ಮಗಳು, ಮೊಮ್ಮಗಳಿಗೆ ಡಬಲ್ ಬೆಡ್ ರೂಮ್ ಆಯ್ತು ಗ್ಯಾರೇಜ್, ಅಮೆರಿಕದಲ್ಲೀಗ ಇದೇ ಸುದ್ದಿ
ಈಗಿನ ಕಾಲದಲ್ಲಿ ಬಾಡಿಗೆ ಮನೆಯಲ್ಲಿರೋದು ಸುಲಭವಲ್ಲ. ದುಡಿದ ಹಣದಲ್ಲಿ ಅರ್ಧ ಬಾಡಿಗೆ ಪಾಲಾಗುತ್ತದೆ. ಅದನ್ನು ಉಳಿಸಲು ಈಗ ದಂಪತಿ ಹೊಸ ಐಡಿಯಾ ಮಾಡಿದ್ದಾರೆ. ಟಿಕ್ ಟಾಕ್ ನಲ್ಲಿ ಅವರ ವಿಡಿಯೋ ವೈರಲ್ ಆಗಿದೆ.
ಸ್ವಂತ ಮನೆ ಎಲ್ಲರಿಗೆ ಸಾಧ್ಯವಿಲ್ಲ. ಒಂದು ಊರಿನಿಂದ ಇನ್ನೊಂದು ಊರಿಗೆ ಕೆಲಸಕ್ಕೆ ಹೋದಾಗ ಜನರು ಬಾಡಿಗೆ ಮನೆಯಲ್ಲಿ ವಾಸಿಸೋದು ಅನಿವಾರ್ಯವಾಗುತ್ತದೆ. ದುಡಿದ ಅರ್ಧ ಹಣ ಬಾಡಿಗೆ ಕಟ್ಟಿಯೇ ಖಾಲಿಯಾಗುತ್ತದೆ ಎಂದು ಜನರು ಹೇಳೋದನ್ನು ನೀವು ಕೇಳಿರಬಹುದು. ಈಗಿನ ದಿನಗಳಲ್ಲಿ ಮನೆ ಬಾಡಿಗೆ ಗಗನಕ್ಕೇರಿದೆ. ಸ್ವಂತ ಊರಿನಲ್ಲೇ ಇರುವ ಜನರು, ಅಪ್ಪ – ಅಮ್ಮನ ಜೊತೆಗಿದ್ದು ಬಾಡಿಗೆ ಸೇವ್ ಮಾಡ್ತಾರೆ. ಭಾರತದಲ್ಲಿ ಒಂದೇ ಊರಿನಲ್ಲಿ ಪಾಲಕರು ಮತ್ತು ಮಕ್ಕಳಿದ್ರೂ ಅವರು ಬೇರೆ ವಾಸವಾಗಿದ್ದರೆ ಸುದ್ದಿಯಾಗುತ್ತದೆ. ಇನ್ನು ಸ್ವಂತ ಮನೆಯಲ್ಲಿ ಎಲ್ಲರೂ ವಾಸವಾಗಿದ್ದು, ಪಾಲಕರು ಮಕ್ಕಳಿಂದ ಬಾಡಿಗೆ ಪಡೆಯುತ್ತಿದ್ರೆ ಅದು ಅತಿ ದೊಡ್ಡ ಸುದ್ದಿ. ಇಡೀ ಊರಿಗೆ ಮಾತ್ರವಲ್ಲ ಇಡೀ ಜಿಲ್ಲೆಯಲ್ಲಿ ಅವರು ಚರ್ಚೆಯಲ್ಲಿರ್ತಾರೆ. ಮಕ್ಕಳಿಂದ ಬಾಡಿಗೆ ಪಡೆಯುವ ಪಾಲಕರು ಎಂಥವರಿರಬಹುದು ಅಂತ ಜನ ಮಾತಾಡ್ತಾರೆ. ಆದ್ರೆ ವಿದೇಶದಲ್ಲಿ ಸಂಸ್ಕೃತಿ ಭಿನ್ನವಾಗಿದೆ. ಅಮೇರಿಕಾದಲ್ಲಿ ಒಂದೇ ಮನೆಯಲ್ಲಿ ಪಾಲಕರು ಮತ್ತೆ ಮಕ್ಕಳು ವಾಸಮಾಡೋದೇ ಅಪರೂಪ. ಒಂದೇ ಮನೆಯಲ್ಲಿದ್ರೂ ಮೇಲಿನ ಭಾಗ ಮಕ್ಕಳಿಗೆ, ಕೆಳಗಿನ ಭಾಗ ಪಾಲಕರಿಗೆ ಹಂಚಿಕೆಯಾಗಿರುತ್ತದೆ. ಇಷ್ಟಾದ್ರೂ ಪಾಲಕರು ಮಕ್ಕಳಿಂದ ಮನೆಯ ಬಾಡಿಗೆ ಪಡೆಯುತ್ತಾರೆ. ಒಂದ್ವೇಳೆ ಮಕ್ಕಳಿಂದ ಪಾಲಕರು ಬಾಡಿಗೆ ಪಡೆದಿಲ್ಲ ಎಂದಾದ್ರೆ ಅವರು ಸುದ್ದಿಗೆ ಬರ್ತಾರೆ. ಈಗ ಅಂಥ ಪಾಲಕರೊಬ್ಬರು ಟಿಕ್ ಟಾಕ್ ನಲ್ಲಿ ಗಮನ ಸೆಳೆದಿದ್ದಾರೆ. ಪಾಲಕರು ತಮ್ಮ ಮನೆಯಲ್ಲಿಯೇ ಮಗಳು ಮತ್ತು ಮೊಮ್ಮಗನಿಗೆ
ಜಾಗ ಮಾಡಿಕೊಟ್ಟಿದ್ದಾರೆ. ಆದ್ರೆ ಯಾವುದೇ ಬಾಡಿಗೆ ಪಡೆಯುತ್ತಿಲ್ಲ.
ಗ್ಯಾರೇಜ್ (Garage) ಆದ ಮನೆ : ಟಿಕ್ ಟಾಕ್ (TikTok) ನಲ್ಲಿ ಚರ್ಚೆಗೆ ಬಂದಿರುವ ಪಾಲಕರು, ಮಗಳು ಹಾಗೂ ಮೊಮ್ಮಗನಿಗೆ ಮನೆಯ ಗ್ಯಾರೇಜ್ ನಲ್ಲಿ ವ್ಯವಸ್ಥೆ ಮಾಡಿದ್ದಾರೆ. ಆದ್ರೆ ಈ ಪಾಲಕರು ಬಾಡಿಗೆ ಪಡೆಯುತ್ತಿಲ್ಲ. ಗ್ಯಾರೇಜ್ ನಲ್ಲಿ ಮನೆ ನಿರ್ಮಿಸಿದ್ದಾರೆ ಅಂದ್ರೆ ಅದೇನು ಕೆಟ್ಟದಾಗಿಲ್ಲ. ಮನೆಯಲ್ಲಿರುವ ಗ್ಯಾರೇಜ್ ನಲ್ಲಿ ಅಪಾರ್ಟ್ಮೆಂಟ್ (Apartment) ನಲ್ಲಿ ಹಿಡಿಯುವಷ್ಟು ಸಾಮಾನುಗಳನ್ನು ಹಿಡಿಸಲಾಗಿದೆ. ಗ್ಯಾರೇಜನ್ನು ಡಬಲ್ ಬೆಡ್ ರೂಮ್ ಆಗಿ ಪರಿವರ್ತಿಸಲಾಗಿದೆ. ಗ್ಯಾರೇಜ್ ನಲ್ಲಿಯೇ ಮಿನಿ ಅಡುಗೆ ಮನೆ ಇದೆ. ಡಬಲ್ ಬೆಡ್, ಸೋಫಾ, ಕಾಫಿ ಟೇಬಲ್, ಡೆಸ್ಕ್ ಸೇರಿದಂತೆ ಅನೇಕ ವಸ್ತುಗಳನ್ನು ಫಿಟ್ ಮಾಡಲಾಗಿದೆ. ಫ್ರಿಡ್ಜ್, ಮೈಕ್ರೋವೇವ್, ಏರ್ ಫ್ರೈಯರ್ ಕೂಡ ಮನೆಯಲ್ಲಿದೆ.
ಬಿಗ್ಬಾಸ್ ದೀದಿ ಸಂಗೀತಾ ಶೃಂಗೇರಿ ಹುಟ್ಟುಹಬ್ಬಕ್ಕೆ ಡ್ರೋನ್ ಪ್ರತಾಪ್ ಸ್ಪೆಷಲ್ ಗಿಫ್ಟ್!
ಅಮೆರಿಕಾದಲ್ಲಿ ಬಾಡಿಗೆ ಮನೆ ಪಡೆಯೋದು ಸುಲಭವಲ್ಲ. ಇದ್ರಿಂದ ಖರ್ಚು ಹೆಚ್ಚು. ಈ ಬಾಡಿಗೆ ಹಣ ಉಳಿಸಲು ಪಾಲಕರು, ಗ್ಯಾರೇಜನ್ನು ಮನೆಯನ್ನಾಗಿ ಪರಿವರ್ತಿಸುವ ಕೆಲಸ ಮಾಡಿದ್ದಾರೆ. ತಮ್ಮ ಗ್ಯಾರೇಜನ್ನು ಮಗಳಿಗೆ ನೀಡಿರುವ ದಂಪತಿ, ಮಗಳಿಂದ ಯಾವುದೇ ಬಾಡಿಗೆ ಪಡೆಯದೆ ಆಕೆಗೆ ಮನೆ ನೀಡಿ ಮತ್ತೊಂದು ರೀತಿಯಲ್ಲಿ ಸುದ್ದಿಯಲ್ಲಿದ್ದಾರೆ. ಟಿಕ್ ಟಾಕ್ ನಲ್ಲಿ ಅವರು ಮನೆ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ. ಬಾಡಿಗೆ ಉಳಿಸಲು ಗ್ಯಾರೇಜನ್ನು ಮನೆಯನ್ನಾಗಿ ಪರಿವರ್ತಿಸಲಾಗಿದೆ ಎಂದು ಅವರು ಶೀರ್ಷಿಕೆ ಹಾಕಿದ್ದಾರೆ. ಅಪಾರ್ಟ್ಮೆಂಟ್ ನಲ್ಲಿ ಹಿಡಿಯುವಷ್ಟು ಸಾಮಾನು ಇಲ್ಲಿದೆ ಎಂದು ಅವರು ಇನ್ನೊಂದು ಫೋಟೋಕ್ಕೆ ಶೀರ್ಷಿಕೆ ಹಾಕಿದ್ದಾರೆ.
ಈಸಿಯಾಗಿ ಪಯಣಿಸೋ, ಸುಲಭವಾಗಿ ಜೀವನ ಮಾಡ್ಬೇಕು ಅಂದ್ರೆ ಈ ದೇಶಕ್ಕೆ ವಿಸಿಟ್ ಮಾಡಿ!
ಟಿಕ್ ಟಾಕ್ ನಲ್ಲಿ ವಿಡಿಯೋ ಹಂಚಿಕೊಂಡ ಅವರು, ಮನೆಯನ್ನು ಹೇಗೆ ನಿರ್ಮಿಸಲಾಗಿದೆ ಎನ್ನುವ ಸಂಪೂರ್ಣ ವಿವರವನ್ನು ನೀಡಿದ್ದಾರೆ. ಮನೆಯಲ್ಲಿ ಮಗಳು, ಮೊಮ್ಮಗನ ಜೊತೆ ಬೆಕ್ಕು ಕೂಡ ಇದೆ. ಚಿಕ್ಕ ಜಾಗದಲ್ಲಿ ಇಬ್ಬರು ಆರಾಮವಾಗಿ ಜೀವನ ನಡೆಸುತ್ತಿದ್ದಾರೆ ಎಂದು ಅಜ್ಜಿ ವಿಡಿಯೋದಲ್ಲಿ ಹೇಳಿದ್ದಾಳೆ. ಈ ಮನೆಯಲ್ಲಿ ಬಾತ್ ರೂಮ್ ವ್ಯವಸ್ಥೆ ಮಾಡಲಾಗಿಲ್ಲ. ತಾಯಿ ಹಾಗೂ ಮಗ, ಮುಖ್ಯ ಮನೆಯಲ್ಲಿರುವ ಬಾತ್ ರೂಮನ್ನು ಬಳಸಿಕೊಳ್ಳುತ್ತಿದ್ದಾರೆ.