ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ತಮ್ಮ 7 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸುತ್ತಿದ್ದಾರೆ. ಸೈನಾ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಜೀವನದ ಹೊಸ ಹಾದಿಯ ಹುಡುಕಾಟದಲ್ಲಿ ಬೇರೆಯಾಗಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.

ಭಾರತದ ಖ್ಯಾತ ಬ್ಯಾಂಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹಾಗೂ ಪತಿ ಪರುಪಳ್ಳಿ ಕಶ್ಯಪ್ ಮಧ್ಯೆ ದಾಂಪತ್ಯ ವಿರಸ ಉಂಟಾಗಿದ್ದು, ಇಬ್ಬರು ದೂರಾಗುತ್ತಿರುವುದಾಗಿ ಘೋಷಿಸಿದ್ದಾರೆ. ಲಂಡನ್ ಒಲಿಂಪಿಕ್ಸ್ 2012 ರಲ್ಲಿ ಕಂಚಿನ ಪದಕ ಗೆದ್ದು ಭಾರತ ಹೆಮ್ಮೆ ಪಡುವಂತೆ ಮಾಡಿದ ಬ್ಯಾಂಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಚ್ಚೇದನದ ಬಗ್ಗೆ ಮಾಹಿತಿ ನೀಡಿದ್ದು, 7 ವರ್ಷದ ದಾಂಪತ್ಯಕ್ಕೆ ಗುಡ್ ಬಾಯ್ ಹೇಳುತ್ತಿರುವುದಾಗಿ ಘೋಷಿಸಿದ್ದಾರೆ.

ಜೀವನವು ಕೆಲವೊಮ್ಮೆ ನಮ್ಮನ್ನು ವಿಭಿನ್ನ ದಿಕ್ಕುಗಳಲ್ಲಿ ಕರೆದೊಯ್ಯುತ್ತದೆ. ಸಾಕಷ್ಟು ಯೋಚನೆಯ ನಂತರ ನಾನು ಹಾಗೂ ಕಶ್ಯಪ್ ಪರುಪಳ್ಳಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ನಮಗಾಗಿ ಹಾಗೂ ಪರಸ್ಪರ ಶಾಂತಿ, ಬೆಳವಣಿಗೆ ಮತ್ತು ಗುಣಪಡಿಸುವಿಕೆಯನ್ನು ಆರಿಸಿಕೊಳ್ಳುತ್ತಿದ್ದೇವೆ . ಹಲವು ನೆನಪುಗಳಿಗೆ ನಾನು ಕೃತಜ್ಞನಾಗಿದ್ದೇನೆ ಮತ್ತು ಮುಂದುವರಿಯಲು ಉತ್ತಮವಾದದ್ದನ್ನು ಮಾತ್ರ ಬಯಸುತ್ತೇನೆ. ಈ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಮತ್ತು ಗೌರವಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಸೈನಾ ನೆಹ್ವಾಲ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಆದರೆ ಸೈನಾ ನೆಹ್ವಾಲ್ ಪತಿ ಬ್ಯಾಂಡ್ಮಿಂಟನ್ ತಾರೆ ಪರುಪಳ್ಳಿ ಕಶ್ಯಪ್ ಮಾತ್ರ ಈ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಆದರೆ ಒಂದು ದಶಕಕ್ಕೂ ಹೆಚ್ಚು ಕಾಲ ಸಂಬಂಧದಲ್ಲಿದ್ದ ನಂತರ ಇಬ್ಬರೂ 2018 ರಲ್ಲಿ ವಿವಾಹವಾಗಿದ್ದರು. ಕ್ರೀಡೆಯಿಂದ ನಿವೃತ್ತರಾದ ನಂತರ, ಕಶ್ಯಪ್ ಕೋಚ್ ಆಗಿ ಬದಲಾಗಿದ್ದರು. ನಿವೃತ್ತರಾದ ನಂತರ ಅವರು ಸೈನಾ ನೆಹ್ವಾಲ್ ಅವರ ವೃತ್ತಿಜೀವನದ ಉದ್ದಕ್ಕೂ ಮಾರ್ಗದರ್ಶನ ನೀಡಲು ಪ್ರಾರಂಭಿಸಿದ್ದರು. 2019 ರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ನೆಹ್ವಾಲ್, ಪಿವಿ ಸಿಂಧು ಅವರನ್ನು ಸೋಲಿಸಿದಾಗ, ಆ ಸಮಯದಲ್ಲಿ ಕಶ್ಯಪ್ ಸೈನಾ ಮಾರ್ಗದರ್ಶಕರಾಗಿದ್ದರು. ಈ ಜೋಡಿ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿತ್ತು. ನೆಹ್ವಾಲ್ ಸ್ಪರ್ಧೆಯಲ್ಲಿದ್ದರೆ, ಕಶ್ಯಪ್ ಅವರಿಗೆ ಕೋರ್ಟ್‌ಸೈಡ್‌ನಿಂದ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಿದ್ದರು.

ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ 2018 ರಲ್ಲಿ ಮದುವೆಯಾಗಿದ್ದರು. ಇಬ್ಬರೂ ಹೈದರಾಬಾದ್‌ನ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ಸೈನಾ ಒಲಿಂಪಿಕ್ಸ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನ ನೀಡಿ ಕಂಚಿನ ಪದಕದೊಂದಿಗೆ ಸುದ್ದಿ ಮಾಡಿದ್ದರೆ. ಪರುಪಲ್ಲಿಅವರು 2014 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕದೊಂದಿಗೆ ಸಾಧನೆ ಮಾಡಿದ್ದರು.

ಸೈನಾ ನೆಹ್ವಾಲ್ ಅವರು ಕರ್ಣಂ ಮಲ್ಲೇಶ್ವರಿ ನಂತರ ಒಲಿಂಪಿಕ್ ಪದಕ ಗೆದ್ದ ಎರಡನೇ ಭಾರತೀಯ ಮಹಿಳೆ ಎನಿಸಿದ್ದರು. 2015ರಲ್ಲಿ, ಸೈನಾ ಮಹಿಳಾ ಸಿಂಗಲ್ಸ್ ನಲ್ಲಿ ವಿಶ್ವದ ನಂ.1 ಶ್ರೇಯಾಂಕ ಗಳಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2024 ರಲ್ಲಿ, ಸೈನಾ ತಾವು ಸಂಧಿವಾತದಿಂದ ಬಳಲುತ್ತಿದ್ದು ತಮ್ಮ ಬ್ಯಾಡ್ಮಿಂಟನ್ ಭವಿಷ್ಯದ ಬಗ್ಗೆ ನಿರ್ಧರಿಸಬೇಕಾಗುತ್ತದೆ ಎಂದು ಹೇಳಿಕೊಂಡಿದ್ದರು.

ಮೊಣಕಾಲು ಚೆನ್ನಾಗಿಲ್ಲ. ನನಗೆ ಸಂಧಿವಾತ ಇದೆ. ನನ್ನ ಕಾರ್ಟಿಲೆಜ್ ಕೆಟ್ಟ ಸ್ಥಿತಿಗೆ ಹೋಗಿದೆ. ಎಂಟು-ಒಂಬತ್ತು ಗಂಟೆಗಳ ಕಾಲ ತಳ್ಳುವುದು ತುಂಬಾ ಕಷ್ಟ ಎಂದು ನೆಹ್ವಾಲ್ ಹೇಳಿಕೊಂಡಿದ್ದರು. ಅವರು ಶೂಟಿಂಗ್ ದಿಗ್ಗಜ ಗಗನ್ ನಾರಂಗ್ ಆಯೋಜಿಸಿದ್ದ ಹೌಸ್ ಆಫ್ ಗ್ಲೋರಿ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡುತ್ತಾ ಈ ವಿಚಾರ ತಿಳಿಸಿದ್ದರು.

ಇಂತಹ ಸ್ಥಿತಿಯಲ್ಲಿ ನೀವು ವಿಶ್ವದ ಅತ್ಯುತ್ತಮ ಆಟಗಾರರಿಗೆ ಹೇಗೆ ಸವಾಲು ಹಾಕುತ್ತೀರಿ? ನಾನು ಅದನ್ನು ಒಪ್ಪಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಉನ್ನತ ಮಟ್ಟದ ಆಟಗಾರರೊಂದಿಗೆ ಆಡಲು ಮತ್ತು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ಎರಡು ಗಂಟೆಗಳ ತರಬೇತಿ ಸಾಕಾಗುವುದಿಲ್ಲ ಎಂದು ಈ ಪಾಡ್‌ಕಾಸ್ಟ್‌ನಲ್ಲಿ ಸೈನಾ ನೆಹ್ವಾಲ್ ಹೇಳಿದ್ದರು.