ಆಚಾರ್ಯ ಚಾಣಕ್ಯರ ನೀತಿಯ ಪ್ರಕಾರ, ಜೀವನದಲ್ಲಿ ಕೆಲವು ಸಂಗತಿಗಳು ಮಿತಿಯಲ್ಲಿದ್ದರೆ ಅಮೃತದಂತೆ ಪ್ರಯೋಜನಕಾರಿ. ಆದರೆ, ಅತಿಯಾದಾಗ, ಅವು ವಿಷವಾಗಿ ಪರಿಣಮಿಸಿ ಸಂಬಂಧಗಳನ್ನು ಮತ್ತು ನೆಮ್ಮದಿಯನ್ನು ನಾಶಮಾಡುತ್ತವೆ.
ಆಚಾರ್ಯ ಚಾಣಕ್ಯರು ರಾಜನೀತಿಜ್ಞನಾಗಿ ಮಾತ್ರವಲ್ಲದೆ ಮಹಾನ್ ತತ್ವಜ್ಞಾನಿಯಾಗಿಯೂ ಖ್ಯಾತಿ ಹೊಂದಿದವರು. ಚಾಣಕ್ಯ ನೀತಿ (Chanakya Niti) ಹೆಸರಿನಲ್ಲಿ ಅವರ ಬೋಧನೆಗಳು ಇಂದಿಗೂ ಜನರಿಗೆ ಮಾರ್ಗದರ್ಶನ ನೀಡುತ್ತಿವೆ. ಜೀವನವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು, ಇತರರೊಂದಿಗೆ ಹೇಗೆ ವ್ಯವಹರಿಸಬೇಕು, ಸಂಬಂಧ ಹೇಗೆ ಕಾಪಾಡಿಕೊಳ್ಳಬೇಕು, ರಾಜ್ಯವನ್ನು ಹೇಗೆ ಆಳಬೇಕು ಎಂಬುದೆಲ್ಲದರ ಕುರಿತು ಅವರ ನೀತಿಗಳಲ್ಲಿ ತಿಳಿಸಿದ್ದಾರೆ. ಮಾನವ ಸಂಬಂಧಗಳ ಬಗ್ಗೆ ಅವರು ತಿಳಿಸಿದ ವಿಷಯಗಳು ಹೆಚ್ಚಿನ ಮೌಲ್ಯವನ್ನು ಹೊಂದಿವೆ. ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವಾಗಿರಬಹುದು, ಸ್ನೇಹವಾಗಿರಬಹುದು ಅಥವಾ ರಕ್ತ ಸಂಬಂಧವಾಗಿರಬಹುದು. ಯಾವುದೇ ಸಂಬಂಧವು ಶಾಶ್ವತವಾಗಿ ಉಳಿಯಲು ಮತ್ತು ಸಂತೋಷವಾಗಿರಲು, ಅದು ಚಾಣಕ್ಯ ಸೂಚಿಸಿದ ಪ್ರಮುಖ ಸೂತ್ರಗಳನ್ನು ಅನುಸರಿಸಬೇಕು.
ಮುಖ್ಯವಾಗಿ ಅವರು 7 ʼಮಿತಿಯಲ್ಲಿದ್ದರೆ ಅಮೃತ, ಆದರೆ ಅತಿಯಾದರೆ ವಿಷʼಗಳ ಬಗ್ಗೆ ಹೇಳುತ್ತಾರೆ. ಜೀವನದಲ್ಲಿ ಕೆಲವು ಸಂಗತಿಗಳು ಅಮೃತವಾಗಿದ್ದರೂ, ಅಗತ್ಯಕ್ಕಿಂತ ಅಧಿಕವಾದಾಗ ವಿಷದಂತೆ ಮಾರ್ಪಟ್ಟುಬಿಡುತ್ತವೆ. ಅಂಥ ಕೆಲವು ಸಂಗತಿಗಳನ್ನು ಇಲ್ಲಿ ನೋಡೋಣ.
ಹಣ
ಅಗತ್ಯಕ್ಕೆ ತಕ್ಕಷ್ಟು ಹಣ ಬದುಕಲು ಎಲ್ಲರಿಗೂ ಅಗತ್ಯವಾದುದು. ಹಣಕಾಸಿಲ್ಲದ ಜೀವನ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಹಣವಿಲ್ಲದವನನ್ನೂ ಹೆಣಕ್ಕೆ ಸಮಾನ- ಹಣವಿಲ್ಲದವನನ್ನು ಹೆಣವೂ ಕೇರ್ ಮಾಡುವುದಿಲ್ಲ ಇತ್ಯಾದಿ ಮಾತುಗಳನ್ನು ನೀವು ಕೇಳಿರುತ್ತೀರಿ. ಆದರೆ ಹಣದ ಕುರಿತಾದ ಲೋಭ ಅತಿಯಾದಾಗ ಹತ್ತಿರದ ಸಂಬಂಧಗಳಲ್ಲಿಯೇ ಬಿರುಕು ಮೂಡುತ್ತದೆ. ಎಷ್ಟೇ ಹಣವಿದ್ದರೂ ಹಳಸಿದ ಸಂಬಂಧ ಹಾಗೂ ನೆಮ್ಮದಿ ಸರಿಪಡಿಸಲಾಗುವುದಿಲ್ಲ.
ಸಮಯ
ಸಮಯವನ್ನು ಅಮೂಲ್ಯ ಎಂದು ಹೇಳಲಾಗುತ್ತದೆ. ಒಮ್ಮೆ ಅದು ಹೋದರೆ ಮತ್ತೆ ಬರುವುದಿಲ್ಲ. ಆದ್ದರಿಂದ, ಪ್ರತಿ ನಿಮಿಷವನ್ನೂ ಸದುಪಯೋಗಪಡಿಸಿಕೊಳ್ಳುವುದು ಉತ್ತಮ. ಸಮಯಪಾಲನೆ ಇಲ್ಲದಿದ್ದರೆ, ಯಶಸ್ಸು ಅಸ್ಪಷ್ಟವಾಗಿರುತ್ತದೆ. ನಿಮ್ಮ ಗುರಿ ಸಾಧಿಸಲು ನೀವು ಅನಗತ್ಯ ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಬೇಕು ಮತ್ತು ಪ್ರತಿ ಕ್ಷಣವನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳಬೇಕು. ಸಮಯ ಬೇಕಾದಷ್ಟಿದೆ ಎಂದು ವ್ಯರ್ಥ ಮಾಡುವುದು ವಿಷವಿದೆ ಎಂದು ಸೇವಿಸಿದ ಹಾಗೆ.
ಸ್ವಾಭಿಮಾನ
ಸ್ವಾಭಿಮಾನ ಬೇಕು. ಆದರೆ ಅದು ಅತಿಯಾದಾಗ ದುರಭಿಮಾನ ಆಗುತ್ತದೆ. ಅಹಂಕಾರವಾಗಿ ಮಾರ್ಪಡುತ್ತದೆ. ಅದು ನಮ್ಮನ್ನು ನಮ್ಮ ಜೀವನವನ್ನು ಹಿಂದಕ್ಕೆ ಕರೆದುಕೊಂಡು ಹೋಗುತ್ತದೆ. ವಿನಮ್ರತೆ ಇಲ್ಲದ ವ್ಯಕ್ತಿಯನ್ನು ಸಮಾಜ ಒಪ್ಪುವುದಿಲ್ಲ. ದುರಹಂಕಾರಿಗಳಾದ ಜನರು ಸಾಮಾನ್ಯವಾಗಿ ಒಂಟಿಯಾಗಿರುತ್ತಾರೆ. ಆದ್ದರಿಂದ, ಯಾವಾಗಲೂ ವಿನಮ್ರ ಮತ್ತು ವಿನಯತೆಯಿಂದ ಇರುವುದು ಉತ್ತಮ. ನಾವು ಎಷ್ಟೇ ಕಲಿತರೂ ಕಲಿಯಲು ಇನ್ನೂ ಹೆಚ್ಚಿನದ್ದಿರುತ್ತದೆ.
ಕೋಪ
ಸ್ವಲ್ಪ ಕೋಪವಿರುವುದು, ಸಾತ್ವಿಕ ಕೋಪವನ್ನು ಹೊಂದಿರುವುದು, ಅನ್ಯಾಯ ಸಂಭವಿಸಿದಾಗ ಕೋಪ ತೋರಿಸುವುದು ವ್ಯಕ್ತಿಗೆ ಭೂಷಣ. ಆದರೆ ಹೆಚ್ಚಾದ ಕೋಪವು ನಮ್ಮ ಆಲೋಚನೆಗಳನ್ನು ಆವರಿಸುತ್ತದೆ. ಅಸಹನೆ ಮತ್ತು ಕೋಪದಿಂದ ತೆಗೆದುಕೊಳ್ಳುವ ನಿರ್ಧಾರಗಳು ನಂತರ ವಿಷಾದಕ್ಕೆ ಕಾರಣವಾಗಬಹುದು. ವ್ಯಕ್ತಿಗಳ ನಡುವಿನ ಸಂಬಂಧಗಳನ್ನು ಹಾಳುಮಾಡಲು ಕೋಪ ಪ್ರಮುಖ ಕಾರಣ. ಆದ್ದರಿಂದ, ತಾಳ್ಮೆಯನ್ನು ಬೆಳೆಸಿಕೊಳ್ಳುವುದು ಮತ್ತು ಪ್ರತಿಯೊಂದು ಸನ್ನಿವೇಶವನ್ನು ಸೂಕ್ಷ್ಮವಾಗಿ ನಿಭಾಯಿಸುವುದು ಅತ್ಯಗತ್ಯ.
ಕಾಮ
ಒಳ್ಳೆಯ ವೈವಾಹಿಕ ಸಂಬಂಧದಿಂದ ಕಾಮ ಅತ್ಯಗತ್ಯ ಅಂಶ. ಅದುವೇ ದಾಂಪತ್ಯವನ್ನು ಸಕಾರಾತ್ಮಕವಾಗಿ ಮುಂದಕ್ಕೆ ಒಯ್ಯುವ ಸಾಧನ. ಆದರೆ ಅದು ಅತಿಯಾದಾಗ, ವೈವಾಹಿಕ ಬಾಂಧವ್ಯವನ್ನು ಮೀರಿ ಹೋದಾಗ, ವ್ಯಕ್ತಿಯನ್ನು ಮಾತ್ರವಲ್ಲ ಇಡೀ ಸಂಸಾರವನ್ನು ನಾಶ ಮಾಡುತ್ತದೆ. ಕಾಮದ ಆಲೋಚನೆಗಳು ಮನಸ್ಸಿನಲ್ಲಿ ತುಂಬಿದ್ದರೆ, ತಾಮಸಿಕ ಶಕ್ತಿ ಹೆಚ್ಚಾಗಿ ಸಾತ್ವಿಕ ಶಕ್ತಿ ಕಡಿಮೆಯಾಗುತ್ತದೆ. ಅಂಥವನು ಕೆಟ್ಟ ಕೆಲಸ ಮಾಡಿ ಜೈಲಿಗೆ ಹೋಗುತ್ತಾನೆ.
ರಾಜಕೃಪೆ
ರಾಜಕೃಪೆ ಅಥವಾ ಅಧಿಕಾರದಲ್ಲಿರುವವರ ಕೃಪೆ ಇದ್ದವರು ಭಾಗ್ಯವಂತರೇ ಸರಿ. ಆದರೆ ಅದು ನಿಮ್ಮ ಬದುಕಿನ ಬಹು ಪ್ರಮುಖ ಸಂಗತಿಗಳನ್ನು ನಿರ್ಧರಿಸುವಷ್ಟು ಇರಬಾರದು. ಆಗ ಅಧಿಕಾರಸ್ಥರು ನಿಮ್ಮ ಬಾಳಿನಲ್ಲಿ ಆಟವಾಡಿ ನಿಮ್ಮ ವ್ಯಕ್ತಿತ್ವವನ್ನು ನಗಣ್ಯ ಮಾಡಿಬಿಡಬಹುದು. ನಿಮ್ಮ ಸ್ವಾಭಿಮಾನವನ್ನೇ ಕಳೆದುಹಾಕಬಹುದು.
ಸಾಲ
ಅಲ್ಪಸ್ವಲ್ಪ ಸಾಲ ಮಾಡಿದರೆ ಪರವಾಗಿಲ್ಲ. ಅದನ್ನು ಸಾಧ್ಯವಾದಷ್ಟು ಬೇಗನೆ ತೀರಿಸಲು ಮುಂದಾಗಬೇಕು. ಅದನ್ನು ಬೆಳೆಯಲು ಬಿಟ್ಟರೆ ಬಡ್ಡಿ ಚಕ್ರಬಡ್ಡಿ ಸೇರಿ ಹೆಮ್ಮರವಾಗುತ್ತದೆ. ಮನಶಾಂತಿಯನ್ನು ಕೆಡಿಸುತ್ತದೆ. ಆತ್ಮವಿಶ್ವಾಸವನ್ನು ನಾಶ ಮಾಡುತ್ತದೆ. ಸಂಸಾರದ ನೆಮ್ಮದಿಯ ದಿನಗಳು ಇಲ್ಲವಾಗುತ್ತವೆ.
