ಬ್ರೆಜಿಲ್‌ನ 105 ವರ್ಷದ ಮನೋಯೆಲ್ ಆಂಜೆಲಿಮ್ ಡಿನೋ ಮತ್ತು 101 ವರ್ಷದ ಮಾರಿಯಾ ಡಿ ಸೌಸಾ ಡಿನೋ, 84 ವರ್ಷಗಳ ದಾಂಪತ್ಯ ಜೀವನಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 1940 ರಲ್ಲಿ ವಿವಾಹವಾದ ಇವರಿಗೆ 13 ಮಕ್ಕಳು, 55 ಮೊಮ್ಮಕ್ಕಳು, 54 ಮರಿಮೊಮ್ಮಕ್ಕಳು ಮತ್ತು 12 ಗಿರಿಮೊಮ್ಮಕ್ಕಳಿದ್ದಾರೆ.
ಬೆಂಗಳೂರು (ಫೆ.24): ಬ್ರೆಜಿಲ್‌ನ 105 ವರ್ಷದ ಮನೋಯೆಲ್ ಆಂಜೆಲಿಮ್ ಡಿನೋ ಮತ್ತು 101 ವರ್ಷದ ಮಾರಿಯಾ ಡಿ ಸೌಸಾ ಡಿನೋ, ಜೀವಂತ ದಂಪತಿಗಳ ಅತಿ ಸುದೀರ್ಘ ದಾಂಪತ್ಯಕ್ಕಾಗಿ ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 1940 ರಲ್ಲಿ ಇವರು ವಿವಾಹವಾಗಿದ್ದರು. ಇವರ ಮದುವೆ ಆಗಿಯೇ ಈಗ 84 ವರ್ಷ ಹಾಗೂ 77 ದಿನ ಕಳೆದಿವೆ. ಹೀಗಾಗಿ ಗಿನ್ನೆಸ್ ಸಂಸ್ಥೆಯು ಇವರಿಗೆ ಪ್ರೇಮಿಗಳ ದಿನದಂದು ದಾಖಲೆಯ ಪ್ರಮಾಣಪತ್ರ ನೀಡಿ ಸನ್ಮಾನಿಸಿದೆ. ಇವರಿಗೆ 13 ಮಕ್ಕಳು, 55 ಮೊಮ್ಮಕ್ಕಳು, 54 ಮರಿಮೊಮ್ಮಕ್ಕಳು ಮತ್ತು ಈಗ 12 ಗಿರಿಮೊಮ್ಮಕ್ಕಳಿದ್ದಾರೆ.
ಗಿನ್ನೆಸ್ ವಿಶ್ವ ದಾಖಲೆ ಟೀಮ್ ಹಾಗೂ ಲಾಂಗೇವಿಕ್ವೆಸ್ಟ್ ಇವರಿಬ್ಬರ ದಾಖಲೆಯನ್ನು ವೆರಿಫೈ ಮಾಡಿದ ಬಳಿಕ ಈ ಪ್ರಮಾಣ ಪತ್ರ ನೀಡಿದೆ. ಲಾಂಗೇವಿಕ್ವೆಸ್ಟ್ ಪ್ರಸ್ತುತ ವಿಶ್ವದಲ್ಲಿ ನೂರಕ್ಕೂ ಅಧಿಕ ವರ್ಷ ಬದುಕಿರುವ ವ್ಯಕ್ತಿಗಳನ್ನು ಟ್ರ್ಯಾಕ್‌ಮಾಡುತ್ತದೆ. ಗಿನ್ನೆಸ್ ವಿಶ್ವ ದಾಖಲೆ ಹೇಳುವ ಪ್ರಕಾರ, ಮನೋಯೆಲ್ 1919ರಂದು ಜನಿಸಿದ್ದರೆ, ಮಾರಿಯಾ ಅವರು (ಮೂಲ ಹೆಸರು ಆಲ್ಮೆಡಾ ಡಿ ಸೌಸಾ) 1923ರಂದು ಜನಿಸಿದ್ದರು. 1936ರಲ್ಲಿ ತಮ್ಮ ಕುಟುಂಬಕ್ಕಾಗಿ ಕೃಷಿ ತೋಟದಲ್ಲಿ ಕೆಲಸ ಮಾಡುವ ವೇಳೆ ಮೊದಲ ಬಾರಿಗೆ ಭೇಟಿಯಾಗಿದ್ದರು. ಮನೋಯೆಲ್ ,ಬೋವಾ ವಿಯಾಗೆಮ್ ಜಿಲ್ಲೆಯ ಅಲ್ಮೇಡಾ ಪ್ರದೇಶಕ್ಕೆ ರಪಾದುರಾಸ್ (ಸಾಂಪ್ರದಾಯಿಕ ಬ್ರೆಜಿಲಿಯನ್ ಕ್ಯಾಂಡಿ) ಸಾಗಣೆಯನ್ನು ಸಂಗ್ರಹಿಸಲು ಪ್ರಯಾಣ ಬೆಳೆಸಿದ್ದರು, ಅಲ್ಲಿ ಅವರು ಮಾರಿಯಾರನ್ನು ಭೇಟಿಯಾಗಿದ್ದರು. ಆದರೆ ಕೆಲವು ವರ್ಷಗಳ ನಂತರವೇ ಅವರು ಸಂಬಂಧವನ್ನು ಪ್ರಾರಂಭಿಸಿದರು.
ಅವರ ಆರಂಭಿಕ ಭೇಟಿಯು ಹೆಚ್ಚೇನೂ ಕುತೂಹಲಕಾರಿಯಾಗಿರಲಿಲ್ಲ. ಆದರೆ, 1940 ರ ಸುಮಾರಿಗೆ ಒಂದು ಆಕಸ್ಮಿಕ ಭೇಟಿಯ ನಂತರವೇ ಮನೋಯೆಲ್ ತನ್ನ ಜೀವನವನ್ನು ಕಳೆಯಲು ಬಯಸುವ ವ್ಯಕ್ತಿ ಮಾರಿಯಾ ಎಂದು ನಿರ್ಧರಿಸಿದ್ದರು. 1940ರ ವೇಳೆಗೆ ಮೊದಲ ನೋಟದಲ್ಲೇ ಅವರು ಮಾರಿಯಾ ಪ್ರೀತಿಯಲ್ಲಿ ಬಿದ್ದಿದ್ದು ಮಾತ್ರವಲ್ಲದೆ, ಈಕೆ ನನ್ನ ಜೀವನದಿಂದ ಹೋಗಬಾರದು ಎಂದು ನಿರ್ಧಾರ ಮಾಡಿದ್ದರು. ಕೊನೆಗೆ ಮದುವೆಯ ಪ್ರಸ್ತಾಪ ಮಾಡಿದಾಗ ಮಾರಿಯಾ ಕೂಡ ಒಪ್ಪಿಕೊಂಡಿದ್ದರು.
ಮಾರಿಯಾ ಅವರ ತಾಯಿ ಮೊದಲಿಗೆ ಈ ಸಂಬಂಧವನ್ನು ಒಪ್ಪಿಕೊಂಡಿರಲಿಲ್ಲ. ಆದರೆ, ಮಾರಿಯಾ ಕುಟುಂಬದ ನಂಬಿಕೆಯನ್ನು ಗಳಿಸುವಲ್ಲಿ ಯಶಸ್ವಿಯಾದ ಮನೋಯೆಲ್, ಭವಿಷ್ಯಕ್ಕಾಗಿ ಸ್ವಂತ ಮನೆ ಕಟ್ಟಲು ಆರಂಭ ಮಾಡಿದ್ದರು. ಕುಟುಂಬದ ಒಪ್ಪಿಗೆಯ ಬಳಿಕ 1940ರಲ್ಲಿ ಇಬ್ಬರೂ ಮದುವೆಯಾಗಿದ್ದರು. ಬಳಿಕ ಮನೋಯೆಲ್ ತಾವು ಕಟ್ಟಿದ ಸ್ವಂತ ಮನೆಯಲ್ಲೇ ಸಂಸಾರ ಆರಂಭಿಸಿದ್ದರು. ತಮ್ಮ ಕುಟುಂಬಕ್ಕಾಗಿ ಅವರು ರೋಲ್ಡ್ ತಂಬಾಕುವನ್ನು ಮಾರಾಟ ಮಾಡಲು ಆರಂಭಿಸಿದ್ದರು. ಸಂಕಷ್ಟದ ನಡುವೆಯೂ ತಮ್ಮ 13 ಮಂದಿ ಮಕ್ಕಳನ್ನು ಅವರು ಬೆಳೆಸಿದ್ದರು. ಈ 13 ಮಕ್ಕಳಿಂದ ಅವರಿ 55 ಮಂದಿ ಮೊಮ್ಮಕ್ಕಳಾಗಿದ್ದರು. ಇವರಿಂದ 54 ಮಂದಿ ಮರಿ ಮೊಮ್ಮಕ್ಕಳಾಗಿದ್ದು, ಇವರಿಂದ 12 ಮಂದಿ ಗಿರಿ ಮೊಮ್ಮಕ್ಕಳನ್ನು ನೋಡುವ ಭಾಗ್ಯ ಸಿಕ್ಕಿದೆ.
700 ಕೆ.ಜಿಯ ಈ ಹೆನ್ರಿಗೆ 6 ಪತ್ನಿಯರು, 10 ಸಾವಿರ ಮಕ್ಕಳು: ಜಗತ್ತಿನ ಹಿರಿಯನ ರೋಚಕ ಸ್ಟೋರಿ ಕೇಳಿ...
ಇಬ್ಬರ ವರ್ಷ 100 ದಾಟಿದ್ದರೂ ಈಗಲೂ ಕೂಡ ಪ್ರತಿ ದಿನವನ್ನು ನೆಮ್ಮದಿಯಿಂದ ಕಳೆಯುತ್ತಿದ್ದಾರೆ. ವಯಸ್ಸಿನ ಕಾರಣದಿಂದಾಗಿ ಮನೋಯೆಲ್ ಬೆಳಗಿನ ಇಡೀ ದಿನ ತಮ್ಮ ಕೋಣೆಯಲ್ಲೇ ಕಳೆದರೆ, ಒಮ್ಮೊಮ್ಮೆ ಸಂಜೆಯ ವೇಳೆ ಲಿವಿಂಗ್ ರೂಮ್‌ನಲ್ಲಿ ನಡೆಯುವ ಪ್ರಾರ್ಥನೆಗೆ ಮಾರಿಯಾ ಜೊತೆಗೂಡುತ್ತಾರೆ. ಇಷ್ಟು ದೀರ್ಘ ವರ್ಷ ಅವರ ಮದುವೆ ಉಳಿದುಕೊಳ್ಳಲು ಕಾರಣವೇ ಎಂದು ಮಾರಿಯಾ ಹಾಗೂ ಅವರ ಕುಟುಂಬಕ್ಕೆ ಪ್ರಶ್ನೆ ಕೇಳಿದರೆ ಅವರ ಒಂದೇ ಉತ್ತರ: ಪ್ರೀತಿ. ಇದರ ಪ್ರಮಾಣ ಎಷ್ಟು ಅನ್ನೋದನ್ನು ವಿಶ್ವದ ಯಾವುದೇ ಅತ್ಯಾಧುನಿಕ ಕಂಪ್ಯೂಟರ್‌ಗಳು ಕೂಡ ಲೆಕ್ಕ ಹಾಕಲು ಸಾಧ್ಯವಿಲ್ಲ.
ವಿಶ್ವದಲ್ಲಿ ಅತಿ ಉದ್ದನೆಯ ಕಣ್ಣು ರೆಪ್ಪೆಯನ್ನು ಹೊಂದಿದ ಯುವತಿ ಇವಳೇ ನೋಡಿ..!
