ಕೃಷಿ ಹೊಂಡದಲ್ಲಿ ಸೋಡಿಯಂ ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ. ಯಾವುದೇ ದುರುದ್ದೇಶವಿಲ್ಲ ಎಂದು ಕೋರ್ಟ್ ತಿಳಿಸಿದ್ದು, ಈ ತೀರ್ಪಿನ ಬಳಿಕ ಪ್ರತಾಪ್ ಕಣ್ಣೀರಿಟ್ಟು ಸಂತಸ ಹಂಚಿಕೊಂಡಿದ್ದಾರೆ.

ಬೆಂಗಳೂರು: ಡ್ರೋನ್​ ಪ್ರತಾಪ್​ (Drone Pratap) ಎರಡು ವರ್ಷಗಳ ಹಿಂದೆ ಭಾರಿ ಸದ್ದು ಮಾಡಿದ ಹೆಸರು. ಡ್ರೋನ್​ ತಯಾರಿಸುವುದಾಗಿ ಹೇಳಿ ಘಟಾನುಘಟಿಗಳು, ದಿಗ್ಗಜರನ್ನೇ ಯಾಮಾರಿಸಿ ಸದ್ದು ಮಾಡಿದ್ದರು ಡ್ರೋನ್​ ಪ್ರತಾಪ್​. ತಾವೊಬ್ಬ ಸೈಂಟಿಸ್ಟ್​ ಎಂದು ಹೇಳಿ, ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಛಾನ್ಸ್​ ಗಿಟ್ಟಿಸಿಕೊಂಡು, ತಮ್ಮ ಬಡತನದ ಕಟ್ಟುಕಥೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿ ಕೊನೆಗೆ ತಗ್ಲಾಕ್ಕೊಂಡು ಜೈಲಿಗೂ ಹೋಗಿ ಬಂದರು. ಕೊನೆಗೆ ಇಷ್ಟೆಲ್ಲಾ ಆವಾಂತರ ಮಾಡಿದ ಬಳಿಕ ಸಹಜವಾಗಿ ಬಿಗ್​ಬಾಸ್​ನಲ್ಲಿ ಆಫರ್​ ಬಂದಿತ್ತು. ಅಲ್ಲಿಂದ ಹೀರೋ ಆಗಿ ಹೊರಹೊಮ್ಮಿದ್ದರು ಡ್ರೋನ್​ ಪ್ರತಾಪ್​.

ಇದಾದ ಬಳಿಕ, ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜನಕಲೋಟಿ ಗ್ರಾಮದ ಕೃಷಿ ಹೊಂಡದಲ್ಲಿ ಡ್ರೋನ್‌ ಪ್ರತಾಪ್‌ ಅವರು ಸೋಡಿಯಂ ಮೆಟಲ್ ಬಳಸಿ ಸ್ಫೋಟದ ಪ್ರಯೋಗ ಮಾಡಿ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದ್ದರು. ಈ ವಿಡಿಯೋವನ್ನು ಆಧರಿಸಿ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡು ಡ್ರೋನ್‌ ಪ್ರತಾಪ್‌ನನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುಗಿರಿ 4ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

ಕಣ್ಣೀರಿಟ್ಟ ಡ್ರೋನ್​

ಎಫ್​ಐಆರ್​ ರದ್ದತಿಗೆ ಕೋರಿ ಡ್ರೋನ್​ ಪ್ರತಾಪ್​ ಹೈಕೋರ್ಟ್​ ಮೊರೆ ಹೋಗಿದ್ದರು. ಇದೀಗ ಅವರ ಎಫ್​ಐಆರ್​ ಅನ್ನು ಹೈಕೋರ್ಟ್​ ರದ್ದು ಮಾಡಿದೆ. ಡ್ರೋನ್​ ಪ್ರತಾಪ್​ ಯಾವುದೇ ರೀತಿ ದುರುದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿರಲಿಲ್ಲ ಎಂದು ಕೋರ್ಟ್​ ಹೇಳಿದೆ. ತೀರ್ಪು ಬಂದ ಬಳಿಕ ವಿಡಿಯೋ ಮಾಡಿ ಗಳಗಳನೆ ಅತ್ತ ಡ್ರೋನ್​ ಪ್ರತಾಪ್​, ಕೊನೆಗೂ ನನಗೆ ಜಯ ಸಿಕ್ಕಿದೆ. ಎಲ್ಲಾ ಕೇಸ್​ಗಳಿಂದ ಮುಕ್ತಗೊಳಿಸಲಾಗಿದೆ. ನನ್ನ ವಿರುದ್ಧ ಹೇಳಬಾರದ್ದನ್ನೆಲ್ಲಾ ಹೇಳಿದ್ರು. ಏನೇನೋ ಬರೆದರು. ಕೊನೆಗೂ ದೇವರು ಕಣ್ಣುಬಿಟ್ಟ. ನನಗೆ ಜಯ ಸಿಕ್ಕಿದೆ ಎಂದಿದ್ದಾರೆ.

ಏನಿದು ಕೇಸ್​?

ಡ್ರೋನ್ ಪ್ರತಾಪ್ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸ್‌ ಠಾಣೆ ವ್ಯಾಪ್ತಿಯ ಜನಕಲೋಟಿ ಗ್ರಾಮದ ಕೃಷಿ ಹೊಂಡದಲ್ಲಿ ಸೋಡಿಯಂ ಸ್ಫೋಟಿಸಿದ್ದರು. ಆನಂತರ ಸ್ಫೋಟದ ವಿಡಿಯೋ ಚಿತ್ರೀಕರಣ ಮಾಡಿ, ಅದನ್ನು ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣ­ದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಚಿತ್ರೀಕರಣವನ್ನು ವಿನಯ್ ಎಂಬಾತ ಮಾಡಿದ್ದರೆ, ಸೋಡಿಯಂ ಮೆಟಲ್ ಅನ್ನು ಪ್ರಜ್ವಲ್‌ ಎಂಬಾತ ಕೊಡಿಸಿದ್ದ. ಬೆಂಗಳೂರಿನ ಅವೆನ್ಯೂ ರಸ್ತೆಯ ಅಂಗಡಿ­ಯೊಂದರಲ್ಲಿ ಪ್ರತಾಪ್‌ ಸೋಡಿಯಂ ಖರೀದಿ­ಸಿದ್ದರು ಎಂಬ ಮಾಹಿತಿ ಸಿಕ್ಕಿತ್ತು.

ಡ್ರೋನ್‌ ಪ್ರತಾಪ್‌ ಬಂಧನದ ಬಳಿಕ ಪೊಲೀಸರು ಅವರ ಇಬ್ಬರು ಸ್ನೇಹಿತರನ್ನು ಕೂಡ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಡ್ರೋನ್‌ ಪ್ರತಾಪ್‌ಗೆ ಡಿ.26ರವರೆಗೆ 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್‌ ಆದೇಶ ಹೊರಡಿಸಿತ್ತು. ಸದ್ಯ ಅದರಿಂದ ಈ ಮುಕ್ತರಾಗಿದ್ದಾರೆ.