ನೀವೇ ಹೃದಯ ಚೂರು ಮಾಡಿದಿರೋ, ಅವರೇ ನಿಮ್ಮ ಹೃದಯ ಚೂರುಗೊಳಿಸಿದರೋ, ಒಟ್ಟಿನಲ್ಲಿ ಬ್ರೇಕಪ್ ಆಗಿದೆ. ತಕ್ಷಣದಲ್ಲಿ ಸಿಟ್ಟು, ಅಳು, ಏಕಾಂಗಿತನ ಸೇರಿದಂತೆ ಎಲ್ಲ ನೆಗೆಟಿವ್ ಫೀಲಿಂಗ್‌ಗಳು ಕಾಡುತ್ತಿವೆ. ಹಾಸಿಗೆ ಬಿಟ್ಟು ಏಳಲು ಬೇಡ, ಏನೂ ಮಾಡಲು ಮನಸ್ಸಿಲ್ಲ, ಸುಮ್ಮನೆ ಕುಳಿತು ಗೋಡೆ ನೋಡುವುದಕ್ಕಷ್ಟೇ ದೇಹ, ಮನಸ್ಸು ಸಹಕರಿಸುತ್ತಿವೆ. ಕಹಿ ನೆನಪನ್ನೇ ಕೆರೆಯುತ್ತಾ, ಸಿಟ್ಟು, ದ್ವೇಷ, ಅಳುವಿನಲ್ಲಿ ದಿನ ಕಳೆದು ಹೋಗುತ್ತಿದೆ. ಆದರೆ ಇಂಥ ಸಂದರ್ಭದಲ್ಲಿ ಪಾಸಿಟಿವ್ ಆಗಿರುವುದು ಮುಖ್ಯ. ಬಿದ್ದಲ್ಲಿಂದ ಪುಟಿದೇಳುವುದು ತುರ್ತು ಅಗತ್ಯ. ಅವೆಲ್ಲಕ್ಕೂ ಮುನ್ನ ಹೊಸದಾಗಿ ಚಿಗುರಬೇಕೆಂಬ ಸಂಕಲ್ಪ ನಿಮ್ಮಲ್ಲಿ ಮೂಡಬೇಕು. 

ಕೋಚ್‌ ಮಗಳು ಎಂದು ಗೊತ್ತಿಲ್ಲದೆ ಮದುವೆಯಾದ ಪುಟ್‌ಬಾಲ್‌ ನಾಯಕನ ಪ್ರೇಮಕಥೆ!

1. ಇದು ಅವರ ಬಗ್ಗೆಯಲ್ಲ, ನಮ್ಮ ಬಗ್ಗೆ

ಬ್ರೇಕಪ್ ಬಳಿಕ ನಮ್ಮ ಹಲವಾರು ಅಭದ್ರತೆಗಳು ಹೊರಬರುತ್ತವೆ. ಅರೆ, ಇವೆಲ್ಲ ಇಷ್ಟು ದಿನ ನಮ್ಮೊಳಗೇ ಮನೆ ಕಟ್ಟಿಕೊಂಡಿದ್ದವಾ ಎಂದು ಆಶ್ಚರ್ಯವಾಗುವುದರಲ್ಲಿ ಆಶ್ಚರ್ಯವಿಲ್ಲ. ಹೀಗೆ ಒಳಕುಳಿತ ಅಭದ್ರತೆಗಳನ್ನು ಓಡಿಸಲು ನೀವು ಪ್ರಯತ್ನಗಳನ್ನು ಹಾಕಿದರೆ, ಹೊಸತೊಂದು ನೀವೇ ಹೊಮ್ಮುತ್ತೀರಿ. ಇದು ನಿಮಗೆ ವೈಯಕ್ತಿಕ ಬೆಳವಣಿಗೆಗೆ ಸಹಕರಿಸುತ್ತದೆ. ಜತೆಗೆ, ನಿಮ್ಮನ್ನು ಬಹಳ ಸ್ಟ್ರಾಂಗ್ ಆಗಿಸುತ್ತದೆ. ಹಾಗಂಥ ಇದೇ ತಪ್ಪನ್ನು ಮತ್ತೆ ಮತ್ತೆ ಮಾಡಬೇಡಿ. 

2. ಆಗೋದೆಲ್ಲ ಒಳ್ಳೇದಕ್ಕೆ

ಈ ಮಾತನ್ನು ನೀವು ಅದೆಷ್ಟು ಬಾರಿ ಕೇಳಿದ್ದೀರೋ, ಆದರೆ ಇದು ಸುಮ್ಮನೇ ಹುಟ್ಟಿಕೊಂಡ ಮಾತಲ್ಲ. ಇದು ನಿಮ್ಮನ್ನು ಜೀವನವನ್ನು ಪಾಸಿಟಿವ್ ಆಗಿ ನೋಡುವಂತೆ ಮಾಡುತ್ತದೆ. ಹಾಗಾಗಿ, ಜೀವನದಲ್ಲಿ ಎಂಥದೇ ಹಿನ್ನೆಡೆ, ನೋವಾದರೂ, ಅದನ್ನು ಸಕಾರಾತ್ಮಕವಾಗಿ ಮುನ್ನುಗ್ಗುವಿರಿ. ಹೃದಯ ಚೂರಾದ ಆ ನೆನೆಪುಗಳನ್ನು ಹಿಂದಕ್ಕೆಸೆಯಿರಿ. ಜೀವನದಲ್ಲಿ ಮುಂದೆ ಇನ್ನೂ ಒಳ್ಳೆಯದಾಗಬೇಕಿರುವ ಕಾರಣದಿಂದಲೇ ಈಗ ಹೀಗಾಗಿದೆ ಎಂದು ಸತ್ಯವನ್ನು ಒಪ್ಪಿಕೊಳ್ಳಿ. ಹಾವು ಹೇಗೆ ಹೊಸ ಚರ್ಮಕ್ಕಾಗಿ ಪೊರೆ ಕಳಚುತ್ತದೋ, ಹಾಗೆ ಹಳೆಯ ಕಹಿನೆನಪಿನ ಪೊರೆಗಳನ್ನು ಕಳಚಿ ಮುನ್ನಡೆಯಿರಿ. ಆಗ ಮಾತ್ರ ಸಿಹಿ ನೆನಪುಗಳಿಗೆ ಜಾಗ ಸಿಕ್ಕೀತು.

ಗಂಡ-ಹೆಂಡತಿ ಖುಷಿಯಾಗಿರುವುದು ಪ್ರತ್ಯೇಕ ಬಾತ್‌ರೂಂ ಹೊಂದುವುದರಲ್ಲಿದೆಯಂತೆ!

3. ಕ್ಷಮಿಸಿ, ಮರೆಯಿರಿ

ಹೆಚ್ಚಿನ ಜನರಿಗೆ ಕ್ಷಮಿಸುವ ಕಲೆ ತಿಳಿದಿಲ್ಲ. ಹಾಗೆ ಕ್ಷಮಿಸಿದಾಗಷ್ಟೇ ಮನಸ್ಸು ತಿಳಿಯಾಗಿ ತನ್ನೊಳಗಿನ ಸಂತೋಷ ಕಂಡುಕೊಂಡೀತು. ಯಾರದಾದರೂ ವಿರುದ್ಧ ಹೆಚ್ಚು ಸಮಯ ಸೇಡು, ದ್ವೇಷ ಇಟ್ಟುಕೊಂಡಷ್ಟೂ ನಮ್ಮೊಳಗೆ ಕಹಿ ಹೆಚ್ಚುತ್ತಲೇ ಇರುತ್ತದೆ. ಇದು ನಮ್ಮನ್ನು ನೆಗೆಟಿವ್ ಆಗಿಸುತ್ತದೆ. ನಿಮ್ಮ ಒಳಿತಿಗಾಗಿ ಅವರನ್ನು ಕ್ಷಮಿಸಿಬಿಟ್ಟು ದೊಡ್ಡವರಾಗಿ. ಇದರಿಂದ ಭಾವನಾತ್ಮಕವಾಗಿ ಎಲ್ಲಕ್ಕೂ ತೊಡಕಾಗಿದ್ದ ಆ ಅಡೆತಡೆಗಳೆಲ್ಲ ಸರಿದಂತಾಗುತ್ತದೆ. ನಿಜವಾದ ಕ್ಷಮೆ ಹೇಗಿರಬೇಕೆಂದರೆ ಆ ಅನುಭವಕ್ಕಾಗಿ ಧನ್ಯವಾದ ಹೇಳಿ ನಗುತ್ತಾ ಮುನ್ನಡೆಯುವಂತಿರಬೇಕು. 

4. ಸ್ವಪ್ರೀತಿಗಿಂತ ದೊಡ್ಡದಿಲ್ಲ

ಸಂಬಂಧಗಳಲ್ಲಿ ಸ್ವಪ್ರೀತಿಗಿಂತ ದೊಡ್ಡದು ಮತ್ತೊಂದಿರುವುದಿಲ್ಲ. ಕೆಲವೊಮ್ಮೆ ನಿಮ್ಮ ಸುಖಸಂತೋಷಗಳನ್ನೆಲ್ಲವನ್ನೂ ನಿಮ್ಮ ಸಂಗಾತಿಯ ಸಲುವಾಗಿ ನೀವು ತ್ಯಾಗ ಮಾಡಬಹುದು. ಆದರೆ, ಕೆಲವೇ ಸಮಯದಲ್ಲಿ ನಿಮ್ಮ ಪ್ರಯತ್ನಗಳನ್ನು ಅವರು ಕಡೆಗಣಿಸುತ್ತಿರುವಂತೆ, ಅವರಿಗೆ ಅದರ ಅಗತ್ಯವಿಲ್ಲದಂತೆ ವರ್ತಿಸಬಹುದು. ನಿಮ್ಮ ಸಂಗಾತಿ ನಿಮಗೆ ಸಾಕಷ್ಟು ಪ್ರೀತಿ, ಗಮನ ನೀಡುತ್ತಿಲ್ಲ ಎಂದು ನಿಮಗನಿಸಿ ನೋವಾಗಬಹುದು. ಆದರೆ, ವಿಷಯ ಅದಲ್ಲ. ನೀವು ನಿಮ್ಮ ಮೇಲೆ ಸರಿಯಾದ ಗಮನ ಕೊಟ್ಟುಕೊಳ್ಳುತ್ತಿರುವುದಿಲ್ಲ. ಬ್ರೇಕಪ್ ಆದ ಬಳಿಕ ಈ ಆತ್ಮವಿಮರ್ಶೆಗೆ ನಿಮಗೆ ಸಮಯ ಸಿಗುತ್ತದೆ. ಈ ಸಂದರ್ಭದಲ್ಲಿ ನಿಮಗೇನು ಬೇಕು, ಅದಕ್ಕಾಗಿ ನೀವೇನು ಮಾಡಬೇಕು ಎಂಬುದು ತಿಳಿಯುತ್ತದೆ. ನೀವು ನಿಮ್ಮನ್ನು ಚೆನ್ನಾಗಿ ಪ್ರೀತಿಸುತ್ತೀರೆಂದರೆ, ಮತ್ಯಾರೋ ಪ್ರೀತಿಸಲಿ ಎಂದು ನೀವು ಕಾಯುತ್ತಾ ಕೂರುವ ಪ್ರಮೇಯವೇ ಬರುವುದಿಲ್ಲ. ಬೇಕಿದ್ದರೆ ಪ್ರಯತ್ನಿಸಿ ನೋಡಿ. 

ಕೆಸರು ಗದ್ದೆಗೆ ಇಳಿದ ನವಜೋಡಿ, ಇದು ಪ್ರೀ ವೆಡ್ಡಿಂಗ್ ಪೋಟೋಶೂಟಾ... ನೋಡಿ!

5. ಪ್ರೀತಿಯ ಹೊರತಾಗಿಯೂ ಜಗತ್ತಿದೆ

ಜೀವನವೆಂದರೆ ಕೇವಲ ಲವ್ ಅಷ್ಚೇ ಅಲ್ಲ. ಅದರಾಚೆಗೂ ಜಗತ್ತಿದೆ ಎಂಬುದು ಬ್ರೇಕಪ್ ಬಳಿಕವಷ್ಟೇ ಗೋಚರವಾಗಲು ಸಾಧ್ಯ. ಪ್ರೀತಿ ಎಂಬುದು ಜೀವನದ ಭಾಗವೇ ಹೊರತು, ಪ್ರೀತಿಯೇ ಜೀವನವಲ್ಲ ಎಂಬ ಜ್ಞಾನೋದಯವಾಗುತ್ತದೆ. ಅದೊಂದು ತಿಳಿದರೆ ಗೆಳೆತನಗಳು, ಕುಟುಂಬ, ಹೊಸತಾಗಿ ಪರಿಚಯವಾದವರು, ಸಹೋದ್ಯೋಗಿಗಳು- ಎಷ್ಟೆಲ್ಲ ಜನರಿದ್ದಾರೆ ನಮ್ಮ ಜೀವನದಲ್ಲಿ ಎಂಬುದು ಕಾಣಿಸಲು ಶುರುವಾಗುತ್ತದೆ. ನೀವಿದನ್ನು ಖಂಡಿತಾ ಎಂಜಾಯ್ ಮಾಡಲು ಆರಂಭಿಸುವಿರಿ.