1948ರಲ್ಲಿ ಮುದ್ರಣಗೊಂಡ ಮುಸ್ಲಿಂ ಸಮುದಾಯದ ವಿವಾಹ ಆಹ್ವಾನ ಪತ್ರಿಕೆಯೊಂದು ಶುದ್ಧ ಕನ್ನಡದಲ್ಲಿರುವುದು ಇದೀಗ ವೈರಲ್ ಆಗಿದೆ. ಕಾಸರಗೋಡಿನ ಈ ಪತ್ರಿಕೆಯು ಗಡಿನಾಡ ಕನ್ನಡಿಗರ ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಮುಸ್ಲಿಂ ಸಮುದಾಯದ ಇತ್ತೀಚಿನ ಮದುವೆ ಆಮಂತ್ರಣ ಪತ್ರಿಕೆಗಳು ಕರ್ನಾಟಕದಲ್ಲಿ ಬಹುತೇಕ ಇಂಗ್ಲೀಷ್‌ನಲ್ಲಿ ಇರುತ್ತವೆ. ಅಥವಾ ಉರ್ದು ಅಥವಾ ಅರೇಬಿಕ್ ಭಾಷೆಯಲ್ಲಿ ಇರುತ್ತವೆ. ಆದರೆ ಕನ್ನಡ ಭಾಷೆಯಲ್ಲಿ ಮುದ್ರಣಗೊಂಡಿರುವ ಮುಸ್ಲಿಂ ಸಮುದಾಯದ ವಿವಾಹ ಆಹ್ವಾನ ಪತ್ರಿಕೆಯೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಾಹಿತಿಯ ಪ್ರಕಾರ ಇದು 1948ರಲ್ಲಿ ಅಂದರೆ ಸ್ವಾತಂತ್ರ ಬಂದು ಒಂದು ವರ್ಷದ ನಂತರ ಮುದ್ರಣಗೊಂಡಿರುವಂತಹ ಮದುವೆಯ ಆಮಂತ್ರಣ ಪತ್ರಿಕೆಯಾಗಿದ್ದು, ಸ್ವಚ್ಛವಾದ ಕನ್ನಡದ ಭಾಷೆಯಲ್ಲಿ ಈ ಮದುವೆ ಆಹ್ವಾನ ಪತ್ರಿಕೆಯನ್ನು ಪ್ರಿಂಟ್ ಮಾಡಿಸಲಾಗಿದೆ.
ವಿವಾಹದ ಆಮಂತ್ರಣ ಪತ್ರಿಕೆಯಲ್ಲಿ ಇರುವ ಸ್ಥಳದ ಹೆಸರೇ ಇದು ಗಡಿನಾಡಿನ ಕನ್ನಡಿಗರೊಬ್ಬರ ವಿವಾಹ ಆಮಂತ್ರಣ ಪತ್ರಿಕೆ ಎಂಬುದನ್ನು ಸೂಚಿಸುತ್ತದೆ. ಕನ್ನಡ ಪ್ರೇಮ ಏನು ಎಂಬುದನ್ನು ತಿಳಿದುಕೊಳ್ಳಬೇಕಾದರೆ ನೀವು ಗಡಿನಾಡಿಗೆ ಹೋಗಬೇಕು ಗಡಿನಾಡ ಜನರ ಬಳಿ ಮಾತನಾಡಬೇಕು. ರಿಷಬ್ ಶೆಟ್ಟಿ ನಿರ್ಮಾಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದಲ್ಲೂ ನೀವು ಗಡಿನಾಡಿಗರ ಕನ್ನಡ ಪ್ರೇಮವನ್ನು ಕಾಣಬಹುದಾಗಿದೆ. ಭಾಷೆಗಾಗಿ ಇಲ್ಲಿ ಹೋರಾಟಗಳು ಸಾಮಾನ್ಯವೆನಿಸಿವೆ. ಹಾಗೆಯೇ ಈ ಕನ್ನಡ ಭಾಷೆಯಲ್ಲಿ ಮುದ್ರಿಸಲ್ಪಟ್ಟಿರುವ ವಿವಾಹ ಆಮಂತ್ರಣ ಪತ್ರಿಕೆಯಲ್ಲಿರುವ ಊರಿನ ಹೆಸರಿನ ಪ್ರಕಾರ ಇದು ಪ್ರಸ್ತುತ ಕೇರಳದಲ್ಲಿರುವ ಕಾಸರಗೋಡು ಜಿಲ್ಲೆಯ ಬಜಲಕರಿಯ ವರ್ಕಾಡಿ ಎಂಬ ಸ್ಥಳದ ಕನ್ನಡ ಪ್ರೇಮಿ ನಿವಾಸಿಯೊಬ್ಬರು ಮುದ್ರಿಸಿದಂತಹ ವಿವಾಹ ಆಮಂತ್ರಣ ಪತ್ರಿಕೆಯಾಗಿದೆ.
ವೈರಲ್ ಆದ ಆಮಂತ್ರಣ ಪತ್ರಿಕೆಯಲ್ಲಿ ಏನಿದೆ?
ಆಮಂತ್ರಣ ಪತ್ರಿಕೆಯ ಮೇಲ್ಭಾಗದಲ್ಲಿ ಗುರುಮಹಮ್ಮದ್ ಪ್ರಸನ್ನ: ಎಂದು ಬರೆಯಲಾಗಿದೆ. ಸಾಮಾನ್ಯವಾಗಿ ಶುಭಕಾರ್ಯದ ಸಮಯದಲ್ಲಿ ದೇವರನ್ನು ಗುರುಗಳನ್ನು ಸ್ಮರಿಸುವುದು ಮೊದಲು. ಹಾಗೆಯೇ ಇಲ್ಲಿ ಗುರುವಿಗೆ ನಮಿಸಿ ಕಾಗದದ ಬಲಭಾಗದಲ್ಲಿ ಸ್ಥಳ ಹಾಗೂ ದಿನಾಂಕವನ್ನು ಪ್ರಕಟಿಸಲಾಗಿದೆ. ವರ್ಕಾಡಿ, ಬಜಲಕರಿಯ ತಾ 28 /8/1948 ಎಂದು ಬರೆಯಲಾಗಿದೆ. ನಂತರ ಕೆಳಗೆ ಹೀಗಿದೆ..
ಪ್ರಿಯ ಮಹಾಶಯರೇ,
ಇದೇ ಹಿಜರಿ 1862ನೇ ರಬ್ಬಿಲಾವಲ್ ತಿಂಗಳ ಚಾಂದ್ 22 ಕ್ಕೆ 22 ಕ್ಕೆ ಸರಿಯಾದ ತಾರೀಕು 28-8-1948ನೇ ಆದಿತ್ಯವಾರ ರಾತ್ರಿ ಘಂಟೆ 8ಕ್ಕೆ ನನ್ನ ಪ್ರಥಮ ಪುತ್ರ ಚಿ। ಬಿ. ಪಕ್ರುದ್ದಿನ್ ಎಂಬ ಯುವಕನು ಕಣ್ಣಂದೂರು ಕಿಳಾರಿ ಹಮ್ಮದ್ ಕುಂಞ ಬ್ಯಾರಿಗಳ ಏಳನೇ ಪುತ್ರಿಯನ್ನು ನಿಖಾಹ ಯಾನೆ ವಿವಾಹ ಮಾಡಿಕೊಳ್ಳುವುದಾಗಿ ನಿಶ್ಚಯಿಸಿರುವುದರಿಂದ ಬಜಲಕರಿಯ ನಮ್ಮ ಮನೆಯಲ್ಲಿ ಆಗುನ ಈ ಮಂಗಳ ಕಾರ್ಯಕ್ಕೆ ತಾವು ತಮ್ಮ ಇಷ್ಟಮಿತ್ರರೊಡಗೂಡಿ ದಯಮಾಡಿ ಬಂದು, ಈ ಶುಭಕಾರ್ಯವನ್ನು ಚಂದಗಾಣಿಸಿಕೊಡಬೇಕಾಗಿ ಅಪೇಕ್ಷಿಸುವ
ತಮ್ಮ ಕೃಪಾಭಿಲಾಷಿ,
ಬಜಲಕರಿಯ ಉಸ್ಮಯಿನ್.
ಯಂ. ಅಬ್ದುರಹಿಮಾನ್ ರವರ ಸವಿನಯ ಆಮಂತ್ರಣ.
ಕಾರ್ಯಕ್ರಮ
ತಾ: 28-8-1948ನೇ ಆದಿತ್ಯವಾರ ಹಗಲು ಘಂಟೆ 1 ರಿಂದ 7ರ ವರೆಗೆ ದಾವತ್ತು
ರಾತ್ರಿ 8ಕ್ಕೆ ನಿಖಾಹ
10ಕ್ಕೆ ದಿಬ್ಬಣ ಹೊರಡುವುದು.
ಇದನ್ನೂ ಓದಿ: ಪ್ರೀತಿ ವಿರೋಧಿಸಿದ ತಂದೆಯನ್ನು ಗೆಳೆಯನ ಜೊತೆ ಸೇರಿ ಮಸಣಕ್ಕೆ ಅಟ್ಟಿದ ಪಾಪಿ ಮಗಳು
ಹೀಗಾಗಿ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಬರೆಯಲಾಗಿದ್ದು, ಈ ವಿವಾಹ ಆಮಂತ್ರಣ ಪತ್ರಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಹಲವರು ಕಾಮೆಂಟ್ ಮಾಡಿದ್ದಾರೆ. ಎಷ್ಟೊಂದು ಚಂದ ಇದೆ. ಕಾಮೆಂಟ್ ಹಾಕೋಕೆ ಸೋಂಬೇರಿ ಆಗಿರೋ ನಾನು ಕಾಮೆಂಟ್ ಹಾಕೋ ಹಾಗೇ ಮಾಡಿ ಬಿಟ್ಟಿತು. ಈ ಆಮಂತ್ರಣ ಪತ್ರಿಕೆ ಅಚ್ಚು ಹಾಕಿಸಿದ ವ್ಯಕ್ತಿ ಇಲ್ಲದೆ ಇರಬಹುದು. ಆದ್ರೆ ಅವ್ರ ವಂಶ ಖುಷಿಯಾಗಿರಲಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಶುಭ ಕಾರ್ಯವನ್ನು ಚಂದ ಕಾಣಿಸುವದು...ಎಷ್ಟು ಚೆನ್ನಾಗಿದೆ. ನಾನೆಂದೂ ಕೇಳರಲಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವಿವಾಹ ಆಮಂತ್ರಣ ಪತ್ರಿಕೆಯ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
ಇದನ್ನೂ ಓದಿ: ಮಾಲ್‌ನಲ್ಲಿ ಹುಡುಗಿಗೆ ಪ್ರಪೋಸ್ ಮಾಡಿ ಅಲ್ಲೇ ತಾಳಿ ಕಟ್ಟಿದ ಯುವಕ: ವೀಡಿಯೋ ಭಾರಿ ವೈರಲ್


