಳಿಸಿದ್ರು.

ನನ್ನನೂ ಸೇರಿ ಬಹುತೇಕರಿಗೆ ಜೀವನದ ಒಂದಲ್ಲಾ ಒಂದು ಘಟ್ಟದಲ್ಲಿ ಅಪ್ಪ ಹಿಟ್ಲರ್ ಅಂತೆ ಕಂಡಿರುತ್ತಾರೆ. ಈ ಕಾಲದ ಅಪ್ಪಂದಿರು ಸ್ನೇಹಿತರಂತಿದ್ದರೂ ನಾವು ಅಮ್ಮನೊಂದಿಗೆ ಬೆರೆಯುವಷ್ಟು ಅಪ್ಪನೊಂದಿಗೆ ಬೆರೆಯುವುದು ಕಡಿಮೆ. ಅಪ್ಪನ ಬಳಿ ಏನಾದರೂ ಕೇಳಲು ಹೇಳಲು ನಮಗೆ ಅಮ್ಮನ ಮಧ್ಯಸ್ಥಿಕೆ ಬೇಕು. ಅಪ್ಪನೂ ಅಷ್ಟೆ ತನ್ನೆಲ್ಲಾ ಭಾವನೆಗಳನ್ನು  ಸುಲಭವಾಗಿ ತೋರ್ಪಡಿಸುವುದಿಲ್ಲ.  
ಅಪ್ಪ ಕೈ ಹಿಡಿದು ಹೋಮ್ ವರ್ಕ್ ಮಾಡಿಸದಿರಬಹುದು, ಅಮ್ಮನಂತೆ ಕೈತುತ್ತು ತಿನ್ನಿಸದಿರಬಹುದು, ಮುದ್ದು ಮಾಡಿ ಶಾಲೆಗೆ ಕಳಿಸದಿರಬಹುದು ಆದ್ರೆ ಅಪ್ಪ ತನ್ನ ಜೀವನವನ್ನೇ ಸಂಸಾರಕ್ಕಾಗಿ ಮೀಸಲಿಡುತ್ತಾರೆ. ನಾವು ತಪ್ಪು ಮಾಡಬಾರದೆಂದು ಅಪ್ಪ ವಹಿಸುವ ಮುಂಜಾಗ್ರತಾ ಕ್ರಮಗಳೆಲ್ಲ ಅಪ್ಪನನ್ನು ವಿಲನ್ ಆಗಿ ಬಿಂಬಿಸಿರಬಹುದು. ನಾವು ತಿರುಗಿ ನಿಂತು  ಬೈದರೂ ಕಿಂಚಿತ್ತೂ ಬೇಸರಗೊಳ್ಳದೆ ಹೊಡೆಯುವಾಗ ಹೊಡೆದು, ಗದರುವಾಗ ಗದರಿ ವಿಲನ್ ಆಗಿದ್ದುಕೊಂಡೇ ನಮ್ಮ ಭವಿಷ್ಯ ರೂಪಿಸುವ ಮಾರ್ಗದರ್ಶಕ ಅಪ್ಪ. ಯಾರು ಏನೇ ಕೇಳಿದರೂ ಇಲ್ಲ ಎನ್ನದ ಉದಾರಿ ಅಪ್ಪನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ! ಹ್ಯಾಪಿ ಫಾದರ್ಸ್ ಡೇ ಅಪ್ಪ.

 

Latest Videos
Follow Us:
Download App:
  • android
  • ios