ಎಂಬಿಎ ಪದವೀಧರೆ ಮಹಿಳೆಯೊಬ್ಬಳು ಮೊದಲ ವಿಚ್ಛೇದನದಿಂದ 20 ಲಕ್ಷ ರೂ. ಪಡೆದ ನಂತರ, ಕೇವಲ 18 ತಿಂಗಳ ದಾಂಪತ್ಯದ ಬಳಿಕ ಎರಡನೇ ಪತಿಯಿಂದ 12 ಕೋಟಿ ರೂ. ಪರಿಹಾರ ಕೇಳಿದ್ದಾಳೆ. ನ್ಯಾಯಾಲಯವು 4 ಕೋಟಿ ರೂ. ಪರಿಹಾರ ನೀಡಲು ಆದೇಶಿಸಿದ್ದು, ಈ ಪ್ರಕರಣವು ಜೀವನಾಂಶ ಕಾನೂನಿನ ದುರ್ಬಳಕೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

ವಂಚನೆಗೆ ಒಳಗಾಗುತ್ತಿರುವ ಮಹಿಳೆಯರಿಗೆ ಇರುವ ಕಾನೂನು ದುರ್ಬಳಕೆ ಆಗುತ್ತಿರುವ ಬಗ್ಗೆ ಇದಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ. ಮಹಿಳೆಯರು ಹೇಗೆ ಕಾನೂನನ್ನು ದುರುಪಯೋಗಪಡಿಸಿಕೊಂಡು ಪುರುಷ ವರ್ಗವನ್ನು ಸಮಸ್ಯೆಗೆ ತಳ್ಳುತ್ತಿದ್ದಾರೆ, ಪತಿಯ ಕುಟುಂಬಸ್ಥರನ್ನೂ ಬೀದಿಗೆ ಎಳೆಯುತ್ತಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಉದಾಹರಣೆಗಳು ದಿನನಿತ್ಯವೂ ಕಂಡುಬರುತ್ತಿವೆ. ಇದರ ನಡುವೆಯೇ, ಡಿವೋರ್ಸ್​ ಎನ್ನುವುದು ಮಹಿಳೆಯರು ಆಟ ಮಾಡಿಕೊಂಡಿದ್ದಾರೆ ಎನ್ನುವ ಗಂಭೀರ ಆರೋಪಗಳೂ ಇವೆ. ಅದಕ್ಕೆ ತಕ್ಕಂತೆ ಕೋರ್ಟ್​ಗಳು ನೀಡುವ ಪರಿಹಾರಗಳ ಕುರಿತೂ ಸಾಕಷ್ಟು ಚರ್ಚೆಯಾಗುತ್ತಲೇ ಇರುತ್ತವೆ.

ಕೋರ್ಟ್​ ಕಲಾಪ

ಇದೀಗ ಅಂಥದ್ದೇ ಒಂದು ಪ್ರಕರಣ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಎರಡು ಮದುವೆಗಳಿಂದ ಗಣನೀಯ ಪರಿಹಾರ ಪಡೆದ ಮಹಿಳೆಯೊಬ್ಬಳ ವಿಚ್ಛೇದನ ಪ್ರಕರಣವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜೀವನಾಂಶ ಕಾನೂನುಗಳು, ಲಿಂಗ ಸಮಾನತೆ ಮತ್ತು ವಿಚ್ಛೇದನ ಪ್ರಕ್ರಿಯೆಯ ಸಮಯದಲ್ಲಿ ನ್ಯಾಯಾಲಯಗಳು ಆರ್ಥಿಕ ಪರಿಹಾರವನ್ನು ನಿರ್ಧರಿಸುವ ವಿಧಾನದ ಬಗ್ಗೆ ಬಿಸಿ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಕೋರ್ಟ್​ ಕಲಾಪದ ದೃಶ್ಯಗಳು ವೈರಲ್​ ಆಗಿವೆ.

ಎರಡನೇ ಪತಿಗೂ ಡಿವೋರ್ಸ್

ಇದರಲ್ಲಿ, ಮಹಿಳೆ ತನ್ನ ಮೊದಲ ವಿಚ್ಛೇದನದ ನಂತರ ಆ ಗಂಡನಿಂದ 20 ಲಕ್ಷ ರೂಪಾಯಿ ಜೀವನಾಂಶ ಪಡೆದಿದ್ದಾಳೆ. ಅದರ ಬಳಿಕ ಮಹಿಳೆ ಮತ್ತೊಂದು ಮದುವೆಯಾಗಿದ್ದಾಳೆ ಎನ್ನುವುದನ್ನು ವಕೀಲರು ವಾದಿಸುತ್ತಿದ್ದಾರೆ. ಅಂದಹಾಗೆ ಮಹಿಳೆ, ಎಂಬಿಎ ಪದವಿ ಹೊಂದಿದ್ದು, ಎಂಜಿನಿಯರ್ ಆಗಿದ್ದಾಳೆ. ಇದರ ಹೊರತಾಗಿಯೂ ಮೊದಲ ಡಿವೋರ್ಸ್​ ಸಮಯದಲ್ಲಿ, ಪತಿಯಿಂದ ಆಕೆಗೆ 20 ಲಕ್ಷ ರೂಪಾಯಿ ಪರಿಹಾರ ಸಿಕ್ಕಿದೆ. ಇದೀಗ ಎರಡನೆಯವನನ್ನು ಮದುವೆಯಾಗಿ ಆತನನ್ನೂ ಡಿವೋರ್ಸ್​ ಮಾಡಿರುವ ಮಹಿಳೆ, 12 ಕೋಟಿ ರೂಪಾಯಿ ಪರಿಹಾರ, BMW ಕಾರು ಮತ್ತು ಮಾಸಿಕ 5 ಲಕ್ಷ ರೂಪಾಯಿ ನಿರ್ವಹಣಾ ವೆಚ್ಚವನ್ನು ಕೋರಿದ್ದಾಳೆ.

ಇದರ ಬಗ್ಗೆ ಕೋರ್ಟ್​ನಲ್ಲಿ ನಡೆಯುತ್ತಿರುವ ಕಲಾಪದ ದೃಶ್ಯಗಳು ಎಲ್ಲರನ್ನೂ ಬೆಚ್ಚಿಬೀಳಿಸಿದೆ. 18 ತಿಂಗಳಷ್ಟೇ 2ನೇ ಪತಿ ಜೊತೆ ಸಂಸಾರ ಮಾಡಿರುವಾಕೆ ಇಷ್ಟೆಲ್ಲಾ ಡಿಮಾಂಡ್​ ಇಟ್ಟಿದ್ದಾಳೆ. ಅದೂ ಎಂಬಿಎ ಪದವೀಧರೆ ಆಗಿದ್ದು, ವೃತ್ತಿಯಲ್ಲಿ ಎಂಜಿನಿಯರ್​ ಆದಾಕೆ. ಕುತೂಹಲದ ವಿಷಯ ಎಂದರೆ, ವಾದ-ಪ್ರತಿವಾದ ಆಲಿಸಿದ ಕೋರ್ಟ್​, 4 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.