ಆಸ್ಟ್ರೇಲಿಯಾದ ಆಲ್‌ರೌಂಡರ್ ಆಶ್ಲೀ ಗಾರ್ಡ್ನರ್, ತಮ್ಮದೇ ತಂಡದ ಸಹ ಆಟಗಾರ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆಂದು ಅವರ ಪತ್ನಿ ಮೋನಿಕಾ ರೈಟ್ ಗಂಭೀರ ಆರೋಪ ಮಾಡಿದ್ದಾರೆ.

ನವದೆಹಲಿ (ಜು.13): ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ತಾರೆ, ಆಲ್‌ರೌಂಡರ್ ಆಶ್ಲೀ ಗಾರ್ಡ್ನರ್ ಅವರ ವೈಯಕ್ತಿಕ ಬದುಕು ಮತ್ತು ವಿವಾಹ ವಿಚ್ಛೇದನದ ವಿವಾದವೀಗ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಕಳೆದ ವರ್ಷ ಭಾರತದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ (ODI World Cup) ಟೂರ್ನಿಯ ಅವಧಿಯಲ್ಲಿ ಆಶ್ಲೀ ಗಾರ್ಡ್ನರ್ ತಮ್ಮದೇ ತಂಡದ ಸಹ ಆಟಗಾರ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದುವ ಮೂಲಕ ತಮಗೆ ದ್ರೋಹ ಬಗೆದಿದ್ದಾರೆ ಎಂದು ಅವರ ಪತ್ನಿ ಅಮೆರಿಕನ್‌ ಬಾಸ್ಕೆಟ್‌ಬಾಲ್‌ ಪ್ಲೇಯರ್‌ ಮೋನಿಕಾ ರೈಟ್ ಗಂಭೀರ ಆರೋಪ ಮಾಡಿದ್ದಾರೆ. ಈ ಹೈ-ಪ್ರೊಫೈಲ್ ದಂಪತಿಗಳ ವಿಚ್ಛೇದನದ ಸುದ್ದಿ ಜಗಜ್ಜಾಹೀರಾಗುತ್ತಿದ್ದಂತೆ, ಮೋನಿಕಾ ರೈಟ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸ್ಫೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬ್ರಿಟನ್‌ನ ಪ್ರಸಿದ್ಧ ಮಾಧ್ಯಮ ‘ಡೈಲಿ ಮೇಲ್’ ಪ್ರಕಟಿಸಿದ್ದ ಇವರಿಬ್ಬರ ಮದುವೆ ಮತ್ತು ವಿಚ್ಛೇದನದ ವರದಿಯ ಸ್ಕ್ರೀನ್‌ಶಾಟ್ ಅನ್ನು ಮೋನಿಕಾ ರೈಟ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಅವರು, "ಇಲ್ಲ, ಈ ವರದಿ ತುಂಬಾ ಅಸ್ಪಷ್ಟವಾಗಿದೆ. ನಾನೇ ನಿಮಗೆ ಅಸಲಿ ವಿಷಯ ಏನೆಂದು ಸ್ಪಷ್ಟವಾಗಿ ಹೇಳುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಸ್ಟೋರಿ ಹಂಚಿಕೊಂಡಿರುವ ಮೋನಿಕಾ, ಅದರಲ್ಲಿ ಆಸ್ಟ್ರೇಲಿಯಾದ ಮತ್ತೊಬ್ಬ ಮಹಿಳಾ ಕ್ರಿಕೆಟರ್ ಜಾರ್ಜಿಯಾ ವೋಲ್ ಅವರ ಫೋಟೋ ಹಾಕಿ, "ನನ್ನ ಪತ್ನಿ (ಆಶ್ಲೀ ಗಾರ್ಡ್ನರ್) ಯಾರ ಜೊತೆ ಸೇರಿ ನನಗೆ ವಂಚಿಸಿದಳೋ ಆಕೆ ಇವಳೇ" ಎಂದು ಬರೆಯುವ ಮೂಲಕ ಇಡೀ ಕ್ರಿಕೆಟ್ ಜಗತ್ತು ಬೆಚ್ಚಿಬೀಳುವಂತೆ ಮಾಡಿದ್ದಾರೆ.

ಡೇಟಿಂಗ್ ಆ್ಯಪ್‌ನಿಂದ ಶುರುವಾಗಿ ಮುರಿದುಬಿದ್ದ ಮದುವೆ

ಆಶ್ಲೀ ಗಾರ್ಡ್ನರ್ ಮತ್ತು ಮೋನಿಕಾ ರೈಟ್ ಮೊದಲ ಬಾರಿಗೆ 2020 ರಲ್ಲಿ ಡೇಟಿಂಗ್ ಆ್ಯಪ್ ಮೂಲಕ ಭೇಟಿಯಾಗಿದ್ದರು. ನಂತರ ಪರಸ್ಪರ ಪ್ರೀತಿಸಿ 2024 ರ ಏಪ್ರಿಲ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ತದನಂತರ 2025 ರ ಏಪ್ರಿಲ್‌ನಲ್ಲಿ ಇಬ್ಬರೂ ಅದ್ಧೂರಿಯಾಗಿ ವಿವಾಹವಾಗಿದ್ದರು. ಆದರೆ, ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಅಂದರೆ ಕಳೆದ ವರ್ಷದ (2025) ನವೆಂಬರ್‌ನಲ್ಲಿ ಇಬ್ಬರೂ ಪರಸ್ಪರ ಬೇರ್ಪಟ್ಟಿದ್ದರು. ಈ ಬೇರ್ಪಡಿಕೆಯ ವಿಷಯ ಈ ವಾರವಷ್ಟೇ ಅಭಿಮಾನಿಗಳಿಗೆ ಗೊತ್ತಾಗಿದೆ.

ಭಾರತದ ವಿಶ್ವಕಪ್ ವೇಳೆ ನಡೆದಿದ್ದೇನು?

ಡೈಲಿ ಮೇಲ್ ವರದಿಯ ಪ್ರಕಾರ, ಕಳೆದ ವರ್ಷ ಭಾರತದಲ್ಲಿ ಮಹಿಳಾ ವಿಶ್ವಕಪ್ ನಡೆಯುತ್ತಿದ್ದಾಗ ಇವರಿಬ್ಬರ ನಡುವಿನ ಸಂಬಂಧ ಹಳಸಿತ್ತು. ಆಶ್ಲೀ ಗಾರ್ಡ್ನರ್ ಅವರ ನಡವಳಿಕೆಯಲ್ಲಿ ಏನೋ ತಪ್ಪು ನಡೆಯುತ್ತಿದೆ ಎಂಬುದನ್ನು ಮೊದಲೇ ಪತ್ತೆಹಚ್ಚಿದ್ದ ಮೋನಿಕಾ ರೈಟ್, ಟೂರ್ನಿಯ ಮಧ್ಯದಲ್ಲೇ ಆಸ್ಟ್ರೇಲಿಯಾದಿಂದ ಭಾರತಕ್ಕೆ ವಿಮಾನವೇರಿ ಬಂದಿದ್ದರು. "ಅದು ನಿಜಕ್ಕೂ ವಿಚಿತ್ರವಾಗಿತ್ತು. ಆಶ್ಲೀ ನಡವಳಿಕೆಯಲ್ಲಿ ಏನೋ ಬದಲಾವಣೆ ಕಂಡುಬಂದಿತ್ತು. ಆದರೆ ವಿಶ್ವಕಪ್ ಟೂರ್ನಿಯ ಒತ್ತಡದಿಂದಾಗಿ ಆಕೆ ಹಾಗೆ ವರ್ತಿಸುತ್ತಿದ್ದಾಳೆ ಎಂದು ನಾವೆಲ್ಲರೂ ಭಾವಿಸಿದ್ದೆವು" ಎಂದು ಇವರಿಬ್ಬರ ಆಪ್ತರೊಬ್ಬರು ವರದಿಯಲ್ಲಿ ಹೇಳಿದ್ದಾರೆ.

ಸೆಮಿಫೈನಲ್ ಸೋಲಿನ ಬೆನ್ನಲ್ಲೇ ಆಘಾತ

ಮೋನಿಕಾ ರೈಟ್ ಭಾರತಕ್ಕೆ ಬಂದ ನಂತರ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿತ್ತು. ಆಶ್ಲೀ ಎಂದಿನಂತೆ ಇರಲಿಲ್ಲ. ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡ ಸೋಲನ್ನನುಭವಿಸಿತು. ಈ ಸೋಲಿನ ಬೆನ್ನಲ್ಲೇ ಆಶ್ಲೀ ಗಾರ್ಡ್ನರ್ ತಮಗೆ ಮತ್ತು ಸಹ ಆಟಗಾರ್ತಿ ಜಾರ್ಜಿಯಾ ವೋಲ್ ನಡುವೆ ಇದ್ದ ಸಂಬಂಧದ ಬಗ್ಗೆ ಪತ್ನಿ ಮೋನಿಕಾ ಮುಂದೆ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಈ ಸತ್ಯ ಕೇಳಿ ಮೋನಿಕಾ ತೀವ್ರ ಆಘಾತಕ್ಕೊಳಗಾಗಿದ್ದರು.

ಪ್ರಸ್ತುತ ಸೋಶಿಯಲ್‌ ಮೀಡಿಯಾದಲ್ಲಿ ಈ ಆರೋಪ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದರೂ, ಆರೋಪ ಎದುರಿಸುತ್ತಿರುವ ಕ್ರಿಕೆಟರ್‌ಗಳಾದ ಆಶ್ಲೀ ಗಾರ್ಡ್ನರ್ ಆಗಲಿ ಅಥವಾ ಜಾರ್ಜಿಯಾ ವೋಲ್ ಆಗಲಿ ಈ ಕುರಿತು ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಅಥವಾ ಹೇಳಿಕೆಯನ್ನು ನೀಡಿಲ್ಲ.