Badshah wife Isha rikhi post ಎಲ್ಲವೂ ಸರಿಯಾಗಿದೆ ಎಂದು ನಟಿಸುವುದನ್ನು ನಿಲ್ಲಿಸಲು ಸಿದ್ಧ ಎಂದ ರ‍್ಯಾಪರ್ ಬಾದ್‌ಶಾ ಪತ್ನಿ; ಇಶಾ ರಿಖಿ ಅವರ ಕ್ರಿಪ್ಟಿಕ್ ಪೋಸ್ಟ್‌ನಿಂದ ವಿಚ್ಛೇದನದ ವದಂತಿ ಮತ್ತಷ್ಟು ಜೋರು!
ಜನಪ್ರಿಯ ಗಾಯಕ ಹಾಗೂ ರ‍್ಯಾಪರ್ ಬಾದ್‌ಶಾ ಅವರ ವೈಯಕ್ತಿಕ ಜೀವನ ಇದೀಗ ಮತ್ತೆ ಸುದ್ದಿಯಲ್ಲಿದೆ. ಬಾದ್‌ಶಾ ಅವರ ಪತ್ನಿ ಹಾಗೂ ನಟಿ ಇಶಾ ರಿಖಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಭಾವನಾತ್ಮಕ ಪೋಸ್ಟ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಬಾದ್‌ಶಾ ಅವರೊಂದಿಗೆ ಇಶಾ ರಿಖಿ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ? ಇಬ್ಬರೂ ವಿಚ್ಛೇದನದತ್ತ ಸಾಗುತ್ತಿದ್ದಾರೆಯೇ? ಎಂಬ ಪ್ರಶ್ನೆಗಳು ಇದೀಗ ಅಭಿಮಾನಿಗಳಲ್ಲಿ ಮೂಡಿವೆ. ಇದಕ್ಕೆ ಕಾರಣ ಇಶಾ ಹಂಚಿಕೊಂಡಿರುವ ಪೋಸ್ಟ್‌ನಲ್ಲಿನ ಕೆಲವು ಸಾಲುಗಳು. ಆದರೆ, ಇಶಾ ತಮ್ಮ ಪೋಸ್ಟ್‌ನಲ್ಲಿ ಬಾದ್‌ಶಾ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸಿಲ್ಲ. ಹೀಗಾಗಿ ಅವರ ಪೋಸ್ಟ್ ನಿಜವಾಗಿಯೂ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ್ದೇ ಎಂಬುದು ಅಧಿಕೃತವಾಗಿ ಖಚಿತವಾಗಿಲ್ಲ.
ನನ್ನ ಪತಿಯ ಅಧಿಕಾರ ಮತ್ತು ಪ್ರಭಾವದಿಂದ ನಾನು ಹೆದರಿದ್ದೆ
ಇಶಾ ರಿಖಿ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಮ್ಮ ಜೀವನದಲ್ಲಿ ಎದುರಿಸಿದ ಭಯ ಮತ್ತು ಮೌನದ ಬಗ್ಗೆ ಭಾವನಾತ್ಮಕವಾಗಿ ಬರೆದಿದ್ದಾರೆ. ಕೆಲವು ಯುದ್ಧಗಳಲ್ಲಿ ಯಾವುದೇ ಗೋಚರ ಬಾಹ್ಯ ಚಿಹ್ನೆಗಳಿರುವುದಿಲ್ಲ. ನಾನು ಭಯದಿಂದ ದೀರ್ಘಕಾಲ ಮೌನವಾಗಿದ್ದೆ. ನನ್ನ ಪತಿಗೆ ಇರುವ ಸ್ಥಾನಮಾನ, ಅಧಿಕಾರ ಮತ್ತು ಸಂಪನ್ಮೂಲಗಳಿಂದ ನಾನು ಬೆದರಿಸಲ್ಪಟ್ಟಿದ್ದೆ. ಮೌನವಾಗಿರುವುದೇ ಸುರಕ್ಷಿತ ಎಂದು ನಾನು ನನ್ನನ್ನು ನಾನೇ ಮನವರಿಕೆ ಮಾಡಿಕೊಂಡೆ ಎಂಬ ಅರ್ಥದಲ್ಲಿ ಅವರು ಬರೆದಿದ್ದಾರೆ.
ನನ್ನ ಮೌನ ಎಂದರೆ ನಾನು ಎಲ್ಲವನ್ನೂ ಒಪ್ಪಿಕೊಂಡಿದ್ದೇನೆ ಎಂದಲ್ಲ. ಅದು ಕೇವಲ ಪರಿಸ್ಥಿತಿಯನ್ನು ನಿಭಾಯಿಸುವ ಒಂದು ಮಾರ್ಗವಾಗಿತ್ತು. ಆದರೆ ಇಂದು ನಾನು ಭಯಕ್ಕಿಂತ ಧೈರ್ಯವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಇಡೀ ಕಥೆಯನ್ನು ಹೇಳಲು ನಾನು ಇನ್ನೂ ಸಿದ್ಧವಾಗಿಲ್ಲದಿರಬಹುದು. ಆದರೆ ಎಲ್ಲವೂ ಸರಿಯಾಗಿದೆ ಎಂದು ನಟಿಸುವುದನ್ನು ನಿಲ್ಲಿಸಲು ನಾನು ಸಿದ್ಧಳಾಗಿದ್ದೇನೆ ಎಂದು ಇಶಾ ಹೇಳಿದ್ದಾರೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಮದುವೆಯಾಗಿ ಆರು ತಿಂಗಳೂ ಆಗಿಲ್ಲ, ಆಗಲೇ ಬಿರುಕು?
ಬಾದ್‌ಶಾ ಮತ್ತು ಇಶಾ ರಿಖಿ ಅವರ ಮದುವೆ 2026ರ ಮಾರ್ಚ್‌ನಲ್ಲಿ ನಡೆದಿತ್ತು ಎನ್ನಲಾಗಿದೆ. ಆತ್ಮೀಯವಾಗಿ ನಡೆದ ಈ ವಿವಾಹದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದ ಕೆಲವರು ಮಾತ್ರ ಭಾಗವಹಿಸಿದ್ದರು ಎಂಬ ವರದಿಗಳಿವೆ. ಇಬ್ಬರೂ ತಮ್ಮ ಮದುವೆಯನ್ನು ಖಾಸಗಿಯಾಗಿಯೇ ಇರಿಸಿಕೊಂಡಿದ್ದರು. ಆದರೆ ಬಳಿಕ ಇಶಾ ಸಾಮಾಜಿಕ ಜಾಲತಾಣದಲ್ಲಿ ಬಾದ್‌ಶಾ ಜೊತೆಗಿನ ಫೋಟೋ ಹಂಚಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ದೃಢಪಡಿಸಿದ್ದರು. ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗಲೂ ಇಶಾ, ಬಾದ್‌ಶಾ ಅವರನ್ನು ತಮ್ಮ ಪತಿ ಎಂದು ಉಲ್ಲೇಖಿಸಿದ್ದರು ಎನ್ನಲಾಗಿದೆ. ಇಶಾ ಅವರ ತಾಯಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ವಿವಾಹದ ಚಿತ್ರಗಳನ್ನು ಹಂಚಿಕೊಂಡು ನವದಂಪತಿಗೆ ಶುಭ ಹಾರೈಸಿದ್ದರು. ಆದರೆ ಮದುವೆಯಾಗಿ ಆರು ತಿಂಗಳೂ ಪೂರ್ಣಗೊಳ್ಳುವ ಮುನ್ನವೇ ಇಶಾ ಅವರ ಇತ್ತೀಚಿನ ಪೋಸ್ಟ್ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕೆಲವು ಬಿರುಗಾಳಿಗಳು ಪಾಠ ಕಲಿಸುತ್ತವೆ ಎಂದಿದ್ದ ಇಶಾ
ಇಶಾ ಅವರ ಈ ಕ್ರಿಪ್ಟಿಕ್ ಪೋಸ್ಟ್‌ಗೂ ಕೆಲವೇ ದಿನಗಳ ಮೊದಲು ಅವರು ಬಾದ್‌ಶಾ ಜೊತೆಗಿನ ಕೆಲವು ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕೆಲವು ಬಿರುಗಾಳಿಗಳು ಪಾಠಗಳನ್ನು ತರುತ್ತವೆ, ಮತ್ತು ಪ್ರತಿ ಪ್ರಾರ್ಥನೆಯೂ ಭರವಸೆಯನ್ನು ತರುತ್ತದೆ ಎಂಬ ಅರ್ಥದ ಸಾಲುಗಳನ್ನು ಅವರು ಬರೆದಿದ್ದರು. ಈ ಪೋಸ್ಟ್‌ಗೆ ಇಶಾ ಅವರ ಆಪ್ತ ಸ್ನೇಹಿತೆ ಹಾಗೂ ನಟಿ ಜಾಸ್ಮಿನ್ ಭಾಸಿನ್ ಕೂಡ ಪ್ರತಿಕ್ರಿಯಿಸಿ, ಧೈರ್ಯದಿಂದ ಇರುವಂತೆ ಸಲಹೆ ನೀಡಿದ್ದರು. ಇದೀಗ ಇಶಾ ಅವರ ಹೊಸ ಪೋಸ್ಟ್ ಹೊರಬಂದಿರುವ ಹಿನ್ನೆಲೆಯಲ್ಲಿ, ಈ ಹಿಂದಿನ ಪೋಸ್ಟ್ ಕೂಡ ಮತ್ತೊಮ್ಮೆ ಚರ್ಚೆಗೆ ಬಂದಿದೆ.
ಇಶಾಗೆ ಸ್ನೇಹಿತರು, ಆಪ್ತರಿಂದ ಬೆಂಬಲ
ಇಶಾ ರಿಖಿ ಅವರ ಪೋಸ್ಟ್ ವೈರಲ್ ಆದ ಬಳಿಕ ಅವರ ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಅವರಿಗೆ ಬೆಂಬಲ ಸೂಚಿಸುತ್ತಿರುವುದು ಗಮನ ಸೆಳೆದಿದೆ. ಆಪ್ತ ಸ್ನೇಹಿತರೊಬ್ಬರು ಇಶಾಗೆ ಬೆಂಬಲ ಸೂಚಿಸಿ, “ನೀವು ಏನನ್ನು ಅನುಭವಿಸಿದ್ದೀರಿ ಮತ್ತು ಇನ್ನೂ ಅನುಭವಿಸುತ್ತಿದ್ದೀರಿ ಎಂಬುದಕ್ಕೆ ನಾನು ಸಾಕ್ಷಿಯಾಗಿದ್ದೇನೆ. ನೀವು ಪ್ರತಿಯೊಂದು ಸವಾಲನ್ನೂ ಪ್ರಾಮಾಣಿಕತೆ, ಸತ್ಯ ಮತ್ತು ಸ್ವಾಭಿಮಾನದಿಂದ ಎದುರಿಸಿದ್ದೀರಿ ಎಂಬುದು ನನಗೆ ಮತ್ತು ನಿಮ್ಮ ಹತ್ತಿರವಿರುವ ಎಲ್ಲರಿಗೂ ತಿಳಿದಿದೆ. ದೃಢವಾಗಿರಿ, ನಾವು ನಿಮ್ಮೊಂದಿಗೆ ಮತ್ತು ಸತ್ಯದೊಂದಿಗೆ ಇದ್ದೇವೆ” ಎಂಬ ಅರ್ಥದಲ್ಲಿ ಬರೆದಿದ್ದಾರೆ. ಇನ್ನೊಬ್ಬರು “ಭಯಪಡದೆ ದೃಢವಾಗಿ ಇರಿ ಎಂದು ಹೇಳಿದ್ದರೆ, ಮತ್ತೊಬ್ಬ ಆಪ್ತ ಸ್ನೇಹಿತರು ಇಶಾ ಅವರನ್ನು ಬಲಶಾಲಿ ಮತ್ತು ಸುಂದರ ಎಂದು ಹೊಗಳಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಇಶಾ ಅವರ ಪೋಸ್ಟ್ ಹಿಂದಿನ ನಿಜವಾದ ಕಾರಣವೇನು ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಇಶಾ ರಿಖಿ ಯಾರು?
ಬಾದ್‌ಶಾ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಗಳಿಸಿದ್ದರೆ, ಇಶಾ ರಿಖಿ ಕೂಡ ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಟಿ ಮತ್ತು ಮಾಡೆಲ್. 1993ರ ಸೆಪ್ಟೆಂಬರ್ 9ರಂದು ಚಂಡೀಗಢದಲ್ಲಿ ಜನಿಸಿದ ಇಶಾ ಅಲ್ಲಿಯೇ ತಮ್ಮ ಶಾಲಾ ಶಿಕ್ಷಣ ಪೂರ್ಣಗೊಳಿಸಿ, ಬಳಿಕ ಪಂಜಾಬ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ ಎನ್ನಲಾಗಿದೆ. ಅವರು 12ನೇ ತರಗತಿಯಲ್ಲಿದ್ದಾಗಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ನಂತರ ಪಂಜಾಬಿ ಚಿತ್ರರಂಗದಲ್ಲಿ ತಮ್ಮ ನಟನಾ ವೃತ್ತಿಜೀವನ ಆರಂಭಿಸಿದ ಇಶಾ, 2013ರಲ್ಲಿ ಸಿಪ್ಪಿ ಗಿಲ್ ಅವರೊಂದಿಗೆ ‘ಜಟ್ ಬಾಯ್ಸ್ ಪುಟ್ ಜಟ್ಟನ್ ದೇ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಬಳಿಕ ಅಮರಿಂದರ್ ಗಿಲ್ ಜೊತೆ ‘ಹ್ಯಾಪಿ ಗೋ ಲಕ್ಕಿ’ ಸೇರಿದಂತೆ ಹಲವು ಪಂಜಾಬಿ ಚಿತ್ರಗಳಲ್ಲಿ ನಟಿಸಿದ್ದಾರೆ.
ಬಾಲಿವುಡ್‌ನಲ್ಲೂ ನಟಿಸಿರುವ ಇಶಾ
ಪಂಜಾಬಿ ಚಿತ್ರಗಳ ಜೊತೆಗೆ ಇಶಾ ರಿಖಿ ಬಾಲಿವುಡ್‌ನಲ್ಲೂ ಕಾಣಿಸಿಕೊಂಡಿದ್ದಾರೆ. 2018ರಲ್ಲಿ ಬಿಡುಗಡೆಯಾದ ‘ನವಾಬ್ಜಾದೆ’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಇದಲ್ಲದೆ ಹಲವು ಜಾಹೀರಾತುಗಳಲ್ಲೂ ಅವರು ಕಾಣಿಸಿಕೊಂಡಿದ್ದು, ಅಕ್ಷಯ್ ಕುಮಾರ್, ಸೋನಮ್ ಕಪೂರ್ ಹಾಗೂ ಅಮಿತಾಭ್ ಬಚ್ಚನ್ ಅವರಂತಹ ಜನಪ್ರಿಯ ನಟರೊಂದಿಗೆ ಜಾಹೀರಾತುಗಳಲ್ಲಿ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.
