ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ 'ಬ್ಲೈಂಡ್ ಡೇಟ್' ಕಾರ್ಯಕ್ರಮ ಆಯೋಜಿಸಿದ್ದ ಯುವಕನ ವಿರುದ್ಧ ಪೊಲೀಸ್ ಪ್ರಕರಣ ದಾಖಲು. ಉತ್ತರ ಭಾರತ ಮೂಲದ ಯುವಕನಿಂದ ಆಯೋಜನೆ, ತೋಟಗಾರಿಕೆ ಇಲಾಖೆ ದೂರಿನ ಮೇರೆಗೆ ಕ್ರಮ.
ಬೆಂಗಳೂರು: ನಗರದ ಪ್ರಸಿದ್ಧ ಕಬ್ಬನ್ ಪಾರ್ಕ್‌ನಲ್ಲಿ 'ಬ್ಲೈಂಡ್ ಡೇಟ್' ಎಂಬ ಹೆಸರಿನಲ್ಲಿ ಯುವಕ-ಯುವತಿಗಳನ್ನು ಪರಸ್ಪರ ಸಂಪರ್ಕಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದ ಪ್ರಕರಣ ಇದೀಗ ವಿವಾದಕ್ಕೆ ಗ್ರಾಸವಾಗಿದೆ. ಈ ಕಾರ್ಯಕ್ರಮದ ಬಗ್ಗೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ನೀಡಿದ ದೂರಿನ ಮೇರೆಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವೆಲ್ಲಾ ಹೇಗೆ ನಡೆದಿದೆ?
ಈ 'ಬ್ಲೈಂಡ್ ಡೇಟ್' ಕಾರ್ಯಕ್ರಮವನ್ನು ಉತ್ತರ ಭಾರತದ ವಿನಿತ್ ಕೊಟಾಡಿಯಾ ಎಂಬುವವರು ಆಯೋಜಿಸಿದ್ದರು. ಬೆಂಗಳೂರಿನ ಲಗ್ಗೆರೆಯಲ್ಲಿ ವಾಸವಿದ್ದ ಈ ಯುವಕ ಬಿಟೆಕ್ ಪೂರೈಸಿದ್ದು, ಉದ್ಯೋಗವಿಲ್ಲದೆ ಸಮಯ ಕಳೆಯುತ್ತಿದ್ದ. ಹೀಗಾಗಿ "ಏನಾದರೂ ವಿಭಿನ್ನವಾಗಿರುವ ಕೆಲಸ ಮಾಡೋಣ" ಎಂಬ ಯೋಚನೆಯಿಂದ ಈ ಕಾರ್ಯಕ್ರಮದ ತಯಾರಿಯಲ್ಲಿದ್ದ. ಕಬ್ಬನ್ ಪಾರ್ಕ್ ನಲ್ಲಿ ಡೇಟಿಂಗ್ ಅವಕಾಶ ಬಗ್ಗೆ ಪರಿಸರವಾದಿಗಳಿಂದ ಭಾರೀ ಆಕ್ರೋಶ ಕೂಡ ವ್ಯಕ್ತವಾಗಿತ್ತು.
ಕಾರ್ಯಕ್ರಮದ ವಿನ್ಯಾಸ:
ವಿನಿತ್, 'ಬುಕ್ ಮೈ ಶೋ' ವೆಬ್‌ಸೈಟ್‌ನಲ್ಲಿ ಈ ಕಾರ್ಯಕ್ರಮಕ್ಕಾಗಿ ವಿಶೇಷ ಪುಟವನ್ನು ಸೃಷ್ಟಿಸಿ, 18 ವರ್ಷ ತುಂಬಿರುವ ಯುವಕ ಯುವತಿಯರಿಗೆ ಅಹ್ವಾನ ನೀಡಿದ್ದ. ಹುಡುಗಿಯರಿಗೆ ₹199 ಮತ್ತು ಹುಡುಗರಿಗೆ ₹1,499 ರ ಪ್ರಮಾಣದಲ್ಲಿ ನೋಂದಣಿ ಶುಲ್ಕ ನಿಗದಿ ಮಾಡಿದ್ದ. ಅವನು ಯುವಕ-ಯುವತಿಯರ ಫ್ರೆಂಡ್‌ಶಿಪ್ ಬೆಳೆಸಲು ಅವಕಾಶ ಕಲ್ಪಿಸುವ ಇರಾದೆಯಿಂದ ಈ ಯೋಜನೆ ಮಾಡಿದ್ದ. ಗುರುತು ಪರಿಚಯ ಇರದ ಗೆಳೆಯ ಗೆಳತಿಯರೊಡನೆ ಪ್ರೇಮ ಸಂಭಾಷಣೆಗೆ ಅವಕಾಶ. ಸ್ನೇಹ,ಪ್ರೇಮ,ಸಂಭಾಷಣೆಗೆ ಅವಕಾಶ ಕಲ್ಪಿಸೋದಾಗಿ ಬುಕ್ ಮೈ ಶೋನಲ್ಲಿ ಮಾಹಿತಿ ನೀಡಿ ಪೋಸ್ಟರ್ ಹಾಕಿದ್ದ.
ಸ್ಥಳೀಯ ಅನುಮತಿ ಇಲ್ಲದೆ ಆಯೋಜನೆ:
ಆದರೆ ಈ ಕಾರ್ಯಕ್ರಮವನ್ನು ಕಬ್ಬನ್ ಪಾರ್ಕ್‌ನಲ್ಲಿ ನಡೆಸುವ ಯೋಜನೆ ಇರಲಿಲ್ಲ. ಮೆಟ್ರೋ ನಿಲ್ದಾಣದ ಸಮೀಪವಿರುವ ಮಾಲ್ ಬಳಿ ಎಲ್ಲರನ್ನು ಸೇರಿಸಿ ಕಾರ್ಯಕ್ರಮ ನಡೆಸಬೇಕೆಂಬ ಯೋಚನೆ ಇತ್ತು. ಈ ಯೋಜನೆಗೆ ನಾಲ್ಕು ಜನ ಯುವತಿಯರು ₹199 ರಂತೆ ನಿಗದಿತ ಶುಲ್ಕ ನೀಡಿ ಹೆಸರು ನೋಂದಾಯಿಸಿದ್ದರು. ಆಗಸ್ಟ್ 2 ರಿಂದ 31 ಆಗಸ್ಟ್ ವರೆಗೂ ವರೆಗೂ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿತ್ತು.
ಕಾನೂನು ಅರಿವು ಇಲ್ಲದ ಎಂದ ವಿನಿತ್
ದೂರು ದಾಖಲಾದ ನಂತರ ಪೊಲೀಸರು ವಿನಿತ್‌ನನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಅವನು ಕಾನೂನು ಜ್ಞಾನವಿಲ್ಲದೆ ಈ ಕಾರ್ಯಕ್ರಮ ಆಯೋಜಿಸಿದ್ದನ್ನೂ, ಯಾವುದೇ ಅನಧಿಕೃತ ಹಾಗೂ ಅನಿವಾರ್ಯ ಲೈಸೆನ್ಸ್ ಇಲ್ಲದೆ ಈ ಚಟುವಟಿಕೆಗೆ ಮುಂದಾಗಿದ್ದನ್ನೂ ಒಪ್ಪಿಕೊಂಡಿದ್ದಾನೆ. ಹೀಗಾಗಿ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾನೆ. ಸದ್ಯಕ್ಕೆ ಈತನ ಮೇಲೆ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಆದರೆ ಅಧಿಕಾರಿಗಳು ಆತನಿಗೆ ಕಾನೂನು ಸಂಬಂಧಿತ ಎಚ್ಚರಿಕೆಯನ್ನು ನೀಡಿದ್ದು, ಮುಂದೆ ಇಂತಹ ಅನಧಿಕೃತ ಚಟುವಟಿಕೆಗಳಿಂದ ದೂರವಿರುವಂತೆ ಸೂಚಿಸಿದ್ದಾರೆ.
