1988ರಲ್ಲಿ ಅಮೆರಿಕದ ಆಸ್ಪತ್ರೆಯೊಂದರಲ್ಲಿ ಅದಲು ಬದಲಾಗಿದ್ದ ಇಬ್ಬರು ಮಕ್ಕಳು, 38 ವರ್ಷಗಳ ನಂತರ ಡಿಎನ್ಎ ಪರೀಕ್ಷೆಯ ಮೂಲಕ ಸತ್ಯವನ್ನು ಕಂಡುಕೊಂಡಿದ್ದಾರೆ. ಈ ಆಘಾತಕಾರಿ ಘಟನೆಯಿಂದ ಎರಡೂ ಕುಟುಂಬಗಳು ಆಸ್ಪತ್ರೆಯ ವಿರುದ್ಧ ನಿರ್ಲಕ್ಷ್ಯದ ಆರೋಪ ಹೊರಿಸಿ ದಾವೆ ಹೂಡಿವೆ.

ವಾಷಿಂಗ್ಟನ್: ಕೆಲವು ಆಸ್ಪತ್ರೆಗಳಲ್ಲಿ, ಮಕ್ಕಳನ್ನು ಹಣದ ಆಸೆಗೆ ಬಿದ್ದು ಅದಲು ಬದಲು ಮಾಡುವುದು ಇದೆ. ಹೆಣ್ಣು ಮಗು, ಗಂಡು ಮಗು ಇಂಥವುಗಳು ಹೆಚ್ಚು ನಡೆಯುತ್ತವೆ. ದುಡ್ಡಿನ ಆಸೆಗೆ ಬಿದ್ದು ವೈದ್ಯಕೀಯ ವೃತ್ತಿಯಲ್ಲಿ ಇರುವವರು ಇಂಥ ನೀಚ ಕೆಲಸ ಮಾಡುವುದು ನಡೆದೇ ಇದೆ. ಇದೇ ಕಾರಣಕ್ಕೆ ಎಷ್ಟೋ ಮನೆಗಳಲ್ಲಿ ಯಾರದ್ದೋ ಮಕ್ಕಳು, ಇನ್ನಾರದ್ದೋ ಮನೆಯಲ್ಲಿ ಬೆಳೆಯುತ್ತಿರುವ ಘಟನೆಗಳು ಇದ್ದರೂ ಕೊನೆಗೂ ಅದು ಬೆಳಕಿಗೆ ಬರುವುದೇ ಇಲ್ಲ. ಇದೀಗ ಅಂಥದ್ದೇ ಒಂದು ಘಟನೆ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ವೈರಲ್​ ಆಗುತ್ತಿದೆ.

ಹೀಗೆ ಅದಲು ಬದಲಾದ ಮಕ್ಕಳು 38 ವರ್ಷಗಳ ಬಳಿಕ ಸತ್ಯ ತಿಳಿದಿರುವ ಶಾಕಿಂಗ್​ ಘಟನೆ ಇದಾಗಿದೆ. ಇದು ನಡೆದಿರುವುದು ಅಮೆರಿಕದ ಕೊಲೊರಾಡೋ ನಗರದಲ್ಲಿ. ಜನವರಿ 26, 1988 ರಂದು ಉತ್ತರ ಡಕೋಟಾದ ಆಸ್ಪತ್ರೆಯಲ್ಲಿ ಜನಿಸಿದ ಎರಡು ಶಿಶುಗಳು ಆಕಸ್ಮಿಕವಾಗಿ ಪರಸ್ಪರ ಬದಲಾಯಿಸಲ್ಪಟ್ಟಿರುವುದ 38 ವರ್ಷಗಳ ಬಳಿಕ ಡಿಎನ್ಎ ಪರೀಕ್ಷೆಗಳು ಬಹಿರಂಗಪಡಿಸಿವೆ. ಎರಡೂ ಕುಟುಂಬಗಳು ಈಗ ಆಸ್ಪತ್ರೆಯ ವಿರುದ್ಧ ಕೇಸು ದಾಖಲು ಮಾಡಿವೆ. ಆಸ್ಪತ್ರೆಯ ನಿರ್ಲಕ್ಷ್ಯವು ಅವರು ಬದುಕಬೇಕಾಗಿದ್ದ ಜೀವನವನ್ನು ಕಸಿದುಕೊಂಡಿದೆ ಎಂದು ಕುಟುಂಬಗಳು ಆರೋಪಿಸಿವೆ.

ಡಿಎನ್​ಎ ಪರೀಕ್ಷೆಯಿಂದ ಬಹಿರಂಗ

ಕ್ರಿಸ್‌ಮಸ್ ಉಡುಗೊರೆ ವಿನಿಮಯದ ಸಮಯದಲ್ಲಿ ಮನೆಯವರ ಡಿಎನ್‌ಎ ಪರೀಕ್ಷೆಯನ್ನು ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಇಬ್ಬರೂ ಮಕ್ಕಳು ಸಂಬಂಧಿಕರೇ. ಇವರ ಹೆಸರು ಬೇಲಿನ್ ಮತ್ತು ಮಾರಿಸನ್. ಬೇಲಿನ್​ ಅವರು ಮಾರಿಸನ್ ಅಪ್ಪನನ್ನು ಹೋಲುತ್ತಿದ್ದರಿಂದ ಈ ಕುಟುಂಬಕ್ಕೆ ಮೊದಲಿನಿಂದಲೂ ಸಂದೇಹವಿತ್ತು. ಆದರೆ, ಈ ರೀತಿಯ ಸಂದೇಹ ಸರಿಯಲ್ಲ, ಅದು ಬೇರೆಯ ಅರ್ಥವನ್ನೇ ಸೂಚಿಸುತ್ತದೆ ಎನ್ನುವ ಕಾರಣಕ್ಕೆ ಕುಟುಂಬದವರು ಸಹಿಸಿಕೊಂಡು ಹೋಗಿದ್ದರು. ಆದರೆ ಡಿಎನ್​ಎ ಪರೀಕ್ಷೆ ಮಾಡಿದಾಗ, ಬೇಲಿನ್​ ಮಾರಿಸನ್​ ಅಪ್ಪನ ನಿಜವಾದ ಮಗ ಎನ್ನುವುದು ತಿಳಿದಿದೆ.

ಇದೀಗ ಕೇಸ್​ ದಾಖಲು ಮಾಡಲಾಗಿದೆ. ಇದರ ಪ್ರಕಾರ, ಬೇಲಿನ್ ಮತ್ತು ಮಾರಿಸನ್ 1988 ರಲ್ಲಿ ಗ್ರಾಫ್ಟನ್‌ನಲ್ಲಿರುವ ಯೂನಿಟಿ ಮೆಡಿಕಲ್ ಸೆಂಟರ್‌ನಲ್ಲಿ ಜನಿಸಿದ ಇಬ್ಬರು ಮಕ್ಕಳು. ಯಾವುದೋ ಕಾರಣಕ್ಕಾಗಿ, ಅವರು ತಪ್ಪು ಪೋಷಕರೊಂದಿಗೆ ಮನೆಗೆ ಹೋದರು. ಇದಕ್ಕೆ ನಿಜವಾದ ಕಾರಣ ಎನ್ನುವುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಇದು ಆಸ್ಪತ್ರೆಯ ಬೇಜವಾಬ್ದಾರಿಯೇ ಅಥವಾ ಇನ್ನೇನು ಎನ್ನುವುದು ತನಿಖೆಯಿಂದ ಬಹಿರಂಗಗೊಳ್ಳಬೇಕಿದೆ.

ಎರಡೂ ಕುಟುಂಬಗಳಿಗೆ ಶಾಕ್​

ಆದರೆ, ಡಿಎನ್ಎ ವರದಿಯು ಎರಡೂ ಕುಟುಂಬಗಳಿಗೆ ಶಾಕ್​ ಕೊಟ್ಟಿದೆ. ಬೇಲಿನ್ ಅವರ ದತ್ತು ಪೋಷಕರಾದ ಎವೆಲಿನ್ ನ್ಯೂಟನ್, "ಕೈಲ್ ಇನ್ನೂ ನನ್ನ ಮಗ ಮತ್ತು ಯಾವಾಗಲೂ ನನ್ನ ಮಗ. ಆದರೆ ನನ್ನ ಜೈವಿಕ ಮಗನೊಂದಿಗೆ ನಾನು ಬದುಕಬೇಕಾದ ಜೀವನವನ್ನು ಕಳೆದುಕೊಂಡಿದ್ದೇನೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ. ಬೇಬಿ ಚೇಂಜ್​ ಆಗಿರುವುದನ್ನು ಆಸ್ಪತ್ರೆ ನಿರಾಕರಿಸಿಲ್ಲ. ಏನಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ಆಸ್ಪತ್ರೆ ಹೇಳಿದೆ. ಆದರೆ ಸುಮಾರು ನಾಲ್ಕು ದಶಕಗಳು ಕಳೆದಿರುವುದರಿಂದ ವೈದ್ಯಕೀಯ ಮತ್ತು ಸಿಬ್ಬಂದಿ ದಾಖಲೆಗಳು ಲಭ್ಯವಿಲ್ಲ. ತಪ್ಪಿಗೆ ಆಡಳಿತ ಅಥವಾ ಸಿಬ್ಬಂದಿ ಕಾರಣ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಎಂದು ಆಸ್ಪತ್ರೆ ಹೇಳಿದೆ.

ಸತ್ಯ ಹೊರಬಂದ ನಂತರವೂ, ಅವರು ಇನ್ನೂ ತಮ್ಮೊಂದಿಗೆ ಬೆಳೆದ ಕುಟುಂಬವನ್ನು ತಮ್ಮದೇ ಎಂದು ಪರಿಗಣಿಸುತ್ತಾರೆ ಎಂದು ಮಾರಿಸನ್ ಹೇಳಿದರು. ಅವರು ಕೊಲೊರಾಡೋ ನಗರದಲ್ಲಿ ವಾಸಿಸುತ್ತಿದ್ದಾರೆ ಮತ್ತು ಪವನ ಶಕ್ತಿ ಕಂಪನಿಯ ವೆಲ್ಡಿಂಗ್ ಇನ್ಸ್‌ಪೆಕ್ಟರ್ ಆಗಿದ್ದಾರೆ. ಇಬ್ಬರೂ ಈಗ ತಮ್ಮ ಜೈವಿಕ ಪೋಷಕರನ್ನು ಭೇಟಿಯಾಗಿದ್ದಾರೆ. ಆದರೆ ಅವರ ಮನಸ್ಥಿತಿ ಹೇಗಿದ್ದಿರಬಹುದು ಎಂದು ಊಹಿಸುವುದೂ ಕಷ್ಟ ಅಲ್ಲವೆ?