Asianet Suvarna News Asianet Suvarna News

ಸ್ಮೃತಿ ಗಂಧವತೀ ಕೃತಿ ಬಿಡುಗಡೆ;ಚಿಕ್ಕಮ್ಮನೆಂಬ ಗೆಳತಿಯ ಜೊತೆಗೆ

‘ನೆನಪಿನಂಗಳದಲ್ಲಿ ಹರಡಿರುವ ಹೂ ಹಾಸು ಇನ್ನೂ ಸುಗಂಧಮಯವೇ ಆಗಿರುವುದು ಸೋಜಿಗದ ವಿಷಯ’ ಎನ್ನುತ್ತಲೇ ತಮ್ಮ ಬದುಕಿನ ಆಸಕ್ತಿಕರ ಸಂಗತಿಗಳನ್ನು ನಮ್ಮೆದುರು ತೆರೆಯುತ್ತಾರೆ ಸಂಧ್ಯಾ ಪೈ. ಇವರ ‘ಸ್ಮೃತಿ ಗಂಧವತೀ’ ಕೃತಿ ಅಂಕಿತ ಪುಸ್ತಕದಿಂದ ಇಂದು ಬಿಡುಗಡೆ ಆಗುತ್ತಿದೆ. ಆ ಕೃತಿಯ ಆಯ್ದ ಭಾಗ ಇಲ್ಲಿದೆ.

Dr. Sandhya S Pai book Smriti Gandhavati release talks about bond with chickkamma vcs
Author
First Published Dec 4, 2022, 11:15 AM IST

ಡಾ ಸಂಧ್ಯಾ ಎಸ್‌ ಪೈ

ನನ್ನ ಬಾಲ್ಯದಲ್ಲಿ ಬಹುತೇಕ ಯಾವ ಹೆಣ್ಣೂ ಆಸ್ಪತ್ರೆಗೆ ಹೆರಿಗೆಗೆಂದು ಹೋಗುವುದನ್ನು ನಾನು ಕಾಣಲಿಲ್ಲ. ಗರ್ಭಿಣಿ ಎಂದಾಗಲೂ ಯಾವುದೇ ವಿಶೇಷತೆ ಇರುತ್ತಿರಲಿಲ್ಲ. ಈವಾಗಿನ ಹಾಗೆ ‘ಚೆಕ್‌ಅಪ್‌’ಗಳನ್ನು ಔಷಧಿಗಳನ್ನು ಕಂಡವರಿರಲಿಲ್ಲ. ಮುಖ್ಯವಾಗಿ ‘ಬೆಡ್‌ರೆಸ್ಟ್‌’ ಅಂತೂ ಕೇಳಿದ್ದೇ ಇಲ್ಲ. ಎಂಟು ಹತ್ತು ಮಕ್ಕಳಿರುವುದು ಸಾಮಾನ್ಯವಾಗಿತ್ತು. ಉದಾಹರಣೆಗೆ ನನ್ನ ಅಜ್ಜನಿಗೆ ನನ್ನ ತಂದೆ ಸೇರಿದಂತೆ ಹನ್ನೊಂದು ಮಂದಿ ಮಕ್ಕಳು. ಮೊದಲ ಹೆಂಡತಿಯಿಂದ ಒಂದು ಗಂಡು, ಐದು ಹೆಣ್ಣು ಮಕ್ಕಳಾದರೆ, ಎರಡನೆಯವಳಿಂದ ಐದು ಮಂದಿ. ಎರಡನೆಯ ಹೆಂಡತಿ ನನ್ನ ತಂದೆಗಿಂತ ನಾಲ್ಕು ತಿಂಗಳಿಗೆ ಚಿಕ್ಕವರಂತೆ. ನನ್ನ ಚಿಕ್ಕಪ್ಪನವರಿಗೂ ಹನ್ನೊಂದು ಮಕ್ಕಳು. ಇದು ಬದುಕಿರುವವರ ಲೆಕ್ಕ. ಮಗುವಿರುವಾಗಲೇ ತೀರಿಕೊಂಡದ್ದು, ಗರ್ಭಪಾತವಾದವುಗಳಿಗೆ ಲೆಕ್ಕವೇ ಇಲ್ಲ.

ಚಿಕ್ಕಮ್ಮನಲ್ಲಿ ನನಗೆ ತುಂಬಾ ಸಲಿಗೆ. ಸಾಮಾನ್ಯವಾಗಿ ಆರರಿಂದ ಎಂಟು ವರುಷಗಳು ‘ಬಾಲ್ಯ’ ಎನಿಸುತ್ತವೆ. ತಾಯಿಯ ಮೇಲೆ ಪ್ರೀತಿ ಇದ್ದರೂ, ಮಿತ್ರತ್ವ ಇರುವುದಿಲ್ಲ. ಹಿಂದೆ ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಡಬೇಕಾದರೆ ಭಯದಿಂದ ಮಾತ್ರ ಎನ್ನುವ ಭಾವನೆ ಇತ್ತು. ಸಕಾರಣವೋ, ಅಕಾರಣವೋ ಗದರಿಸಿ (ಕೆಲವೊಮ್ಮೆ ಒಂದೆರಡು ಪೆಟ್ಟು ನೀಡಿ) ಹದ್ದುಬಸ್ತಿನಲ್ಲಿಡುವ ಪ್ರಯತ್ನ ಮಾಡುತ್ತಿದ್ದರು. ನನ್ನ ಬಾಲ್ಯ ಕಳೆಯುವಷ್ಟರಲ್ಲಿ ‘ಅಮ್ಮ ಅಂದರೇನು’ ಎಂದು ಅರ್ಥವಾಗುವಷ್ಟರಲ್ಲಿ ನನ್ನ ಹಿಂದೆ ಐದು ಮಂದಿ ತಮ್ಮ-ತಂಗಿಯರು ಬಂದಾಗಿತ್ತು. ಅದರೊಂದಿಗೆ ಅಮ್ಮನ ಕಾಯಿಲೆ ಕೂಡ!

Dr KS Pavitra ವಾಸನಾ ಚರಿತ್ರಂ, ಇದು ಮೂಸಿಯಂ ಕಥೆ

ಹೀಗಾಗಿ ಚಿಕ್ಕಮ್ಮ ಒಂದು ರೀತಿಯಲ್ಲಿ ಅಮ್ಮನ ಸ್ಥಾನ ತುಂಬಿದರು ಎನ್ನಬಹುದು. ಹರೆಯ ಕಾಲಿಡುವಾಗ ಕಾಡುವ ಸಂದೇಹಗಳನ್ನು ಚಿಕ್ಕಮ್ಮನ ಮುಂದೆ ಇಟ್ಟಾಗ, ಅದಕ್ಕೊಂದು ಚಂದದ ಸೂಕ್ತ ಸರಳ ಉತ್ತರ ಸಿಗುತ್ತಿತ್ತು. ಮಕ್ಕಳನ್ನು ಹೆರುವುದು ಹೇಗೆ ಎಂಬಂಥ ಸಂದೇಹಗಳೆಲ್ಲ ಬಂದು, ‘ಚಿಕ್ಕಮ್ಮ, ಮಗು ಹೇಗೆ ಹೊರಗೆ ಬರುತ್ತೆ?’ ಎಂಬ ಪ್ರಶ್ನೆಗೆ ಒಂದು ಕಣ್ಣು ಮಿಟುಕಿಸಿ, ‘ಒಳಗೆ ಹೋದನಂತರ ತಾನೇ ಹೊರಗೆ ಬರೋದು. ಮತ್ತೆ ಇಷ್ಟುಬೇಗ ಒಳಗೆ ಹೋಗಿ ಏನು ಮಾಡುತ್ತಿ? ಒಂದೆರಡು ವರ್ಷ ಕಳೆಯಲಿ. ಮತ್ತೆ ಅಪಾಪೀ ಉತ್ತರ ಸಿಗುತ್ತದೆ’ ಎಂದು ಉತ್ತರಿಸುತ್ತಿದ್ದರು.

ನನಗೆ ಈ ಉತ್ತರದಿಂದ ಸಮಾಧಾನವಾಗಲಿಲ್ಲ. ‘ಅದೆಲ್ಲ ಬೇಡ, ನಿಮಗೆ ಗೊತ್ತಿಲ್ಲವಾದರೆ ಗೊತ್ತಿಲ್ಲ ಎಂದು ಹೇಳಿಬಿಡಿ. ಸುಮ್ಮ ಸುಮ್ಮನೆ ಎರಡು ವರುಷ, ನಾಲ್ಕು ವರುಷ ಎನ್ನಬೇಡಿ’. ಪ್ರತಿಯೊಂದು ಪ್ರಶ್ನೆಗೂ ಒಂದೇ ಉತ್ತರ. ‘ಅದು ಹಾಗೇ, ಕಾಲ ಕೂಡಿ ಬರಲಿ, ಹಿರಿಯರಿಗೆ ಹಾಗೆಲ್ಲ ಎದುರುತ್ತರ ಕೊಡಬಾರದು. ತಲೆಯೆಲ್ಲ ಹರಟಬಾರದು ಇತ್ಯಾದಿ’ ಎಂದು. ಮುಖ ಊದಿಸಿಕೊಂಡರೆ, ಚಿಕ್ಕಮ್ಮ ಬಿದ್ದು ಬಿದ್ದು ನಗುವರು. ‘ಎಂಟು ಹೆತ್ತಿದ್ದೇನೆ. ನನಗೆ ಗೊತ್ತಿಲ್ಲ ಅಂತೀಯಾ? ಎರಡು ದಿನ ತಡಿ. ತೋರಿಸ್ತೀನಿ’ ಎಂದರು. ಎರಡು ದಿನ ಏಕೆ ಕಾಯಬೇಕು ಅರ್ಥವಾಗಲಿಲ್ಲ.

ಎರಡು ದಿನ ಕಾಯಬೇಕಾಗಿ ಬರಲಿಲ್ಲ, ಬೆಳಗ್ಗೆ ಮೂತ್ರದ ಪಾತ್ರೆಯನ್ನು ತೆಂಗಿನ ಮರದಡಿ ಚೆಲ್ಲಲು ಹೋದಾಗ ಚಿಕ್ಕಮ್ಮ ಹಟ್ಟಿಯ ಬಾಗಿಲಲ್ಲಿ ಸೊಂಟದ ಮೇಲೆ ಕೈಯಿಟ್ಟುಕೊಂಡು ನಿಂತು ಏನನ್ನೋ ನೋಡುತ್ತಿದ್ದರು. ನನ್ನ ಮುಖ ನೋಡಿದ ಕೂಡಲೇ ಕೈಸನ್ನೆ ಮಾಡಿ, ‘ಬಾ ಇಲ್ಲಿ’ ಎಂದು ಕರೆದರು. ಹೋದ ಕೂಡಲೆ ಒಂದಿಷ್ಟುಪಕ್ಕಕ್ಕೆ ಸರಿದು ‘ನಿನ್ನ ಪ್ರಶ್ನೆಗೆ ಉತ್ತರ ಅಲ್ಲಿದೆ ನೋಡು’ ಎಂದು ಪಿಸುಗುಟ್ಟಿದರು. ಹಸು ಕರು ಹಾಕುತ್ತಿತ್ತು. ‘ಮನುಷ್ಯರಿಗೂ ಹೀ...ಗೇ’ ಎಂದರು ಮೆಲು ಮಾತಿನಲ್ಲಿ!

Ramesh Aravind Formula ಯಶಸ್ಸಿಗೆ 13 ಮೆಟ್ಟಿಲು

‘ಮುತ್ತಾಮಂಡೋ’ (ಮೂತ್ರದ ಪಾತ್ರೆ) ಎಂದರೇನು ಎಂಬ ಯೋಚನೆ ಈಗಾಗಲೇ ನಿಮ್ಮ ಮನಸ್ಸಿನಲ್ಲಿ ಮೂಡಿರಬೇಕು. ಹಿಂದೆ ಸ್ನಾನದ ಮನೆ, ಮನೆಯ ತತ್‌ಕ್ಷಣದ ಅಂಗಳದಲ್ಲಿರುತ್ತಿತ್ತು. ತಾಮ್ರದ ಎರಡು ದೊಡ್ಡ ಹಂಡೆಗಳನ್ನು ಕಂಠದಷ್ಟುಹೂತಿರುತ್ತಿದ್ದರು. ಒಂದರಲ್ಲಿ ಬಿಸಿನೀರು, ಮತ್ತೊಂದರಲ್ಲಿ ತಣ್ಣೀರು. ನಮ್ಮ ಬಾಲ್ಯದಲ್ಲಾಗಲೇ ‘ಬಹಳಷ್ಟು’ ಸುಧಾರಣೆಯಾಗಿದೆ. ಜೀವನ ‘ಸುಲಭ’ವಾಗಿದೆ ಎನ್ನುತ್ತಿದ್ದರು ಹಿರಿಯರು. ಅವರ ಕಾಲದಲ್ಲಿ ಬಾವಿಯಿಂದ ಸೇದಿಯೇ ನೀರು ತೆಗೆಯಬೇಕಿತ್ತು. ಸ್ನಾನಪಾನಕ್ಕಿರಲಿ, ಅಡುಗೆಗೆ, ಬಟ್ಟೆಒಗೆಯಲು, ಪಾತ್ರೆ ತೊಳೆಯಲು ಎಲ್ಲದಕ್ಕೂ ಬಾವಿಯಿಂದಲೇ ನೀರು ತೆಗೆಯಬೇಕು.

ಈ ನೀರು ತೆಗೆಯಲು ಎರಡು ವಿಧದ ಪಾತ್ರೆಗಳು. ದೊಡ್ಡ ಗಾತ್ರದ ‘ಕಳಶೀ’. ಚಿಕ್ಕಗಾತ್ರದ ‘ಕಳಸೋ’, ಅರ್ಥಾತ್‌ ಮೂರು ಕೊಡಪಾನ ಹಿಡಿಸುವ ದೊಡ್ಡ ಕೊಡಪಾನ ‘ಕಳಶೀ’. ಬಹುತೇಕ ಇದನ್ನು ಗಂಡಸರು ಮಾತ್ರ ಉಪಯೋಗಿಸುತ್ತಿದ್ದರು. ನಮ್ಮ ಕಾಲದಲ್ಲಿ ಹಂಡೆಗಳ ಪಕ್ಕದಲ್ಲಿರುವ ಟಾಂಕಿ (ನೀರು ತುಂಬಿಡುವ ತೊಟ್ಟಿ)ಯ ಮೇಲೆ ಒಂದು ನಳ ಅಳವಡಿಸಲಾಗಿತ್ತು. ಅದರಲ್ಲಿ ತುಂಬಿದ ನೀರನ್ನು ಮೊಗೆದು, ಹಂಡೆಗಳನ್ನು ತುಂಬಿಸುತ್ತಿದ್ದರು. ಸ್ನಾನದ ಮನೆಯ ಅಟ್ಟದ ಮೇಲೆ ಕಟ್ಟಿಗೆಯ ದಾಸ್ತಾನು! ಗ್ಯಾಸು, ವಿದ್ಯುತ್‌ ಒಲೆಗಳ ಹೆಸರೇ ಕೇಳದಿದ್ದ ಆ ಕಾಲದಲ್ಲಿ ಕಟ್ಟಿಗೆ ಅಥವಾ ಸೌದೆಯೇ ಅಡುಗೆ, ನೀರು ಕಾಯಿಸುವ ಮಾಧ್ಯಮವಾಗಿತ್ತು. ಹಾಗೆಯೇ ಹಟ್ಟಿಯ ಅಟ್ಟದ ಮೇಲೆ ಒಣಹುಲ್ಲಿನ ಸಂಗ್ರಹ ಇರುತ್ತಿತ್ತು.

ಇನ್ನು ಪಾಯಖಾನೆ ಅಥವಾ ಸಂಡಾಸು ಸ್ನಾನದ ಮನೆಯ ಹಿಂಭಾಗದ ಅಂಗಳದಲ್ಲಿರುತ್ತಿತ್ತು. ಈ ಸಂಡಾಸನ್ನು ಹೇಗೆ ವಿವರಿಸಿದರೂ ಇಂದಿನವರು ಅದನ್ನು ಅರ್ಥ ಮಾಡಿಕೊಳ್ಳಲಾರರು ಎನಿಸುತ್ತದೆ. ಸಂಡಾಸೆಂದರೆ ಒಂದು ಪುಟ್ಟಪುಟ್ಟಕೋಣೆ. ಎರಡು ಮೂರು ಮೆಟ್ಟಿಲುಗಳನ್ನು ಹತ್ತಿದ ನಂತರ, ಬಾಗಿಲು ದಾಟಿದ ಕೂಡಲೆ ಒಂದೆರಡು ಹೆಜ್ಜೆ ಇಡುವಷ್ಟೇ ಜಾಗ. ಅನಂತರ ನೆಲದಲ್ಲಿ ಒಂದು ಉರುಟು ಗುಂಡಿ. ಅದರ ಕೆಳಗೊಂದು ಬಾಲ್ದಿ ಅಥವಾ ಅಂಥದ್ದೇ ಏನಾದರೊಂದು! ಒಂದು ಬೆಳಗಿನಿಂದ ಮತ್ತೊಂದು ಬೆಳಗಿನವರೆಗೆ ಅದರಲ್ಲಿ ಮಲದ ದಾಸ್ತಾನು. ಸಹಿಸಲಸಾಧ್ಯ ದುರ್ನಾತ, ನೊಣಗಳು... ಇದು ಪಾಯಖಾನೆಯ ಚಿತ್ರಣ. ಯಾರಿಗಾದರೂ ಹೊಟ್ಟೆಸರಿ ಇಲ್ಲವಾಯಿತೋ, ದೇವರೇ ಗತಿ. ವಿಚಿತ್ರವೆಂದರೆ ಈಗಿನಷ್ಟುರೋಗಗಳನ್ನು ನಾನು ಆ ಕಾಲದಲ್ಲಿ ಕಂಡಿರಲೇ ಇಲ್ಲ. ವ್ಯವಸ್ಥಿತ ಜೀವನ ವಿಧಾನವೋ, ಆಹಾರ ಪದ್ಧತಿಯೋ, ಹೊರಗೆ ತಿನ್ನುವ ಪದ್ಧತಿ ಇಲ್ಲದಿರುವುದರಿಂದಲೋ ಏನೋ, ತಿಳಿಯದು.

ಹೀಗೆ ಸಂಡಾಸು ಬಲು ದೂರದಲ್ಲಿ ಇರುತ್ತಿದ್ದರಿಂದ, ರಾತ್ರೆ ಮೂತ್ರಶಂಕೆ ಆದರೆ ಏನು ಮಾಡುವುದು. ಈ ಸಮಸ್ಯೆಯ ಪರಿಹಾರಾರ್ಥವಾಗಿದ್ದದ್ದೇ ಈ ‘ಮುತ್ತಾಮಂಡೋ’.

ಪ್ರತಿಯೊಂದು ಮಲಗುವ ಕೋಣೆಯ ಮೂಲೆಯಲ್ಲಿ ತಾಮ್ರ ಅಥವಾ ಹಿತ್ತಾಳೆಯ ತಪ್ಪಲೆಯಾಕಾರದ ಸದೃಢ ಹಿಡಿಯಿದ್ದ ಪಾತ್ರೆ ಇರುತ್ತಿತ್ತು. ರಾತ್ರೆ ಅದರ

ಉಪಯೋಗವಾಗುತ್ತಿತ್ತು. ಮಾರನೆಯ ಬೆಳಗು ಸರತಿಯ ಪ್ರಕಾರ, ಅದನ್ನು ಖಾಲಿ ಮಾಡಿ, ತೆಂಗಿನ ಮರದ ಕಟ್ಟೆಯ ಮೇಲಿಡಬೇಕಿತ್ತು. ಉದಾಹರಣೆಗೆ, ಹುಡುಗಿಯರ

ಶಯ್ಯಾಗೃಹ ಮಹಡಿಯ ಮೇಲಿನ ದೊಡ್ಡ ಕೋಣೆಯಾಗಿತ್ತು. ಅಲ್ಲಿ ಸಾಲಾಗಿ ಹಾಸಿದ ಹಾಸಿಗೆಗಳು. ಮೇಲಿನಿಂದ ಸೊಳ್ಳೆ ಪರದೆ! ಆನೆಕಾಲು ರೋಗ ಪ್ರಬಲವಾಗಿತ್ತಲ್ಲ! ಅದನ್ನು ಉಪಯೋಗಿಸುವ ಆರು ಮಂದಿ ಹುಡುಗಿಯರೂ ಸರತಿ ಪ್ರಕಾರ ಒಂದೊಂದು ದಿನ ಮೂತ್ರದಾನಿಯನ್ನು ಖಾಲಿ ಮಾಡಬೇಕು. ಹೀಗೆ ಖಾಲಿ ಮಾಡಿ ತೆಂಗಿನ ಮರದ ಕಟ್ಟೆಯ ಮೇಲಿಟ್ಟದ್ದನ್ನು ಮಲತೆಗೆಯುವವರ ಹೆಂಗಸರು ಅಥವಾ ಅವರಂಥದ್ದೇ ‘ಕೆಳಸ್ತರದವರು’ ಬೂದಿಯಿಂದ ತಿಕ್ಕಿ, ಲಕಲಕ ಹೊಳೆಯುವಂತೆ ಮಾಡಿ, ಅಲ್ಲಿಯೇ ಬಿಸಿಲಿಗೆ ಬೋರಲು ಹಾಕಿ ಹೋಗಬೇಕು. ಮಧ್ಯಾಹ್ನದ ಊಟದವರೆಗೂ ಅವು ಅಲ್ಲಿಯೇ ಇರುತ್ತಿದ್ದವು. ಅನಂತರ ಅವುಗಳಿಗೆ ಶುದ್ಧೋದಕ ಪ್ರೋಕ್ಷಣೆಯಾಗಿ ಒಳಗೆ ತರಲಾಗುತ್ತಿತ್ತು. ನನಗಿದು ವಿಚಿತ್ರವೆನಿಸುತ್ತಿತ್ತು. ಅಡುಗೆಯ ಪಾತ್ರೆಗಳಿಗಿಂತ ಚಂದವಾಗಿ ತಿಕ್ಕಿ ನಾಲ್ಕು ಗಂಟೆ ಬಿಸಿಲಿಗೆ ಒಣಗಿದ ಪಾತ್ರೆಗಳನ್ನು ಮತ್ತೆ ನೀರು ಹಾಕಿ ಒಳಗೆ ತರುವುದ್ಯಾಕೆ! ‘ಅದು ಮೈಲಿಗೆಯಾಗಿರುತ್ತದೆ. ಅದಕ್ಕೇ ನೀರು ಹಾಕಿ ಒಳಗೆ ತರಬೇಕು’ ಎಂಬ ಉತ್ತರ ಬರುತ್ತಿತ್ತು.

ಇದೇ ಶಾಸ್ತ್ರ ಅಡುಗೆ ಮಾಡಿದ ಪಾತ್ರೆಗಳು, ಊಟದ ತಟ್ಟೆಗಳಿಗೂ ಅನ್ವಯಿಸುತ್ತಿತ್ತು. ‘ಅದೂ ಹಾಗೇ, ಕೆಲಸದವರು ಯಾರು ಮುಟ್ಟಿದರೂ ಮೈಲಿಗೆ ಮೈಲಿಗೆಯೇ. ನೀರು ಹಾಕದೆ ಉಪಯೋಗಿಸುವಂತಿಲ್ಲ’ ಎನ್ನುತ್ತಿದ್ದರು ಹಿರಿಯರು. ಕೆಲವೇ ವರ್ಷಗಳಲ್ಲಿ ಮಲ ಹೊರುವ ಪದ್ಧತಿ ನಿಂತುಹೋಯಿತು. ಹಾಗೇ ಮೂತ್ರ ಪಾತ್ರೆಯೂ ಅಟ್ಟಸೇರಿತು. ವಿಚಿತ್ರವೆಂದರೆ, 2014ರಲ್ಲಿ ಚೀನಾದಲ್ಲಿ ಈ ಪಾತ್ರೆಗಳನ್ನು ಮತ್ತೆ ಕಂಡೆ. ಇಂದಿಗೂ ಚೀನಾದ ಬಲು ಸುಧಾರಿತ ನಗರಗಳಲ್ಲೂ ಈ ಮೂತ್ರ ಪಾತ್ರೆಗಳಿವೆ.

Follow Us:
Download App:
  • android
  • ios