ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗುವ ಮುನ್ನ ಪತ್ನಿಗೆ ಕಿಸ್ ಮಾಡುವುದು ದಾಂಪತ್ಯದ ಆರೋಗ್ಯಕ್ಕೆ ಒಳ್ಳೆಯದು ಅಂತ ನಿಮಗೆ ಗೊತ್ತೇ ಇದೆಯಷ್ಟೆ? ಅಷ್ಟು ಮಾತ್ರವಲ್ಲ, ಅದರಿಂದ ಸುಮಾರು 4 ವರ್ಷದಷ್ಟು ಆಯುಸ್ಸು ಕೂಡ ಹೆಚ್ಚುತ್ತದಂತೆ!
ಇದು ಒಂದು ಮುತ್ತಿನ ಕತೆ ಎಂದರೂ ತಪ್ಪಲ್ಲ. ರಾತ್ರಿಯ ಕಿಸ್ ಅಲ್ಲ, ಹಗಲಿನ ಮುತ್ತು. ಮಲಗುವ ಮೊದಲಿನ ಮುತ್ತಲ್ಲ, ಡ್ಯೂಟಿಗೆ ಹೊರಡುವ ಮೊದಲಿನ ಚುಂಬನ. ನೀವು ಪ್ರತಿದಿನ ಕೆಲಸಕ್ಕೆ ಹೊರಡುವ ಮುನ್ನ ಪತ್ನಿಗೆ ಒಂದು ಕಿಸ್ ಕೊಟ್ಟು ಅಥವಾ ಪಡೆದು ಹೊರಡ್ತೀರಾದರೆ, ನೀವೇ ಅದೃಷ್ಟಶಾಲಿಗಳು. ಯಾಕೆಂದರೆ ಇದರಿಂದ ನಿಮ್ಮ ಆಯುಸ್ಸು ನಾಲ್ಕು ವರ್ಷ ಹೆಚ್ಚಾಗುತ್ತದಂತೆ!
ಹೌದು, ಕೆಲಸಕ್ಕೆ ಹೊರಡುವ ಮೊದಲು ನಿಮ್ಮ ಸಂಗಾತಿಗೆ ಚುಂಬನದ ವಿದಾಯ ಹೇಳುವುದು ಒಂದು ಸಣ್ಣ ಸಂಗತಿಯಂತೆ ಕಾಣಿಸಬಹುದು, ಆದರೆ ಅದು ನಿಮ್ಮ ಸಂಬಂಧ ಮತ್ತು ಒಟ್ಟಾರೆ ಯೋಗಕ್ಷೇಮದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಕೆಲಸಕ್ಕೆ ಹೊರಡುವ ಮೊದಲು ತಮ್ಮ ಹೆಂಡತಿಯರನ್ನು ಚುಂಬಿಸುವ ಪುರುಷರು, ಹಾಗೆ ಮಾಡದವರಿಗಿಂತ ಹೆಚ್ಚು ಕಾಲ ಬದುಕುತ್ತಾರಂತೆ. ಅರಿವಳಿಕೆ ಮತ್ತು ಇಂಟರ್ವೆನ್ಷನಲ್ ನೋವು ನಿವಾರಕ ವೈದ್ಯ ಡಾ. ಕುನಾಲ್ ಸೂದ್ ಅವರು ಹೀಗೆ ಹೇಳ್ತಾರೆ. ಇದಕ್ಕಾಗಿ ಅವರು ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನೂ ಹಂಚಿಕೊಂಡಿದ್ದಾರೆ.
ಅಮೆರಿಕದ ಮನಶ್ಶಾಸ್ತ್ರಜ್ಞ ಮತ್ತು ವಾಷಿಂಗ್ಟನ್ ವಿಶ್ವವಿದ್ಯಾಲಯದ ಮನೋವಿಜ್ಞಾನದ ಪ್ರಾಧ್ಯಾಪಕ ಜಾನ್ ಗಾಟ್‌ಮನ್ ʼದಿ ಡೈರಿ ಆಫ್ ಎ ಸಿಇಒʼ ಪಾಡ್‌ಕ್ಯಾಸ್ಟ್‌ನ ಸಂಚಿಕೆಯಲ್ಲಿ ಹೇಳಿದ್ದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ. ಅವರು ಹೀಗೆ ಹೇಳಿದ್ದರು: “ಕೆಲಸಕ್ಕೆ ಹೊರಡುವಾಗ ತಮ್ಮ ಹೆಂಡತಿಯರಿಗೆ ಚುಂಬಿಸುವ ಪುರುಷರು ಹಾಗೆ ಮಾಡದ ಪುರುಷರಿಗಿಂತ ನಾಲ್ಕು ವರ್ಷಗಳ ಕಾಲ ಹೆಚ್ಚು ಬದುಕುತ್ತಾರೆ. ಆರು ಸೆಕೆಂಡುಗಳ ತುಟಿಗಳ ಮೇಲಿನ ಮುತ್ತು, ಕೆನ್ನೆಯ ಮೇಲಿನ ಒಂದು ಸೆಕೆಂಡ್‌ನ ಚುಂಬನಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ.”
ಇದಕ್ಕೆ ಪ್ರತಿಕ್ರಿಯಿಸಿದ ಡಾ. ಸೂದ್ ತಮ್ಮ ವೀಡಿಯೊದಲ್ಲಿ, "ಇದು ನಿಜ! 1980ರಲ್ಲಿ ಈ ಬಗ್ಗೆ ಅಧ್ಯಯನ ಮಾಡಲಾಗಿದೆ. ಕೆಲಸಕ್ಕೆ ಮೊದಲು ತಮ್ಮ ಹೆಂಡತಿಯರನ್ನು ಚುಂಬಿಸುವ ಪುರುಷರು ಸರಾಸರಿ ಐದು ವರ್ಷಗಳ ಕಾಲ ಹೆಚ್ಚಿಗೆ ಬದುಕುತ್ತಾರೆ ಎಂದು ಅದು ಹೇಳಿದೆ" ಎಂದಿದ್ದಾರೆ. ಈ ಅಂಕಿಅಂಶಗಳ ಹಿಂದಿನ ನಿಖರವಾದ ಕಾರ್ಯವಿಧಾನಗಳು ಸ್ಪಷ್ಟವಾಗಿಲ್ಲ. ಆದರೆ ಚುಂಬನದ ಪರಿಣಾಮ ಕಡಿಮೆಯಾಗುವ ಒತ್ತಡ, ದಂಪತಿ ನಡುವೆ ಸುಧಾರಿತ ಸಂಬಂಧದ ಗುಣಮಟ್ಟ ಮತ್ತು ದೈಹಿಕ ಆರೋಗ್ಯ ಪ್ರಯೋಜನಗಳ ಒಟ್ಟಾರೆ ಪರಿಣಾಮಗಳು ದೀರ್ಘಾಯುಷ್ಯಕ್ಕೆ ಕೊಡುಗೆ ನೀಡುವ ಸಾಧ್ಯತೆಯಿದೆ ಎಂದು ಡಾ. ಸೂದ್ ಹಂಚಿಕೊಂಡರು.
"ಏಕೆಂದರೆ, ನಾವು ಚುಂಬಿಸಿದಾಗ, ಅದು ನಮ್ಮ ಮನಸ್ಥಿತಿಯನ್ನು ಸುಧಾರಿಸುವ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನುಗಳಲ್ಲಿ 'ಬಾಂಡಿಂಗ್ ಹಾರ್ಮೋನ್' ಆಗಿರುವ ಆಕ್ಸಿಟೋಸಿನ್ ಮತ್ತು 'ಫೀಲ್ ಗುಡ್ ಹಾರ್ಮೋನ್' ಆಗಿರುವ ಡೋಪಮೈನ್ ಸೇರಿವೆ. ಇದರ ಜೊತೆಗೆ, ಚುಂಬನವು ನಮ್ಮ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಅನ್ನು ಕಡಿಮೆ ಮಾಡುತ್ತದೆ ಎಂದು ಕಂಡುಬಂದಿದೆ. ಕಾರ್ಟಿಸೋಲ್ ದೀರ್ಘಕಾಲದವರೆಗೆ ಇದ್ದರೆ ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಚುಂಬನ ಇದನ್ನು ಕಡಿಮೆಗೊಳಿಸುತ್ತದೆ."
ಜಿಮ್ ವ್ಯಾಯಾಮ, ಜಾಗಿಂಗ್ ಮುಂತಾದವು ನಿಮ್ಮ ದೇಹದ ಕ್ಯಾಲೊರಿಗಳನ್ನು ಸುಟ್ಟಂತೆ, ಚುಂಬನವೂ ಸಹ ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ. ನಿಮ್ಮ ಚುಂಬನವು ಎಷ್ಟು ಉತ್ಸಾಹಭರಿತವಾಗಿದೆ ಎಂಬುದರ ಆಧಾರದ ಮೇಲೆ ನೀವು ನಿಮಿಷಕ್ಕೆ 2ರಿಂದ 26 ಕ್ಯಾಲೊರಿಗಳನ್ನು ಸುಡಬಹುದು. ಇದು ಖಂಡಿತವಾಗಿಯೂ ನಿಮ್ಮನ್ನು ಶಾಂತವಾಗಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಸಂತೋಷವಾಗಿರಲು ಸಹಾಯ ಮಾಡುತ್ತದೆ.
Intimacy Tips: ನಾನು ವರ್ಜಿನ್ ಅಲ್ಲ ಅಂತ ಗಂಡನಿಗೆ ಗೊತ್ತಾಗುತ್ತಾ ಡಾಕ್ಟರ್?
ಚುಂಬನವು ಹಲ್ಲಿನ ನೈರ್ಮಲ್ಯಕ್ಕೆ ಸಹಾಯ ಮಾಡುತ್ತದೆ. ಇದು ಲಾಲಾರಸ ಗ್ರಂಥಿಗಳನ್ನು ಉತ್ತೇಜಿಸಿ ಲಾಲಾರಸದ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಲಾಲಾರಸವು ಬಾಯಿಯನ್ನು ನಯವಾಗಿರಿಸುತ್ತದೆ. ಆಹಾರದ ಅವಶೇಷಗಳು ನಿಮ್ಮ ಹಲ್ಲುಗಳಿಗೆ ಅಂಟಿಕೊಳ್ಳದಂತೆ ಸಹಾಯ ಮಾಡುತ್ತದೆ. ಇದು ಹಲ್ಲಿನ ಕೊಳೆತ ಮತ್ತು ಕುಳಿಗಳಿಂದ ರಕ್ಷಿಸುತ್ತದೆ. ಲಾಲಾರಸ ನಿಮ್ಮ ಹಲ್ಲುಗಳಿಂದ ಬ್ಯಾಕ್ಟೀರಿಯಾವನ್ನು ತೊಳೆಯುತ್ತದೆ. ಹೃದಯದ ಆರೋಗ್ಯವನ್ನೂ ಇದು ಹೆಚ್ಚಿಸುತ್ತದೆ. ಹೀಗೆಲ್ಲ ಇರುವಾಗ ಪ್ರತಿದಿನ ಚುಂಬಿಸಿದರೆ ಆಯುಷ್ಯ ಹೆಚ್ಚದೇ ಇರಲು ಸಾಧ್ಯವೇ!
