Dr KS Pavitra ವಾಸನಾ ಚರಿತ್ರಂ, ಇದು ಮೂಸಿಯಂ ಕಥೆ
ವಾಸನೆಗೂ ನೆನಪಿನ ಶಕ್ತಿಗೂ ಹತ್ತಿರದ ಸಂಬಂಧವಿದೆ. ಗರ್ಭದಲ್ಲಿರುವ ಶಿಶುವಿಗೆ ಸಂಪೂರ್ಣವಾಗಿ ಬೆಳೆದಿರುವ ಇಂದ್ರಿಯ ಗ್ರಹಿಕೆಯೆಂದರೆ 'ವಾಸನೆ' ಮಾತ್ರ. ವಾಸನೆಯ ಪ್ರಭಾವ ಎಷ್ಟು ಶಕ್ತಿಯುತವೆಂದರೆ ಮನುಷ್ಯನ ಮಿದುಳು ವಾಸನೆಯೊಂದಿಗೆ ಬಣ್ಣಗಳನ್ನೂ ಚಿತ್ರಗಳನ್ನೂ ಕಲ್ಪಿಸಿಕೊಂಡು ಬಿಡುತ್ತದೆ. ಹೀಗೆ ವಾಸನೆಗೂ ಸ್ಮರಣಶಕ್ತಿಗೂ ಇರುವ ಸಂಬಂಧದ ಕುರಿತು ಕುತೂಹಲಕರ ಬರಹ ಇಲ್ಲಿದೆ.
ಡಾ ಕೆ ಎಸ್ ಪವಿತ್ರಾ
ಇಂದ್ರಿಯಗಳಲ್ಲಿ ಮೂಗಿನ ಮಹತ್ವ ಕಡಿಮೆ ಎಂದು ನಮಗನ್ನಿಸಿದರೂ, ಪ್ರಕೃತಿ ಮಾತೆ ಅದಕ್ಕೆ ನೀಡುವ ಗೌರವ ಬಹಳ. ಗರ್ಭದಲ್ಲಿರುವ ಶಿಶುವಿಗೆ ಸಂಪೂರ್ಣವಾಗಿ ಬೆಳೆದಿರುವ ಇಂದ್ರಿಯ ಗ್ರಹಿಕೆಯೆಂದರೆ ‘ವಾಸನೆ’. ಹಾಗಾಗಿಯೇ ‘ವಾಸನೆ ಮತ್ತು ಭಾವನೆ’ಗಳು ಒಂದು ‘ಮೆಮೊರಿ’- ಸ್ಮರಣೆಯಾಗಿ ರೂಪುಗೊಳ್ಳುತ್ತವೆ. ಬಾಲ್ಯದಲ್ಲಿ ಈ ‘ಮೆಮೊರಿ ಸ್ಟಿಕ್’ನಲ್ಲಿ ಜೀವನದುದ್ದಕ್ಕೂ ನಾವು ಇಷ್ಟಪಡುವ, ದ್ವೇಷಿಸುವ ವಾಸನೆಗಳು ಅಡಕಗೊಳ್ಳುತ್ತವೆ. ವಾಸನೆಯ ಪ್ರಭಾವ ಎಷ್ಟುಶಕ್ತಿಯುತವೆಂದರೆ ಮಿದುಳು ವಾಸನೆಯೊಂದಿಗೆ ಬಣ್ಣಗಳನ್ನೂ, ಚಿತ್ರಗಳನ್ನೂ ಕಲ್ಪಿಸಿಕೊಂಡು ಬಿಡುತ್ತದೆ. ಅಂದರೆ ಸಂಪಿಗೆಯ ಪರಿಮಳ ತೇಲಿ ಬಂದು ಮೂಗಿಗೆ ಬಡಿಯಿತೆನ್ನಿ, ತತ್‌ಕ್ಷಣ ಹಳದಿ ಬಣ್ಣದ ಸಂಪಿಗೆ ಮರ, ಅದನ್ನು ನಮಗಿತ್ತವರು, ಅಂದು ನಡೆದ ಘಟನೆ ಹೀಗೆ ಮನಸ್ಸು ಹಾರತೊಡಗುತ್ತದೆ. ಸಂಪಿಗೆ ಹೂವನ್ನು ‘ನೋಡಿದರೆ’ ಈ ಅನುಭವದ ತೀವ್ರತೆ ‘ಪರಿಮಳ’ ಆಘ್ರಾಣಿಸುವುದಕ್ಕಿಂತ ಕಡಿಮೆ ಎಂದು ಸಂಶೋಧನೆಗಳು ನಿರೂಪಿಸಿವೆ.
ಮದುವೆಯಾದ ಮೇಲೂ ಐ ಲವ್ ಯೂ ಹೇಳಿ; ಇದು ಡಾಕ್ಟರ್ ಸಲಹೆ
ಹೀಗೇಕಾಗುತ್ತದೆ, ನಮ್ಮ ಮಿದುಳು ಪರಿಮಳಗಳ ಮಾತನ್ನು ಇಷ್ಟೇಕೆ ಕೇಳುತ್ತದೆ ಅಂತ ವಿಜ್ಞಾನಿಗಳು ಸಿಕ್ಕಾಪಟ್ಟೆತಲೆಕೆಡಿಸಿಕೊಂಡಿದ್ದಾರೆ. ಇದು ಎಷ್ಟುಸಂಕೀರ್ಣವೆಂದರೆ ಈ ರಹಸ್ಯವನ್ನು ಬಿಡಿಸಿದ್ದಕ್ಕೆ 2004ರಲ್ಲಿ ರಿಚರ್ಡ್ ಆ್ಯಕ್ಸೆಲ್ ಮತ್ತು ಲಿಂಡಾ ಬಕ್ ಎಂಬ ವಿಜ್ಞಾನಿಗಳಿಗೆ ನೋಬೆಲ್ ಪಾರಿತೋಷಕವನ್ನೇ ಕೊಟ್ಟುಬಿಟ್ಟಿದ್ದಾರೆ. ಈ ಇಬ್ಬರು ಮೇಧಾವಿಗಳು ಕಂಡು ಹಿಡಿದ ಸಂಗತಿ ಏನೆಂದರೆ ವಾಸನೆ ಗ್ರಹಿಸುವ ರಿಸೆಪ್ಟಾರ್ ಜೀವಕೋಶಗಳಿಗೆ ಸುಮಾರು ಒಂದು ಸಾವಿರ ಜೀನ್‌ಗಳಿವೆ. ಅವುಗಳ ಚಿಕ್ಕ ಚಿಕ್ಕ ಕೋಶಗಳ ಗುಂಪುಗಳು ಬೇರೆ ಬೇರೆ ಪರಿಮಳಗಳನ್ನು ಗ್ರಹಿಸುವ, ಭಾವನೆ-ನೆನಪುಗಳಿಗೆ ಕೊಂಡಿ ಹಾಕುವ ಕೆಲಸಗಳನ್ನು ನಿರ್ದೇಶಿಸುತ್ತದೆ. ಮೂಗಿನಲ್ಲಿರುವ ಇವುಗಳಿಗೂ ನಮ್ಮ ಭಾವನೆಗಳನ್ನು ನಿಯಂತ್ರಿಸುವ ಅಮಿಗ್ಡಲಾ, ನೆನಪುಗಳ ಕುದುರೆ ಹಿಪ್ರೋಕ್ಯಾಂಪಸ್ ಎಂಬ ಮಿದುಳಿನ ಭಾಗಗಳಿಗೂ ನೇರ ಸಂಪರ್ಕವಿದೆ. ಹಾಗಾಗಿಯೇ ಒಳ್ಳೆಯ ಪರಿಮಳ ಮಧುರ ನೆನಪುಗಳನ್ನೂ, ಕೆಟ್ಟವಾಸನೆ ಭಯ-ಅಸಹ್ಯಗಳನ್ನೂ ತರುವುದು ಸಾಧ್ಯ.
ಬಾಳಲ್ಲಿ ಜೈಸಬೇಕಾ? ಹಾಗಿದ್ರೆ ಪೂಲ್‌ನಲ್ಲಿ ಈಸಬೇಕು!
ಆದರೆ ಚರಿತ್ರೆಯ ವಾಸನೆಯನ್ನು ಕಂಡು ಹಿಡಿಯುವುದು ಎಂದರೆ? ಶತಮಾನಗಳ ಹಿಂದಿನ ವಾಸನಾ ಚರಿತ್ರೆಯನ್ನು ಪುನರ್‌ರೂಪಿಸುವ ಪ್ರಯತ್ನದಲ್ಲಿಯೂ ಇತಿಹಾಸಜ್ಞರು ತೊಡಗಿದ್ದಾರೆ. 1584ರಲ್ಲಿ ಕೊಲೆಯಾದ ವಿಲಿಯಂ, ಪ್ರಿನ್ಸ್ ಆಫ್ ಆರೇಂಜ್‌ನ ದೇಹವನ್ನು ಎಂಬಾಮಿಂಗ್ ಮಾಡಿ ಸಂರಕ್ಷಿಸಿಡಲಾಯಿತು. ಆಗ ಆತನ ದೇಹದ ವಾಸನೆ ತಾಜಾ ಮತ್ತು ಸ್ವಲ್ಪ ಔಷಧಿಯುಕ್ತ ಎಂದು ಚರಿತ್ರೆಯ ಪುಟಗಳಲ್ಲಿ ಬಣ್ಣಿಸಿದೆ. ಅದೇ ನೆಪೋಲಿಯನ್ 1815ರಲ್ಲಿ ವಾಟರ್‌ಲೂ ಕದನದಿಂದ ವಿರಮಿಸಿದಾಗ ಇದ್ದ ಯುದ್ಧ ಶಿಬಿರದ ವರ್ಣನೆ ‘ಆತಂಕದ ಬೆವರು, ಕುದುರೆಯ ಕೂದಲು, ಒದ್ದೆ ಹುಲ್ಲು ಮತ್ತು ಮಳೆಯ ನಂತರ ಮಣ್ಣಿನ ವಾಸನೆ. ಗನ್‌ಪೌಡರ್‌ನ ಗಂಧಕ, ಕಹಿ ಕಿತ್ತಳೆ, ರೋಸ್‌ಮೇರಿ, ಬೆರ್ಗಮೋಚ್‌ಗಳ ಸುಗಂಧ, ಜೊತೆಗೇ ಚರ್ಮ’.. ಇದನ್ನು ಓದಿ, ವಾಸನೆಗಳನ್ನು ನೆನಪಿಸಿಕೊಳ್ಳಿ, ನೆಪೋಲಿಯನ್ ಯುದ್ಧ ಶಿಬಿರದಲ್ಲಿ ನೆಪೋಲಿಯನ್ ಜೊತೆ ನಾವೇ ನಿಂತಿರುತ್ತೇವೆ!
ಆ್ಯಮ್‌ಸ್ಟರ್‌ಡ್ಯಾಂನ ಪ್ರಸಿದ್ಧ ರಿಜಕ್ಸ್ ಸಂಗ್ರಹಾಲಯದ ಜೊತೆಗೆ ಕಲಾ ಇತಿಹಾಸಜ್ಞೆ ಮತ್ತು ವಾಸನಾ ಸಂಶೋಧಕಿ ಕ್ಯಾರೋ ವರ್ಬೀಕ್ ಮಾಡಿರುವ ಸಂಶೋಧನೆಗಳು ಸ್ವಾರಸ್ಯಕರವಾಗಿವೆ. ಈ ಮ್ಯೂಸಿಯಂ ಒಂದು ‘ಮೂಸುವ’ ವಿಭಾಗವನ್ನೇ ಮಾಡಿಟ್ಟಿದೆ! ಮ್ಯೂಸಿಯಂ ಅನ್ನು ‘ಮೂಸಿಯಂ’ ಎಂದೇ ಕರೆಯುವಂತೆ! ‘ಕಳೆದು ಹೋದ ವಾಸನೆಗಳ ಹುಡುಕಾಟದಲ್ಲಿ’ ಎಂಬ ಯೋಜನೆಯ ಅಂಗವಾಗಿ ಆ್ಯಮ್‌ಸ್ಟರ್‌ಡ್ಯಾಂನಲ್ಲಿ ಕ್ಯಾರೋರ ಯೋಜನೆ ಪ್ರದರ್ಶನಕ್ಕಿದೆ. ಯುದ್ಧಗಳು ಬಹಳ ‘ಸ್ಮೆಲ್ಲಿ’ ಎನ್ನುತ್ತಾರೆ ಕ್ಯಾರೋ. ಯುದ್ಧದಲ್ಲಿ ಭಾಗವಹಿಸಿದ ಸೈನಿಕರು ಸದಾ ಬರೆಯುವುದು ತಾವು ಕೇಳಿದ ಶಬ್ದಗಳು ಮತ್ತು ಅನುಭವಿಸಿದ ವಾಸನೆಗಳ ಬಗ್ಗೆ. ನೆಪೋಲಿಯನ್‌ನ ಯುದ್ಧ ಶಿಬಿರದ ಉದಾಹರಣೆಯನ್ನೇ ತೆಗೆದುಕೊಳ್ಳಿ. ‘ಆತಂಕದ ಬೆವರು ಎಂಬುದಕ್ಕೆ ಬೇರೆಯೇ ವಾಸನೆ, ಸಾವಿರಾರು ಕುದುರೆಗಳು ಅಲ್ಲಿದ್ದವು, ಯುದ್ಧದ ಹಿಂದಿನ ಮಳೆಯಾಗಿತ್ತು, ಲೀಟರ್‌ಗಟ್ಟಲೆ ಸೆಂಟ್ ಉಪಯೋಗಿಸುತ್ತಿದ್ದ ನೆಪೋಲಿಯನ್, ತನ್ನ ಬೂಟ್‌ನಲ್ಲೇ ಒಂದು ಚಿಕ್ಕ ಬಾಟಲ್ ಅಡಗಿಸಿಕೊಳ್ಳುತ್ತಿದ್ದದ್ದು’ ಇವೆಲ್ಲವನ್ನೂ ವಿಶ್ಲೇಷಿಸಲು ಸಾಧ್ಯವಿದೆ.
ಶ್! ಇದು ‘ಸೃಷ್ಟಿ’ಯ ಸಮಯ: ಡಾ ಕೆ.ಎಸ್ ಪವಿತ್ರ ಮಾತು
1988ರಲ್ಲಿ ನೆದರ್‌ಲ್ಯಾಂಡ್‌್ಸ ಫುಟ್‌ಬಾಲ್ ಛಾಂಪಿಯನ್ ಆಯಿತು. ‘ವಾಸನಾ ಸಾಕ್ಷಿ’ಗಳ ಪ್ರಕಾರ ‘ವಿಜಯ’ದ ವಾಸನೆ ಹೇಗಿತ್ತು? ಲಾಕರ್ ರೂಂನ ವಾಸನೆ ಕೊಳೆಯಾದ ವಸ್ತ್ರಗಳು, ಬೆವರು, ಬೆವರಿದ ಪಾದಗಳು, ಚರ್ಮ ಮತ್ತು ಶ್ಯಾಂಪೇನ್‌ಗಳ ಮಿಶ್ರಣ. ವಾಸನೆ ಒದ್ದೆ-ಸಿಹಿ-ಬೆಚ್ಚಗೆ-ಚರ್ಮ ಮತ್ತು ಬೆವರುಗಳ ನೆನಪಿನೊಂದಿಗೆ ವಿಜಯವನ್ನು ಬೆಸೆದಿತ್ತು! ಹೀಗೆಯೇ 17-18ನೇ ಶತಮಾನದ ದುಡ್ಡಿನ ಪರಿಮಳ, ಹಳೆಯ ಪುಸ್ತಕಗಳ ಪರಿಮಳ ಇತ್ಯಾದಿ ಇತ್ಯಾದಿ ಮ್ಯೂಸಿಯಂ ಮುಂದುವರೆಯುತ್ತದೆ. ವಾಸನೆಗಳನ್ನು ಸಂರಕ್ಷಿಸಿಡುವ ‘ಸ್ಮೆಲ್‌ವಾಕ್ಸ್’ ‘ಪರಿಮಳ ತಿರುಗಾಟ’ ಗಳನ್ನೇ ಮಾಡುವ ಯೋಜನೆ ಹೊಂದಿದೆ.
ವಿದ್ಯಾರ್ಥಿಗಳು ಪ್ರಶ್ನಿಸಬಹುದು, ಪಠ್ಯ ಪುಸ್ತಕದ ಪರಿಮಳ ಮೂಸಿದಾಕ್ಷಣ ಕಲಿತದ್ದೆಲ್ಲವೂ ನೆನಪಿಗೆ ಬರುವ ತಂತ್ರ ಮಿದುಳಿನಲ್ಲಿಲ್ಲವೆ? ಪರೀಕ್ಷೆಗೆ ಬೇಕಾದ ನೆನಪು, ಕಾರ್ ಕೀ ಎಲ್ಲಿಟ್ಟಿದ್ದೇವೆಂದು ಹುಡುಕುವ ನೆನಪಿಗೂ ವಾಸನೆಗೂ ಸಂಪರ್ಕವನ್ನಿನ್ನೂ ವಿಜ್ಞಾನ ಕಂಡುಹಿಡಿದಿಲ್ಲ. ಆದರೆ ವಾಸನೆಯ ಸಾಮರ್ಥ್ಯವನ್ನು ನಾವು ಬೆಳೆಸಿಕೊಳ್ಳುವುದು
ನೆನಪು-ಭಾವನೆಗಳನ್ನು ನಿರ್ವಹಿಸುವ ದಾರಿಯೂ ಹೌದು. ಮೂಗೂ ಒಂದು ಸ್ನಾಯುವೇ ತಾನೆ? ಅದಕ್ಕೂ ಮತ್ತೆ ಮತ್ತೆ ಮೂಸಿ, ಆಘ್ರಾಣಿಸಿ ವ್ಯಾಯಾಮ ಮಾಡಿಸಬೇಕು.
ದಾರಿಯಲ್ಲಿ ನಡೆಯುವಾಗ, ಮೂಗನ್ನೂ ಉಪಯೋಗಿಸಿ (ನಾಯಿಯಂತೆ!) ವಾಸನೆಗಳನ್ನು ಗ್ರಹಿಸಿ. ಓದುವಾಗ ಹೊಸ-ಹಳೆ ಪುಸ್ತಕಗಳ ಪರಿಮಳವನ್ನು ಆಘ್ರಾಣಿಸಿ. ಬಾಲ್ಯದ ಓದಿನ ಅನುಭವ, ಶಾಂತ ರಾತ್ರಿ, ಬೆಚ್ಚಗಿನ ಭಾವ ಇವು ನಿಮ್ಮದಾಗಬಹುದು. ಆಗ ಓದುತ್ತಿರುವ ಇವತ್ತಿನ ಪುಸ್ತಕವೂ ಮನ-ಮಿದುಳುಗಳಲ್ಲಿ ನೆನಪಾಗಿ ದಾಖಲಾಗಬಹುದು!