ಸಾಕೇತ 15 ವರ್ಷಗಳ ಹಿಂದೆ 7ನೇ ಕ್ಲಾಸಿನ ಹುಡುಗ. ಸೋಷಿಯಲ್ ಸೈನ್ಸ್ ಕ್ಲಾಸಿನಲ್ಲಿ ವಿಪರೀತ ನಿದ್ದೆ ಬರುತ್ತಿತ್ತು. ಗಣಿತದ ಕ್ಲಾಸಿನಲ್ಲಿ ವಿಪರೀತ ಚುರುಕಾಗಿದ್ದ. ಚರಿತ್ರೆಯ ಪಾಠಗಳು ಅವನಿಗೆ ಸಿಕ್ಕಾಪಟ್ಟೆ ತಲೆ ತಿನ್ನುತ್ತಿದ್ದವು. ಶಶಿಕಲಾ ಮಿಸ್‌ರನ್ನು ತಲೆ ತಿನ್ನೋ ಮಿಸ್ ಎಂದು ಕರೆಯುತ್ತಿದ್ದ. ಒಮ್ಮೆ ಏನೋ ಬಾಯಿ ತಪ್ಪಿನಿಂದ ತನ್ನ ಬೆಸ್ಟ್ ಫ್ರೆಂಡ್ ಸಂಭ್ರಮಳಿಗೆ ಹೇಳಿದ. ಅವಳು ಸೀದಾ ಶಶಿಕಲಾ ಮಿಸ್ಸಿಗೆ ಹೇಳಿ, ಅವರು ಬಾಯಿಗೆ ಬಂದಹಾಗೆ ಬೈದು ಪ್ರಿನ್ಸಿಪಾಲ್ ರೂಮಿಗೆ ಎಳೆದುಕೊಂಡು ಹೋಗಿ ಅವರು ಕ್ಷಮಾಪಣೆ ಪತ್ರ ಬರೆಯುವವರೆಗೂ ಬಿಡದೆ ಅವಮಾನ ಮಾಡಿ ಕಳಿಸಿದ್ದರು.

ಈ ಅವಮಾನದ ನಂತರ ಸಾಕೇತ್ ಯಾರ ಬಗ್ಗೆಯೂ ಹಗುರವಾಗಿ ಮಾತಾಡುವುದನ್ನು ಬಿಟ್ಟುಬಿಟ್ಟ. ಅವನಿಗೇ ವಿಪರೀತ ಬೇಜಾರಾದರೂ ಸುಮ್ಮನೆ ತನ್ನಷ್ಟಕ್ಕೇ ತಾನೇ ಹೇಳಿಕೊಂಡು ನುಂಗಿಕೊಳ್ಳುತ್ತಿದ್ದ. ಈಗ ಸಾಕೇತನಿಗೆ 27 ವರ್ಷ. ಫೇಸ್ಬುಕ್ಕಿನಲ್ಲಿ , ಇನ್ಸ್ಟಾಗ್ರಾಮಿನಲ್ಲಿ ತನ್ನ ಶಾಲೆ, ಕಾಲೇಜಿನ ಗೆಳೆಯರು ಗೆಳತಿಯರನ್ನು ಮುಖ್ಯವಾಗಿ ತನ್ನ ಕ್ರಷ್ ಅನ್ನು ಹುಡುಕುವಾಗ ತನ್ನ ಶಾಲೆಯ ಹೆಸರನ್ನ ಪಕ್ಕದಲ್ಲಿ ಹಾಕಿ ಹುಡುಕುತ್ತಿದ್ದಾಗಲೇ ಅವನ ಸ್ಕೂಲಿನ ಕನ್ಫೆಷನ್ ಪೇಜ್ ಕಾಣಿಸಿದ್ದು. ಅವನ ಶಾಲೆಯ ಅಫೀಶಿಯಲ್ ಪೇಜಿಗಿಂತ ಇದಕ್ಕೇ ಸಿಕ್ಕಾಪಟ್ಟೆ ಜನ ಲೈಕ್ ಒತ್ತಿದ್ದರು.

ಜಾಲತಾಣದಲ್ಲಿ ಕ್ಲೋಸ್ ಫ್ರೆಂಡು, ಎದುರು ಸಿಕ್ಕಾಗ ಹೂ ಆರ್ ಯೂ!

ಅದನ್ನ ತೆರೆದಾಗ ಅವನಿಗೆ ಏನು ಹೇಳುವುದು ಗೊತ್ತಾಗದೇ ಕೂತ. ಅಲ್ಲಿ ಅದೇ ಶಶಿಕಲಾ ಮಿಸ್ ಬಗ್ಗೆ ಕೆಟ್ಟ ಬರಹಗಳನ್ನ ಈಗಿನ ವಿದ್ಯಾರ್ಥಿಗಳು ಮಾಡಿದ್ದರು. ಅವರು ಸೀರೆ ಉಟ್ಟುಕೊಳ್ಳುವ ಬಗೆ, ಅವರ ಮದುವೆ ಮುರಿದು ಬಿದ್ದದ್ದು, ಪಿಟಿ ಸರ್ ಜೊತೆ ಇವರ ಅನೈತಿಕ ಸಂಬಂಧ ಎನ್ನುವ ಹಾಗೆ ಬೇಕು ಬೇಕಾದಂತೆ ಕಲ್ಪನೆ ಮಾಡಿ ಬರೆದಿದ್ದರು. ಆ ಪೇಜಿನಲ್ಲಿ ಯಾರ ಹೆಸರೂ ಇರಲಿಲ್ಲ. ಅನಾಮಧೇಯರಾಗಿ ಬಾಯಿಗೆ ಬಂದ ಹಾಗೆ ಶಶಿಕಲಾ ಮಿಸ್ಸಿನ ಬಗ್ಗೆ ಬರೆದಿದ್ದರು.

ಇದನ್ನ ಅವರಿಗೆ ತೋರಿಸಿದರೆ ಅದೆಷ್ಟು ನೊಂದುಕೊಂಡು ಅಳುತ್ತಾರೋ ಅಥವಾ ಅವರನ್ನೆಲ್ಲಾ ಶಾಲೆಯ ಆಚೆ ಹಾಕುತ್ತಾರೋ ಎಂದು ಅಂದುಕೊಂಡು ಸುಮ್ಮನಾದ. ಇದೇ ಸ್ಕ್ರೀನ್‌ಶಾಟನ್ನ ಸಂಭ್ರಮಳಿಗೆ ಕಳಿಸಿದಾಗ, ನಾನು ಅವರ ಬಗ್ಗೆ ಬರೆದೆ ಕಣೋ, ನಿನ್ನ ಕಥೆಯೂ ಅಲ್ಲಿದೆ, ಅದೇ ಹೈಯೆಸ್ಟ್ ಲೈಕ್ ಆಗಿರೋ ಪೋಸ್ಟ್. ಅದಾದ ಮೇಲೆ ಶಶಿಕಲಾ ಮಿಸ್ ಮೇಲೆ ಎಷ್ಟೊಂದು ಕಥೆ ಬಂತು ಗೊತ್ತಾ. ಸಕ್ಕತ್ತಾಗಿತ್ತು, ನಾವು ಬರೀ ತಲೆ ತಿನ್ನೋ ಮಿಸ್ ಅಂತಿದ್ವಿ, ಇವರೆಲ್ಲಾ ಫುಲ್ ಸಿನಿಮಾ ಥರ ಹೊಸ ಹೊಸ ಪದಗಳನ್ನೆಲ್ಲಾ ಹುಟ್ಟುಹಾಕಿದ್ದಾರೆ ಎಂದು ಖುಷಿಯಾಗಿ ಹೇಳುತ್ತಾ ಹೋದಳು. ಕನ್ಫೆಷನ್ ೨೯ ಎಂಬ ಹೆಸರಿನಲ್ಲಿ ಸಂಭ್ರಮಾಳ ಕಥೆ ಬಂದಿತ್ತು. ಸಾಕೇತ ಹೌಹಾರಿದ.

ಬ್ಯುಸಿ ಬ್ಯುಸಿ ಎಂದು ಕಳೆದು ಹೋಗದಿರಿ; ಮನೆಯವರಿಗೂ ಕೊಡಿ ಸಮಯ!

ಯಾರು ಕಲಿಸಿದರು ಕೆಟ್ಟ ಪದ ಬರೆಯುವುದನ್ನು!: ಈಗಿನ ಕಾಲದ ಶಾಲೆಗೆ ಹೋಗುವ ಮಕ್ಕಳ ಕೈಯಲ್ಲೂ ಒಂದು ಮೊಬೈಲು, ಚೀಪ್ ಡೇಟಾ ಎಷ್ಟು ಅನಾಯಾಸವಾಗಿ ಅವರ ದ್ವೇಷ, ಕೋಪ ಎಲ್ಲವನ್ನೂ ಹೊರಹಾಕುವಲ್ಲಿ ಸಹಾಯ ಮಾಡುತ್ತದೆ, ಒಬ್ಬರನ್ನು ಒಬ್ಬರು ಮಾತಾಡಿಸಿ ಅವರ ಸಮಸ್ಯೆ ಬಗೆಹರಿಸಿಕೊಳ್ಳದೆ ಮಖೇಡಿಗಳ ಹಾಗೆ ಯಾರದ್ದೋ ಹೆಸರಿನಲ್ಲಿ ಅಥವಾ ಹೆಸರಿಲ್ಲದೆಯೇ ಬಾಯಿಗೆ ಬಂದ ಹಾಗೆ ಬರೆದು, ಅದನ್ನ 100 ಜನ ಮೆಚ್ಚಿ ಬರೆಯುವ ಕಾಲ ಇದಾಗಿದೆ. ಯಾವುದೇ ವಸ್ತು ವಿಷಯ ಅವರಿಗೆ ಇಷ್ಟವಾಗದಿದ್ದರೆ ಅದನ್ನ ಸಹಿಸಿಕೊಳ್ಳದೇ ಅದು ನಿರ್ಣಾಮ ಆಗಲೇಬೇಕೆಂದು ಪಣತೊಟ್ಟ ಟೀನೇಜಿನ ಹುಡುಗ, ಹುಡುಗಿಯರು ಕೆಟ್ಟ ಪದಗಳನ್ನೆಲ್ಲಾ ಉಪಯೋಗಿಸಿ ಚಾರಿತ್ರ್ಯ ಹರಣ ಮಾಡುವ ಹುಮ್ಮಸ್ಸಿನಲ್ಲಿರುತ್ತಾರೆ.

ಹೀಗೆ ತಮಗಾಗದವರ ಬಗ್ಗೆ ಕೆಟ್ಟದಾಗಿ ಕನ್ಫೆಷನ್ಸ್ ಪೇಜಿನಲ್ಲಿ ಬರೆದು ತೋರಿಸಿದರೆ ಅವರು ದೊಡ್ಡ ಹೀರೋಗಳೆಂದುಕೊಂಡು ತಮ್ಮ ಸುತ್ತಲಿನವರು ಸಂಭ್ರಮ ಪಡುತ್ತಾರೆ ಎಂಬ ಹುಚ್ಚು ಕಲ್ಪನೆ ಅವರಲ್ಲಿರುತ್ತದೆ. ಪ್ರಖ್ಯಾತ ಮನೋವೈದ್ಯರು ಹೇಳುವ ಪ್ರಕಾರ ಹೀಗೆಲ್ಲಾ ಮಾಡುವ ಮಕ್ಕಳಿಗೆ ಅವರಪ್ಪ ಅಮ್ಮಂದಿರ ನಿಗಾ ಇರುವುದಿಲ್ಲ ಅಥವಾ ಅವರಿಗೆ ಸೆಲ್ಫ್ ಎಸ್ಟೀಮ್ ಸಮಸ್ಯೆಗಳಿರುತ್ತದೆ. ಯಾವುದೇ ವಿಷಯದಲ್ಲಿ ಏನೂ ಮಾಡಕ್ಕೆ ಆಗದವನು ಹೀಗೆ ಅವರಿವರನ್ನು ಕೆಟ್ಟಕೆಟ್ಟದಾಗಿ ಆಡಿಕೊಂಡಾಗ ಸಿಗುವ ಅಟೆಂಷನ್ ಯಾವುದೇ ಚಿಕ್ಕ ಹದಿಹರೆಯದವನನ್ನು ಉಲ್ಲಸಿತಗೊಳಿಸುತ್ತದೆ. ತನ್ನ ದ್ವೇಷವನ್ನು ಸಾಧಿಸಿದ ಖುಷಿ ಜೊತೆಗೆ ಅವನ್ನನ್ನ ಎಲ್ಲರೂ ಹೊಗಳುತ್ತಿದ್ದಾರೆ ಎಂಬ ವಿಕೃತ ಸಂತೋಷ ಅವನ ಮನಸ್ಸನ್ನ ಆವರಿಸುತ್ತದೆ.

ಈ ಕನ್ಫೆಷನ್ ಪೇಜುಗಳಲ್ಲಿ ಮ್ಯಾನೇಜರನ್ನ ಬಯ್ಯುವುದು, ಅಧ್ಯಾಪಕರನ್ನ ಬಯ್ಯುವುದು ಇಲ್ಲಾ ಅವರು ಪ್ರೀತಿಸಿದ ಹುಡುಗ/ ಹುಡುಗಿ ಅವರ ಪ್ರೀತಿಯನ್ನು ನಿರಾಕರಿಸಿದರೆ ಬೇಕಾಬಿಟ್ಟಿ ಬರೆದು ಚಾರಿತ್ರ್ಯ ಹರಣ ಮಾಡುವುದು ಬಹಳ ಸುಲಭ. ಆ ಪೇಜಿನ ಅಡ್ಮಿನ್ಗೆ ಅಥವಾ ಆ ಪೇಜಿಗೆ ಸಂದೇಶ ಕಳಿಸಿದರೆ ಮುಗಿಯಿತು. ಆ ಅಡ್ಮಿನ್ ಗೆ ಮಾತ್ರ ಯಾರು ಕಳಿಸಿದ್ದೆಂದು ಗೊತ್ತಾಗುತ್ತದೆ. ಅದನ್ನ ಅವನಿಗೆ
ಬೇಕಾದ ಹಾಗೆ ಮಾರ್ಪಾಟು ಮಾಡಿಕೊಂಡು ಪ್ರಕಟಿಸುತ್ತಾರೆ.

ಕೆಲವೊಮ್ಮೆ ಆ ಪೇಜು ನಕಲಿ ಖಾತೆಯಿಂದಲೂ ಸೃಷ್ಟಿಯಾಗಿರುತ್ತದೆ. ಯಾರಿಟ್ಟರು ಮನಸುಗಳಲ್ಲಿ ಅಸಹನೆಯನ್ನು!: ಶಾಲೆಯಲ್ಲಿ ಕಡಿಮೆ ಅಂಕ ಬಂದ್ದದ್ದಕ್ಕೆ ಬೈದ ಶಿಕ್ಷಕರಿಗೆ, ಮುಖ ಕಂಡರಾಗದ ಸಹಪಾಠಿಯ ಬಗ್ಗೆ ವಲ್ಗರ್ ಭಾಷೆಯಲ್ಲಿ ಬರೆಯುವುದು ಸೈಬರ್ ಬುಲ್ಲಿಯಿಂಗ್ ಆಗಿ ಕೇಸ್ ಆಗಬಹುದು. ಅವರ ಬಗ್ಗೆ ಕೆಟ್ಟ ಕೆಟ್ಟದಾಗಿ ಬರೆದಿದ್ದನ್ನು ನೋಡಿದವರಿಗೆ ಡಿಪ್ರೆಷನ್ ಆಗಬಹುದು ಅಥವಾ ಪ್ರಾಣ ಕಳೆದುಕೊಳ್ಳುವ ಮಟ್ಟಕ್ಕೂ ಬರಬಹುದು.

ಇಷ್ಟು ಚಿಕ್ಕ ಮಕ್ಕಳಿಗೆ ಅಷ್ಟು ಬೆಲೆಬಾಳುವ ಸ್ಮಾರ್ಟ್ ಫೋನ್ ಯಾಕೆ ಬೇಕು, ಮಕ್ಕಳನ್ನ ಮಕ್ಕಳ ಹಾಗೆ ಬಿಡುವ ಇಚ್ಛೆ ಅಪ್ಪ ಅಮ್ಮನಿಗೆ ಯಾಕಿರಲ್ಲವೋ ತಿಳಿಯುವುದಿಲ್ಲ. ಅಷ್ಟು ಸೇಫ್ಟಿ ಎಂಬ ಭಯವಿದ್ದರೆ ಒಂದು ಬೇಸಿಕ್ ಫೋನು ಕೊಡಿಸಬಹುದು. ಅದನ್ನ ಬಿಟ್ಟು ಅವರ ಹತ್ತಿರವಿರುವ ಎಲ್ಲಾ ಫೀಚರ್ಸ್ ಇರುವ ಫೋನನ್ನ ಕೊಡಿಸಿ, ಲಂಗು ಲಗಾಮಿಲ್ಲದೆ ಅವರೇನೆ ಬರೆದರೂ ಬರೆಸಿಕೊಳ್ಳುವ ಅಂತರ್ಜಾಲದಲ್ಲಿ\ ಅವರು ಫ್ರೀ ಬರ್ಡ್ಸ್ ಆಗಿಬಿಡುತ್ತಾರೆ.

ವಂಚಿಸಿದ ಪಾರ್ಟ್ನರ್‌ಗೆ 2ನೇ ಅವಕಾಶ ನೀಡಿದಾಗ ಏನಾಯ್ತು? ಅನುಭಸ್ಥರ ಮಾತುಗಳಿವು

ಎಷ್ಟೆ ಚೈಲ್ಡ್ ಲಾಕ್ ಹಾಕಿ ಫೋನು ಕೊಟ್ಟರೂ ಸ್ವಲ್ಪ ದೊಡ್ಡವರಾದ ಮಕ್ಕಳು ಅದನ್ನ ತೆಗೆಯುವುದು ಹೇಗೆಂದು ಗೂಗಲ್ ಮಾಡಿ ಎಲ್ಲಾ ಕೆಲಸವನ್ನು ಮಾಡಿ ಅಪ್ಪ ಅಮ್ಮನಿಗೆ ಗೊತ್ತಾಗದ ಹಾಗೆ ಮತ್ತೆ ಚೈಲ್ಡ್ ಲಾಕ್ ಮಾಡುವ ವೀರರನ್ನ ಮಟ್ಟ ಹಾಕಲೇ ಬೇಕಾಗಿದೆ. ಮಕ್ಕಳನ್ನ ಶಾಲೆಯ ನಂತರ ಒಂದು ಹವ್ಯಾಸವನ್ನ ಅಭ್ಯಾಸ ಮಾಡಿಸಬೇಕು. ಸಂಗೀತ, ಚಿತ್ರಕಲೆಯೋ, ಹೊಸ ಭಾಷೆಯ ಕಲಿಕೆಯೋ ಅಥವಾ ಕ್ರೀಡೆಯೋ ಯಾವುದಾದರೂ ವಿಷಯದಲ್ಲಿ ಸ್ವಲ್ಪ ಆಸಕ್ತಿ ಬೆಳೆಸಿಕೊಂಡರೆ ಈ ಥರಹದ ಐಡಿಯಲ್ ಮೈಂಡ್ ಗಳನ್ನು ಮಟ್ಟ ಹಾಕಬಹುದು. ಇಲ್ಲಾ ಯಾರ ಬಗ್ಗೆಯಾದರೂ ತೊಂದರೆಯಿದ್ದರೆ ಅವರ ಬಳಿಯೇ ಮಾತಾಡುವಷ್ಟು ಧೈರ್ಯ ತುಂಬಬೇಕು. ಇಲ್ಲದಿದ್ದರೆ ಜಗತ್ತೇ ಸರೀಗಿಲ್ಲ ನಾನೊಬ್ಬನೇ ಸರಿ ಎಂದು ಬೇರೆಯವರ ಬಗ್ಗೆ ಕನ್ಫೆಷನ್ ಎಂದು ಹೇಳಿಕೊಂಡೂ ಸುಳ್ಳು ಬರೆಯುವವರ ಸಂಖ್ಯೆ ಜಾಸ್ತಿಯಾಗುತ್ತದೆ.