Heartbreak Pain : ಮನಸ್ಸಿಗೆ ನೋವಾದಾಗ ದೇಹದಲ್ಲಿ ಕೆಲ ನೋವು, ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಿಜವಾಗ್ಲೂ ಮನಸ್ಸು, ದೇಹಕ್ಕೆ ಸಂಬಂಧ ಇದ್ಯಾ? ಭಾವನಾತ್ಮಕ ನೋವು ದೇಹದ ಮೇಲೆ ಪರಿಣಾಮ ಬೀರುತ್ತಾ?

ಹೃದಯ ಒಡೆದುಹೋಯ್ತು ಅಂತ ನಾವು ಸಾಮಾನ್ಯವಾಗಿ ಭಾವನಾತ್ಮಕ ನೋವನ್ನು ಹೇಳಲು ಬಳಸುತ್ತೇವೆ. ಆದರೆ ಬ್ರೇಕಪ್ ಆದಾಗ, ತುಂಬಾ ಹತ್ತಿರದವರನ್ನು ಕಳೆದುಕೊಂಡಾಗ ಅಥವಾ ಯಾವುದಾದರೂ ದೊಡ್ಡ ಭಾವನಾತ್ಮಕ ಆಘಾತವಾದಾಗ ಕೆಲವರಿಗೆ ನಿಜವಾಗಿಯೂ ದೈಹಿಕ ನೋವಾಗುತ್ತಾ? ಅದಕ್ಕೆ ಉತ್ತರ ಇಲ್ಲಿದೆ.

ಭಾವನೆಗೂ ದೇಹಕ್ಕೂ ನಂಟಿದೆ

ಬ್ರೇಕ್‌ ಅಪ್‌ ಆದಾಗ ಇಲ್ಲಿ ಭಾವನಾತ್ಮಕವಾಗಿ ನೋವಾದಾಗ ಮನಸ್ಸಿಗೆ ಮಾತ್ರ ನೋವಾಗೋದಿಲ್ಲ. ಎದೆ ಭಾರವಾಗುವುದು, ಎದೆ ನೋವು, ಹೃದಯ ಜೋರಾಗಿ ಬಡಿಯುವುದು, ಹೊಟ್ಟೆ ಕೆಡುವುದು, ಸ್ನಾಯುಗಳಲ್ಲಿ ಬಿಗಿತ ಉಂಟಾಗುವುದು ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.

ಭಾವನಾತ್ಮಕ ನೋವನ್ನು ಮೆದುಳು ಹೇಗೆ ಗ್ರಹಿಸುತ್ತದೆ?

ನಾವು ಅನುಭವಿಸುವ ಭಾವನಾತ್ಮಕ ನೋವು ಕೇವಲ ಮನಸ್ಸಿನಲ್ಲೇ ನಡೆಯುವುದಿಲ್ಲ. ತೀವ್ರ ದುಃಖ ಅಥವಾ ಆಘಾತವಾದಾಗ ಮೆದುಳಿನಲ್ಲಿ ಕೆಲವು ಭಾಗಗಳು ಸಕ್ರಿಯವಾಗುತ್ತವೆ. ಇದೇ ಭಾಗಗಳಲ್ಲಿ ಕೆಲವು ದೈಹಿಕ ನೋವನ್ನು ಗ್ರಹಿಸುವಾಗಲೂ ಕೆಲಸ ಮಾಡುತ್ತವೆ. ಅದರಲ್ಲೂ ಆಂಟೀರಿಯರ್ ಇನ್ಸುಲಾ ಮತ್ತು ಆಂಟೀರಿಯರ್ ಸಿಂಗ್ಯುಲೇಟ್ ಕಾರ್ಟೆಕ್ಸ್ ಪ್ರಮುಖವಾಗಿವೆ.

ಅದಕ್ಕಾಗಿಯೇ ಯಾರಾದರೂ ತೀವ್ರವಾಗಿ ನೋವು ಅನುಭವಿಸಿದಾಗ, ಮನಸ್ಸಿಗೆ ತುಂಬಾ ನೋವಾಗ್ತಿದೆ ಅನ್ನೋದು ಕೇವಲ ಮಾತಾಗಿರುವುದಿಲ್ಲ. ಆ ನೋವು ಎದೆಯಲ್ಲಿ, ಹೊಟ್ಟೆಯಲ್ಲಿ ಅಥವಾ ದೇಹದ ಬೇರೆ ಭಾಗಗಳಲ್ಲೂ ಅನುಭವವಾಗಬಹುದು.

ಯಾವುದಾದರೂ ದೊಡ್ಡ ಭಾವನಾತ್ಮಕ ಆಘಾತವಾದಾಗ ದೇಹ ಅದನ್ನು ಒಂದು ರೀತಿಯ ಒತ್ತಡದ ಪರಿಸ್ಥಿತಿಯಾಗಿ ತೆಗೆದುಕೊಳ್ಳುತ್ತದೆ. ಆಗ ಕಾರ್ಟಿಸೋಲ್ ಮತ್ತು ಅಡ್ರಿನಲಿನ್ನಂತಹ ಸ್ಟ್ರೆಸ್ ಹಾರ್ಮೋನ್ಗಳು ಹೆಚ್ಚಾಗಬಹುದು. ಅಡ್ರಿನಲಿನ್ ಹೆಚ್ಚಾದಾಗ ಹೃದಯ ಜೋರಾಗಿ ಅಥವಾ ವೇಗವಾಗಿ ಬಡಿಯುತ್ತದೆ. ಸ್ನಾಯುಗಳು ಬಿಗಿಯಾಗುತ್ತವೆ. ಉಸಿರಾಟದಲ್ಲೂ ಬದಲಾವಣೆ ಆಗಬಹುದು. ಇವೆಲ್ಲ ಸೇರಿ ಎದೆಯಲ್ಲಿ ಒತ್ತಡ, ಭಾರ ಅಥವಾ ನೋವಿನಂತಹ ಅನುಭವವನ್ನು ಉಂಟಾಗುತ್ತದೆ.

ಬ್ರೋಕನ್ ಹಾರ್ಟ್ ಸಿಂಡ್ರೋಮ್ ಅಂದ್ರೇನು?

ತೀವ್ರ ಭಾವನಾತ್ಮಕ ಒತ್ತಡ ಕೆಲವೊಮ್ಮೆ ನೇರವಾಗಿ ಹೃದಯದ ಮೇಲೂ ಪರಿಣಾಮ ಬೀರಬಹುದು. ಇದನ್ನೇ ಬ್ರೋಕನ್ ಹಾರ್ಟ್ ಸಿಂಡ್ರೋಮ್ ಅಥವಾ ಟಕೋಟ್ಸುಬೊ ಕಾರ್ಡಿಯೊಮಯೋಪತಿ ಎಂದು ಕರೆಯುತ್ತಾರೆ. ಈ ಸಂದರ್ಭದಲ್ಲಿ ಹೃದಯದ ಎಡಭಾಗದ ಒಂದು ಭಾಗ ತಾತ್ಕಾಲಿಕವಾಗಿ ದುರ್ಬಲವಾಗಬಹುದು. ಇದರಿಂದ ಹೃದಯ ಸಾಮಾನ್ಯವಾಗಿ ರಕ್ತವನ್ನು ಪಂಪ್ ಮಾಡುವುದಕ್ಕೆ ತೊಂದರೆಯಾಗಬಹುದು.

ಇದರ ಲಕ್ಷಣಗಳು ಹೃದಯಾಘಾತದಂತೆಯೇ ಇರಬಹುದು. ಎದೆ ನೋವು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಈ ಸಮಸ್ಯೆ ತಾತ್ಕಾಲಿಕವಾಗಿರುತ್ತದೆ ಮತ್ತು ಹೃದಯದ ಕಾರ್ಯ ಮತ್ತೆ ಸಹಜ ಸ್ಥಿತಿಗೆ ಬರಬಹುದು. ಆದರೆ ಎದೆ ನೋವು ಅಥವಾ ಉಸಿರಾಟದ ತೊಂದರೆ ಬಂದಾಗ ಅದನ್ನು ಟೆನ್ಶನ್ನಿಂದ ಆಗಿರಬೇಕು ಎಂದು ನಿರ್ಲಕ್ಷ್ಯ ಮಾಡಬಾರದು. ಹೃದಯಾಘಾತ ಸೇರಿದಂತೆ ಬೇರೆ ಗಂಭೀರ ಸಮಸ್ಯೆಗಳಲ್ಲೂ ಇದೇ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಹೃದಯ ಒಡೆದಾಗ ಹೊಟ್ಟೆ ಏಕೆ ಕೆಡುತ್ತದೆ?

ಮನಸ್ಸಿಗೂ ಹೊಟ್ಟೆಗೂ ಇರುವ ಸಂಬಂಧ ನಿಮಗೆ ಗೊತ್ತಿರಬಹುದು. ನಾವು ಟೆನ್ಶನ್ನಲ್ಲಿದ್ದಾಗ ಹೊಟ್ಟೆ ಕೆಡುವುದು, ಹಸಿವಾಗದಿರುವುದು ಅಥವಾ ವಾಕರಿಕೆ ಬರುವುದು ಸಾಮಾನ್ಯ. ಅದೇ ರೀತಿ ತೀವ್ರ ಭಾವನಾತ್ಮಕ ನೋವಿನ ಸಂದರ್ಭದಲ್ಲೂ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀಳುತ್ತದೆ. ಕೆಲವರಿಗೆ ಹಸಿವು ಕಡಿಮೆಯಾಗಬಹುದು, ವಾಕರಿಕೆ ಬರಬಹುದು ಅಥವಾ ಹೊಟ್ಟೆಯಲ್ಲಿ ಅಸ್ವಸ್ಥತೆ ಕಾಣಿಸಿಕೊಳ್ಳಬಹುದು. ಇನ್ನು ಕೆಲವರಿಗೆ ಹೊಟ್ಟೆ ಸೆಳೆತ ಅಥವಾ ಜೀರ್ಣಕ್ರಿಯೆಯಲ್ಲಿ ಬದಲಾವಣೆ ಆಗಬಹುದು.