Asianet Suvarna News

ಸುಳ್ಳು ಹೇಳಿ ಸಿಕ್ಹಾಂಕಿಕೊಂಡ ಸಂಗಾತಿ, ಸ್ಥಿತಿ ತಿಳಿಯಾಗಿಸೋ ಸಂಗತಿ

ಎಲ್ಲರೂ ತಪ್ಪು ಮಾಡುತ್ತಾರೆ, ಸುಳ್ಳು ಹೇಳುತ್ತಾರೆ- ಇದು ನಮಗೂ ಗೊತ್ತು. ಆದರೆ ನಾವು ನಂಬಿ ಬಂದ ಪಾರ್ಟ್ನರ್ ನಮ್ಮ ಬಳಿ ದೊಡ್ಡದೊಂದು ಸುಳ್ಳು ಹೇಳಿದ್ದಾರೆಂದರೆ ಮಾತ್ರ ನಖಶಿಖಾಂತ ಕೋಪದ ಬೆಂಕಿ ಜ್ವಲಿಸತೊಡಗುತ್ತದೆ. ಇಂಥ ಸನ್ನಿವೇಶವನ್ನು ಹೇಗೆ ನಿಭಾಯಿಸಬೇಕು?

Caught your partners lies Learn how to handle the situation POSITIVELY
Author
Bengaluru, First Published Nov 20, 2019, 1:44 PM IST
  • Facebook
  • Twitter
  • Whatsapp

ಪ್ರೀತಿ ಎಂಬುದು ತನ್ನಿಂತಾನೇ ಆಗುತ್ತದೆ. ಅದಕ್ಕೆ ಕೆಲವು ನಿಮಿಷಗಳೂ ಸಾಕು. ಆದರೆ, ಇಬ್ಬರ ನಡುವೆ ನಂಬಿಕೆ ಬೆಳೆಸಲು ಮಾತ್ರ ಬಹಳ ಸಮಯ ಬೇಕಾಗುತ್ತದೆ. ಅದರಲ್ಲೂ ಪಾರ್ಟ್ನರ್ ಬಳಿ ವರ್ಷಗಳಿಂದ ಗಳಿಸಿದ್ದ ನಂಬಿಕೆ ಆತ  ಹೇಳಿದ ಸುಳ್ಳೊಂದರಲ್ಲಿ ಸಿಕ್ಕಿಬಿದ್ದು, ಕ್ಷಣಾರ್ಧದಲ್ಲಿ ನುಚ್ಚುನೂರಾಗಿದೆ. ಆ ಒಂದೇ ಒಂದು ಸುಳ್ಳು ನೀವು ಅವರ ಮೇಲೆ ಇಷ್ಟು ವರ್ಷಗಳಿಂದ ಇಟ್ಟಿದ್ದ ಪ್ರೀತಿ, ನಂಬಿಕೆ, ಕಾಳಜಿ ಎಲ್ಲಕ್ಕೂ ಹೊಡೆತ ನೀಡಿದೆ. ತಾನು ಇದುವರೆಗೆ ನಂಬಿದ್ದೆಲ್ಲವೂ ಸುಳ್ಳೋ ಸತ್ಯವೋ ಎಂಬ ತೊಳಲಾಟ ನಿಮ್ಮದು. ಅಳು, ಕೋಪ, ಜೊತೆಗೆ ಈ ವ್ಯಕ್ತಿಯನ್ನು ಜೀವನದಿಂದಲೇ ಹೊರಕಳಿಸಲೇ ಎಂಬ ದೂರಾಲೋಚನೆಗಳೆಲ್ಲ ಹತ್ತಿರ ಸುಳಿಯಲಾರಂಭಿಸಿವೆ. ಆದರೆ ಇಂಥ ಪರಿಸ್ಥಿತಿಯನ್ನು ಪಾಸಿಟಿವ್ ಆಗಿ ನಿಭಾಯಿಸಿ, ಸ್ಟ್ರಾಂಗ್ ಆಗುವುದು ಹೇಗೆ? ನಿಮ್ಮ ಸಂಗಾತಿ ಸುಳ್ಳು ಹೇಳಿದ್ದು ತಿಳಿದುಬಂದರೆ ಅದನ್ನು ಹೇಗೆ ನಿಭಾಯಿಸಬೇಕು? ಇಲ್ಲಿದೆ ನೋಡಿ.

1. ಬ್ಲೇಮ್ ಗೇಮ್ ಬೇಡ
ಸುಳ್ಳು ಪತ್ತೆಯ ಬಳಿಕ ನಿಮ್ಮ ಸಂಗಾತಿಯನ್ನು ದೂರಬೇಡಿ. ಅವರ ಮೇಲೆ ಆರೋಪಗಳನ್ನು ಕೂರಿಸಬೇಡಿ. ಏಕೆ ಸುಳ್ಳು ಹೇಳಿದರೆಂದು ಕೇಳಬೇಡಿ. ಬದಲಿಗೆ, ಈ ಒಂದು ಸುಳ್ಳಿನಿಂದ ನಿಮ್ಮ ಮನಸ್ಸಿಗೆ ಎಷ್ಟು ಆಘಾತವಾಯಿತು, ನಿಮ್ಮಿಬ್ಬರ ನಡುವಿನ ಸಂಬಂಧಕ್ಕೆ ಎಂಥ ಡ್ಯಾಮೇಜ್ ಮಾಡಿದೆ ಎಂಬುದನ್ನು ವಿವರಿಸಿ. ಇದರಿಂದ ನಿಮ್ಮ ಸಂಗಾತಿ ಸರಿಯಾದ ರೀತಿಯಲ್ಲಿ ನಿಮ್ಮೊಂದಿಗೆ  ಸಂವಹನಕ್ಕಿಳಿಯುತ್ತಾರೆ. ಅವರು ಪಶ್ಚಾತ್ತಾಪವನ್ನೂ ಪಡಬಹುದು. ತಾನೇಕೆ ಹಾಗೆ ಮಾಡಿದೆ ಎಂದು ಹೇಳಿ ಕ್ಷಮೆಯನ್ನೂ ಕೇಳಬಹುದು. ಆದರೆ, ಆರೋಪಗಳಿಂದ ಅವರನ್ನು ಕುಗ್ಗಿಸಲು ನೋಡಿದರೆ, ಅವರು ತಮ್ಮ ರಕ್ಷಣೆಗಾಗಿ ವಾದಕ್ಕಿಳಿಯುತ್ತಾರೆ. ಅದು ದೊಡ್ಡದಾಗುತ್ತಲೇ ಸಾಗುತ್ತದೆ. 

ಹೆಂಡ್ತಿ ರಾಸಲೀಲೆ ರೆಕಾರ್ಡ್ ಮಾಡಿ ಡಿವೋರ್ಸ್ ಪಡೆದ ಗಂಡ

2. ವಿಷಯಕ್ಕೆ ಬರಲು ಒದ್ದಾಡಬೇಡಿ
ನೀವು ಪಾರ್ಟ್ನರ್ ಎದುರು ಹೋಗಿ ಕುಳಿತಿರುವುದೇ ಅವರು ಸುಳ್ಳು ಹೇಳಿದ್ದರ ಬಗ್ಗೆ ವಿಚಾರಿಸಲು. ಹಾಗಾಗಿ, ವಿಷಯಕ್ಕೆ ಬರದೆ ಎಲ್ಲೆಲ್ಲೋ ಸುತ್ತುವುದರಿಂದ ಪ್ರಯೋಜನವಿಲ್ಲ. ನಿಮ್ಮ ತಲೆಯಲ್ಲಿ ಕೊರೆಯುತ್ತಿರುವ ಹುಳದ ಬಗ್ಗೆ ನೇರ ಮಾತಿಗಿಳಿಯಿರಿ ಹಾಗೂ ಸತ್ಯ ಎಷ್ಟೇ ಕಹಿಯಿದ್ದರೂ ಕೇಳಲು ಸಿದ್ಧರಾಗಿರಿ. ಸತ್ಯದಿಂದ ನಿಮಗೆ ನೋವಾಗಬಹುದು, ಆದರೆ ಸುಳ್ಳಿನ ಬದುಕು ಬದುಕುವುದಕ್ಕಿಂತ ಅದು ಲೇಸಲ್ಲವೇ? 

3. ತಾಳ್ಮೆಗೆಡಬೇಡಿ
ನಿಮ್ಮ ಸಂಗಾತಿಗೆ ಅವರ ವಿವರಣೆ ನೀಡಲು ಸಮಯ ಹಾಗೂ ಅವಕಾಶ ನೀಡಿ. ತಾಳ್ಮೆಯಿಂದ ಅವರು ಹೇಳುವುದೆಲ್ಲವನ್ನೂ ಕೇಳಿ ಮತ್ತು ಅವರೇಕೆ ನಿಮ್ಮ ಬಳಿ ಸುಳ್ಳು ಹೇಳಬೇಕಾಯಿತು ಎಂಬ ಕಾರಣವನ್ನು ಅವರ ಸ್ಥಾನದಲ್ಲಿ ನಿಂತು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಸುಳ್ಳಿಗೆ ಕಾರಣ ಪತ್ತೆಯಾದರೆ ಅದು ಭವಿಷ್ಯದಲ್ಲಿ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬಹುದು.

4. ಅವರ ಸುಳ್ಳನ್ನು ಕಡೆಗಣಿಸಬೇಡಿ.
ಸತ್ಯ ಹೇಳಿದರೆ ಸಂಬಂಧಕ್ಕೆ ಏನೋ ಸಮಸ್ಯೆಯಾಗುತ್ತದೆ ಎಂದೋ, ನಿಮಗೆ ಬೇಜಾರಾಗಬಾರದೆಂದೋ, ನಿಮ್ಮಿಂದ ಬೈಸಿಕೊಳ್ಳಲು ಇಷ್ಟವಿಲ್ಲದ ಕಾರಣದಿಂದಲೋ, ಅಥವಾ ಅವರು ದೊಡ್ಡ ತಪ್ಪುಗಳನ್ನು ಮಾಡುತ್ತಿರುವುದರಿಂದಲೋ ಅವರು ಸುಳ್ಳು ಹೇಳಿರುತ್ತಾರೆ. ಹಾಗಾಗಿ ಯಾವ ಸುಳ್ಳನ್ನೂ ಸಣ್ಣದೆಂದು ಕಡೆಗಣಿಸಬೇಡಿ. ಬದಲಿಗೆ ನಿಮ್ಮ ಸಂಬಂಧದಲ್ಲಿ ಏನು ಕೊರತೆಯಿದೆ, ಎಲ್ಲಿ ಎಡವಟ್ಟಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಸಮಸ್ಯೆ ಇದೆ ಎಂದು ಗೊತ್ತಾದಾಗಷ್ಟೇ ಅದಕ್ಕೆ ಪರಿಹಾರ ಹುಡುಕಲು ಸಾಧ್ಯವಲ್ಲವೇ?

ಮಾತಿಲ್ಲ,ಬರೀ ಮೌನ, ಇಂಥ ದಾಂಪತ್ಯ ಬೇಕಾ?

5. ಕ್ಷಮಿಸಲೇಬೇಕೆಂದಿಲ್ಲ
ಅವರು ಎಲ್ಲ ವಿವರಣೆ ನೀಡಿದ ಬಳಿಕ ನೀವು ಕ್ಷಮಿಸಿ, ಇದನ್ನು ಮರೆಯಲು ಸಿದ್ಧವಿದ್ದೀರೇ ಪ್ರಶ್ನಿಸಿಕೊಳ್ಳಿ. ಹಾಗಿದ್ದಲ್ಲಿ ಮಾತ್ರ ಕ್ಷಮಿಸಿ. ಸುಮ್ಮನೇ ಕ್ಷಮಿಸಿ ಉದಾರಿಯಾಗಬೇಕೆಂದು ಕ್ಷಮಿಸುವುದೋ ಅಥವಾ ಕ್ಷಮಿಸಲಾಗುವುದದಿಲ್ಲ ಎಂದು ವಿಚ್ಚೇದನದ ನಿರ್ಧಾರ ಪ್ರಕಟಿಸುವುದೋ ತಕ್ಷಣಕ್ಕೆ ಏನೋ ಮಾಡಬೇಡಿ. ಸ್ಪಷ್ಟವಾಗಿ ಯೋಚಿಸದೆ ಯಾವೊಂದು ಕ್ರಮವನ್ನೂ ತೆಗೆದುಕೊಳ್ಳಬೇಡಿ. ಯೋಚಿಸಲು ಒಂದೆರಡು ದಿನ ಸಮಯ ತೆಗೆದುಕೊಳ್ಳಿ. ಒಂದು ಸುಳ್ಳು ಅಂಥ ದೊಡ್ಡ ತಪ್ಪಲ್ಲ, ನಾನಿದನ್ನು ಮರೆತು ಮುಂಚಿನಂತಿರಬಲ್ಲೆ ಎನಿಸಿದರೆ ಕ್ಷಮಿಸಿ. 

6. ಸುಳ್ಳು ಹೇಳಿದ್ದಕ್ಕೆ ನಿಮ್ಮ ತಪ್ಪು ಕಾರಣವಲ್ಲ
ಒಂದು ವೇಳೆ ಸಂಗಾತಿಯ ವಿವರಣೆಯಲ್ಲಿ ನಿಮ್ಮ ನಡೆಯೇ ಅವರು ಸುಳ್ಳು ಹೇಳಲು ಕಾರಣ ಎಂಬಂಥ ವಿವರಣೆ ಇದ್ದರೆ ಖಂಡಿತಾ ಅದನ್ನು ಒಪ್ಪಿಕೊಂಡು ಕೊರಗಿಕೊಂಡು ಕೂರಬೇಕಾಗಿಲ್ಲ. ಅವರ ತಪ್ಪನ್ನು ಮುಚ್ಚಲು ನಿಮ್ಮ ಮೇಲೆ ಗೂಬೆ ಕೂರಿಸುತ್ತಾರೆಯೇ ಹೊರತು, ನಿಮ್ಮ ತಪ್ಪು ಅಲ್ಲಿರಬೇಕಿಲ್ಲ. ಒಂದು ವೇಳೆ ಇದ್ದರೂ ಅದಕ್ಕಾಗಿ ಸುಳ್ಳು ಹೇಳುವ ಬದಲು ಅವರು ಮುಂಚೆಯೇ ನಿಮ್ಮ ಈ ನಡೆಯಿಂದ ನನಗೆ ಹೀಗಾಗುತ್ತಿದೆ ಎಂದು ತಿಳಿಸಬಹುದಿತ್ತು. ಯಾರನ್ನೂ ಸುಳ್ಳು ಹೇಳುವಂತೆ ಪ್ರಚೋದಿಸಲಾಗುವುದಿಲ್ಲ. ಸತ್ಯ ಹೇಳಬೇಕೋ, ಸುಳ್ಳು ಹೇಳಬೇಕೋ ಎಂಬುದು ಅವರೇ ಮಾಡಿಕೊಂಡ ಆಯ್ಕೆಯಾಗಿರುತ್ತದೆ. ಹೀಗಾಗಿ, ಅದು ಅವರೇ ಎಸೆದ ತಪ್ಪಾಗಿರುತ್ತದೆ. 

ಡಿವೋರ್ಸ್: ಅಮೇಜಾನ್ ಬಾಸ್ ಪತ್ನಿಗೆ 2.5 ಲಕ್ಷ ಕೋಟಿ ಪರಿಹಾರ ದನ

Follow Us:
Download App:
  • android
  • ios