31 ವರ್ಷದ ತಂದೆಗೆ ಹಠಾತ್ ಆಗಿ ಹೈಪೊಗ್ಲಿಸಿಮಿಕ್ ಉಂಟಾದಾಗ, ಪುಟ್ಟ ಮಗಳು ತನ್ನ ತಂದೆಗೆ ಗ್ಲುಕೋಸ್ ಮಾತ್ರೆಗಳನ್ನು ನೀಡಿ ಆತನ ಜೀವವನ್ನು ಉಳಿಸಿದ್ದಾಳೆ. ಈ ಘಟನೆ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾನ್ಯವಾಗಿ ಅಪ್ಪ ಎಂದರೆ ಹೆಣ್ಣು ಮಕ್ಕಳಿಗೆ ಅತೀವವಾದ ಪ್ರೀತಿ, ಇತ್ತೀಚೆಗೆ ಅನೇಕ ಗಂಡು ಮಕ್ಕಳು ಹೆಣ್ಣು ಮಕ್ಕಳೇ ಬೇಕು ಎಂದು ಹೇಳುತ್ತಾರೆ. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಕಾಳಜಿ ವಹಿಸುವುದು, ಕೆಲ ಸೂಕ್ಷ್ಮತೆಗಳನ್ನು ಹೇಳುವ ಮೊದಲೇ ಅರ್ಥ ಮಾಡಿಕೊಳ್ಳುವುದು ಅದಕ್ಕೆ ಕಾರಣ.

ಇದಕ್ಕೊಂದು ಉದಾಹರಣೆ ಎಂಬಂತೆ ಇಲ್ಲೊಂದು ವೀಡಿಯೋ ವೈರಲ್ ಆಗಿದೆ. ತನ್ನ 31 ವರ್ಷದ ತಂದೆಗೆ ವೈದ್ಯಕೀಯ ತುರ್ತುಪರಿಸ್ಥಿತಿ ಉಂಟಾಗಿದ್ದನ್ನು ಕೂಡಲೇ ಅರ್ಥ ಮಾಡಿಕೊಂಡ ಪುಟ್ಟ ಮಗಳು ಆತನ ಜೀವರಕ್ಷಿಸಿದ ಘಟನೆಯೊಂದು ನಡೆದಿದೆ. ಮನೆಯಲ್ಲಿ ಹಾಕಿದ ಸಿಸಿ ಕ್ಯಾಮರಾದಲ್ಲಿ ಆ ದೃಶ್ಯ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

31 ವರ್ಷದ ಯೆಮ್ಮನ್ ಡೆಮೆಗಿಲ್ಲೊ ಅವರಿಗೆ ಹಠಾತ್ ಆಗಿ ಹೈಪೊಗ್ಲಿಸಿಮಿಕ್(Hypoglycemia)ಉಂಟಾಗಿತ್ತು. (ಹೈಪೊಗ್ಲಿಸಿಮಿಯಾ ಎಂದರೆ ರಕ್ತದಲ್ಲಿನ ಲೋ ಬ್ಲಡ್ ಶುಗರ್, ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಇದ್ದಕ್ಕಿದ್ದಂತೆ ಕಡಿಮೆಯಾಗುತ್ತಾ ಹೋಗುವ ಸ್ಥಿತಿಯಾಗಿದೆ. ಮಧುಮೇಹ ಔಷಧಿಗಳಿಂದಾಗಿ ಮಧುಮೇಹ ಇರುವವರಲ್ಲಿ ಈ ರೀತಿ ಆಗುತ್ತದೆ. ) ಈ ಆರೋಗ್ಯ ಸೂಕ್ಷ್ಮತೆಯನ್ನು ಕೂಡಲೇ ಅರ್ಥ ಮಾಡಿಕೊಂಡ ಪುಟ್ಟ ಬಾಲಕಿ ಜಬ್‌ ತನ್ನ ತಂದೆಯನ್ನು ಎದ್ದೇಳಿಸುವ ಪ್ರಯತ್ನ ಮಾಡಿದ್ದು, ಆತ ಎದ್ದೇಳದೇ ಇದ್ದಾಗ ಕೂಡಲೇ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಆತನಿಗೆ ಗ್ಲುಕೋಸ್ ಮಾತ್ರೆಗಳನ್ನು ನೀಡಿ ಆತನ ಜೀವ ಉಳಿಸಿದ್ದಾಳೆ. ತಂದೆ ತನ್ನ ಯಾವುದೇ ಕರೆಗಳಿಗೆ ಪ್ರತಿಕ್ರಿಯಿಸದೇ ಇರುವುದನ್ನು ತಿಳಿದ ಬಾಲಕಿ ಸೀದಾ ಹೋಗಿ ಗ್ಲುಕೋಸ್ ಮಾತ್ರೆ ತಂದು ತನ್ನ ತಂದೆಗೆ ನೀಡಿದ್ದು, ಇದನ್ನು ತಿಂದ ಕೆಲ ಕ್ಷಣದಲ್ಲಿ ಆತ ಸಹಜ ಸ್ಥಿತಿಗೆ ಬಂದಿದ್ದಾನೆ. ಲಂಡನ್‌ನ ಬರ್ಕ್‌ಶೈರ್‌ನಲ್ಲಿ ಈ ಘಟನೆ ನಡೆದಿದೆ.

ಪುಟ್ಟ ಮಗುವೊಂದು ವೈದ್ಯಕೀಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ತೋರಿದ ಸಮಯ ಪ್ರಜ್ಞೆಯ ಕಾರಣಕ್ಕೆ ಈ ವೀಡಿಯೋ ಈಗ ಸಖತ್ ವೈರಲ್‌ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ಮೊದಲಿಗೆ ಬಾಲಕಿ ತನ್ನ ತಂದೆಯನ್ನು ಎದ್ದೇಳಿಸುವ ಪ್ರಯತ್ನ ಮಾಡುತ್ತಾಳೆ. ಹಲವು ಬಾರಿ ತನ್ನ ತಂದೆಯನ್ನು ಆಕೆ ಕರೆಯುತ್ತಾಳೆ. ಆದರೆ ಆತ ಮೇಲೇಳದೇ ಇದ್ದಾಗ ಮಗು ಬೇಗನೇ ಬೆಡ್‌ನಿಂದ ಇಳಿದು ಕೋಣೆಯಿಂದ ಹೊರಬಂದು ಔಷಧಿ ಇರುವ ಕೋಣೆಗೆ ಬಂದು ತನ್ನ ಮಧುಮೇಹಿ ತಂದೆಯ ಆರೋಗ್ಯದಲ್ಲಿ ನಿರ್ಣಾಯಕವಾದ ಗ್ಲುಕೋಸ್ ಮಾತ್ರೆಯನ್ನು ತೆಗೆದುಕೊಂಡು ಕೋಣೆಗೆ ಬಂದಿದ್ದೆ. ಬಂದು ಕೂಡಲೇ ತನ್ನ ತಂದೆಯ ಬಾಯಿಗೆ ಆ ಮಾತ್ರೆಯನ್ನು ತುಂಬಿಸಿದೆ. ಇದಾದ ಕೆಲ ಸೆಕೆಂಡ್‌ಗಳಲ್ಲಿ ತಂದೆ ಚೇತರಿಸಿಕೊಂಡು ಎಳಲು ಪ್ರಯತ್ನಿಸುವುದನ್ನು ನೋಡಬಹುದಾಗಿದೆ.

BANAMWANA Hoffman Prince(@prince_hoffman) ಎಂಬ ಟ್ವಿಟ್ಟರ್‌ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ನಾನು ಇವತ್ತು ಬೆಳಗ್ಗೆ ಕಣ್ಣೀರು ಹಾಕಬೇಕು ಎಂದು ಪ್ಲಾನ್ ಮಾಡಿರಲಿಲ್ಲ, ಆದರೆ ಮಗಳು ತನ್ನ ತಂದೆಯನ್ನು ರಕ್ಷಿಸುವ ಈ ವಿಡಿಯೋ ನೋಡಿದಾಗ ಸುಮ್ಮನಿರಲಾಗಲಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಈ ವೀಡಿಯೋ ಅನೇಕರನ್ನು ಭಾವುಕರನ್ನಾಗಿಸಿದೆ.

ಕ್ಯಾಟರ್ಸ್‌ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಡೆಮೆಗಿಲ್ಲೊ ತನ್ನ ಮಗಳು ಮಾತ್ರೆ ತೆಗೆದುಕೊಳ್ಳುವಂತೆ ಹೇಗೆ ಒತ್ತಾಯಿಸಿದಳು ಎಂಬುದನ್ನು ಹೇಳಿಕೊಂಡಿದ್ದಾರೆ. ಅಲ್ಲದೇ ಆಕೆ ನಾನು ಗ್ಲುಕೋಸ್ ಮಾತ್ರೆಯನ್ನು ಅಗೆಯುವಂತೆ ಮಾಡಿದಳು, ಬಹಳ ಕಾಳಜಿಯಿಂದ ನನ್ನ ಬಗ್ಗೆ ಗಮನಹರಿಸಿದಳು ಎಂದು ಹೇಳಿದ್ದಾರೆ. ಈ ಬಗ್ಗೆ ಮಗುವಿನ ತಾಯಿ ಜಿಲ್ ಮಾತನಾಡಿ, ಆಕೆ ದಿನವೂ ತಂದೆಯ ದಿನಚರಿಯನ್ನು ಸೂಕ್ಷ್ಮವಾಗಿ ಗಮನಿಸಿರುವುದರಿಂದ ಆಕೆಗೆ ಈ ತುರ್ತು ಸ್ಥಿತಿಯನ್ನು ನಿರ್ವಹಿಸಲು ಬಂದಿದೆ ಎಂದು ಹೇಳಿದ್ದಾರೆ.

ಮಗು ಸಮಯಪ್ರಜ್ಞೆ ಮೆರೆದ ವೀಡಿಯೋ ಇಲ್ಲಿದೆ ನೋಡಿ:

Scroll to load tweet…