ಆನ್ ಲೈನ್ ವಂಚಕನ ಜತೆ ಬೆಂಗಳೂರಿಗನ ಚಾಟ್; ಪೇಟಿಎಂ ಸಂಸ್ಥಾಪಕರ ಗಮನವನ್ನೂ ಸೇಳೀತು
ವಾಟ್ಸಾಪ್ ನಲ್ಲಿ ಹಲವು ಲಿಂಕ್ ಗಳು ಸಾಮಾನ್ಯವಾಗಿ ಬರುತ್ತವೆ. ಅವುಗಳನ್ನು ಯಾರೂ ಸಹ ಓಪನ್ ಮಾಡಲು ಹೋಗುವುದಿಲ್ಲ. ಹಾಗೆಯೇ, ಯಾವುದೇ ಸಂಖ್ಯೆಯಿಂದ ಅಂತಹ ಮೆಸೇಜ್ ಬಂದರೂ ಅವರಿಗೆ ತಿರುಗಿ ರಿಪ್ಲೈ ಮಾಡಲು ಸಹ ಹೋಗುವುದಿಲ್ಲ. ಅಂತಹ ಸಂಖ್ಯೆಯನ್ನು ಬ್ಲಾಕ್ ಮಾಡಿಬಿಡುತ್ತೇವೆ. ಆದರೆ, ಚೆಟ್ಟಿ ಅರುಣ್ ಹಾಗೆ ಮಾಡದೇ ಎಪಿಕೆ ಲಿಂಕ್ ಕಳಿಸಿದ ಸಂಖ್ಯೆಯ ವ್ಯಕ್ತಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಚಾಟ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅರುಣ್ ಮಾಹಿತಿ ಹಂಚಿಕೊಂಡಿದ್ದು, ಅದು ಪೇಟಿಎಂ ಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರ ಗಮನವನ್ನು ಸೆಳೆದಿದೆ.
ಮೊಬೈಲ್ ಗಳಿಗೆ ಗೊತ್ತಿಲ್ಲದ ಸಂಖ್ಯೆಗಳಿಂದ ಕರೆ ಬಂದರೆ ಸ್ವೀಕಾರ ಮಾಡದಿರುವವರೂ ಇದ್ದಾರೆ. ಗೊತ್ತಿಲ್ಲದ ಸಂಖ್ಯೆಗಳಿಂದ ವಾಟ್ಸಾಪ್ ಸಂದೇಶ ಬಂದರಂತೂ ಯಾರೂ ಅದಕ್ಕೆ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಮೊಬೈಲ್ ಹ್ಯಾಕ್ ಮಾಡಲು ಯಾವುದಾದರೂ ಮೋಸದ ಜಾಲವಿರುತ್ತದೆ ಎನ್ನುವುದು ಈಗ ಸಾಮಾನ್ಯ ಜನರಿಗೂ ಅರಿವಾಗಿದೆ. ಅಷ್ಟಕ್ಕೂ ಅಂತಹ ಸಂಖ್ಯೆಗಳಿಗೆ ತಿರುಗಿ ಮೆಸೇಜ್ ಮಾಡಲೂ ಭಯವಾಗುತ್ತದೆ. ಫೋನ್ ಹ್ಯಾಕ್ ಗೆ ಒಳಗಾಗಿ, ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಕಳೆದುಕೊಳ್ಳುವ ಭಯ ಕಾಡುತ್ತದೆ. ಯಾವುದೇ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಬಳಸಲು ಹಿಂಜರಿಕೆಯಾಗುತ್ತದೆ. ಅಂಥದ್ದರಲ್ಲಿ ಬೆಂಗಳೂರಿನ ನಿವಾಸಿ ಚೆಟ್ಟಿ ಅರುಣ್ ಎನ್ನುವವರು ಆನ್ ಲೈನ್ ಸ್ಕ್ಯಾಮರ್ ಜತೆಗೆ ನಡೆಸಿರುವ ಚಾಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೇಲ್ನೋಟಕ್ಕೆ ವಿನೋದಮಯವಾಗಿ ಕಂಡುಬಂದರೂ ಈ ಚಾಟ್ ಸೈಬರ್ ಕ್ರೈಮ್ ನ ಮತ್ತೊಂದು ಮುಖವನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದೆ. ಸ್ಕ್ಯಾಮರ್ ನಿಂದ ಬಂದ ಎಪಿಕೆ ಫೈಲ್ ಗಳ ಬಗ್ಗೆ ಸಹಜವಾಗಿ ಮಾತು ಆರಂಭಿಸಿದ ಅರುಣ್, ಸ್ಕ್ಯಾಮರ್ ಉದ್ದೇಶ ಹಾಗೂ ತಂತ್ರಗಳನ್ನು ಅವರಿಂದಲೇ ಮಾಹಿತಿ ಹೊರಡಿಸಿದ್ದಾರೆ.
ಸ್ನೇಹಮಯ (Friendly) ಮಾತುಕತೆ
ಅತ್ಯಂತ ಸ್ನೇಹಮಯವಾಗಿ ಅರುಣ್ ಸ್ಕ್ಯಾಮರ್(Scammer) ಜತೆಗೆ ಮಾತುಕತೆ (Conversation) ಆರಂಭಿಸುತ್ತಾರೆ. “ಹೇಗೆ ನಡೀತಾ ಇದೆ ಜೀವನ? ಚಂಗಾ ಹೈ ಕ್ಯಾ?’ಎಂದು ಪ್ರಶ್ನಿಸುತ್ತಾರೆ. ಇಂತಹ ಸ್ನೇಹಕ್ಕೆ ಸ್ಕ್ಯಾಮರ್ ಮರುಳಾಗುತ್ತಾನೋ ಗೊತ್ತಿಲ್ಲ, ಒಟ್ಟಿನಲ್ಲಿ, ಅನುಮಾನಾಸ್ಪದ ಫೈಲ್ ಗಳನ್ನು ಡೌನ್ ಲೋಡ್ (Download) ಮಾಡದಂತೆ ಆ ವ್ಯಕ್ತಿಯೇ ಎಚ್ಚರಿಕೆ ನೀಡುತ್ತಾನೆ! ಆತ ನೀವು ಎಲ್ಲಿಯವರು ಎಂದು ಕೇಳಿದಾಗ ಸಹಜವಾಗಿ “ನಾನು ಬೆಂಗಳೂರು. ನೀವು ಎಲ್ಲಿಯವರು? ಅಷ್ಟಕ್ಕೂ ಈ ಎಪಿಕೆ ಫೈಲ್ ಗಳನ್ನು ಡೌನ್ ಲೋಡ್ ಮಾಡಿದ್ರೆ ಏನಾಗುತ್ತೆ? ಇದೊಂಥರ ಕ್ರೇಜಿ (Crazy) ಅನಿಸ್ತಿದೆ, ಹೇಳು’ ಎಂದು ಕೇಳುತ್ತಾರೆ.
ಬಾಸ್ ಕೆಲಸದಿಂದ ವಜಾ ಮಾಡ್ತಿದ್ದಕ್ಕೆ ಕೆಂಡವಾದ ಯುವತಿ, ಸೇಡಿಗೆ ಕಂಪನಿಯೇ ಭಸ್ಮವಾಯ್ತು!
ಅಷ್ಟೇ ಅಲ್ಲ, “ನಮ್ಮ ಕಾರ್ಪೋರೇಟ್ ಜಾಬ್ ನಲ್ಲಿ ಈ ರೀತಿಯ ಮಜಾ ಇಲ್ಲ’ ಎಂದೂ ಹೇಳುತ್ತಾರೆ. ಏನೂ ತಿಳಿಯದವರಂತೆ, “ಆ ಮೆಸೇಜುಗಳಿಂದ (Message) ಏನಾಗುತ್ತೆ? ಕಾರ್ಡ್ ನಂಬರ್ (Card Number) ಎಲ್ಲ ನಮ್ಮ ಬಳಿಯೇ ಇರುತ್ತಲ್ವಾ? ನಿಮಗೆ ಏನಾದ್ರೂ ಹಣ (Money) ಸಿಕ್ತಾ?’ ಎಂದೂ ಕೇಳುತ್ತಾರೆ. ಅದಕ್ಕೆ ಆತ, “ಎಲ್ಲ ಮೆಸೇಜ್ ಗಳೂ ನಮ್ಮ ಸಂಖ್ಯೆಗೆ ಬರುತ್ತವೆ. ಕೆಲವು ಬಾರಿ ಹಣ ಬರುತ್ತದೆ’ ಎಂದು ಹೇಳಿದಾಗ ಅದಕ್ಕೆ “ಕಂಗ್ರಾಟ್ಸ್’ ಕೂಡ ಹೇಳುತ್ತಾರೆ!
ಸ್ಕ್ಯಾಮರ್ ನ ಡಿಜಿಟಲ್ ಇಂಡಿಯಾ
ಆಗ ಆತ “ವೀಡಿಯೋ ಕಾಲ್ ಮಾಡು, ಏನ್ ಮಾಡ್ತಾ ಇದ್ದೀಯಾ ನೋಡೋಣ’ ಎಂದು ಹೇಳುತ್ತಾನೆ. ಆದರೆ, ಅರುಣ್ ವೀಡಿಯೋ ಕಾಲ್ ಮಾಡುವುದಿಲ್ಲ. “ವೀಡಿಯೋ ಕಾಲ್ ಮಾಡಿ ಏನ್ ಮಾಡೋದು? ಆಫೀಸಲ್ಲಿ ಕೆಲಸ ಮಾಡುತ್ತಿದ್ದೇನೆ, ನಿಮ್ಮ ಕೆಲಸದಷ್ಟು ಕ್ರೇಜಿ ಇಲ್ಲ’ ಎಂದು ಹೇಳುತ್ತಾರೆ. “ಆದ್ರೆ ಬೇರೊಬ್ಬರ ಮೊಬೈಲ್ ಸಂಖ್ಯೆಗಳು ನಿಮಗೆ ಹೇಗೆ ಸಿಗುತ್ತವೆ?’ ಎಂದು ಪ್ರಶ್ನಿಸುತ್ತಾರೆ. “ಮತ್ತೊಬ್ಬರ ಒಟಿಪಿ ಮೂಲಕ ಲಾಗಿನ್ (Login) ಆಗುತ್ತೇವೆ’ ಎಂದು ತಿಳಿಸುತ್ತಾನೆ. ಅಷ್ಟೇ ಅಲ್ಲ, “ಎಲ್ಲ ಡಿಜಿಟಲ್ ಇಂಡಿಯಾದ (Digital India) ಕಮಾಲ್’ ಎಂದೂ ಹೇಳುತ್ತಾನೆ.
ಎಚ್ಚರಿಕೆ ಹೇಗೆ?
“ಒಂದೊಮ್ಮೆ ಎಪಿಕೆ ಫೈಲ್ ಗಳನ್ನು ಡೌನ್ ಲೋಡ್ ಮಾಡಿದರೆ ಫೋನ್ ಆಫ್ ಮಾಡಬೇಕು ಅಥವಾ ಸಿಮ್ ಕಾರ್ಡ್ ತೆಗೆಯಬೇಕು, ಕಾರ್ಡ್ ಮಾಹಿತಿ (Information) ಫ್ಲಿಪ್ ಕಾರ್ಟ್, ಫೋನ್ ಪೇ ಗಳಿಂದ ದೊರೆಯುತ್ತದೆ’ ಎಂದೂ ಆತ ತಿಳಿಸುತ್ತಾನೆ. “ನನ್ನ ಹಿಂದೆ ಪೊಲೀಸನ್ನು ಬಿಡಬೇಡ’ ಎಂದೂ ರಿಕ್ವೆಸ್ಟ್ ಮಾಡುತ್ತಾನೆ. ಕೊನೆಯಲ್ಲಿ ಇಬ್ಬರೂ ಪರಸ್ಪರ ಶುಭಾಶಯವನ್ನೂ ಕೋರುತ್ತಾರೆ!
ಸಂಪೂರ್ಣ ಚಾಟ್ (Chat) ಅನ್ನು ಅರುಣ್ ಪೋಸ್ಟ್ ಮಾಡಿದ್ದು, ಇದಕ್ಕೆ ಪೇಟಿಎಂ (Paytm) ಸ್ಥಾಪಕ ವಿಜಯ್ ಶೇಖರ್ ಶರ್ಮಾ ಪ್ರತಿಕ್ರಿಯೆ ನೀಡಿದ್ದು, “ಕೊನೆಯ ಸಾಲಿನವರೆಗೂ ಓದದೆ ನೀವು ನಿಲ್ಲಿಸಲು ಸಾಧ್ಯವಾಗುವುದಿಲ್ಲ’ ಎಂದು ಹೇಳಿದ್ದಾರೆ. ಸಿಕ್ಕಾಪಟ್ಟೆ ಜನ ಕಾಮೆಂಟ್ ಮಾಡಿದ್ದು, ಈಗಾಗಲೇ 2 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿದೆ.