Asianet Suvarna News Asianet Suvarna News

ಹ್ಯಾಪಿ ನ್ಯೂ ಇಯರ್:ಹೊಸ ವರ್ಷದ ಸ್ವೀಟ್ ಸಾಹಸ!

ಇತ್ತ ಸ್ವೇಟಸ್‌ ಕಡೆ ಗಮನ ಕೊಟ್ಟರೆ ಅಲ್ಲಿ ನಮ್ಮ ಕ್ಯಾರೆಟ್ ಹಲ್ವಾ ಸೀದು ಹೋಗುತ್ತದೆ. ಹಾಗಾಗಿ ಮತ್ತೆ ಅಡುಗೆಯತ್ತ ಗಮನಕೊಟ್ಟೆವು ಕ್ಯಾರೆಟ್ ಹಲ್ವಾ ಸವಿಯಲು ಸಿದ್ಧವಾದ ನಂತರ ಅದನ್ನು ಕೇಕ್ ಆಕಾರಕ್ಕೆ ತರುವ ಆಗ ಅದನ್ನು ನಾವು ಮೂವರು ಕಟ್  ಮಾಡಬಹುದು ಎಂದು ಉಪಾಯ ಮಾಡಿ ಅಂಕಿತ ಬಾಣಲೆಯಿಂದ ತಟ್ಟಿಗೆ ಹಾಕಿದಳು. ಆದ್ರೆ ಅದು ಹಲ್ವಾ ಹೋಗಿ ಪಾಯಸ ಆಗಿತ್ತು.

chaitra from SDM college ujire share new year sweets experience
Author
Bangalore, First Published Jan 2, 2020, 12:28 PM IST

ಹೊಸ ವರುಷದ ಹರುಷದಲ್ಲಿ ಎಲ್ಲರೂ ಮುಳುಗಿದ್ದರು. ಹಾಗೆ ನಾನು ನನ್ನ ಗೆಳತಿಯರು ಹೊಸ ವರುಷವನ್ನು ಸಂಭ್ರಮಿಸ ಬೇಕೆಂದು ತುದಿಗಾಲಲ್ಲಿ ನಿಂತಿದ್ದೆವು. ಮೂವರೂ ಬಾಡಿಗೆ ರೂಮ್ ಅಲ್ಲಿ ಇದ್ದೆವು.

ಹೊಸ ವರುಷಕ್ಕೆ ನಾವು ಎಲ್ಲಿ ಆದ್ರು ಹೋಗಬೇಕೆಂದು ಮಾತನಾಡಿಕೊಂಡೆವು. ಆದ್ರೆ ವರುಷದ ಕೊನೆಯಲ್ಲಿ ನಮ್ಮ ಮಾಲೀಕ ತಿಂಗಳ ಬಾಡಿಗೆ ಕೇಳಿಕೊಂಡು ನಮ್ಮ ರೂಮ್‌ಗೆ ಬಂದರು. ಬಾಡಿಗೆಯ ನೆನಪೇ ಇರಲಿಲ್ಲ ನಮಗೆ. ಮೂವರು ಜೊತೆಗೆ ಉಡುಪಿಯ ಮಲ್ಪೆ ಬೀಚ್ ನೋಡಬೇಕೆಂದು ತುಂಬಾ ಆಸೆ ಇತ್ತು, ಆ ತಿರುಗಾಟಕ್ಕೆ ಕೂಡಿಟ್ಟ ಹಣ ಅವರಿಗೆ ಕೊಡಬೇಕಾಯಿತು.

ಗುಡ್‌ಬೈ 2019: ಈ ವರ್ಷ ಕಾಲೇಜು ಹುಡುಗ- ಹುಡುಗಿಯರ ಇಷ್ಟಕಷ್ಟಗಳಿವು!

ಮತ್ತೆ ಏನು ಮಾಡುದು? ಬಸ್ಸಿಗೂ ಹಣವಿರಲಿಲ್ಲ. ಇನ್ನೆಲ್ಲಿಗೆ ಹೋಗುವುದು? ನನಗೆ ಗೊತ್ತಿತ್ತು, ಏನಾದ್ರು ಒಂದು ಆಗುತ್ತೆ ಅಂತ, ಹಾಗೆ ಆಯ್ತು, ನಮ್ಮ ಆಸೆ ನೀರುಪಾಲಾಯ್ತು ಅಂತ ಪಲ್ಲವಿ ಕೋಪದಿಂದ ಹೇಳಿದಳು. ಅವಳನ್ನು ಸಮಾಧಾನ ಮಾಡಲು ನಾನು ಅಂಕಿತ ಒಂದು ಉಪಾಯ ಮಾಡಿದೆವು. ಹುಂಡಿಯಲ್ಲಿ ಪ್ರತಿದಿನ ನಾವು ಕೂಡಿಟ್ಟ ಹಣವನ್ನು ಲೆಕ್ಕ ಮಾಡಿದೆವು. ಅದ್ರಲ್ಲಿ ಸುಮಾರು 60 ರೂಪಾಯಿ ಇತ್ತು. ಹೋದ ತಿಂಗಳು ಅದರಲ್ಲಿ ಇದ್ದ ಹಣವನ್ನು ಮೂವರೂ ಒಂದೇ ರೀತಿಯ ಬಟ್ಟೆ ಬೇಕೆಂದು ಅದಕ್ಕೆ ಖರ್ಚು ಮಾಡಿದ್ದೆವು. ಹಾಗಾಗಿ ಆ 60 ರೂಪಾಯಿಯಲ್ಲಿ ತರಕಾರಿ ಅಂಗಡಿಗೆ ಹೋಗಿ ಕ್ಯಾರೆಟ್, ಸಕ್ಕರೆ, ಹಾಲು, ಏಲಕ್ಕಿ, ತುಪ್ಪ ತೆಗೆದುಕೊಂಡು ಬಂದೆವು. ಅದರಲ್ಲೂ 10 ರೂಪಾಯಿ ಕೊಡಲು ಬಾಕಿ ಇತ್ತು. ನಾಳೆ ಕೊಡ್ತೇವೆ ಅಣ್ಣ ಅಂತ ಹೇಳಿ ಬಂದೆವು. ಆ ಸಂಜೆ ಅವಳನ್ನು ಸಮಾಧಾನ ಮಾಡಲು ನಾವಿಬ್ಬರು ನಳ ಮಹಾರಾಜರು ಅಡುಗೆಗೆ ಸಿದ್ಧರಾದೆವು. ಇಂತಹ ಸಂದರ್ಭದಲ್ಲಿ ನಮ್ಮ ಗೆಳೆಯ ಯೂಟ್ಯೂಬ್ ತುಂಬಾ ಸಹಾಯಕ್ಕೆ ಬರುತ್ತಾನೆ. ಯೂಟ್ಯೂಬ್ ನೋಡಿಕೊಂಡು ಕ್ಯಾರೆಟ್ ಹಲ್ವಾ ಮಾಡುವ ವಿಧಾನವನ್ನು 10, 10 ಬಾರಿ ನೋಡಿ, ನಂತರ ಹಂತ ಹಂತವಾಗಿ ಮಾಡಲು ಶುರು ಮಾಡಿದೆವು. ಯಾಕೆಂದರೆ ನಾವು ಹಲ್ವಾ ತಿಂದಿದ್ದೇವೆ ಹೊರತು ಯಾವತ್ತೂ ಮಾಡಿರಲಿಲ್ಲ. ಮೊದಲ ಬಾರಿಗೆ ದೊಡ್ಡ ಹರಸಾಹಸಕ್ಕೆ ಕೈ ಹಾಕಿದೆವು.

ಮ್ಯಾಜಿಕ್‌ ಮೊಮೆಂಟ್: ಅಮ್ಮನಿಗೆ ಕೊಟ್ಟಮೊದಲ ಉಡುಗೊರೆ!

ಸ್ವಲ್ಪ ವಿಧಾನದಲ್ಲಿ ಅನುಮಾನ ಬಂದರೆ ಅಮ್ಮನಿಗೆ ಕರೆ ಮಾಡಿ ಸ್ಪಷ್ಟ ಪಡಿಸಿಕೊಳ್ಳುತ್ತಿದ್ದೆವು. ಈ ಸಂದರ್ಭದಲ್ಲಿ ನಮ್ಮ ಅಡುಗೆ ಕೋಣೆಯ ಸಂಧಿಯಲ್ಲಿ ಪಲ್ಲವಿ ಮೊಬೈಲ್ ಮೂಲಕ ನಮ್ಮ ವಿಡಿಯೋ ಮಾಡಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದಳು. ಅದು ನಮಗೆ ಗೊತ್ತೇ ಇರಲಿಲ್ಲ, ನಾವು ಸಂಗೀತವನ್ನು ಹಾಡಿಕೊಂಡು, ಅದಕ್ಕೆ ತಕ್ಕಂತೆ ಪಾತ್ರೆಗಳನ್ನು ಹಿಡಿದುಕೊಂಡು ನೃತ್ಯ ಮಾಡುತ್ತಿದ್ದೆವು. ಇವಳು ವಿಡಿಯೋ ಮಾಡಿದ್ದು ನಮಗೆ ಗೊತ್ತೇ ಆಗಲಿಲ್ಲ. ಯಾಕೆಂದರೆ ಅಡುಗೆಯಲ್ಲಿ ಹಾಡಿನಲ್ಲಿ ಮಗ್ನರಾಗಿದ್ದೆವು.

ಸ್ವಲ್ಪ ಹೊತ್ತಿನ ನಂತರ ನನ್ನ ಗೆಳತಿಯ ಕರೆ ಬಂತು. ಏನು? ಹೊಸ ವರುಷಕ್ಕೆ ಅಡುಗೆ ಜೋರಾ? ನಾನು ಬರ್ಲಾ? ಆಗ ನನಗೆ ಒಮ್ಮೆ ಏನು ಅಂತ ಅರ್ಥ ಆಗಲಿಲ್ಲ, ನಾವು ಅಡುಗೆ ಮಾಡುದು ಅವಳಿಗೆ ಹೇಗೆ ಗೊತ್ತಾಯಿತು? ಸ್ವಲ್ಪಹೊತ್ತು ಯೋಚಿಸಿದೆ ,ಆಗ ಇನ್ನೊಬ್ಬ ಗೆಳೆಯನ ಕರೆ ಬಂತು ಪಾರ್ಟಿ ಜೋರಾ? ಹಾಡನ್ನು ಸ್ವಲ್ಪ ಕೇಳುವ ಹಾಗೆ ಹಾಡಿ ಅಂತ ಹೇಳಿದ ಅಷ್ಟುಹೊತ್ತಿಗೆ ಸ್ವಲ್ಪ ನಮ್ಮ ಪಿಟ್ಟೆ ಮೇಲೆ ಅನುಮಾನ ಬಂತು, ಹೋಗಿ ಅವಳ ಕಿವಿಹಿಂಡಿ ಕೇಳಿದೆ ಏನು ಎಡವಟ್ಟು ಮಾಡಿದಿ ಅಂತ. ಆಗ ಬಾಯಿಬಿಟ್ಟಳು ಸ್ಟೇಟಸ್ ಹಾಕಿದ್ದೇನೆ ಎಂದು, ಆ ಸಮಯಕ್ಕೆ ಎಲ್ಲರೂ ನಮ್ಮ ಸ್ಟೇಟಸ್ ನೋಡಿಯಾಗಿತ್ತು. ಇತ್ತ ಸ್ಟೇಟಸ್ ಕಡೆ ಗಮನ ಕೊಟ್ಟರೆ ಅಲ್ಲಿ ನಮ್ಮ ಕ್ಯಾರೆಟ್ ಹಲ್ವಾ ಸೀದು ಹೋಗುತ್ತದೆ. ಹಾಗಾಗಿ ಮತ್ತೆ ಅಡುಗೆಯತ್ತ ಗಮನಕೊಟ್ಟೆವು. ಕ್ಯಾರೆಟ್ ಹಲ್ವಾ ಸವಿಯಲು ಸಿದ್ಧವಾದ ನಂತರ ಅದನ್ನ ಕೇಕ್ ಆಕಾರಕ್ಕೆ ತರುವ ಆಗ ಅದನ್ನು ನಾವು ಮೂವರು ಕಟ್ ಮಾಡಬಹುದು ಎಂದು ಉಪಾಯ ಮಾಡಿ ಅಂಕಿತ ಬಾಣಲೆಯಿಂದ ತಟ್ಟೆಗೆ ಹಾಕಿದಳು. ಆದ್ರೆ ಅದು ಹಲ್ವಾ ಹೋಗಿ ಪಾಯಸ ಆಗಿತ್ತು. ನಂತರ ಅಮ್ಮನ ಬಳಿ ಕೇಳಿದಾಗ ಹಾಲು ಜಾಸ್ತಿ ಹಾಕಿದ್ರಿ ನೀವು ಆದ್ದರಿಂದ ಪಾಯಸ ಆಯ್ತು ಅಂದರು. ಆದ್ರೆ ಅದು ಕೇಕ್ ಬದಲು ಕ್ಯಾರೆಟ್ ಪಾಯಸ ಆಯ್ತು.

ಲಾಸ್ಟ್‌ಬೆಂಚ್‌ಗೆ ಜೀವ ಬಂದರೆ ಏನೇನು ಹೇಳಬಹುದು?

ಆದ್ರೂ ನಾವೇ ನಮ್ಮ ಕೈಯಾರೆ ತಯಾರಿಸಿದ ಸಿಹಿ ಎಂದು ಸಂತೋಷದಲ್ಲಿ ಮೂವರು ಸೇರಿ ಕ್ಯಾರೆಟ್ ಪಾಯಸವನ್ನು ಸವಿದೆವು. ಆದ್ರೂ ತುಂಬಾ ರುಚಿಯಾಗಿತ್ತು, ಜೊತೆಗೆ ನಮ್ಮ ಗೆಳತಿಯ ಕೋಪವು ಆ ಸಿಹಿಗೆ ಕರಗಿಹೋಗಿತ್ತು. ನಾವು ನಾವೇ ಒಬ್ಬರಿಗೊಬ್ಬರು ಬೆನ್ನು ತಟ್ಟಿ ನಮ್ಮನ್ನು ನಾವೇ ಹೊಗಳಿಕೊಂಡೆವು. ಜೊತೆಗೆ ಹೊಸ ವರುಷದ ದಿನವನ್ನು ತುಂಬಾ ಖುಷಿಯಿಂದ,
ಸಿಹಿಯ ಜೊತೆಗೆ ಅಡುಗೆಯ ಕಲಿಕೆಯೊಂದಿಗೆ ಸಂಭ್ರಮಿಸಿದೆವು.

Follow Us:
Download App:
  • android
  • ios