ಸೈಕಲ್‌ನಲ್ಲಿ ಜೊಮ್ಯಾಟೋ ಆಹಾರ ಡೆಲಿವರಿ ಮಾಡುವ 7 ವರ್ಷದ ಬಾಲಕ: ರಾತ್ರಿ 11 ಗಂಟೆವರೆಗೆ ಕೆಲಸ..!
ತನ್ನ ಕುಟುಂಬವನ್ನು ಸಾಕುತ್ತಿರುವ ತಂದೆಗೆ ಅಪಘಾತವಾಗಿದ್ದು, ಅವರಿಗೆ ಕೆಲಸ ಮಾಡಲು ಸಾಧ್ಯವಾಗದ ಹಿನ್ನೆಲೆ, 7 ವರ್ಷದ ಶಾಲಾ ಬಾಲಕ ಜೊಮ್ಯಾಟೋ ಆಹಾರ ಡೆಲಿವರಿ ಏಜೆಂಟ್ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧದ ವಿಡಿಯೋ ವೈರಲ್ ಆಗಿದೆ.
ಕೃತಜ್ಞತೆ ಹಾಗೂ ಮೆಚ್ಚುಗೆಯ ಸಾಕಷ್ಟು ಲೇಖನಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ನೀವು ಓದಿರಬಹುದು. ಹಾಗೂ, ಈ ಸ್ಫೂರ್ತಿದಾಯಕ ಸ್ಟೋರಿಗಳು ಒಳನೋಟವುಳ್ಳ ಮತ್ತು ವಾಸ್ತವದ ಬಗ್ಗೆ ಪ್ರತಿಬಿಂಬಿಸುತ್ತದೆ. ಆಹಾರ ಡೆಲಿವರಿ ಮಾಡುವ ಬ್ರ್ಯಾಂಡ್‌ಗಳಾದ ಸ್ವಿಗ್ಗಿ ಹಾಗೂ ಜೊಮ್ಯಾಟೋ ಹಾಗೂ ಇತರೆ ಕಂಪನಿಗಳ ಡೆಲಿವರಿ ಪಾರ್ಟ್‌ನರ್‌ಗಳ ಬಗ್ಗೆಯೂ ಸಾಕಷ್ಟು ಸ್ಟೋರಿಗಳು ಹರಿದಾಡುತ್ತಿರುತ್ತವೆ. ಡೆಲಿವರಿ ಪಾರ್ಟ್‌ನರ್‌ಗಳ ಕಷ್ಟ, ಗ್ರಾಹಕರ ಮನೆಗೆ ಆಹಾರ ಡೆಲಿವರಿ ಮಾಡುವ ಪಾರ್ಟ್‌ನರ್‌ಗಳ ಸ್ಥಿತಿ, ಅವರಿಗೆ ಮೆಚ್ಚುಗೆ, ಬೈಗುಳ, ಅವರ ಮೇಲೆ ಹಲ್ಲೆ ಇಂತಹ ಹಲವು ಕಥೆಗಳನ್ನು ನೀವು ವೆಬ್‌ಸೈಟ್‌ಗಳಲ್ಲಿ, ಲಿಂಕ್ಡ್‌ಇನ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು.
ಟ್ವಿಟ್ಟರ್ ಮೂಲಕ ಇಂತಹ ಸ್ಟೋರಿಯೊಂದು ಬೆಳಕಿಗೆ ಬಂದಿದ್ದು, ಇದರಲ್ಲಿ 7 ವರ್ಷದ ಶಾಲಾ ಬಾಲಕ ಜೊಮ್ಯಾಟೋ ಡೆಲಿವರಿ ಏಜೆಂಟ್ ಆಗಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಟ್ವೀಟ್ ಮಾಡಲಾಗಿದೆ. ಬಾಲಕನ ತಂದೆಗೆ ಅಪಘಾತವಾದ ಬಳಿಕ ಮಗ ಡೆಲಿವರಿ ಪಾರ್ಟ್‌ನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ. ರಾಹುಲ್ ಮಿತ್ತಲ್ ಎಂಬ ಟ್ವಿಟ್ಟರ್ ಬಳಕೆದಾರ, ಈ ಸಂಬಂಧ ಸರಣಿ ಟ್ವೀಟ್‌ಗಳನ್ನು ಮಾಡಿದ್ದು, ಶಾಲಾ ಬಾಲಕ ತಾತ್ಕಾಲಿಕವಾಗಿ ಫುಡ್ ಡೆಲಿವರಿ ಬಾಯ್ ಆಗಿದ್ದಾನೆ ಎಂದು ಅವರು ಹೇಳಿದ್ದಾರೆ. ಆತ ಬೆಳಗ್ಗೆ ಶಾಲೆಗೆ ಹೋಗುತ್ತಾನೆ, ನಂತರ ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಾನೆ. ಅಪ್ಪನಿಗೆ ಅಪಘಾತವಾದ್ದರಿಂದ ಕುಟುಂಬವನ್ನು ಸಾಕಲು ಬಾಲಕ ಈ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ.
ಆನ್‌ಲೈನ್ ಫುಡ್ ಆರ್ಡರ್ ಮಾಡ್ತೀರಾ? ಎಷ್ಟೊಂದು ಬೆಲೆ ವ್ಯತ್ಯಾಸ ನೋಡಿ
ಟ್ವೀಟ್‌ವೊಂದರಲ್ಲಿ ವಿಡಿಯೋವನ್ನೂ ಹಂಚಿಕೊಳ್ಳಲಾಗಿದ್ದು, ರಾಹುಲ್ ಎಂಬ ಗ್ರಾಹಕ ಹಾಗೂ ಬಾಲಕನ ನಡುವಿನ ಮಾತುಕತೆಯನ್ನು ಇಲ್ಲಿ ಶೇರ್ ಮಾಡಲಾಗಿದೆ. ಜೊಮ್ಯಾಟೋ ಗ್ರಾಹಕರ ಮನೆ - ಮನೆಗೆ ಸೈಕಲ್ ಮೂಲಕ ಬಾಲಕ ಆಹಾರ ಡೆಲಿವರಿ ಮಾಡುತ್ತಿದ್ದಾನೆ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಅಲ್ಲದೆ, ತನ್ನ ತಂದೆಯ ಪ್ರೊಫೈಲ್‌ಗೆ ಬರುತ್ತಿರುವ ಬುಕ್ಕಿಂಗ್‌ಗಳನ್ನು ನಾನು ಈಗ ನೋಡಿಕೊಳ್ಳುತ್ತಿರುವುದಾಗಿಯೂ ಬಾಲಕ ಹೇಳುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು.
ಆ ವಿಡಿಯೋದಿಂದ ಆ ಬಾಲಕನ ಹೆಸರನ್ನು ಎಡಿಟ್ ಮಾಡಲಾಗಿದ್ದು, ತೆಗೆದು ಹಾಕಿದ್ದರೂ, ಆ ಬಾಲಕನ ಹೆಸರು ಹಾಗೂ ವಯಸ್ಸನ್ನು ರಾಹುಲ್ ಮಿತ್ತಲ್ ಎಂಬ ಬಳಕೆದಾರ ಹೇಳಿದ್ದಾನೆ. ಅಲ್ಲದೆ, ಆ ಬಾಲಕನ ತಂದೆ ಇನ್ನೂ ಬದುಕಿದ್ದು, ಆದರೆ ಹೊರಗೆ ಓಡಾಡುವ ಸ್ಥಿತಿಯಲ್ಲಿಲ್ಲ ಎಂದು ತಿಳಿದುಬಂದಿದೆ.
ಇನ್ನು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಶಾಲಾ ಬಾಲಕ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಲಾಗಿದೆ. ಇನ್ನು, ಈ ಟ್ವೀಟ್‌ಗೆ ಹಲವು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ವೈವಿಧ್ಯಮಯ ಕಮೆಂಟ್‌ಗಳನ್ನು ಮಾಡಿದ್ದಾರೆ. ಹಲವು ನೆಟ್ಟಿಗರು ಶಾಲಾ ಬಾಲಕ ಡೆಲಿವರಿ ಬಾಯ್ ಆಗಿರುವುದನನ್ನು ವಿರೋಧಿಸಿದ್ದು, ಇದು ಬಾಲ ಕಾರ್ಮಿಕ ಪದ್ಧತಿಯಲ್ಲವೇ ಎಂಬ ಬಗ್ಗೆ ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಇನ್ನು ಹಲವರು ತನ್ನ ಕುಟುಂಬಕ್ಕೆ ಸಹಾಯ ಮಾಡುತ್ತಿರುವ ಬಾಲಕನ ಬೆಂಬಲ ಸೂಚಕವನ್ನು ಇನ್ನೂ ಹಲವು ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ, ಆ ಬಾಲಕನ ತಂದೆ ಬೇಗ ಚೇತರಿಸಿಕೊಳ್ಳಲಿ ಎಂದು ಕೆಲವರು ಟ್ವೀಟ್‌ಗಳನ್ನು ಮಾಡಿದ್ದಾರೆ.
ಕುದುರೆ ಏರಿ ಬಂದ... ಸಿನಿಮಾ ಸ್ಟೈಲ್‌ಲ್ಲಿ ಫುಡ್ ಡೆಲಿವರಿ ಮಾಡಿದ ಸ್ವಿಗ್ಗಿ ಬಾಯ್: ವಿಡಿಯೋ ವೈರಲ್
ಕೆಲ ನೆಟ್ಟಿಗರ ಪ್ರತಿಕ್ರಿಯೆಗಳು ಹೀಗಿವೆ ನೋಡಿ..
ರಾಹುಲ್ ಮಿತ್ತಲ್ ಅವರ ಈ ಸರಣಿ ಟ್ವೀಟ್, ವಿಡಿಯೋ ವೈರಲ್ ಆಗುತ್ತಿದ್ದಂತೆ ಜೊಮ್ಯಾಟೋ ಸಂಸ್ಥೆ ಸಹ ಇದಕ್ಕೆ ಪ್ರತಿಕ್ರಿಯೆ ನೀಡಿದೆ. ಈ ವಿಚಾರವನ್ನು ಪರಿಶೀಲಿಸುವುದಾಗಿ ತಿಳಿಸಿದ್ದು, ಆ ಬಾಲಕನ ಅಪ್ಪನ ವಿವರಗಳನ್ನು ನೀಡುವಂತೆ ಬಾಲಕನ ವಿಡಿಯೋಗೆ ಜೊಮ್ಯಾಟೋ ಪ್ರತಿಕ್ರಿಯೆ ನೀಡಿದೆ.