ಮೆಷಿನ್‌ಗೆ ಸಿಲುಕಿ ಕೈ ಕಟ್: ಕೈ ಕಳೆದುಕೊಂಡ ತನ್ನ ನೋಡಿ ಬಿಕ್ಕಳಿಸುತ್ತಿದ್ದ ಅಮ್ಮನ ಸಂತೈಸಿದ ಕಂದ
ಇಲ್ಲೊಂದು ಕಡೆ ಮೆಷಿನ್‌ಗೆ ಆಕಸ್ಮಿಕವಾಗಿ ಕೈ ಸಿಲುಕಿ ಕೈ ಕಳೆದುಕೊಂಡ ಬಾಲಕನನ್ನು ನೋಡಿ ಅಮ್ಮ ಜೋರಾಗಿ ಅಳುತ್ತಿದ್ದರೆ, ಕಂದ ತುಸುವೂ ಅಳದೇ ಅಮ್ಮನಿಗೆ ಸಾಂತ್ವನ ಹೇಳುತ್ತಿರುವ ರೀತಿ ನೋಡುಗರಿಗೆ ಕಣ್ಣೀರು ತರಿಸುತ್ತಿದೆ. ಕಳೆದ ತಿಂಗಳು ಈ ದುರ್ಘಟನೆ ನಡೆದಿದ್ದು, ಮಗು ಅಮ್ಮನನ್ನು ಸಂತೈಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಮ್ಮು: ಸಾಮಾನ್ಯವಾಗಿ ಅಳುವ ಮಕ್ಕಳಿಗೆ ಅಮ್ಮ ಸಮಾಧಾನ ಮಾಡುವುದನ್ನು ನೀವು ನೋಡಿರಬಹುದು, ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಇದು ನಿಮ್ಮ ಗಮನಕ್ಕೆ ಬಂದಿರಬಹುದು. ಆದರೆ ಇಲ್ಲೊಂದು ಕಡೆ ಮೆಷಿನ್‌ಗೆ ಆಕಸ್ಮಿಕವಾಗಿ ಕೈ ಸಿಲುಕಿ ಕೈ ಕಳೆದುಕೊಂಡ ಬಾಲಕನನ್ನು ನೋಡಿ ಅಮ್ಮ ಜೋರಾಗಿ ಅಳುತ್ತಿದ್ದರೆ, ಕಂದ ತುಸುವೂ ಅಳದೇ ಅಮ್ಮನಿಗೆ ಸಾಂತ್ವನ ಹೇಳುತ್ತಿರುವ ರೀತಿ ನೋಡುಗರಿಗೆ ಕಣ್ಣೀರು ತರಿಸುತ್ತಿದೆ. ಕಳೆದ ತಿಂಗಳು ಈ ದುರ್ಘಟನೆ ನಡೆದಿದ್ದು, ಮಗು ಅಮ್ಮನನ್ನು ಸಂತೈಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ತಿಂಗಳು ಜಮ್ಮು ಕಾಶ್ಮೀರದ ರಿಹದಿ ಪ್ರದೇಶದಲ್ಲಿ ಈ ದುರಂತ ನಡೆದಿತ್ತು. ಮನೆಯಲ್ಲಿ ಆಟವಾಡುತ್ತಿದ್ದ 4 ವರ್ಷದ ಕಂದ ದಕ್ಷೇಶ್ ಗುಪ್ತಾ, ಆಟವಾಡುತ್ತ ಪೇಡಾ ಮಾಡುವ ಮೆಷಿನ್‌ಗೆ ಕೈ ಹಾಕಿದ್ದು, ಕೈ ಮೆಷಿನ್ ಅಲ್ಲಿ ಸ್ಟಕ್ ಆಗಿತ್ತು, ಕಂದನ ಅಳು ಕೇಳಿ ತಾಯಿ ಸ್ಥಳಕ್ಕೆ ಬರುವಷ್ಟರಲ್ಲಿ ದುರಂತ ನಡೆದು ಹೋಗಿತ್ತು. ಮಗುವಿನ ಬಲಗೈ ಮೆಷಿನ್‌ಗೆ ಸಿಲುಕಿ ಜಜ್ಜಿ ಹೋಗಿ ತುಂಡಾಗಿ ನಿರಂತರ ರಕ್ತ ಸುರಿಯುತ್ತಿತ್ತು. ನೆರೆಹೊರೆಯವರ ಎರಡು ಗಂಟೆಗಳ ನಿರಂತರ ಪ್ರಯತ್ನದ ನಂತರವೂ ಪುಟಾಣಿಯ ಕೈಯನ್ನು ಮೆಷಿನ್‌ನಿಂದ ತೆಗೆಯಲಾಗಿರಲಿಲ್ಲ, ನಂತರ ವೆಲ್ಡರ್‌ನ್ನು ಕರೆಸಲಾಯಿತು. ಆದರೆ ವೆಲ್ಡರ್‌ಗೂ ಮೆಷಿನ್ ಅನ್ನು ಕತ್ತರಿಸಿ ಕಂದನ ಕೈಯನ್ನು ಮೆಷಿನ್‌ನಿಂದ ಬಿಡಿಸಲಾಗಿರಲಿಲ್ಲ, ಹೀಗಾಗಿ ಮೆಷಿನ್ ಸಮೇತ ಬಾಲಕನ್ನು ಜಮ್ಮುವಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯ್ತು.
Kerala Adoption Battle: ಕರುಳ ಕುಡಿಗಾಗಿ ಹೋರಾಡಿ ಗೆದ್ದ ಅಮ್ಮ, ಕಂದ ಮರಳಿ ತಾಯಿ ಮಡಿಲಿಗೆ!
ಅಲ್ಲಿನ ವೈದ್ಯರು ಹೇಳುವ ಪ್ರಕಾರ, ಕಂದನ ಕೈ ಸಂಪೂರ್ಣ ಜಜ್ಜಿ ಹೋಗಿದ್ದ ಕಾರಣ, ಜೊತೆಗೆ ರಕ್ತಸ್ರಾವವೂ ನಿಲ್ಲದೇ ಇದ್ದ ಕಾರಣ ಮುಂದೆ ಅದು ಸೋಂಕಾಗುವ ಸಾಧ್ಯತೆ ಇದ್ದಿದ್ದರಿಂದ ಅದನ್ನು ಕತ್ತರಿಸಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗಿತ್ತು. ವೈದ್ಯರು ಕೂಡಲೇ ಕಾರ್ಯ ಪ್ರವೃತರಾಗಿ ಬಾಲಕನ ಕೈಯನ್ನು ಕತ್ತರಿಸಿ ಮೆಷಿನ್‌ನಿಂದ ಆತನನ್ನು ಬಚಾವ್ ಮಾಡಿದ್ದರು.
ಇತ್ತ ಕೈ ಕಳೆದುಕೊಂಡ ಕಂದನ ನೋಡಿ ಅಮ್ಮ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದ್ದಾಳೆ. ಆದರೆ ಕಂದ ತುಸುವೂ ಅಳದೇ ಅಮ್ಮನಿಗೆ ಸಮಾಧಾನ ಹೇಳುತ್ತಿದ್ದಾನೆ. ಈ ವೇಳೆ ಆಸ್ಪತ್ರಗೆ ತೆರಳಿದ ಮೀಡಿಯಾ ಮಂದಿ ಮಗುವನ್ನು ಮಾತನಾಡಿಸಿದಾಗ ಆತ ಉತ್ತರಿಸಿದ ರೀತಿ ಮೀಡಿಯಾ ಮಂದಿಯ ಹೃದಯವನ್ನು ಭಾರವಾಗಿಸಿತ್ತು. ಆಪರೇಷನ್ ಬಳಿಕ ಪ್ರಜ್ಞೆ ಬಂದ ಮಗುವಿನ ಬಳಿ ವರದಿಗಾರರೊಬ್ಬರು ಏನಾಯ್ತು ನಿಂಗೆ ಎಂದು ಕೇಳಿದ್ರೆ, ಕಂದ ದೇವರಿಗೆ ನನ್ನ ಕೈ ಬೇಕಿತ್ತು ಕೊಟ್ಟುಬಿಟ್ಟೆ ಎಂದು ಹೇಳಿದ್ದ, ಇದನ್ನು ಕೇಳಿ ತಾಯಿ ಅಳದಿರಲು ಹೇಗೆ ಸಾಧ್ಯ? ಮಗುವಿನ ಮಾತು ಕೇಳುತ್ತಿದ್ದಂತೆ ಅಮ್ಮ ಜೋರಾಗಿ ಅಳಲು ಶುರು ಮಾಡಿದ್ದಾಳೆ.
Chhattisgarh: ಕರುಳ ಕುಡಿಯನ್ನು ಬೀದಿಗೆಸೆದ ಹೆತ್ತವ್ವ, ಕಂದನಿಗೆ ಕಾವಲು ನಿಂತ ಶ್ವಾನಗಳು!
ಮಗುವಿಗಿನ್ನು 4 ವರ್ಷ ನರ್ಸರಿಗಷ್ಟೇ ಸೇರಿದ್ದ, ಕೈ ಕಳೆದುಕೊಂಡು ಆತನ ಭವಿಷ್ಯ ಕತ್ತಲು ತುಂಬಿದೆ ಎಂದೆಲ್ಲಾ ಅಮ್ಮ ಬಿಕ್ಕಿ ಬಿಕ್ಕಿ ಅಳುತ್ತಾ ಗೋಳಾಡುತ್ತಿದ್ದರೆ, ದೊಡ್ಡವರಂತೆ ಗಂಭೀರನಾಗಿದ್ದ ಕಂದ 'ಅಮ್ಮ ಅಳಬೇಡ ಅಳಬೇಡ ಅಮ್ಮ ಎಂದು ಹೇಳುತ್ತಾ, ಪಕ್ಕದಲ್ಲಿರುವವರಿಗೆ ಅಮ್ಮನಿಗೆ ನೀರು ಕೊಡಿ ಎಂದು ಹೇಳುತ್ತಾನೆ. ಈ ವೇಳೆ ನಿನಗೆ ನೋವಾಗುತ್ತಿಲ್ಲವೇ ಎಂದು ಬಾಲಕನನ್ನು ವರದಿಗಾರರು ಕೇಳಿದಾಗ ನನಗೆ ನೋವಾಗುತ್ತಿಲ್ಲ, ನಿಜವಾಗಿಯೂ ನೋವಾಗುತ್ತಿಲ್ಲ ಎಂದು ಪುಟಾಣಿ ಹೇಳುತ್ತಾನೆ.
ಈ ವೀಡಿಯೋವನ್ನು ಮೇಜರ್ ಸುರೇಂದ್ರ ಪೂನಿಯಾ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಮಗುವಿನ ಕೈ ತುಂಡಾಗಿದೆ, ನೋಡಿದರೆ ಹೃದಯ ಒಡೆಯುತ್ತಿದೆ. ಆದರೆ ಈ ಪುಟಾಣಿ ಸಿಂಹದ ಮರಿ ಎಂದು ಈ ಸ್ಥಿತಿಯಲ್ಲೂ ಪುಟಾಣಿಯ ಧೈರ್ಯವನ್ನು ಅವರು ಶ್ಲಾಘಿಸಿದ್ದಾರೆ. ಅಲ್ಲದೇ ಈ ಬಾಲಕನ ವಿಳಾಸವನ್ನು ಶೇರ್ ಮಾಡಿ ನನ್ನ ಸೈನಿಕ ಸಹೋದ್ಯೋಗಿಗಳು ಸಹಾಯ ಮಾಡಲು ಬಯಸಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.
ಇನ್ನು ಈ ಪುಟ್ಟ ಬಾಲಕ ಜುಲೈ 23 ಬಂದರೆ 4 ವರ್ಷವನ್ನು ಪೂರೈಸುತ್ತಿದ್ದ, ಆದರೆ ಹುಟ್ಟುಹಬ್ಬಕ್ಕೆ ತಿಂಗಳಿರುವಾಗ ಈ ದುರಂತ ಸಂಭವಿಸಿದ್ದು, ಮಗುವಿನ ತಾಯಿಯ ಗೋಳಾಟ ಮಾತ್ರ ನೋಡಲಾಗುತ್ತಿಲ್ಲ. ಆದರೆ ಈ ಕಠಿಣ ಸ್ಥಿತಿಯಲ್ಲೂ ಕಂದ ತಾಯಿಯನ್ನು ಸಂತೈಸುತ್ತಿದ್ದ ರೀತಿ ನೋಡಿದ ನೆಟ್ಟಿಗರು ಕೂಡ ಭಾವುಕರಾಗಿದ್ದು, ಪುಟಾಣಿಯ ಧೈರ್ಯವನ್ನು ಕೊಂಡಾಡಿದ್ದಾರೆ. ಇಂತಹ ಕಂದನನ್ನು ಪಡೆದ ಆಕೆ ಪುಣ್ಯವಂತೆಯೇ ಸರಿ ಎಂದು ಅನೇಕರು ಕೊಂಡಾಡಿದ್ದಾರೆ. ತಾಯಿಯ ಪ್ರೀತಿ ಕಾಳಜಿ ಮಕ್ಕಳಿಗೆ ಸಿಗುವುದು ಸಾಮಾನ್ಯ. ಆದರೆ ತನ್ನ ತಡೆಯಲಾರದ ನೋವಿನ ನಡುವೆಯೂ ಅಮ್ಮನ ಸಂತೈಸುತ್ತಿರುವ ಈ ಕಂದನಂತ ಮಕ್ಕಳು ಲಕ್ಷ ಕೋಟಿಗೊಬ್ಬರೇ ಸರಿ.