ಆಚಾರ್ಯ ಚಾಣಕ್ಯರ ನೀತಿ (Chanakya Niti) ಪ್ರಕಾರ, ತೆಂಗಿನ ಮರದಿಂದ ನಾವು ಅನೇಕ ಜೀವನ ಪಾಠಗಳನ್ನು ಕಲಿಯಬಹುದು. ಪ್ರಾಣಿ ಪಕ್ಷಗಳಿಂದಲೂ ಗುಣಗಳನ್ನು ಕಲಿತು ಅಳವಡಿಸಿಕೊಳ್ಳಬಹುದು ಎಂದಿರುವ ಚಾಣಕ್ಯರು ತೆಂಗಿನ ಮರದಿಂದಲೂ ನಾವು ಅಂಥ ಗುಣ ಕಲಿಯಬೇಕು ಎನ್ನುತ್ತಾರೆ. 

ಒಳ್ಳೆಯ ಸಂಗತಿಗಳನ್ನು ಎಲ್ಲಾ ಕಡೆಯಿಂದ ಸ್ವೀಕರಿಸಬೇಕು ಎನ್ನುತ್ತಾರೆ ಹಿರಿಯರು. ಆಚಾರ್ಯ ಚಾಣಕ್ಯರೂ ತಮ್ಮ ನೀತಿಶಾಸ್ತ್ರದಲ್ಲಿ ಇದನ್ನೇ ಹೇಳುತ್ತಾರೆ. ಹೀಗೆ ಸ್ವೀಕರಿಸಿದ ಸದ್ವಿಚಾರಗಳನ್ನು ಬದುಕಿನಲ್ಲಿ ರೂಢಿಸಿಕೊಂಡರೆ ಬದುಕು ಇನ್ನಷ್ಟು ಅದ್ಭುತವಾಗಿ ಕಾಣಸಿಗುತ್ತವೆ. ಬರೀ ಮನುಷ್ಯರಿಂದಷ್ಟೇ ಅಲ್ಲ ನಮ್ಮ ಸುತ್ತಮುತ್ತಲೂ ಇರುವ ಗಿಡಮರಗಳಿಂದಲೂ ಪ್ರಾಣಿ ಪಕ್ಷಿಗಳಿಂದಲೂ ನಾವು ಈ ಪಾಠವನ್ನು ಕಲಿಯಬಹುದು ಎನ್ನುತ್ತಾರೆ. ಕಲಿಯುವುದಕ್ಕೆ ಇಷ್ಟವಿದ್ದರೆ ತೆಂಗಿನ ಮರದಿಂದಲೂ ಕೆಲವು ಗುಣಗಳನ್ನು ಕಲಿಯಬಹುದಂತೆ. ಆ ಪಾಠಗಳೇನು? ಇಲ್ಲಿ ನೋಡೋಣ.

ನೇರತನ

ತೆಂಗಿನ ಮರ ನೇರವಾಗಿರುತ್ತದೆ. ಎಲ್ಲೋ ಕೆಲವು ಮರಗಳು ಮಾತ್ರ ಬಾಗುವುದು ಉಂಟಾದರೂ ಅವುಗಳ ಸಂಖ್ಯೆ ಅತ್ಯಲ್ಪ. ಹತ್ತಾರು ಮೀಟರ್‌ಗಳಷ್ಟು ಉದ್ದಕ್ಕೆ ನೆಟ್ಟಗೆ ಬೆಳೆದು ನಿಂತು ರುಚಿಕರವಾದ ಫಲಗಳನ್ನು ಕೊಡುತ್ತದೆ. ಬದುಕಿನಲ್ಲಿ ನೇರವಂತಿಕೆ ಬೇಕು. ಯಾರಿಗೂ ಬಾಗಬಾರದು, ಅನ್ಯಾಯಕ್ಕೆ ತಲೆತಗ್ಗಿಸಬಾರದು. ಪ್ರಾಮಾಣಿಕತೆ ಇರಬೇಕು. ಚಾಡಿಗೆ ಕಿವಿಗೊಡಬಾರದು. ದೈನ್ಯ ಇರಬಾರದು. ಅದೇ ಬದುಕಿನಲ್ಲಿ ಉತ್ತಮವಾದ ಫಲ ನೀಡುತ್ತದೆ.

ಹೊರಗೆ ಕಠಿಣ, ಒಳಗೆ ರುಚಿ

ತೆಂಗಿನ ಮರವು ನೆಲದಿಂದ ನೀರು ಗೊಬ್ಬರಗಳನ್ನು ಹೀರಿಕೊಂಡು ನೆಟ್ಟಗೆ ಬೆಳೆದು ರುಚಿಕರವಾದ, ಪೌಷ್ಟಿಕವಾದ ತೆಂಗಿನಕಾಯಿಗಳನ್ನು ನೀಡುತ್ತದೆ. ಆದರೆ ಇದು ಸುಲಭವಾಗಿ ಯಾರಿಗೂ ಲಭ್ಯವಿರುವುದಿಲ್ಲ. ಕಷ್ಟಪಟ್ಟು ಮರ ಏರಿ ಕಾಯಿಯನ್ನು ಕೊಯ್ದರೆ ಸಾಲದು. ಅದರ ಸಿಪ್ಪೆ ಸುಲಿಯಲೂ ಹೊರಗಿನ ಚಿಪ್ಪನ್ನು ಒಡೆಯಲೂ ಕಷ್ಟಪಡಬೇಕು. ಆದರೆ ಒಳಗೆ ಸವಿಯಾದ ನೀರು ಹಾಗೂ ತೆಂಗು ದೊರೆಯುತ್ತದೆ. ನೀವು ಕೂಡ ಪರಿಶ್ರಮಿಗಳಿಗೆ ಮಾತ್ರ ನಿಮ್ಮಲ್ಲಿರುವ ಜ್ಞಾನ, ವಿದ್ಯೆಯನ್ನು ಧಾರೆ ಎರೆದರೆ ಸಾಕು.

ಎಲ್ಲವೂ ಉಪಯುಕ್ತ

ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯುವುದಕ್ಕೆ ಕಾರಣ ಅದರ ಸರ್ವೋಪಯುಕ್ತತೆ. ಅದರ ಯಾವ ಅಂಗವೂ ನಿರುಪಯುಕ್ತವಲ್ಲ. ತೆಂಗು ತಿನ್ನಲು, ಅಡುಗೆಗೆ, ಗರಿ ಮನೆಗೆ ಹೊದೆಸಲು, ಚಪ್ಪರಕ್ಕೆ, ಕಾಂಡ ಮಾಡಿಗೆ ಆಧಾರವಾಗಿ, ಹೀಗೆ ಎಲ್ಲವೂ ಉಪಯುಕ್ತವೇ. ತೆಂಗಿನ ಮಡಲು ಹಸಿಯಿದ್ದರೂ ಒಣಗಿದ್ದರೂ ಪ್ರಯೋಜನವಿದೆ. ತೆಂಗಿನ ಕಾಯಿ ಎಳನೀರಾಗಿದ್ದಾಗಲೂ ಒಣಗಿ ಕೊಬ್ಬರಿಯಾದರೂ ಪ್ರಯೋಜನವಿದೆ. ಹೀಗೆ ಎಲ್ಲ ಕಾಲಕ್ಕೂ ಎಲ್ಲರಿಗೂ ಉಪಯುಕ್ತನಾಗಿದ್ದವನನ್ನು ಸಮಾಜ ಗೌರವಿಸುತ್ತದೆ.

ಕುಟುಂಬಕ್ಕೆ ಆಧಾರ

ಬಡ ಕುಟುಂಬಗಳು ತೆಂಗಿನ ಮರವನ್ನೇ ಆಶ್ರಯಿಸಿ ಬದುಕಿರುವುದುಂಟು. ಇದು ಇತರ ಮರಗಳ ಹಾಗಲ್ಲ. ವರ್ಷದ ಪ್ರತಿ ಕಾಲದಲ್ಲಿಯೂ ಫಲವನ್ನು ನೀಡುತ್ತದೆ. ನಾಲ್ಕಾರು ತೆಂಗಿನ ಮರಗಳಿದ್ದರೆ ಅದನ್ನು ಆಶ್ರಯಿಸಿ ಒಂದು ಕುಟುಂಬವೇ ಬದುಕಿಬಿಡಬಹುದು. ಅದರ ಎಳನೀರು, ತೆಂಗಿನಕಾಯಿ, ಗರಿ ಎಲ್ಲವೂ ಆದಾಯಮೂಲವೇ. ಯಜಮಾನನಾದವನು ಹೀಗೇ ತನ್ನ ಕುಟುಂಬಕ್ಕೆ ಆಶ್ರಯದಾತನಾಗಿರಬೇಕಾಗುತ್ತದೆ.

ಅಳಿದ ಮೇಲೂ ಉಪಕಾರ

ಸಜ್ಜನರ ಕೀರ್ತಿಯನ್ನು ಅವರು ದೇಹಾವಸಾನ ಹೊಂದಿದ ಬಳಿಕವೂ ಸಮಾಜ ಕೀರ್ತಿಸುತ್ತಿರುತ್ತದೆ. ಸಜ್ಜನರು ತಾವು ಬದುಕಿರುವಾಗ ಮಾತ್ರವಲ್ಲದೆ ಸತ್ತ ಮೇಲೂ ಸಮಾಜಕ್ಕೆ ಬೆಳಕಾಗವಂಥ ವಿಷಯಗಳನ್ನು ಬಿಟ್ಟು ಹೋಗಿರುತ್ತಾರೆ. ಹಾಗೆಯೇ ತೆಂಗಿನ ಮರ ಫಲ ಕೊಡುವುದು ನಿಲ್ಲಿಸಿದ ಮೇಲೂ, ಕಡಿದು ಉರುಳಿಸಿದ ಮೇಲೂ ಮನೆಯ ಮಾಡಿಗೆ ಆಧಾರವಾಗಿ, ಪೀಠೋಪಕರಣವಾಗಿ, ಉರುವಲಾಗಿ ಉಪಯುಕ್ತವಾಗುತ್ತದೆ.

ದೀರ್ಘಾಯುಷ್ಯ

ತೆಂಗಿನ ಮರಗಳು ನೂರಾರು ವರ್ಷ ಬದುಕುತ್ತವೆ. ಅಷ್ಟು ವರ್ಷಗಳ ಕಾಲವೂ ಸಿಹಿಯಾದ ತೆಂಗಿನ ಕಾಯಿಗಳನ್ನು ಕೊಡುತ್ತವೆ. ಇವುಗಳ ದೀರ್ಘಾಯುಷ್ಯದ ರಹಸ್ಯ ಏನು ಗೊತ್ತೆ? ಕಡಿಮೆ ಸೇವನೆ ಹಾಗೂ ಹೆಚ್ಚು ಕೊಡುವಿಕೆ. ನಿಜ, ಇವುಗಳು ತಮ್ಮ ಪೋಷಣೆಗೆ ಹೆಚ್ಚನ್ನೇನೂ ಬೇಡುವುದಿಲ್ಲ. ಇವು ಗಿಡಗಳಾಗಿದ್ದಾಗ ಸ್ವಲ್ಪ ನೀರು ಗೊಬ್ಬರ ಕೊಟ್ಟು ನೋಡಿಕೊಂಡರೆ ಸಾಕು. ದೊಡ್ಡವಾದ ಬಳಿಕ ತಮ್ಮ ಅಗತ್ಯ ತಾವೇ ನೋಡಿಕೊಳ್ಳುತ್ತವೆ. ಆದರೆ ಜೀವನಪೂರ್ತಿ ಕೊಡುಗೈದಾನಿಯಾಗಿಯೇ ಇರುತ್ತವೆ. ಸಜ್ಜನರಿಗೂ ದುರ್ಜನರಿಗೂ ಭೇದವಿಲ್ಲದೆ ಕೊಡುತ್ತಿರುತ್ತವೆ.