ಆಚಾರ್ಯ ಚಾಣಕ್ಯರ ಪ್ರಕಾರ, ಕೆಲವರಲ್ಲಿ ವಂಚನೆಯ ಗುಣಗಳು ಮೊದಲಿನಿಂದಲೇ ಇರುತ್ತವೆ. ಆದರೆ ನಾವು ಅವುಗಳನ್ನು ಗುರುತಿಸುವುದಿಲ್ಲ. ಈ ಐದು ಬಗೆಯ ಜನರನ್ನು ನಂಬಬಾರದು ಎಂದು ಚಾಣಕ್ಯ ನೀತಿ ಎಚ್ಚರಿಸುತ್ತದೆ.
ʼಈ ಕಾಲದಲ್ಲಿ ನಿಷ್ಠಾವಂತರು ಅಪರೂಪʼ ಅಂತ ಎಲ್ಲರೂ ಹೇಳ್ತಾರೆ. ಆದ್ರೆ ಸಂಬಂಧದ ವಿಷಯದಲ್ಲಿ ಇಂತಿಂಥವರು ನಿಷ್ಠಾವಂತರು ಅಂತ ನಂಬಿಕೆಯಿಟ್ಟು, ಅಂಥವರಿಂದಲೇ ಮೋಸ ಹೋಗ್ತಾರೆ! ನಿಜ ಏನು ಗೊತ್ತಾ? ನಿಷ್ಠಾವಂತರು ವಿರಳವಲ್ಲ. ನಿಷ್ಠೆ ಇರುವವರು ಯಾರು, ಇಲ್ಲದವರು ಯಾರು ಅಂತ ಮೊದಲೇ ಗುರುತಿಸುವ ಸಾಮರ್ಥ್ಯ ನಮ್ಮಲ್ಲಿ ಇರೋಲ್ಲ. ಆಚಾರ್ಯ ಚಾಣಕ್ಯ ಏನು ಹೇಳ್ತಾರೆ ಅಂದ್ರೆ, ಯಾರೋ ಇದ್ದಕ್ಕಿದ್ದಂತೆ ಒಂದು ದಿನ ಅಚಾನಕ್ ಅನಿಷ್ಠರಾಗೋದಿಲ್ಲ. ಅವರ ಈ ಗುಣ ಮೊದಲೇ ಇರುತ್ತೆ. ನಾವು ಗಮನ ಕೊಡೋದಿಲ್ಲ ಅಷ್ಟೇ.
ಹಾಗಾದರೆ ನಾವು ಮಾಡುವ ತಪ್ಪೇನು? ಅವರಲ್ಲಿ ಕಾಣುವ ಗುಣ, ಸಂಕೇತಗಳನ್ನು ನೋಡಿದ್ರೂ ಅದನ್ನು ಪರಿಗಣಿಸದೆ, ಅವನ್ನು ʼಸುಂದರʼವಾಗಿ ಕಲ್ಪಿಸಿಕೊಂಡು ನಮ್ಮನ್ನೇ ಮೋಸ ಮಾಡ್ಕೊಳ್ತೀವಿ. ಹಾಗಾದರೆ, ಎಂಥವರು ನಿಷ್ಠಾವಂತರಲ್ಲ? ಅವರ ಗುಣಗಳು ಏನು? ಚಾಣಕ್ಯ ಏನ್ ಹೇಳ್ತಾರೆ ನೋಡೋಣ.
1. ಸದಾ ಹೊಗಳಿಕೆ ಬಯಸುವ ವ್ಯಕ್ತಿ
ಇವರಿಗೆ ಪ್ರೀತಿ ಮುಖ್ಯ ಅಲ್ಲ. ತಮ್ಮನ್ನು ಯಾರಾದರೂ ಮೆಚ್ಚಿಕೊಳ್ಳೋದು ಮುಖ್ಯ. ಹೊಗಳ್ತಾ ಇದ್ದರೆ ಖುಷಿಯಾಗಿರ್ತಾರೆ. ಹೊಗಳಿಕೆ ಕಡಿಮೆಯಾದರೆ ಶುರುವಾಗುತ್ತೆ- ನನ್ನತ್ತ ನೀವು ಗಮನ ಕೊಡ್ತಿಲ್ಲ, ನನ್ನನ್ನು ನೀವು ಹಿಂದಿನಂತೆ ಮೆಚ್ಚೋದಿಲ್ಲ ಎಂಬ ಕಂಪ್ಲೇಂಟು. ಇವರಿಗೆ ನೀವು ಮುಖ್ಯ ಅಲ್ಲ. ನೀವು ಕೊಡುವ ಭಾವನೆ ಮುಖ್ಯ. ಒಂದು ದಿನ ಅದೇ ಭಾವನೆ ಬೇರೆ ಯಾರಿಂದಲೋ ನಿಮಗಿಂತ ಹೆಚ್ಚು ಸಿಕ್ಕರೆ? ಅವರು ಅಲ್ಲಿಗೆ ಹೋಗ್ತಾರೆ. ನಿಷ್ಠೆ ಇರೋಕೆ ಮನಸ್ಸು ಸ್ಥಿರವಾಗಿರಬೇಕು. ಇವರ ಮನಸ್ಸು ಎಂದಿಗೂ ಖಾಲಿ. ಅದಕ್ಕೇ ಇವರು ಸದಾ ಹೊರಗೆ ಹುಡುಕುತ್ತಾರೆ.
2. ಸ್ಪಷ್ಟತೆ ಇಲ್ಲದೆ ಬದುಕುವವರು
ಇವರಲ್ಲಿ ಎಲ್ಲವೂ ಗೊಂದಲ. ನಾವು ಸಂಬಂಧದಲ್ಲಿದೀವಾ? ಸ್ಪಷ್ಟ ಉತ್ತರ ಇಲ್ಲ. ಅವನು/ಅವಳು ಯಾರು? ʼಸ್ನೇಹಿತ ಮಾತ್ರʼ. ಪ್ರಶ್ನಿಸಿದರೆ ʼನೀನು ಹೆಚ್ಚು ಯೋಚಿಸ್ತಿದ್ದೀಯʼ ʼಸಂಬಂಧಕ್ಕೆ ಹೆಸರೇಕೆ ಬೇಕು?ʼ ಎಂಬ ಉತ್ತರ. ಸ್ಪಷ್ಟತೆ ಬಂದರೆ ಇವರ ಆಯ್ಕೆಗಳು ಕಡಿಮೆ ಆಗುತ್ತವೆ. ನಿಷ್ಠೆ ಸರಳ. ಅದು ಸ್ಪಷ್ಟತೆಯಲ್ಲಿ ಬೆಳೆಯುತ್ತದೆ. ಆದ್ರೆ ಇವರು ಅಸ್ಪಷ್ಟತೆಯಲ್ಲಿ ಬದುಕುತ್ತಾರೆ. ಇವರು ದೊಡ್ಡ ತಪ್ಪು ಮಾಡೋದಿಲ್ಲ. ಸಣ್ಣದಾಗಿ ದಾರಿ ತೆರೆದಿಟ್ಟುಕೊಳ್ಳುತ್ತಾರೆ.
3. ಸದಾ ತಪ್ಪಿಸಿಕೊಳ್ಳುವವರು
ಯಾವ ಸಮಸ್ಯೆ ಬಂದರೂ ಇವರ ಕಾರಣ ಸಿದ್ಧ. “ನನಗೆ ಸ್ವಲ್ಪ ಡಿಸ್ಟೆನ್ಸ್ ಬೇಕು” “ಒತ್ತಡ ತಾಳೋಕಾಗಲ್ಲ” “ನಾನು ಭಾವನೆ ಹೇಳೋಕಾಗಲ್ಲ” ಎಂದೆಲ್ಲ. ಜವಾಬ್ದಾರಿ ತೆಗೆದುಕೊಳ್ಳಬೇಕಾದಾಗ ಮಾತ್ರ ಇವು ಕಾಣಿಸುತ್ತವೆ. ನಿಷ್ಠಾವಂತ ವ್ಯಕ್ತಿ ಅಲ್ಲಿಯೇ ಇರುತ್ತಾನೆ, ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತಾನೆ. ಅನಿಷ್ಠಾವಂತ ವ್ಯಕ್ತಿ ತಪ್ಪಿಸಿಕೊಳ್ಳುವುದನ್ನೇ ಗುಣ ಅಂತ ತೋರಿಸುತ್ತಾನೆ. ಇವರು ಹಠಾತ್ ಹೋಗೋದಿಲ್ಲ. ನಿಧಾನವಾಗಿ ದೂರವಾಗುತ್ತಾರೆ. ಇದು ಸಂಪರ್ಕ ಇಲ್ಲದ ಸಂಬಂಧದಂತೆ. ಸಂಪರ್ಕದ ಭ್ರಮೆ ಮಾತ್ರ ಇರುತ್ತದೆ
4. ಸದಾ ಇನ್ನಷ್ಟು ಆಯ್ಕೆಗಳು ಬೇಕು ಅನ್ನೋವರು
ಇವರಿಗೆ ಒಂದೇ ವ್ಯಕ್ತಿ ಸಾಕಾಗೋದಿಲ್ಲ. ಯಾವಾಗಲೂ ಇನ್ನೊಬ್ಬ ಒಳ್ಳೆಯವನು ಇರಬಹುದೇ, ಇನ್ನೊಬ್ಬ ಚೆನ್ನಾಗಿರಬಹುದೇ ಎಂದೇ ಯೋಚನೆ. “ಜೀವನ ಅನುಭವಿಸ್ಬೇಕು” “ತ್ವರಿತವಾಗಿ ನಿರ್ಧಾರ ಮಾಡ್ಬಾರದು” ಎನ್ನುತ್ತಾರೆ. ಆದರೆ ಇವರು ಜೀವನವನ್ನು ಪರೀಕ್ಷಿಸಿ ನೋಡುತ್ತಿಲ್ಲ. ಬದಲು ಜನರನ್ನು ಹೋಲಿಸುತ್ತಿದ್ದಾರೆ. ಹೋಲಿಕೆ ಬಂದರೆ ನಿಷ್ಠೆ ಉಳಿಯೋದಿಲ್ಲ. ನಿಷ್ಠೆ ಅಂದರೆ ಬೇರೆ ಆಯ್ಕೆಗಳು ಇದ್ದರೂ ಒಂದನ್ನೇ ಆರಿಸುವುದು. ಇವರಿಗಂತೂ ಆಯ್ಕೆಗಳು ಮುಖ್ಯ. ನೀವು ಅವುಗಳಲ್ಲಿ ಒಂದು ಮಾತ್ರ.
5. ಅರ್ಧ ಸತ್ಯ ಹೇಳುವವರು
ಇವರು ಸುಳ್ಳು ಹೇಳೋದಿಲ್ಲ. ಆದರೆ ಪೂರ್ಣ ಸತ್ಯ ಹೇಳೋದಿಲ್ಲ. ಅವರು ಹೇಳೋದು- “ಹೌದು, ನಾನು ಅವನನ್ನು ಭೇಟಿಯಾದೆ” “ನಾವು ಸ್ನೇಹಿತರು”. ಅವರು ಹೇಳದೇ ಇರೋದು- “ನಾವು ಹಲವಾರು ದಿನಗಳಿಂದ ಸಂಪರ್ಕದಲ್ಲಿದ್ದೇವೆ” “ಅವನ ಜೊತೆಗಿರೋದು ನನಗೆ ಇಷ್ಟ”. ಅವರ ಮಾತಿನಲ್ಲಿ ತಪ್ಪಿಲ್ಲ. ಆದರೆ ಅರ್ಥದಲ್ಲಿ ತಪ್ಪಿದೆ. ಇದು ಅತ್ಯಂತ ಅಪಾಯಕಾರಿ. ಇವರ ಮುಂದೆ ನಿಮ್ಮ ಅಂತರಂಗದ ಭಾವನೆಗಳನ್ನೇ ನೀವು ಅನುಮಾನಪಡುತ್ತೀರಿ
ಈ ಮೇಲಿನ ಎಲ್ಲ ಗುಣಗಳು ಮರೆಯಾಗಿರುವುದಿಲ್ಲ. ಮಾತಿನಲ್ಲಿ ಕಾಣಿಸುತ್ತವೆ, ನಡೆ-ನುಡಿಯಲ್ಲಿ ಕಾಣಿಸುತ್ತವೆ. ಸಣ್ಣ ಸಣ್ಣ ವಿಷಯಗಳಲ್ಲಿ ಕಾಣಿಸುತ್ತವೆ. ನಾವು “ಇದು ದೊಡ್ಡ ವಿಷಯ ಅಲ್ಲ” ಅಂತ ಬಿಟ್ಟುಬಿಡ್ತೀವಿ. ಆದರೆ ಒಂದು ದಿನ ಅದೇ ದೊಡ್ಡ ಸಮಸ್ಯೆಯಾಗುತ್ತದೆ. ನಿಷ್ಠೆ ಒಂದೇ ದಿನದಲ್ಲಿ ಕುಸಿಯೋದಿಲ್ಲ. ನಿಧಾನವಾಗಿ ಕಡಿಮೆಯಾಗುತ್ತದೆ. ನಾವು ಅಂಥವರನ್ನು ಗುರುತಿಸಿದರೂ ನಂಬುವುದು, ಅವಕಾಶ ಕೊಡುತ್ತಿರುವುದೇ ಸಮಸ್ಯೆ.


