ದೆಹಲಿ ಮೂಲದ ವ್ಯಕ್ತಿಯೊಬ್ಬರು ತಮ್ಮ 10 ಸ್ನೇಹಿತರಿಗಾಗಿ ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ 10 ಐಫೋನ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆರಂಭದಲ್ಲಿ ತಮಾಷೆ ಎಂದು ಭಾವಿಸಿದ್ದ ಸ್ನೇಹಿತರು, 14.7 ಲಕ್ಷದ ಬಿಲ್ ನೋಡಿದಾಗ ದಂಗಾಗಿ ಹೋದರು. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅನೇಕರು ತಮ್ಮ ಗರ್ಲ್‌ಫ್ರೆಂಡ್‌ಗೆ/ಬಾಯ್‌ಫ್ರೆಂಡ್‌ಗೆ ಅಥವಾ ಗಂಡ/ಹೆಂಡತಿಗೆ ತಾಯಿಗೆ ತಂಗಿಗೆ ಹೀಗೆ ಮೊಬೈಲ್ ಉಡುಗೊರೆಯಾಗಿ ನೀಡುತ್ತಾರೆ. ಈ ಸಮಯದಲ್ಲಿ ಅನೇಕರು ಸಾವಿರ ಬಾರಿ ಯೋಚನೆ ಮಾಡ್ತಾರೆ. ಯಾವ ಫೋನ್ ತೆಗೆದುಕೊಳ್ಳುವುದು ಎಂಬ ಆಯ್ಕೆಯಿಂದ ಹಿಡಿದು ಆ ಫೋನ್‌ಗೆ ಅಷ್ಟೊಂದು ಹಣ ವೆಚ್ಚ ಮಾಡುವುದು ಯೋಗ್ಯವೇ ಎನ್ನುವವರೆಗೆ ಯೋಚನೆ ಮಾಡುತ್ತಾರೆ. ಆದರೆ ಇಲ್ಲೊಬ್ಬರು ವ್ಯಕ್ತಿ ಸ್ನೇಹಿತರಿಗಾಗಿ ಐಫೋನ್ ಅನ್ನೇ ಖರೀದಿಸಿದ್ದಾರೆ. ಅದು ಬರೀ ಓರ್ವನಿಗಾಗಿ ಅಲ್ಲ, ಬರೋಬ್ಬರಿ 10 ಸ್ನೇಹಿತರಿಗಾಗಿ ವ್ಯಕ್ತಿಯೊಬ್ಬರು 15 ಲಕ್ಷ ರೂಪಾಯಿ ನೀಡಿ ಒಂದೇ ಸಮಯದಲ್ಲಿ 10 ಐಫೋನ್ 17 ಫೋನ್ ಖರೀದಿಸಿದ್ದು, ಇದನ್ನು ನೋಡಿ ಅವರ ಸ್ನೇಹಿತರೇ ಸ್ವತಃ ನಂಬಲಾಗದೇ ದಂಗಾಗಿ ಹೋಗಿದ್ದಾರೆ. ಇವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ವೀಡಿಯೋ ನೋಡಿದ ನೆಟ್ಟಿಗರು ನಮಗೂ ಇಂತಹ ಸ್ನೇಹಿತರಿದ್ದರೆ ಬೇಕಿತ್ತು ಎಂದು ಹಾಸ್ಯಮಯವಾಗಿ ಕಾಮೆಂಟ್ ಮಾಡ್ತಿದ್ದಾರೆ.
ಒಂದು ಫೋನ್‌ಗೆ ಒಂದೂವರೆ ಲಕ್ಷ ರೂಪಾಯಿಯಂತೆ ಅವರು ಸುಮಾರು 10 ಫೋನ್‌ಗಳನ್ನು ಮೊಬೈಲ್ ಶಾಪ್‌ನಲ್ಲಿ ಖರೀದಿಸಿದ್ದು, ಅವುಗಳ ಬೆಲೆ ನೋಡಿ ಸ್ವತಃ ಸ್ನೇಹಿತರು ಕೂಡ ಅಚ್ಚರಿ ಆಘಾತ ವ್ಯಕ್ತಪಡಿಸುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಹೀಗೆ ಸ್ನೇಹಿತರಿಗಾಗಿ ದುಬಾರಿ ಐಫೋನ್ ಖರೀದಿಸಿದ ವ್ಯಕ್ತಿ ದೆಹಲಿ ಮೂಲದ ವ್ಯಕ್ತಿ ಎಂದು ವರದಿಯಾಗಿದೆ. ವೈರಲ್ ಆದ ವೀಡಿಯೋದಲ್ಲಿ ಅವರು ತಮ್ಮ ಸ್ನೇಹಿತರಿಗೆ ಐಫೋನ್ ಲೇಟೆಸ್ಟ್ ಆವೃತಿ ಎನಿಸಿರುವ ಐಫೋನ್ ಫ್ರೋ ಮ್ಯಾಕ್ಸ್ ಅನ್ನು ಉಡುಗೊರೆ ನೀಡುವುದನ್ನು ನೋಡಬಹುದಾಗಿದೆ. ಈ ಐ ಫೋನ್ ಅದರ ದುಬಾರಿ ಬೆಲೆ ಹಾಗೂ ಪ್ರೀಮಿಯಂ ಪ್ಯೂಚರ್‌ಗಳಿಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿ ಪ್ರತಿ ಫೋನ್‌ಗೂ ಒಂದೂವರೆ ಲಕ್ಷ ರೂಪಾಯಿ ವೆಚ್ಚವಾಗಿದ್ದು, ಅವರು ಒಮ್ಮೆಲೇ 15 ಲಕ್ಷ ರೂಪಾಯಿ ನೀಡಿ ತಮ್ಮ 10 ಸ್ನೇಹಿತರಿಗಾಗಿ 10 ಫೋನ್ ಖರೀದಿಸಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ಆ ಸ್ನೇಹಿತರ ಗುಂಪು ಮೊಬೈಲ್ ಶಾಪೊಂದರ ಒಳಗೆ ನಿಂತಿರುವುದನ್ನು ನೋಡಬಹುದು. ತಮಗೆ ಗೆಳೆಯ ಈ ದುಬಾರಿ ಉಡುಗೊರೆ ನೀಡುತ್ತಿದ್ದಾನೆ ಎಂಬುದರ ಅರಿವಿಲ್ಲದೇ ಆ ವ್ಯಕ್ತಿಯ ಸ್ನೇಹಿತರು ಸುಮ್ಮನೇ ಅಲ್ಲಿ ತಮಾಷೆ ಮಾತನಾಡುತ್ತಾ ನಿಂತಿರುತ್ತಾರೆ. ನಾನು ಇದನ್ನು ನನ್ನ ಎಲ್ಲಾ ಸ್ನೇಹಿತರಿಗೆ ನೀಡುತ್ತಿದ್ದೇನೆ ಎಂದು ಆ ವ್ಯಕ್ತಿ ಹೇಳಿದಾಗ ಅವರ ಸ್ನೇಹಿತರು ನಗುತ್ತಾ ಅವರು ಹಾಸ್ಯ ಮಾಡುತ್ತಿದ್ದಾನೆಂದೇ ಭಾವಿಸಿದ್ದಾರೆ. ಆದರೆ ಅಂಗಡಿಯ ಮಾಲೀಕ ಎಲ್ಲ ಫೋನ್‌ಗಳನ್ನು ಪ್ಯಾಕ್ ಮಾಡಿ ಬಿಲ್ ನೀಡಿದಾಗಲೇ ಅವರಿಗೆ ಅಚ್ಚರಿ ಆಘಾತ ಎರಡು ಜೊತೆಗೆ ಆಗಿದೆ. 14.7 ಲಕ್ಷ ಬಿಲ್ ನೋಡಿ ಸ್ನೇಹಿತರು ಶಾಕ್ ಆಗಿದ್ದಾರೆ. ಅದರಲ್ಲೂ ಅವರ ಓರ್ವ ಸ್ನೇಹಿತನಂತು ಅಲ್ಲೇ ನೆಲದಲ್ಲಿ ತಲೆ ಹಿಡಿದುಕೊಂಡು ಕುಳಿತು ಇದು ತಮಾಷೆಯಾ ಎಂದು ಕೇಳುತ್ತಾನೆ. ಆದರೆ ಗಿಫ್ಟ್ ನೀಡುತ್ತಿರುವ ಸ್ನೇಹಿತ ಮಾತ್ರ ಶಾಂತವಾಗಿ ಬಿಲ್ ಫೇ ಮಾಡಿ ಅಲ್ಲಿದ್ದ ತಮ್ಮ ಸ್ನೇಹಿತರಿಗೆ ಐಫೋನ್ ನೀಡುವುದಕ್ಕೆ ಶುರು ಮಾಡಿದ್ದಾಗ ಅಲ್ಲಿದ್ದವರು ನಿಜಕ್ಕೂ ಅಚ್ಚರಿಯಿಂದ ಆತನನ್ನೇ ನೋಡಿದ್ದಾರೆ. ಅವರ ಜೊತೆಗೆ ಅಲ್ಲಿದ್ದ ಅಂಗಡಿ ಮಾಲೀಕನೂ ಕೂಡ ಶಾಕ್‌ನಿಂದ ನೋಡುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.
ಈ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿದ್ದು, ಇದು ನಿಜನಾ ಅಥವಾ ತಮಾಷೆನಾ ಒಂದೂ ಅರ್ಥ ಆಗ್ತಾ ಇಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ಸ್ನೇಹಿತರು ನಿಜವಾಗಿಯೂ ಇದ್ದಾರಾ ಇವರು ಎಲ್ಲಿ ಸಿಗ್ತಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ಉಡುಗೊರೆಯನ್ನು ನಾನು ಊಹೆ ಮಾಡುವುದಕ್ಕೂ ಸಾಧ್ಯವಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನನ್ನ ಸ್ನೇಹಿತರೋ ನಿನ್ನೆ ಅವರು ಫೇ ಮಾಡಿದ್ರೆ ನಾಳೆ ನನಗೆ ಫೇ ಮಾಡೋಕೆ ಹೇಳ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.


