ನನ್ನನ್ನು ಈಗ ಹೆಚ್ಚಿನವರು ಹೆಸರು ಹಿಡಿದು ಮಾತಾಡಿಸೋದಿಲ್ಲ. '.. ಅವರು ಗೊತ್ತಲ್ಲಾ, ಫೇಮಸ್ ಆಕ್ಟರ್, ಅವರ ಮನೆಯವ್ರು..' ಅಂತನೇ ಪರಿಚಯ ಮಾಡಿ ಕೊಡ್ತಾರೆ. ಮೊದ ಮೊದಲಿಗೆ ಹೀಗಂದಾಗ ಒಳಗೊಳಗೇ ಅಳುತ್ತಿದ್ದರೂ ಹೊರಗೆ ಮುಗುಳ್ನಗುತ್ತದ್ದೆ. ಈಗ ಎಲ್ಲಾ ಅಭ್ಯಾಸ ಆಗಿದೆ. ಸುಮ್ಮನೆ ಪೇಲವ ನಗೆ ನಕ್ಕು ಮುಂದೆ ಹೋಗುತ್ತೇನೆ. 'ತಾನು ದೊಡ್ಡ ಹೀರೋ ಹೆಂಡ್ತಿ ಅಂತ ಧಿಮಾಕು..' ಅಂತ ನನ್ನ ಕಿವಿಗೆ ಬೀಳಬೇಕು ಅಂತಲೇ ಹಿಂದಿನಿಂದ ಮಾತಾಡೋದು. ನನಗೆ ಇವೆಲ್ಲ ಅಭ್ಯಾಸ ಆಗಿದೆ. ಮತ್ತೂ ಕೆಲವರು ಎದುರಿನಿಂದ ಬಹಳ ಸಿಹಿಯಾಗಿ ಮಾತಾಡುತ್ತಾರೆ. ಹಿಂದಿನಿಂದ ವಿಷ ಕಾರುತ್ತಾರೆ. ಬರೀ ನೆಗೆಟಿವ್ ಗಳನ್ನೇ ಹೇಳುತ್ತೇನೆ ಅಂದುಕೊಳ್ಳಬೇಡಿ. ನನ್ನನ್ನು ನಿತ್ಯವೂ ಇರಿಯುವ ಸಂಗತಿಗಳನ್ನು ಎಷ್ಟೋ ದಿನದಿಂದ ಎದೆಯಲ್ಲಿ ಬಚ್ಚಿಕೊಂಡು ನೋವು ಉಣ್ಣುತ್ತಿದ್ದೇನೆ. ಇವತ್ತು ಸ್ವಲ್ಪವಾದರೂ ನೋವು ಹೊರ ಹಾಕಬೇಕು. ಎಷ್ಟೋ ದಿನಗಳ ಬಳಿಕ ಇವತ್ತು ರಾತ್ರಿಯಾದರೂ ಚೆನ್ನಾಗಿ ನಿದ್ದೆ ಮಾಡಬೇಕು ಅನ್ನುವ ಆಸೆ. 

ಹಾಗಂತ ನನ್ನದೇನು ಬಲವಂತದ ಮದುವೆ ಅಲ್ಲ. ಹ್ಯಾಂಡ್ ಸಮ್ ಹುಡುಗ, ಒಬ್ಬ ಹೀರೋ ನನ್ನ ಮುಂದೆ ಬಂದು ನಿಂತು ನನ್ನ ಕೈಯನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು, ನನ್ನ ಲೈಫ್ ನ ಖಾಲಿತನವನ್ನು ತುಂಬುತ್ತೀಯಾ ಹುಡುಗೀ.. ಅಂತ ಕೇಳಿದರೆ ನೋ ಅನ್ನುವುದು ಹೇಗೆ.. ನಾನಂತೂ ಆತನನ್ನು, ಅವನ ಆಕ್ಟಿಂಗ್ ಅನ್ನು ಬಹಳ ಇಷ್ಟಪಟ್ಟವಳು. ಸಾವಿರಾರು ಜನ ಹುಡುಗಿಯರ ಕನಸಲ್ಲಿ ನಿತ್ಯ ಬರುವ ಹುಡುಗ ನನ್ನ ಮುಂದೆ ವಿಧೇಯ ವಿದ್ಯಾರ್ಥಿಯ ಹಾಗೆ ನಿಂತು, ನನ್ನ ಲೈಫ್ ಪಾರ್ಟನರ್ ಆಗ್ತೀಯಾ ಅನ್ನುವಾಗ ನನಗೆ ನನ್ನ ಬಗ್ಗೆ ಹೆಮ್ಮೆ ಅನಿಸಿತ್ತು. ನನ್ನ ಅಂದ ಚಂದದ ಬಗ್ಗೆ ಸಣ್ಣ ಅಹಂಕಾರ ಮೊಳಕೆ ಒಡೆದಿತ್ತು. ಆದರೆ ಈ ಗುಳ್ಳೆ ಒಡೆದುಹೋಗಲು ಹೆಚ್ಚು ದಿನ ಬೇಕಾಗಿರಲಿಲ್ಲ. 

ಅಡ್ರಿನಲ್‌ ರೋಗದ ಜೊತೆಗೆ ಬದುಕಿದ್ದು ದುಃಸ್ವಪ್ನ: ಸುಷ್ಮಿತಾ ಸೆನ್‌! 

ನಾವಿಬ್ಬರೂ ಮದುವೆಯಾದ ಶುರು ಶುರುವಿಗೆ ಸಿನಿಮಾದಲ್ಲಿ ಕಾಣುವಂತೆ ಬಹಳ ರೊಮ್ಯಾಂಟಿಕ್ ಆಗಿದ್ದ. ಶೂಟಿಂಗ್ ನಡುವೆ ಟೈಮ್ ಸಿಕ್ಕಾಗಲೆಲ್ಲ ಔಟಿಂಗ್, ಶಾಪಿಂಗ್ ಕರೆದುಕೊಂಡು ಹೋಗುತ್ತಿದ್ದ. ಎಲ್ಲೆರೆದುರೂ ನನ್ನ ಭುಜ ಬಳಸೋದು, ಕೆನ್ನೆ ಸವರೋದು ಅಪ್ಯಾಯಮಾನವಾಗಿತ್ತು. ಕ್ರಮೇಣ ಅವನ ಈ ವರ್ತನೆಯಲ್ಲಿ ಕೊಂಚ ಬದಲಾವಣೆಯಾಯ್ತು, ಅವನು ಸಾರ್ವಜನಿಕವಾಗಿ ಮಾತ್ರ ರೊಮ್ಯಾಂಟಿಕ್ ಆಗಿರುವಂತೆ ತೋರಿಸಿಕೊಳ್ಳುತ್ತಿದ್ದ. ಮನೆಯಲ್ಲಿದ್ದಾಗ ನನ್ನ ಬಗ್ಗೆ ನಿರ್ಲಕ್ಷ್ಯ ಶುರುವಾಗಿತ್ತು. ನಾನಾಗಿ ಬಳಿ ಹೋದರೆ, ಸುಮ್ನಿರು, ನಾನ್ ಬ್ಯುಸಿ ಅನ್ನುತ್ತಿದ್ದ. ನನಗೆ ತಿಳಿಯದ ಹಾಗೆ ಬಾಲ್ಕನಿಗೆ ಹೋಗಿ ಮಾತಾಡಿ ಬರುತ್ತಿದ್ದ. ಅಸ್ಪಷ್ಟವಾದ ಅವನ ಮಾತು ಹುಡುಗಿಯ ಜೊತೆ ಲಲ್ಲೆ ಹೊಡೆಯುವ ಹಾಗಿರುತ್ತಿತ್ತು. ಕ್ರಮೇಣ ಹೊತ್ತಲ್ಲದ ಹೊತ್ತಿಗೆ ಮನೆಗೆ ಬರೋದು, ಊಟವನ್ನೂ ಮಾಡದೇ ಬಿದ್ದುಕೊಳ್ಳೋದು ಶುರುವಾಯ್ತು, ನನ್ನ ಬದುಕಿದ್ದೀಯಾ, ಸತ್ತಿದ್ದೀಯಾ ಅಂತಲೂ ವಿಚಾರಿಸುತ್ತಿರಲಿಲ್ಲ. ಕೆಲವೊಂದು ಫಂಕ್ಷನ್ ಗಳಿಗೆ ಮಾತ್ರ ಕರೆದುಕೊಂಡು ಹೋಗುತ್ತಿದ್ದ. ಎಲ್ಲರೆದುರು ನಗು ನಗುತ್ತಾ ಮಾತನಾಡುತ್ತಿದ್ದ. ನನಗೆ ಅವನ ವಿದ್ಯೆ ಗೊತ್ತಿಲ್ಲ. ಮುಗುಮ್ಮಾಗಿ ನಿಲ್ಲುತ್ತಿದ್ದೆ. 'ಧಿಮಾಕಿನವಳು' ಅನಿಸಿಕೊಳ್ಳುತ್ತಿದ್ದೆ. ಮಧ್ಯರಾತ್ರಿ ಕುಡಿದು ಬರೋದು, ಯಾರ್ಯಾರ ಬಗೆಗೋ ಕೆಟ್ಟದಾಗಿ ಮಾತಾಡೋದು ಮಾಮೂಲಿ ಆಗ್ತಿತ್ತು. 

ಮುಟ್ಟಾದಾಗ ಸ್ನಾನ ಮಾಡಿದ್ರೆ ಹೆಣ್ಣು ಬಂಜೆಯಾಗುತ್ತಾಳೆ! 

ಕಳೆದ ವರ್ಷ ಸುಮ್ಮನೆ ಕೂತು ಮೊಬೈಲ್ ಸ್ಕ್ರೋಲ್ ಮಾಡುತ್ತಿದ್ದೆ. ಯಾವುದೋ ಮ್ಯಾಗಜಿನ್ ನಲ್ಲಿ ಅವನು ಪಾರ್ಟಿಯಲ್ಲಿ ಹುಡುಗಿಯನ್ನು ಕಿಸ್ ಮಾಡೋ ಫೋಟೋ. ನನ್ನ ಮನಸ್ಸು ಇಷ್ಟರಲ್ಲಾಗಲೇ ಕಲ್ಲಾಗಿತ್ತು. ಆದರೆ frustration ಅಲ್ಲಾಡಿಸಿ ಬಿಡುತ್ತಿತ್ತು. ನಾನು ಒಂಟಿಯಾಗಿದ್ದೆ. ಅಪ್ಪ ಅಮ್ಮನ ಬಳಿ ಈ ವಿಷಯ ಹೇಳಿದರೆ ಸಹಿಸಿಕೊಳ್ಳುವ ಶಕ್ತಿ ಅವರಿಗಿಲ್ಲ. ಅಣ್ಣ ಮಹಾ ಕೋಪಿಷ್ಠ. ಪರಿಸ್ಥಿತಿ ಅರ್ಥ ಮಾಡಿಕೊಳ್ಳೋದು ಅವನ ಕೈಯಲ್ಲಾಗಲ್ಲ. ಮದುವೆಯ ಬಳಿಕ ಗೆಳತಿಯರೆಲ್ಲ ದೂರ ಸರಿದಿದ್ದಾರೆ. ಮನೆ ಕೆಲಸಕ್ಕೆಲ್ಲಾ ಜನ ಇದ್ದಾರೆ. ನಾನು ಒಬ್ಬಳೇ ಎಷ್ಟು ಅಂತ ಸಿನಿಮಾ ನೋಡಲಿ, ಮ್ಯಾಗಜಿನ್ ಓದಲಿ.. ಕಿಟಕಿಯಾಚೆ ಮಕ್ಕಳನ್ನು ಸೊಂಟದ ಮೇಲೆ ಕೂರಿಸಿಕೊಂಡು ಬಿಸಿಲಲ್ಲಿ ಓಡಾಡುವ ಕೂಲಿ ಹೆಂಗಸರೂ ನನಗಿಂತ ಹೆಚ್ಚು ಸುಖಿಗಳು ಅನಿಸುತ್ತೆ. ನಿರಂತರ ದುಡಿಮೆ ಅವರನ್ನು ಹೈರಾಣಾಗಿಸಿದರೂ ಮಾನಸಿಕ ಬೇಗುದಿ ಇಲ್ಲ. 

ಬೇಡದ ಸ್ಥಳದಲ್ಲಿ ಬೆಳೆವ ಕೂದಲಿಗೂ ಉದ್ದೇಶವಿದೆ! 

ಈ ಸೆರೆಯಿಂದ ಬಿಡಿಸಿಕೊಂಡು ಆಚೆ ಹೋಗಬೇಕು ಅಂದರೆ ಆಗುತ್ತಿಲ್ಲ. ಏನು ಮಾಡುವುದೋ ಗೊತ್ತಾಗುತ್ತಿಲ್ಲ. ಯಾವ ಹವ್ಯಾಸಗಳೂ ಈ ದುಃಖದಲ್ಲಿ ಕೈ ಹಿಡಿಯುತ್ತಿಲ್ಲ. ನಾನೀಗ ಈ ದುಃಖದಿಂದ ಹೇಗೆ ಹೊರಬರಲಿ.. ಯಾರಾದರೂ ಹೇಳ್ತೀರಾ ಪ್ಲೀಸ್..