ಮಧ್ಯಪ್ರದೇಶದಲ್ಲಿ, ಗೆಳತಿಯ ಮನೆಯವರು ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಯುವಕನೊಬ್ಬ 33 ಕೆವಿ ವಿದ್ಯುತ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿದ್ದಾನೆ. ಸುಮಾರು ಮೂರು ಗಂಟೆಗಳ ಕಾಲ ಶೋಲೆ ಸಿನಿಮಾದಂತೆ ನಾಟಕವಾಡಿದ ಆತನನ್ನು, ಪೊಲೀಸರು ಚಾಣಾಕ್ಷತನದಿಂದ ಕೆಳಗಿಳಿಸಿ ರಕ್ಷಿಸಿದ್ದಾರೆ.

ಮಧ್ಯಪ್ರದೇಶ: ಗರ್ಲ್‌ಫ್ರೆಂಡ್ ಮದ್ವೆ ಆಗೋಕೆ ನಿರಾಕರಿಸಿದಳು ಅಂತ 19 ವರ್ಷದ ಯುವ ತರುಣನೋರ್ವ 33 ಕೆವಿ ಪವರ್‌ನ ಕರೆಂಟ್ ಟವರ್ ಏರಿದಂತಹ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.ಸಂತೋಷ್ ಸಾಕೇತ್ ಎಂಬ ಯುವಕನೋರ್ವ ಡೆವೊಲ್ಯಾಂಡ್‌ ಪ್ರದೇಶದಲ್ಲಿ ಕರೆಂಟ್ ಟವರ್‌ನ ಮೂರನೇ ಹಂತವನ್ನು ಏರಿ ತನ್ನ ಗೆಳತಿಯ ಹೆಸರನ್ನು ಕೂಗಿ ಹೇಳುತ್ತಾ ಗಲಾಟೆ ಮಾಡಿದ್ದಾನೆ. ಮದುವೆ ಮಾಡಿಕೊಡದಿದ್ದರೆ ಜೀವ ಬಿಡುವುದಾಗಿ ಆತ ಕರೆಂಟ್ ಟವರ್ ಮೇಲೆ ನಿಂತು ಜೀವ ಬೆದರಿಕೆ ಹಾಕಿದ್ದಾನೆ. ಕೂಡಲೇ ಸ್ಥಳೀಯರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಯುವಕನ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೂ ಕನಿಷ್ಠ ಮೂರು ಗಂಟೆಗಳ ಕಾಲ ಈತನ ಹೈ ವೋಲ್ಟೇಜ್ ಡ್ರಾಮಾ ಮುಂದುವರೆದಿದೆ.

ಸಂತೋಷ್ ಸಾಕೇತ್ ಹೇಳುವ ಪ್ರಕಾರ ಆತನ ಪ್ರೇಯಸಿಯ ಮನೆಯವರು ಆತನ ಜೊತೆ ತಮ್ಮ ಮಗಳ ಮದುವೆ ಮಾಡುವುದಕ್ಕೆ ನಿರಾಕರಿಸಿದ್ದಾರೆ ಎನ್ನಲಾಗಿದೆ. ಇದರಿಂದ ದುಃಖಿತನಾದ ಸಂತೋಷ್ ತನ್ನ ಕಷ್ಟದ ಬಗ್ಗೆ ಜನರ ಗಮನ ಸೆಳೆಯುವುದಕ್ಕೆ ಈ ಹೈಡ್ರಾಮಾ ಮಾಡಿದ್ದಾನೆ. ಸುಮಾರು 3 ಗಂಟೆಗಳ ಕಾಲ ಈತ ಶೋಲೆ ಮೂವಿಯ ವೀರು ಪಾತ್ರಧಾರಿಯಂತೆ ಟವರ್ ಮೇಲೆ ನಿಂತು ನಾಟಕ ಮಾಡಿದ್ದಾನೆ.

33ಕೆವಿಯ ಕರೆಂಟ್ ಟವರ್ ಏರಿದ ಸಂತೋಷ್ ತನ್ನ ಗೆಳತಿ ತನ್ನ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದಾಳೆ ಎಂದು ಕೂಗಾಡಿದ್ದಾನೆ. ನಂತರ ಸ್ಥಳೀಯ ನಿವಾಸಿಗಳು ಹಾಗೂ ಡೆವೊಲ್ಯಾಂಡ್ ಪೊಲೀಸರು ಆತನ ಮನವೊಲಿಸಿ ಕೆಳಗಿಳಿಸುವುದಕ್ಕೆ ಹಲವು ಪ್ರಯತ್ನ ಮಾಡಿದ್ದಾರೆ. ಆದರೆ ಆತ ಕೆಳಗಿಳಿಯುವುದಕ್ಕೆ ನಿರಾಕರಿಸಿದ್ದಾನೆ. ನಂತರ ಪೊಲೀಸರು ಮಹಿಳಾ ಸಿಬ್ಬಂದಿಯ ಮೂಲಕ ಫೋನ್‌ನಲ್ಲಿ ಆತನ ಜೊತೆ ಮಾತನಾಡುವಂತೆ ಮಾಡಿದ್ದಾರೆ.

ಬುದ್ಧಿವಂತಿಕೆಯ ನಡೆ ತೋರಿದ ಪೊಲೀಸರು,ಪೊಲೀಸರು ಮಹಿಳಾ ಕಾನ್‌ಸ್ಟೇಬಲ್ ಒಬ್ಬರಿಗೆ ಸಂತೋಷ್ ಜೊತೆ ಫೋನ್‌ನಲ್ಲಿ ಮಾತನಾಡಲು ವ್ಯವಸ್ಥೆ ಮಾಡಿದರು, ಅವರು ಆತನ ಗೆಳತಿಯಂತೆ ನಟಿಸಿ ಮಾತನಾಡಿದ್ದಾರೆ. ಅವಳು ಅವನನ್ನು ಮದುವೆಯಾಗಲು ಸಿದ್ಧ ಎಂದು ಅವನಿಗೆ ಭರವಸೆ ನೀಡಿದಳು. ಇದನ್ನು ಕೇಳಿದ ನಂತರವೇ ಸಂತೋಷ್ ಸುರಕ್ಷಿತವಾಗಿ ಕೆಳಗೆ ಬರಲು ಒಪ್ಪಿಕೊಂಡಿದ್ದಾನೆ..

ಮೂರು ಗಂಟೆಗಳ ಪ್ರಯತ್ನದ ನಂತರ, ಪೊಲೀಸರು ಅವನನ್ನು ಯಶಸ್ವಿಯಾಗಿ ರಕ್ಷಿಸಿದರು. ಡೆವೊಲ್ಯಾಂಡ್ ಪೊಲೀಸರ ಸಕಾಲಿಕ ಮತ್ತು ಚತುರ ನಡೆಯಿಂದ ಯುವಕನ ಜೀವ ಉಳಿದಿದೆ. ಡೆವೊಲ್ಯಾಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ನಿಮ್ಹಿಹಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

Scroll to load tweet…