1940ರಲ್ಲಿ ಮದುವೆಯಾದ ದಂಪತಿಗಳು 84 ವರ್ಷಗಳ ದಾಂಪತ್ಯ ಜೀವನ ಪೂರೈಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. 13 ಮಕ್ಕಳು, 100ಕ್ಕೂ ಹೆಚ್ಚು ಮೊಮ್ಮಕ್ಕಳೊಂದಿಗೆ ಅವರ ಪ್ರೀತಿ ಮತ್ತು ಬದ್ಧತೆಯ ಪ್ರಯಾಣ ಅದ್ಭುತವಾಗಿದೆ. ಪ್ರೀತಿಯೇ ಅವರ ದೀರ್ಘ ದಾಂಪತ್ಯದ ಗುಟ್ಟು ಎನ್ನುತ್ತಾರೆ ಈ ದಂಪತಿ.
ವಿಶ್ವದ 2ನೇ ಮಹಾಯುದ್ಧಕ್ಕೂ ಮೊದಲೇ ಜನಿಸಿದವರು ಇದೀಗ ಬದುಕಿರುವುದೇ ಅಪರೂಪ. ಆದರೆ, ಇಲ್ಲೊಬ್ಬ ವೃದ್ಧ ದಂಪತಿ 2ನೇ ವಿಶ್ವ ಜಾಗತಿಕ ಯುದ್ಧದ ವೇಳೆ 1940ರಲ್ಲಿ ಪ್ರೀತಿಸಿ ಮದುವೆಯಾಗಿ ಈವರೆಗೆ ಒಟ್ಟಿಗೆ ಜೀವನ ಮಾಡುತ್ತಿದ್ದಾರೆ. ಈ ದಂಪತಿ ಅತಿ ದೀರ್ಘವಾದ ದಾಂಪತ್ಯ ಎಂಬ ವಿಶ್ವ ದಾಖಲೆಯನ್ನು ಸ್ಥಾಪಿಸಿದ್ದಾರೆ. 100ಕ್ಕೂ ಹೆಚ್ಚು ಮೊಮ್ಮಕ್ಕಳೊಂದಿಗೆ ಈ ದಂಪತಿಗಳ ಪ್ರೀತಿ ಮತ್ತು ಬದ್ಧತೆಯ ಪ್ರಯಾಣ ಅದ್ಭುತವಾಗಿದೆ.
ಬ್ರೆಜಿಲ್‌ನ ಸಿಯಾರಾದ ಬೋವಾ ವೆಂಚುರ ಚಾಪೆಲ್‌ನಲ್ಲಿ 1940 ರಲ್ಲಿ ಮನೋಯೆಲ್ ಮತ್ತು ಮರಿಯಾ ವಿವಾಹವಾದರು. ಆದರೆ ಅವರ ಕಥೆ ಆರಂಭವಾಗುವುದು 1936ರಲ್ಲಿ. ಸಾಂಪ್ರದಾಯಿಕ ಬ್ರೆಜಿಲಿಯನ್ ಸಿಹಿ ತಿಂಡಿಯಾದ ರಪ್ಪದುರಾಸ್ ರಫ್ತು ಮಾಡಲು ಮನೋಯೆಲ್ ಬೋವಾ ವಿಯಾಗೆಮ್‌ನ ಅಲ್ಮೇಡ ಪ್ರದೇಶಕ್ಕೆ ಬಂದಿದ್ದರು. ಅಲ್ಲಿ ಅವರು ಮರಿಯಾಳನ್ನು ಮೊದಲ ಬಾರಿಗೆ ನೋಡಿದರು. ಪರಸ್ಪರ ಇಷ್ಟವಾದರೂ ಒಬ್ಬರಿಗೊಬ್ಬರು ಹೇಳಿಕೊಳ್ಳಲಿಲ್ಲ. ಇದಾದ ಕೆಲವು ವರ್ಷಗಳ ನಂತರ ಇಬ್ಬರೂ ಮತ್ತೆ ಭೇಟಿಯಾದರು. ಆಗ ತಮ್ಮ ಇಷ್ಟವನ್ನು ಪರಸ್ಪರ ಹೇಳಿಕೊಂಡರು ಮತ್ತು ಮರಿಯಾಳೇ ತನಗೆ ಸೂಕ್ತ ಎಂದು ಮನೋಯೆಲ್ ನಿರ್ಧರಿಸಿದರು.
ನಂತರ ಮನೋಯೆಲ್ ಮರಿಯಾಳನ್ನು ತನ್ನ ಜೀವನಕ್ಕೆ ಆಹ್ವಾನಿಸಿದರು. ಅವರ ಆಹ್ವಾನವನ್ನು ನಿರಾಕರಿಸಲು ಮರಿಯಾಗೂ ಸಾಧ್ಯವಾಗಲಿಲ್ಲ. ಆದರೆ, ಇವರ ಮದುವೆಗೆ ಮರಿಯಾಳ ಮನೆಯವರು ಸುಲಭವಾಗಿ ಒಪ್ಪಿಕೊಳ್ಳಲಿಲ್ಲ. ತನ್ನ ಮಗಳಿಗೆ ಸೂಕ್ತವಾದ ಸಂಗಾತಿ ಮನೋಯೆಲ್ ಎಂದು ಸಾಬೀತುಪಡಿಸಲು ಮರಿಯಾಳ ತಾಯಿ ಒತ್ತಾಯಿಸಿದರು. ಹಾಗಾಗಿ, ತನ್ನ ಬದ್ಧತೆಯನ್ನು ತೋರಿಸಲು ಮರಿಯಾಳಿಗಾಗಿ ಮನೆ ಕಟ್ಟಲು ಮನೋಯೆಲ್ ನಿರ್ಧರಿಸಿದರು. ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಮರಿಯಾಳ ಕುಟುಂಬದ ಒಪ್ಪಿಗೆಯನ್ನು ಇಬ್ಬರೂ ಪಡೆದರು.
ಇದನ್ನೂ ಓದಿ: ಧರ್ಮಪತ್ನಿ ಪಾರ್ವತಮ್ಮ ಬಗ್ಗೆ ಅಣ್ಣಾವ್ರು ಹೀಗೆ ಹೇಳಿದ್ದು, ತಮಾಷೆಗೋ or ತಮಾಷೆಯಾಗಿಯೋ...!
ಅಲ್ಲಿಂದ ಸಂತೋಷದ ದಾಂಪತ್ಯ ಜೀವನವನ್ನು ಇಬ್ಬರೂ ಆರಂಭಿಸಿದರು. ಪರಸ್ಪರ ಪ್ರೀತಿಸುತ್ತಾ ಮತ್ತು ಕಠಿಣ ಪರಿಶ್ರಮದಿಂದ ಆ ಜೀವನ ಮುಂದುವರೆಯಿತು. 13 ಮಕ್ಕಳಿಗೆ ಜನ್ಮ ನೀಡಿದರು ಮರಿಯಾ ಮತ್ತು ಮನೋಯೆಲ್. ನಂತರ ಅವರಿಗೆ 55 ಮೊಮ್ಮಕ್ಕಳು, 54 ಮೊಮ್ಮಕ್ಕಳ ಮಕ್ಕಳು ಮತ್ತು ನಾಲ್ಕನೇ ತಲೆಮಾರಿನ 12 ಮೊಮ್ಮಕ್ಕಳು ಜನಿಸಿದರು. ಈಗ ಅವರು ಸುಂದರ ದಾಂಪತ್ಯದ 84ನೇ ವರ್ಷದಲ್ಲಿದ್ದಾರೆ. ದಶಕಗಳ ನಂತರವೂ ಅವರ ಪ್ರೀತಿ ಮತ್ತು ಗೌರವವು ಬಲವಾಗಿದೆ. ದೀರ್ಘ ಮತ್ತು ಸಂತೋಷದ ದಾಂಪತ್ಯದ ಗುಟ್ಟೇನು ಎಂದು ಕೇಳಿದಾಗ, ಮರಿಯಾ ಮತ್ತು ಮನೋಯೆಲ್ ಸರಳವಾಗಿ ಪ್ರೀತಿ ಎಂದು ಸರಳವಾಗಿ ಉತ್ತರಿಸಿದರು. ಈಗ ಜೀವಂತವಾಗಿರುವ ಅತಿ ದೀರ್ಘವಾದ ದಾಂಪತ್ಯವನ್ನು ನಡೆಸುತ್ತಿರುವ ದಂಪತಿಗಳು ಎಂಬ ವಿಶ್ವ ದಾಖಲೆಯನ್ನು ಮನೋಯೆಲ್ ಮತ್ತು ಮರಿಯಾ ಹೊಂದಿದ್ದಾರೆ ಎಂದು ಗಿನ್ನೆಸ್ ವಿಶ್ವ ದಾಖಲೆಗಳು ದೃಢಪಡಿಸಿದೆ.
ಇದನ್ನೂ ಓದಿ: ಕೇಳಿದಷ್ಟು ವರದಕ್ಷಿಣೆ ಕೊಡದ್ದಕ್ಕೆ ಗಂಡನ ಮನೆಯವರೆಲ್ಲ ಸೇರಿ ಸೊಸೆಗೆ ಎಚ್‌ಐವಿ ಇಂಜೆಕ್ಷನ್!
1898 ರಲ್ಲಿ ಹೆಂಡತಿ ಸಾರಾಳ ಮರಣದವರೆಗೆ 88 ವರ್ಷ ಮತ್ತು 349 ದಿನಗಳು ಒಟ್ಟಿಗೆ ಇದ್ದ ಡೇವಿಡ್ ಜೇಕಬ್ ಹಿಲ್ಲರ್ ಮತ್ತು ಸಾರಾ ಡೇವಿ ಹಿಲ್ಲರ್ ಅವರ ವಿವಾಹವು ಇಲ್ಲಿಯವರೆಗೆ ದಾಖಲಾಗಿರುವ ಅತಿ ದೀರ್ಘವಾದ ದಾಂಪತ್ಯವಾಗಿದೆ. ಮೊದಲು, ಅಮೇರಿಕನ್ ದಂಪತಿಗಳಾದ ಹರ್ಬರ್ಟ್ ಫಿಶರ್ ಮತ್ತು ಸೆಲ್ಮಿರಾ ಫಿಶರ್, 86 ವರ್ಷ ಮತ್ತು 290 ದಿನಗಳ ಕಾಲ ನಡೆದ ಅತಿ ದೀರ್ಘವಾದ ದಾಂಪತ್ಯದ ದಾಖಲೆಯನ್ನು ಹೊಂದಿದ್ದರು. ಆದರೆ 2011 ರ ಫೆಬ್ರವರಿ 27 ರಂದು ಹರ್ಬರ್ಟ್ ನಿಧನರಾದರು.
