ಒಂದು ಕಾರ್ಯಕ್ಷೇತ್ರ ಅಂತ ಇದ್ದ ಮೇಲೆ ಅಲ್ಲಿ ನಿಮ್ಮ ಒಳಿತನ್ನು ಬಯಸುವವರು ಇದ್ದಂತೆ ನಿಮ್ಮ ಸೋಲನ್ನೇ ಬಯಸೋ ಸಹೋದ್ಯೋಗಿಗಳೂ ಇರುತ್ತಾರೆ. ಇವರು ನಿಮ್ಮ ಕಾಲಿಗೆ ಅಡ್ಡಗಾಲು ಇಡುವುದರಲ್ಲಿ ಪಳಗಿರುತ್ತಾರೆ. ಅಂಥವರನ್ನು ನಿಭಾಯಿಸಲು ಚಾಣಕ್ಯ ನೀಡಿದ ಸೂತ್ರಗಳು ಇಲ್ಲಿವೆ.
ಕಚೇರಿ ಅಂದ ಮೇಲೆ ಅಲ್ಲಿ ಹಲವು ರೀತಿಯ ಸಹೋದ್ಯೋಗಿಗಳು ಇರುತ್ತಾರೆ. ಒಳ್ಳೆಯ ಕೊಲೀಗುಗಳು ಇದ್ದಂತೆ ಕಿರಿಕಿರಿ ಮಾಡುವ, ನಿಮ್ಮನ್ನು ಕಂಡರೆ ಆಗದ, ಹಿಂದಿನಿಂದ ಆಡಿಕೊಳ್ಳುವ, ಎದುರಿನಿಂದ ಇಷ್ಟಪಟ್ಟಂತೆ ನಟಿಸಿದರೂ ಹಿಂದಿನಿಂದ ಇರಿಯುವ, ಬಾಸ್‌ಗೆ ಚಾಡಿ ಹೇಳುವ, ನಿಮ್ಮನ್ನು ತುಳಿಯಲು ರಾಜಕೀಯ ಮಾಡುವ ಸಹೋದ್ಯೋಗಿಗಳೂ ಇರುತ್ತಾರೆ. ನೀವು ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳದೆ ಅವರನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ಮುಂದುವರಿಯುವುದು ಕಷ್ಟವಾಗುತ್ತದೆ. ಆಚಾರ್ಯ ಚಾಣಕ್ಯರು ನೀಡುವ ಈ ಸಲಹೆಗಳು ಖಂಡಿತವಾಗಿಯೂ ನೀವು ಅಂಥ ಸಹೋದ್ಯೋಗಿಗಳ ಜತೆಗೆ ಕೆಲಸ ಮಾಡಲು, ಕೀಳು ಸ್ವಭಾವದವರನ್ನು ನಿಭಾಯಿಸಲು ಸಹಾಯ ಮಾಡುತ್ತದೆ.
ವೈಯಕ್ತಿಕ ದ್ವೇಷ ಬೇಡ
ನಿಮ್ಮ ಸಹೋದ್ಯೋಗಿಗಳು ಕ್ಷುದ್ರ ಸ್ವಭಾವದವರಾಗಿದ್ದರೆ, ಅವರು ಹಾಗೆಯೇ ಇರಲಿ. ಅದು ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ, ನಿಮ್ಮದಲ್ಲ. ಅವರನ್ನು ತಿದ್ದುವುದು ನಿಮ್ಮಿಂದ ಸಾಧ್ಯವಿಲ್ಲ, ತಿದ್ದಲು ಹೋಗಬೇಡಿ. ನೀವು ನಿರೀಕ್ಷಿಸದ ರೀತಿಯಲ್ಲಿ ಅವರು ಮಾತನಾಡಬಹುದು, ನೀವು ಗೊಂದಲಕ್ಕೊಳಗಾಗಲಿ ಎಂಬ ಉದ್ದೇಶ ಅವರಿಗಿರುತ್ತದೆ. ನಿಮ್ಮನ್ನು ದುರ್ಬಲಗೊಳಿಸುವ ಆಶಯ ಅವರದು. ಕೆಲವರು ಇದನ್ನು ಉದ್ದೇಶಪೂರ್ವಕವಾಗಿ ಮಾಡುತ್ತಾರೆ. ಇದರಿಂದ ನಿಮ್ಮ ಅತ್ಯುತ್ತಮ ಕಾರ್ಯ ಮಾಡಲು ನೀವು ನಿರುತ್ಸಾಹಗೊಳ್ಳಬಹುದು. ಹಾಗೇ ಆಗಲಿ ಎಂಬುದೇ ಅವರ ಉದ್ದೇಶ. ನೀವು ಆ ಉದ್ದೇಶವನ್ನು ವಿಫಲಗೊಳಿಸಿ. ಆದ್ದರಿಂದ ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ.
ನಿರ್ಲಕ್ಷಿಸಿದರೆ ನೆಮ್ಮದಿ
ನೀವು ಪ್ರತಿಕ್ರಿಯಿಸದಿದ್ದರೆ, ನಿಮ್ಮನ್ನು ಬೆದರಿಸಲು ಪ್ರಯತ್ನಿಸುತ್ತಿರುವವನು ನೆಲೆ ಕಳೆದುಕೊಳ್ಳುತ್ತಾನೆ. ಏಕೆಂದರೆ ಅವರಿಗೆ ಪ್ರತಿಕ್ರಿಯಿಸಲು ಏನೂ ಇರುವುದಿಲ್ಲ. ಅಸಂಬದ್ಧ ಮಾತುಗಳು, ನಕಾರಾತ್ಮಕ ಕಾಮೆಂಟ್‌ಗಳನ್ನು ನಿರ್ಲಕ್ಷಿಸಿ ಮತ್ತು ನಿಮ್ಮ ಶಾಂತತೆಯನ್ನು ಕಾಪಾಡಿಕೊಳ್ಳಿ. ಇದು ನಿಜವಾಗಿಯೂ ಕಷ್ಟಕರ. ಆದರೆ ನಿಮ್ಮ ಪ್ರತಿಕ್ರಿಯೆ ಕಡಿಮೆಯಾಗಿದ್ದರೆ ಅವರು ತಮ್ಮ ಕ್ಷುದ್ರ ಕ್ರಿಯೆಯಿಂದ ಪಡೆಯಬಹುದಾದ ಖುಷಿಯನ್ನು ಕಳೆದುಕೊಳ್ಳುತ್ತಾರೆ. ನಿಮ್ಮನ್ನು ಮಂಕಾಗಿಸುವ ಅವರ ಪ್ರಯತ್ನವು ವಿಫಲವಾಗುತ್ತದೆ.
ಸ್ವಂತ ಜೀವನ ದೂರವಿಡಿ
ನೀವು ಕೆಲಸ ಮಾಡಲು ಕಚೇರಿಗೆ ಹೋಗುತ್ತೀರಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅಲ್ಲಿ ನೀಡಬೇಕಿಲ್ಲ. ನಿಮ್ಮ ಬಗ್ಗೆ ವದಂತಿಗಳನ್ನು ಹರಡಲು ಕೆಲವು ಕೆಟ್ಟ ಸಹೋದ್ಯೋಗಿಗಳು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಳಸಬಹುದು. ರಾಜಕೀಯ ಮತ್ತು ವೈಯಕ್ತಿಕ ವಿಷಯಗಳನ್ನು ಕೆಲಸದ ಜಾಗದಿಂದ ಹೊರತುಪಡಿಸಿ. ಕೆಲಸದ ಕುರಿತ ಚರ್ಚೆಗಳಿಗೆ ಮೀಸಲಾಗಿರಿ.
ಬೆಳೆಸುವ ಸ್ನೇಹಿತರನ್ನು ಹೊಂದಿರಿ
ಕಚೇರಿಯಲ್ಲಿ ಕೆಲವು ಆಪ್ತ, ಮೋಟಿವೇಟ್ ಮಾಡುವಂಥ ಸ್ನೇಹಿತರನ್ನು ಹೊಂದಿರುವುದು ಒಳ್ಳೆಯದು. ಅದು ಕೆಲಸವನ್ನು ಹೆಚ್ಚು ಸಹನೀಯವಾಗಿಸುತ್ತದೆ. ಕೆಲ ಸಹೋದ್ಯೋಗಿಗಳು ನಿಮ್ಮನ್ನು ಕೆಟ್ಟ ಕಾಮೆಂಟ್‌ಗಳಿಂದ ಪೀಡಿಸಿದರೆ, ಉತ್ತಮ ಸಹೋದ್ಯೋಗಿಗಳು ನೆರವಿಗೆ ಬರಬಹುದು. ಕೆಟ್ಟ ಕೊಲೀಗ್‌ಗಳು ಇದ್ದಂತೆ ಖಂಡಿತವಾಗಿಯೂ ಒಳ್ಳೆಯ ಕೆಲವು ಸಹೋದ್ಯೋಗಿಗಳೂ ಇದ್ದೇ ಇರುತ್ತಾರೆ ಅಲ್ಲವೆ? ಅವರೊಂದಿಗೆ ನೀವು ತಮಾಷೆಯ ಕ್ಷಣಗಳನ್ನು ಹಂಚಿಕೊಳ್ಳಬಹುದು ಮತ್ತು ನಕಾರಾತ್ಮಕತೆ ಅಂಶಗಳನ್ನು ದೂರವಿಡಬಹುದು.
ಚಾಣಕ್ಯ ನೀತಿ: ಜೀವನದಲ್ಲಿ ನೆಮ್ಮದಿ ಮತ್ತು ಸಕ್ಸಸ್‌ಗೆ ಈ 6 ಸ್ಥಳಗಳಿಗೆ ಹೋಗಲೇಬಾರದು ಗೊತ್ತಾ?
ಬೆನ್ನ ಹಿಂದಿನ ಮಾತು
ನೀವೇ ಗಾಸಿಪ್ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ನೀವು ಸಮಸ್ಯೆಯ ಎದುರಿಸಬೇಕಾಗುತ್ತದೆ. ನೀವೇ ಒಬ್ಬರ ಬೆನ್ನ ಹಿಂದೆ ಮಾತನಾಡುತ್ತಿದ್ದರೆ, ಅವರು ನಿಮ್ಮ ಬೆನ್ನ ಹಿಂದೆ ಮೌನವಾಗಿರಬೇಕೆಂದು ನೀವು ಹೇಗೆ ನಿರೀಕ್ಷಿಸುತ್ತೀರಿ? ಸಹೋದ್ಯೋಗಿಗಳ ಬಗ್ಗೆ ಗಾಸಿಪ್ ಮಾಡುವುದು ಖುಷಿ ಕೊಡುತ್ತದೆ ನಿಜ, ಆದರೆ ಅದು ನಿಮ್ಮನ್ನು ನೀಚನಂತೆ ಕಾಣುವಂತೆ ಮಾಡುತ್ತದೆ! ನಿಮ್ಮ ಸಮಸ್ಯೆಗಳ ಬಗ್ಗೆ ನೀವು ಮಾತನಾಡಲು ಬಯಸಿದರೆ, ಕಚೇರಿಯ ಹೊರಗೆ ನಿಮ್ಮ ಆಪ್ತರೊಂದಿಗೆ ಮಾತನಾಡುವುದು ಉತ್ತಮ.
ನೇರವಾಗಿ ಎದುರಿಸಿ
ಕೆಲವು ಸಂದರ್ಭಗಳಲ್ಲಿ ನೇರ ಮುಖಾಮುಖಿ ಉತ್ತಮವಾಗಿರುತ್ತದೆ. ಆದ್ದರಿಂದ ಧೈರ್ಯವನ್ನು ಒಟ್ಟುಗೂಡಿಸಿ ಮತ್ತು ಕೆಟ್ಟ ನಡವಳಿಕೆಯನ್ನು ಅಲ್ಲೇ ಬ್ಲಾಕ್ ಮಾಡಿ. ಅದನ್ನು ಜಾರಿಸಿಬಿಡಲು ಬಿಡಬೇಡಿ. ಎದುರಿಸುವುದನ್ನು ತಪ್ಪಿಸುವುದು ಇತರರಿಗೂ ನಿಮ್ಮನ್ನು ವಿಡಂಬಿಸಲು ಹೆಚ್ಚಿನ ಧೈರ್ಯ ನೀಡುತ್ತದೆ. ಹಾಗೆಂದು ನೀವು ಅಸಭ್ಯ ಅಥವಾ ಆಕ್ರಮಣಕಾರಿಯಾಗಿ ವರ್ತಿಸಬೇಕಾಗಿಲ್ಲ. ಆದರೆ ಟೀಕಿಸುವ ವ್ಯಕ್ತಿಯನ್ನು ಮತ್ತೊಂದು ಕ್ಯಾಬಿನ್‌ಗೆ ಕರೆದೊಯ್ದು ಸಮಸ್ಯೆ ಏನು ಮತ್ತು ಏಕೆ ಹಾಗೆ ನಡೆದುಕೊಳ್ಳುತ್ತಿದ್ದಾರೆ ಎಂದು ಕೇಳಿ.
chanakya niti: ಈ ಐದು ಥರದ ಜನರನ್ನು ಕಂಡರೆ ದೂರ ಓಡಿಬಿಡಿ ಅಂತಾರೆ ಚಾಣಕ್ಯ!
