ವಿಚ್ಛೇದನದ ನಂತರ ಮಹಿಳೆಯೊಬ್ಬರು ವಿಶಿಷ್ಟ ಮೆಹಂದಿ ವಿನ್ಯಾಸದೊಂದಿಗೆ "ವಿಚ್ಛೇದನ" ಎಂದು ಬರೆಸಿಕೊಂಡು ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದನ್ನು ಸಂಸ್ಕೃತಿಯ ಅವನತಿ ಎಂದರೆ, ಇನ್ನು ಕೆಲವರು ಮಹಿಳಾ ಸಬಲೀಕರಣದ ಸಂಕೇತ ಎಂದಿದ್ದಾರೆ. ಬದಲಾಗುತ್ತಿರುವ ಸಾಮಾಜಿಕ ಮನೋಭಾವವನ್ನು ಇದು ಪ್ರತಿಬಿಂಬಿಸುತ್ತದೆ.

ಹಿಂದೆ ವಿಚ್ಛೇದನ (Divorce)ವನ್ನು ದುಃಖದ, ನೋವಿನ ಸಂಗತಿಯಂತೆ ಕಾಣಲಾಗ್ತಿತ್ತು. ಡಿವೋರ್ಸ್ ಆದ್ರೆ ಜೀವನವೇ ಮುಗಿತು ಅಂದ್ಕೊಂಡವರು ಸಾಕಷ್ಟು ಮಂದಿ. ಆದ್ರೆ ಕಾಲ ಬದಲಾಗಿದೆ. ಉಸಿರುಗಟ್ಟಿಸುವ ಪರಿಸರದಲ್ಲಿ ಜೀವನ (life) ನಡೆಸುವ ಬದಲು ಅದ್ರಿಂದ ಹೊರಗೆ ಬರೋದು ಉತ್ತಮ ಅಂತ ಅನೇಕರು ಭಾವಿಸ್ತಾರೆ. ವಿಚ್ಛೇದನವನ್ನು ಹೊಸ ಬದುಕಿನ ಆರಂಭವೆಂದು ಪರಿಗಣಿಸ್ತಾರೆ. ವಿಚ್ಛೇದನ ಸಿಗ್ತಿದ್ದಂತೆ ಅದನ್ನು ಸಂಭ್ರಮಿಸುವ ಟ್ರೆಂಡ್ ಈಗ ಹೆಚ್ಚಾಗಿದೆ. ಕೆಲ ಮಹಿಳೆಯರು ಡಿವೋರ್ಸ್ ನಂತ್ರ ಪಾರ್ಟಿ ಮಾಡಿದ ವಿಡಿಯೋಗಳು ವೈರಲ್ ಆಗಿದ್ವು. ಈಗ ಮತ್ತೊಂದು ವಿಡಿಯೋ ಸುದ್ದಿ ಮಾಡ್ತಿದೆ. ಈ ವಿಡಿಯೋದಲ್ಲಿ ನೀವು ವಿಶೇಷ ಮೆಹಂದಿ ಡಿಸೈನ್ ನೋಡ್ಬಹುದು. ಇದನ್ನು ಡಿವೋರ್ಸ್ ಮೆಹಂದಿ ಡಿಸೈನ್ (Divorce Mehndi Design) ಅಂತ ಕರೆದ್ರೆ ತಪ್ಪೇನಿಲ್ಲ.

ಮಹಿಳೆ ಡಿವೋರ್ಸ್ ನಂತ್ರ ಮೆಹಂದಿ ಹಾಕಿಕೊಂಡಿದ್ದಾಳೆ. ಇದು ಮದುವೆ ಮೆಹಂದಿಯಲ್ಲ. ವಿಚ್ಛೇದನದ ಮೆಹಂದಿ. ಮೆಹಂದಿಯಲ್ಲಿ ಮಹಿಳೆ ತನ್ನ ಭಾವನೆಯನ್ನು ತಿಳಿಸಿದ್ದಾಳೆ. ಈ ವಿಶೇಷ ವಿನ್ಯಾಸವು ಸಮಾಜದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

100 ಗ್ರಾಂ ಪ್ರೀತಿ, 200 ಗ್ರಾಂ ರಾಜಿ : ವೈರಲ್ ವೀಡಿಯೊದಲ್ಲಿ ಮಹಿಳೆ ತನ್ನ ಕೈಗಳಿಗೆ ಹಾಕಿಕೊಂಡ ಮೆಹಂದಿ ಸುಂದರವಾಗಿದೆ. ಅದ್ರಲ್ಲಿ ಬರೆದ ಸಂದೇಶ ಆಳವಾಗಿದೆ. ಅಂತಿಮವಾಗಿ ವಿಚ್ಛೇದನ ಎಂಬ ಪದಗಳ ಜೊತೆಗೆ ಮೆಹಂದಿ ಡಿಸೈನ್ ಮಾಡಲಾಗಿದೆ. ಹಾರ್ಟ್ ಬ್ರೇಕ್ ಆಗಿರುವ ಮೆಹಂದಿ ಡಿಸೈನ್ ಅಂಗೈನಲ್ಲಿದೆ. ಹಾರ್ಟ್ ಒಂದ್ಕಡೆ ಹುಡುಗ ಹಾಗೂ ಇನ್ನೊಂದು ಕಡೆ ಹುಡುಗಿಯನ್ನು ಕಾಣ್ಬಹುದು. ಮೇಲೆ ನ್ಯಾಯದ ತಕ್ಕಡಿ ಡಿಸೈನ್ ಮಾಡಲಾಗಿದೆ. ತಕ್ಕಡಿಯ ಒಂದು ಭಾಗ ಕೆಳಗೆ ವಾಲಿದೆ. ಒಂದು ಕಡೆ 100 ಗ್ರಾಂ ಪ್ರೀತಿ ಅಂತ ಬರೆದಿದ್ರೆ ಇನ್ನೊಂದು ಕಡೆ 200 ಗ್ರಾಂ ರಾಜಿ ಅಂತ ಬರೆಯಲಾಗಿದೆ. ಈ ಮೆಹಂದಿ ವೈಯಕ್ತಿಕ ಕಥೆಯನ್ನು ಹೇಳ್ತಿದೆಯಲ್ಲದೆ ಸಮಾಜದಲ್ಲಿ ವಿಚ್ಛೇದನದ ಬಗ್ಗೆ ಬದಲಾಗ್ತಿರುವ ಮನೋಭಾವವನ್ನೂ ಎತ್ತಿ ತೋರಿಸಿದೆ.

ಬಂದ ಕಮೆಂಟ್ ಏನು? : ಮಹಿಳೆಯ ಈ ವಿಚ್ಛೇದನ ಮೆಹಂದಿ ವಿಡಿಯೋ ವೈರಲ್ ಆಗಿದೆ. ಸಾಕಷ್ಟು ಕಮೆಂಟ್ ಕೂಡ ಬಂದಿದೆ. ಜನರು ಈ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ. ವಿಡಿಯೋಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಬ್ಬರು, ಇದನ್ನು ಸಂಸ್ಕೃತಿಯ ಅವನತಿ ಎಂದು ಕರೆದಿದ್ದಾರೆ. ಈಗಿನ ದಿನಗಳಲ್ಲಿ ಎಲ್ಲವೂ ಸ್ವಲ್ಪ ಹೆಚ್ಚೇ ಆಗ್ತಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಇನ್ನು ಕೆಲವರು ಮಹಿಳೆ ಕೆಲಸವನ್ನು ಶ್ಲಾಘಿಸಿದ್ದಾರೆ. ಇದನ್ನು ದಿಟ್ಟ ಹೆಜ್ಜೆ ಎಂದು ಕರೆದಿದ್ದಾರೆ. ಮಹಿಳಾ ಸಬಲೀಕರಣದ ಉದಾಹರಣೆ ಎಂದಿದ್ದಾರೆ. ಪ್ರತಿ ಕ್ಷಣವನ್ನೂ ಸಂಭ್ರಮಿಸಬೇಕು. ವಿಚ್ಚೇದನವನ್ನೂ ಸಂಭ್ರಮಿಸಿದ್ರೆ ತಪ್ಪಿಲ್ಲ ಎಂದು ಮತ್ತೊಬ್ಬರು ಬರೆದಿದ್ದಾರೆ. ಡಿವೋರ್ಸ್ ಆಯ್ತು ಅಂತ ದುಃಖದಲ್ಲಿರುವ ಬದಲು ಇದು ಬೆಸ್ಟ್ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ವಿಚ್ಛೇದನ ಮೆಹಂದಿ ಕೇವಲ ಅಲಂಕಾರವಲ್ಲ, ಇದು ಮಹಿಳೆಯ ಸ್ವಾತಂತ್ರ್ಯ, ಆತ್ಮವಿಶ್ವಾಸ ಮತ್ತು ಸ್ವಾಭಿಮಾನದ ಸಂಕೇತ ಎಂದು ಮತ್ತೊಬ್ಬರು ಬರೆದಿದ್ದಾರೆ.

ಭಾರತದಂತ ಸಂಪ್ರದಾಯಿಕ ಸಮಾಜದಲ್ಲಿ ಡಿವೋರ್ಸ್ ಪಡೆಯೋದು ಸುಲಭವಲ್ಲ. ಹಿಂದೆ ಇದಕ್ಕೆ ಸಾಕಷ್ಟು ಕಟ್ಟಳೆಗಳಿದ್ದವು. ಮಹಿಳೆ ಇಂಥ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಹೆದರುತ್ತಿದ್ದಳು. ಆದ್ರೆ ಈಗಿನ ದಿನಗಳಲ್ಲಿ ಮಹಿಳೆಯರು ಸ್ವತಂತ್ರರಾಗಿದ್ದಾರೆ. ತಮ್ಮ ಹಕ್ಕಿಗಾಗಿ ಹೋರಾಡಲು ಕಲಿತಿದ್ದಾರೆ. ಅಲಿಖಿತವಾಗಿ ನಿಷಿದ್ಧವಾಗಿದ್ದ ಡಿವೋರ್ಸ್ ಈಗ ಭಾರತದಲ್ಲಿ ಹೆಚ್ಚಾಗ್ತಿದೆ. ನೋವಿನ ಸಂಗತಿ ಅಂದ್ರೆ ಸಣ್ಣ ವಿಚಾರಕ್ಕೂ ದಂಪತಿ ದೂರವಾಗ್ತಿದ್ದಾರೆ.

View post on Instagram