ಲೆಫ್ಟ್, ರೈಟ್ ಸಿದ್ಧಾಂತ ಸೈಡಿಗಿಟ್ಟು ಸ್ಟ್ರೈಟ್ ಆಗಿ ಹಸೆಮಣೆಯೇರಿದ ಕೇರಳದ ಜೋಡಿ
ನೀವು ತಮಿಳಿನ 96 ಸಿನಿಮಾ ನೋಡಿದ್ದೀರಾ ? ಇದರಲ್ಲಿ ಬಾಲ್ಯಕಾಲದ ಕ್ರಶ್‌ನ್ನು ಮತ್ತೆ ಮೀಟ್ ಆಗಿ ಸಮಯ ಕಳೆಯುವ ಭಾವುಕ ಸನ್ನಿವೇಶವಿದೆ. ಹಾಗೆಯೇ ಇಲ್ಲೊಂದೆಡೆ ಹೈಸ್ಕೂಲ್‌ನ ಸಹಪಾಠಿಗಳಿಬ್ಬರು 35 ವರ್ಷಗಳ ಬಳಿಕ ಮದುವೆಯಾಗಿದ್ದಾರೆ. ಆ ಕುರಿತಾದ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ತ್ರಿಶ್ಯೂರ್: ಜೀವನವೇ ಒಂದು ಸಿನಿಮಾ ಇದ್ದಂತೆ. ಸಿನಿಮಾವೂ ಜೀವನದ ಕಥೆಯೇ. ಅದು ನಿಜವೆಂಬುದು ಹಲವು ಬಾರಿ ಸಾಬೀತಾಗಿದೆ. ಕೆಲವೊಂದು ಸಿನಿಮಾ (Movie) ಕಥೆಗಳು ನಿಜ ಜೀವನದಂತೆ ಭಾಸವಾಗಿ ಮನಸ್ಸನ್ನು ತಟ್ಟಿ ಬಿಡುತ್ತವೆ. ಎಮೋಷನಲ್ ಜರ್ನಿ ಭಾವುಕವಾಗಿಸಿಬಿಡುತ್ತದೆ. ಅಂಥಾ ಸಿನಿಮಾಗಳಲ್ಲೊಂದು ತಮಿಳಿನ 96 ಮೂವಿ. ಈ ಚಿತ್ರದಲ್ಲಿ ಬಾಲ್ಯದಲ್ಲಿ ಪ್ರೀತಿಸಿದ ಹುಡುಗ-ಹುಡುಗಿ ಎಷ್ಟೋ ವರ್ಷಗಳ ನಂತರ ಓಲ್ಡ್ ಸ್ಟೂಡೆಂಟ್ಸ್ ಮೀಟ್‌ನಲ್ಲಿ ಮತ್ತೆ ಮೀಟ್ ಆಗುವುದನ್ನು ನೋಡಬಹುದು. ಚಿಕ್ಕಂದಿನಲ್ಲೇ ಕ್ರಶ್ ಹೊಂದಿರುವ ಹುಡುಗ-ಹುಡುಗಿ ಬದುಕಿನಲ್ಲಿ ವಿವಿಧ ಹಂತಗಳನ್ನು ದಾಟಿ ಬಂದಿದ್ದರೂ ಪರಸ್ಪರ ಮತ್ತದೇ ಪ್ರೀತಿಯ ಭಾವನೆಯನ್ನು ಹೊಂದಿರುತ್ತಾರೆ. ಇಬ್ಬರು ಭೇಟಿಯಾದಾಗ ಮತ್ತದೇ ಮೊದಲ ಪ್ರೀತಿಯ ಅನುಭವವನ್ನು ಪಡೆಯುತ್ತಾರೆ.
ತಮಿಳಿನಲ್ಲಿ ಬಿಡುಗಡೆಯಾದ 96 ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಥಾಹಂದರ, ಬಾಲ್ಯ, ಹೈಸ್ಕೂಲ್ ಜೀವನ, ಸಹಪಾಠಿಗಳು, ಪ್ರೀತಿಯ ಪಯಣವನ್ನು ನಿರ್ದೇಶಕರು ಕೊಂಡೊಯ್ದ ರೀತಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚಿತ್ರದಲ್ಲಿ ತ್ರಿಶಾ ಮತ್ತು ವಿಜಯ್ ಸೇತುಪತಿ ಸಹ ಅದ್ಭುತವಾಗಿ ನಟಿಸಿದ್ದರು. ಸಂವಹನದ ಕೊರತೆಯಿಂದ ಅರ್ಧದಲ್ಲೇ ಉಳಿದ ಪ್ರೀತಿಯ ಬಗ್ಗೆ ಇಬ್ಬರಲ್ಲೂ ಪಶ್ಚಾತ್ತಾಪವಿರುತ್ತದೆ. ಇಬ್ಬರೂ ಹಿಂದಿನ ದಿನಗಳಂತೆಯೇ ಮತ್ತೆ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳಲಾಗದೆ ಕೇವಲ ಅನುಭವಿಸಿ ಖುಷಿ ಪಡುತ್ತಾರೆ. ಆದ್ರೆ ಇಬ್ಬರ ಜೀವನವೂ ಬೇರೆ ಬೇರೆ ಹಂತವನ್ನು ತಲುಪಿರುವ ಕಾರಣ ಇಬ್ಬರೂ ಮನಸ್ಸಿನ ಭಾವನೆಯನ್ನು ಮುಕ್ತವಾಗಿ ಹೇಳಲು ಸಾಧ್ಯವಾಗುವುದಿಲ್ಲ.
'ನಗುವ ಸದ್ದಿನಲ್ಲೇ ಹೃದಯ ಒಡೆದೆಯಾ...' ಮೋಸ ಮಾಡಿದ ಗರ್ಲ್‌ಫ್ರೆಂಡ್ ಹೆಸರು ಹೇಳದೆ ಉಸಿರುಬಿಟ್ಟ ಹುಡುಗ!
ಹೀಗಾಗಿ ಮತ್ತದೇ ಸುಂದರ ಪ್ರೀತಿಯ ಭಾವನೆಗಳೊಂದಿಗೆ ಇಬ್ಬರೂ ದೂರವಾಗುತ್ತಾರೆ. ಪ್ರೇಮಿಗಳು ವಿದಾಯ ಹೇಳುವ ಈ ದೃಶ್ಯ ಅತ್ಯಂತ ಭಾವುಕವಾಗಿದೆ. ಎಂಥವರ ಕಣ್ಣಲ್ಲೂ ನೀರು ತರಿಸುವಂತಿದೆ. ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದವರೆಲ್ಲರೂ ಕ್ಲೈಮ್ಯಾಕ್ಸ್ ಬಗ್ಗೆ ವಿಪರೀತ ಬೇಸರಗೊಂಡಿದ್ದರು. ಕೊನೆಯಲ್ಲಿ ಪ್ರೇಮಿಗಳಿಬ್ಬರು ಒಂದಾಗಬೇಕಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ರೀಲ್‌ನಲ್ಲಿ ಸ್ಯಾಡ್ ಎಂಡಿಂಗ್ ಆದರೂ ಕೇರಳದಲ್ಲೊಂದು ಜೋಡಿ ರಿಯಲ್ ಲೈಫ್‌ನಲ್ಲಿ ಈ ರೀತಿ ಮದುವೆಯಾಗಿದೆ.
ಎಡ-ಬಲ ಸಿದ್ಧಾಂತ ಬಿಟ್ಟು 35 ವರ್ಷದ ನಂತರ ಮದುವೆಯಾದ ಜೋಡಿ
ಕೇರಳದ ತ್ರಿಶ್ಯೂರ್‌ನ ಹರಿದಾಸನ್ ಮತ್ತ ಸುಮತಿ ಹೈಸ್ಕೂಲ್‌ನಲ್ಲಿ ಸಹಪಾಠಿ (Classmates)ಗಳಾಗಿದ್ದರು. ಈಗ ಬರೋಬ್ಬರಿ 35 ವರ್ಷಗಳ ನಂತರ ಸ್ನೇಹಿತರೆಲ್ಲಾ ಸೇರಿ ಇವರಿಬ್ಬರ ಮದುವೆ (Marriage) ಮಾಡಿಸಿದ್ದಾರೆ. 1986-87ರಲ್ಲಿ 10ನೇ ತರಗತಿಯ ವಿದ್ಯಾರ್ಥಿ ಹರಿದಾಸನ್ ಕೆಎಸ್‌ಯು ನಾಯಕರಾಗಿದ್ದರು ಮತ್ತು ಅವರ ಸಹಪಾಠಿ ಸುಮತಿ ಎಸ್‌ಎಫ್‌ಐ ಕಾರ್ಯಕರ್ತರಾಗಿದ್ದರು. ಇಬ್ಬರೂ ಎಡ-ಬಲ ಪಕ್ಷದ ನಾಯಕರು ಈಗ ಮದುವೆಯಾಗಿದ್ದಾರೆ. ಹೈಸ್ಕೂಲ್ ಮುಗಿಸಿ 35 ವರ್ಷಗಳ ನಂತರ, ಕೆಎಸ್‌ಯು ನಾಯಕ ಕಲಾಮಂಡಲಂ ಹರಿದಾಸನ್. ಸಿಪಿಎಂ ಪನ್ನಿತ್ತಡಂ ಶಾಖೆಯ ಸದಸ್ಯೆ, ಮಹಿಳಾ ಸಂಘದ ಕಾರ್ಯಕರ್ತೆ ಹಾಗೂ ಚೋವನ್ನೂರು ಬ್ಲಾಕ್ ಪಂಚಾಯತ್ ಮಾಜಿ ಅಧ್ಯಕ್ಷೆ ಸುಮತಿ, ಮದುವೆಯಾದರು.
'ಪಾಕಿಸ್ತಾನದ ಮೊಗ್ಗಿನ ಮನಸು..' 52 ವರ್ಷದ ಶಿಕ್ಷಕನಿಗೆ ಮನಸ್ಸು ಕೊಟ್ಟ 20 ವರ್ಷದ ವಿದ್ಯಾರ್ಥಿನಿ!
ಹಳೆಯ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್‌ನಿಂದ ಮದುವೆಯ ನಿರ್ಧಾರ
ಮರತಂಕೂಡು ಸರ್ಕಾರಿ ಹೈಸ್ಕೂಲಿನ ಹಳೆಯ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ಜೋಡಿಯನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಮೂರು ವರ್ಷಗಳ ಹಿಂದೆ ನಡೆದ ರಿ ಯೂನಿಯನ್‌ನಲ್ಲಿ ಸ್ನೇಹಿತರೆಲ್ಲರೂ (Friends) ಹರಿದಾಸನ್ ಹಾಗೂ ಸುಮತಿ ಈಗಲೂ ಅವಿವಾಹಿತರು ಎಂಬುದನ್ನು ಕಂಡುಕೊಂಡರು. ಇದನ್ನು ತಿಳಿದು ಹೈಸ್ಕೂಲ್‌ನಲ್ಲಿ ಕ್ಲಾಸ್ ಲೀಡರ್ ಆಗಿದ್ದ ಸತೀಶನ್ ಇಬ್ಬರೂ ಮದುವೆಯಾಗಲು ಸಿದ್ಧರಿದ್ದೀರಾ ಎಂದು ಕೇಳಿದರು. ಆದ್ರೆ ಹರಿದಾಸನ್ ಹಾಗೂ ಸುಮತಿ ಈ ಮದುವೆ ಇಷ್ಟವಿರಲ್ಲಿಲ್ಲ. ಮದುವೆಯ ಕುರಿತು ಯಾವತ್ತೂ ಯೋಚಿಸಿಯೇ ಇರಲ್ಲಿಲ್ಲ ಎಂದರು. ಆದ್ರೆ ತರಗತಿಯ ಹಲವರು ಮದುವೆಗೆ ಬೆಂಬಲ ಸೂಚಿಸಿದರು.
ಸಹಪಾಠಿಗಳ ಒತ್ತಾಯದ ಮೇರೆಗೆ ಈ ಜೋಡಿಯ ಮದುವೆ ಕುಟುಂಬ ಹಾಗೂ ಸ್ನೇಹಿತರ ಬಳಗದ ಸಮ್ಮುಖದಲ್ಲಿ ನಡೆಯಿತು. ಕಣ್ಣಬಾತುಕಾವು ದೇವಿ ದೇವಾಲಯದಲ್ಲಿ ನಡೆದ ಮದುವೆಯಲ್ಲಿ 250ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಬಾಲ್ಯಕಾಲದ ಸ್ನೇಹಿತರೆಲ್ಲರೂ ಹರಿದಾಸನ್ ಹಾಗೂ ಸುಮತಿ ಇಬ್ಬರನ್ನೂ ಒಂದು ಮಾಡಿದ ಖುಷಿಯಲ್ಲಿದ್ದರು.