Asianet Suvarna News Asianet Suvarna News

ದೇವರಾದರೆ ಏನಂತೆ, ಅಪ್ಪನೇ ಮೊದಲಂತೆ..!

ಅಪ್ಪನ ಬಗ್ಗೆ ನೀವು ಈವರೆಗೂ ಅದೆಷ್ಟೋ ಕವಿತೆ ಓದಿರಬಹುದು, ಆದರೆ ಈ ತಮಿಳು ಕವಿತೆ ಓದುತ್ತಿದ್ರೆ ಕಣ್ಣೀರಧಾರೆ. ಕಡು ಬಡ ತಂದೆಯೊಬ್ಬ, ಮಗಳನ್ನು ಬೆಳೆಸಲು ಪಟ್ಟ ಪಾಡನ್ನು, ಕಣ್ಣೀಗೆ ಕಟ್ಟುವಂತೆ, ಹೃದಯ ಕಲಕುವಂತೆ ಮಗಳು ವರ್ಣಿಸುವದೇ ಕವಿತೆ ಸಾರ.

Father is Everything for Everyone, Poem That will melt Your Heart Vin
Author
First Published Dec 21, 2022, 11:46 AM IST | Last Updated Jan 12, 2023, 1:34 PM IST

-ಶೋಭಾ. ಎಂ.ಸಿ, ಔಟ್‌ಪುಟ್ ಹೆಡ್, ಏಷ್ಯಾನೆಟ್ ಸುವರ್ಣ ನ್ಯೂಸ್

ಇದೊಂದು ತಮಿಳು ಕವಿತೆ (Tamil poem) ಹೃದಯವನ್ನು ಆದ್ರಗೊಳಿಸುವುದಷ್ಟೇ ಅಲ್ಲ, ನಿಮ್ಮ ಹೃದಯವನ್ನು ಹಿಂಡಿ ಹಾಕದಿದ್ರೆ ಕೇಳಿ. ಅಪ್ಪನ ಬಗ್ಗೆ ನೀವು ಈವರೆಗೂ ಅದೆಷ್ಟೋ ಕವಿತೆ ಓದಿರಬಹುದು, ಆದರೆ ಈ ತಮಿಳು ಕವಿತೆ ಓದುತ್ತಿದ್ರೆ ಕಣ್ಣೀರಧಾರೆ. ಕಡು ಬಡ ತಂದೆಯೊಬ್ಬ, ಮಗಳನ್ನು ಬೆಳೆಸಲು ಪಟ್ಟ ಪಾಡನ್ನು, ಕಣ್ಣೀಗೆ ಕಟ್ಟುವಂತೆ, ಹೃದಯ (Heaart) ಕಲಕುವಂತೆ ಮಗಳು (Daughter) ವರ್ಣಿಸುವದೇ ಕವಿತೆ ಸಾರ. ಆ ತಮಿಳು ಕವಿತೆಯ ಕನ್ನಡ ಭಾವಾರ್ಥ ಹೀಗಿದೆ..

ಅಪ್ಪನನ್ನು ಅಕ್ಷರಕ್ಕಿಳಿಸಲು ಹೊರಟೆ
ಕವಿತೆಯಾಗಲೊಪ್ಪದೇ ಕಣ್ಣೀರಾದ ಎದೆಯೊಳಗೆ..!

ಚಿಕ್ಕ ವಯಸ್ಸಲ್ಲಿ ನನಗೆ ಚಿಕ್ಕ ಗಾಯವಾದರೂ 
ನೀನು ಗಾಬರಿ ಬೀಳುತ್ತಿದೆ..!
ಮುದ್ದಿಸಿ ಗಾಯ ಮಾಯಿಸುತ್ತಿದ್ದೆ..!

ನಿನ್ನ ದೇಹಕ್ಕೆ ಬಿದ್ದ ದೊಡ್ಡ ಪೆಟ್ಟಿಗೆ
ಲೆಕ್ಕವೇ ಇಲ್ಲ ನಿನಗೆ..!

ನನ್ನ ಬದುಕು ಬೆಸೆಯಲು 
ನೀನು ಓಡದ ಓಟ ಇಲ್ಲ
ಪಟ್ಟಪಾಡು ಅಷ್ಟಿಷ್ಟಲ್ಲ..!

ಲೆಕ್ಕವಿಡಲಿಲ್ಲ ಅವನು
ಓದಿದವನಲ್ಲ
ಲೆಕ್ಕವೂ ಬರುತ್ತಿರಲಿಲ್ಲ
ಮೈ ಮೂಳೆಗಳ ಬಸಿದು, ಹಸಿದು 
ಅನ್ನ ದುಡಿದನಾದರೂ ಕೂಡಿಟ್ಟಿದ್ದೇನೂ ಇಲ್ಲ...!

ಒಳ್ಳೆ ಬಟ್ಟೆ ತೊಟ್ಟಿದ್ದು ನೋಡಿಲ್ಲ
ಕ್ಷಣವೂ ಮೈಮರೆತು ಕುಳಿತ ದಿನವಿಲ್ಲ

ಗಂಡಸಲ್ಲವೇ ನೀನು , ಕಣ್ಣೀರಿಡುವ 
ಹಗುರಾಗುವ ಭಾಗ್ಯ ಇನ್ನೆಲ್ಲಿಯದು?

ಭೂಮಿ ಸುತ್ತುತ್ತೆ ಅಂದುಕೊಂಡಿದ್ದು ಆಮೇಲೆ
ಬುಗುರಿಯಂತೆ ಸುತ್ತುತ್ತಲೇ ಇದ್ದ 
ನಿನ್ನ ತಬ್ಬಿ ನಾ ಆಕಾಶವಾಗುತ್ತಿದ್ದೆ!

ಅಪ್ಪನ ಬೆವರನ್ನು ಈ ಭೂಮಿ
ಅದೆಷ್ಟು ಬಸಿದುಕೊಂಡಿತೋ...!

ಬಡತನ ಈಟಿಯಂತೆ ಚುಚ್ಚಿದರೂ 
ನನಗಾಗಿ ನೀ ನಗುತ್ತಲೇ ದೇವರಾಗಿಬಿಟ್ಟೆ

ದೇವರಾದರೆ ಏನಂತೆ 
ನನಗೆ ಅಪ್ಪನೇ ಮೊದಲಂತೆ..!

ಅಪ್ಪನ ಪ್ರೀತಿ... ಆಕಾಶವೇ ಮಿತಿ: ಅಪ್ಪ ಮಗನ ಫೋಟೋ ವೈರಲ್

ಇದು ತಮಿಳು ಕವಿತೆಯ ಕನ್ನಡ ಭಾವಾನುವಾದ. ಬಡ ಅಪ್ಪನ (Father) ಕಡು ಕಷ್ಟು ಕಂಡು ಮಗಳು ಬರೆದ ಪದ್ಯವಿದು. ಮಕ್ಕಳ ಸಂತೃಪ್ತ ಬದುಕಿಗಾಗಿ ಅಪ್ಪ ತನ್ನ ರಕ್ತವನ್ನೇ ಬೆವರಾಗಿಸುತ್ತಾನೆ, ಪನ್ನೀರಾಗಿಸುತ್ತಾನೆ.  ಮಾಡದ ಕೆಲಸವಿಲ್ಲ, ದುಡಿದ ದುಡಿಮೆ ಇಲ್ಲ. ಬಿಸಿಲು, ಮಳೆ, ಗಾಳಿ ಎನ್ನದೇ ಮೈಮುರಿಯೇ ದುಡಿಯುವ ಅಪ್ಪ, ಮಕ್ಕಳ ಕಣ್ಣಲ್ಲಿ ಹೀರೋ ಆಗಿ ಬಿಡುತ್ತಾನೆ. ಮಗಳಿಗೆ ಮುಳ್ಳು ಚುಚ್ಚಿದರೂ, ಸೂಜಿ ಮೊನೆ ಚುಚ್ಚಿದರೂ, ಅಪ್ಪನ ಕರುಳು ಚುರ್ ಚುರ್. ಮಗಳು ಕೇಳಿದ್ದೆಲ್ಲವನ್ನೂ ಕೊಡಿಸುವ ಕನಸು (Dream). ಅವಳ ಭವಿಷ್ಯ ಕಟ್ಟುವ ಕನಸು. ಮಗಳ ಸಣ್ಣ ಕನಸನ್ನೂ ಈಡೇರಿಸಲಾಗದೇ ಚಡಪಡಿಸುವ ಅಪ್ಪ, ಬಡತನದ ಈಟಿ ಚುಚ್ಚುತ್ತಿದ್ದರೂ ನಗುತ್ತಲೇ ನೊಗ ಹೊತ್ತು ನಿಂತವನು. ಅಪ್ಪನ ಬೆವರನ್ನು ಈ ಭೂಮಿ ಅದೆಷ್ಟು ಬಸಿದುಕೊಂಡಿತೋ ಎಂದು ಸಣ್ಣಗೆ ನರಳುವ ಮಗಳು. 

ಈ ಕವಿತೆ ತಮಿಳಿನಲ್ಲಿ ಭಾರೀ ವೈರಲ್ ಆಗಿದೆ. ತಮಿಳಿನ ಜನಪ್ರಿಯ ವಾಗ್ಮಿ ಸಸಿಲಯಾ ವಾಚಿಸಿದ ಈ ಕವಿತೆ, ಲಕ್ಷಾಂತರ ಜನರ ಹೃದಯ ಕದ್ದಿದೆ. ಸೋಷಿಯಲ್ ಮೀಡಿಯಾದಲ್ಲಿ ಭಾರೀ ಜನಪ್ರಿಯತೆ ಗಳಿಸಿರೋ ಸಸಿಲಯಾ, ವಾಚಿಸಿದ ಅಪ್ಪ ಅನ್ನೋ ಕವಿತೆಗೆ ಮೆಚ್ಚುಗೆಯ (Like) ಮಹಾಪೂರವೇ ಹರಿದಿದೆ.

ಮಗಳಿದ್ದರೆ ನಿನ್ನಂಥ ಮಗಳಿರಬೇಕು! ಲಾಲುಗೆ ಕಿಡ್ನಿ ಕೊಟ್ಟ ಮಗಳಿಗೊಂದು ಚಪ್ಪಾಳೆ

ಅಪ್ಪ ಅಂದರೆ ಅದ್ಭುತ, ಆದರ್ಶ, ಅನಂತ, ಮೊದಲ ಸ್ನೇಹಿತ, ಮೊದಲ, ಕೊನೆಯ ಹೀರೋ. ಆಕಾಶದಷ್ಟು ಎತ್ತರವಿರುವ ಗೋಪುರ ಕೇಳಿದರು ಹಿಂದೆ ಮುಂದೆ ನೋಡದೇ ಕೊಡಿಸುವೆ ಎನ್ನುವ ಶಕ್ತಿ ಹೊಂದಿದವ. ಕಿರು ಬೆರಳು ಹಿಡಿದು ನಿನ್ನೊಂದಿಗೆ ನಾನಿರುವೆ ಎಂದು ಧೈರ್ಯ ತುಂಬುತ್ತಾ, ತನ್ನ ಹೆಗಲ ಮೇಲೆ ಕೂರಿಸಿ ಪ್ರಪಂಚವನ್ನೇ ತೋರಿಸುವವ, ಕಷ್ಟಗಳು ಮರೆಮಾಚುತ್ತಾ, ಸುಖವನ್ನಷ್ಟೇ ಕೊಡಿಸಲು ಟೊಂಕಕಟ್ಟಿ ನಿಲ್ಲುವವ. ಓಹ್.. ಅಪ್ಪನ ತ್ಯಾಗವನ್ನು ವರ್ಣಿಸಲು ಇಷ್ಟು ಪದಗಳೂ ಸಾಲದೇನೋ..! ಅಪ್ಪನ ಎದುರು ದೇವರು ಸಣ್ಣವನೇ ಆಗಿಬಿಟ್ಟಾನು..!

Latest Videos
Follow Us:
Download App:
  • android
  • ios